samachara
www.samachara.com
#TankMan2018; ಚೀನಾದ ಸೇನಾ ಟ್ಯಾಂಕರ್‌ಗಳಿಗೆ ಎದುರು ನಿಂತವನ ದಂತಕತೆ
ವಿದೇಶ

#TankMan2018; ಚೀನಾದ ಸೇನಾ ಟ್ಯಾಂಕರ್‌ಗಳಿಗೆ ಎದುರು ನಿಂತವನ ದಂತಕತೆ

ಸಾಮಾನ್ಯ ವ್ಯಕ್ತಿಯೊಬ್ಬ ಏನು ಮಾಡಲು ಸಾಧ್ಯ ಎಂಬ ಉದಾಸೀನ ಇದ್ದಿದ್ದೇ. ಆದರೆ, ಎರಡು ದಶಕಗಳ ಹಿಂದೆ ಚೀನಾದ ಸಾಮಾನ್ಯ ವ್ಯಕ್ತಿಯೊಬ್ಬ ಸೇನಾ ಟ್ಯಾಂಕರ್‌ಗಳ ಮುಂದೆ ಏಕಾಂಗಿಯಾಗಿ ನಿಂತಿದ್ದ!

ಚೀನಾದ ‘ಸಾಮಾನ್ಯ ವ್ಯಕ್ತಿ’ಯೊಬ್ಬನನ್ನು ಇಂದು ವಿಶ್ವದೆಲ್ಲೆಡೆ ನೆಲೆಸಿರುವ ಚೀನೀಯರು ನೆನಪಿಸಿಕೊಳ್ಳುತ್ತಿದ್ದಾರೆ. 1989ರಲ್ಲಿ ನಡೆದ ಘಟನೆಯೊಂದು ಈಗ ಚೀನೀಯರನ್ನು ಆಂದೋಲನವೊಂದಕ್ಕೆ ಪ್ರೇರೇಪಿಸಿದೆ.

ಅದು 1989ರ ಬೇಸಿಗೆ ಸಮಯ. ಚೀನಾದ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಇತರೆ ಪ್ರತಿಭಟನಾಕಾರರು ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆಗಳನ್ನು ನಡೆಸುತ್ತಿದ್ದರು. ಉಪವಾಸ ಸತ್ಯಾಗ್ರಹಗಳೂ ನಡೆಯುತ್ತಿದ್ದವು. ಜೂನ್‌ 4ರಂದು ಬೀದಿಗಿಳಿದ ಸೈನ್ಯ ಹೋರಾಟಗಾರರ ಮೇಲೆ ತನ್ನ ಪ್ರಹಾರವನ್ನು ನಡೆಸಿತ್ತು. ಸುಮಾರು 12 ಲಕ್ಷದಷ್ಟು ಸೈನಿಕರು ಹೋರಾಟಗಾರರ ಮೇಲೆ ಮುಗಿಬಿದ್ದು, ಸಹಸ್ರಾರು ಜನ ನಾಗರಿಕರ ಪ್ರಾಣ ಕಿತ್ತುಕೊಂಡಿದ್ದರು.

ಇದಾದ ಮಾರನೇ ದಿನ, ಜೂನ್‌ 5ರಂದು ಬೀಜಿಂಗ್‌ ನಗರದ ಟಿಯಾನಾನ್ಮೇನ್‌ ಚೌಕದ ಬಳಿ ಸಡಿಲವಾದ ಬಟ್ಟೆಗಳನ್ನು ತೊಟ್ಟಿದ್ದ ವ್ಯಕ್ತಿಯೊಬ್ಬ ರಸ್ತೆಯುದ್ದಕ್ಕೂ ಸಾಲಾಗಿ ಸಾಗುತ್ತಿದ್ದ ಮಿಲಿಟರಿ ಟ್ಯಾಂಕ್‌ಗಳಿಗೆ ಅಡ್ಡಲಾಗಿ ನಿಂತಿದ್ದ. ಅವನ ಬಳಿಗೆ ಬಂದು ಟ್ಯಾಂಕರ್‌ ನಿಂತಾದ ಬಳಿಕ ಅದರ ಮೇಲೇರಿ ನಿಂತು ಒಳಗಿದ್ದ ಸೈನಿಕನೊಟ್ಟಿಗೆ ಏನನ್ನೋ ಮಾತನಾಡತೊಡಗಿದ್ದ. ನಂತರ ಕೆಲವರು ಬಂದು ಬಂದು ಆತನನ್ನು ಹಿಡಿದೆಳೆದು ಕರೆದುಕೊಂಡು ಹೋದ ನಂತರ ಟ್ಯಾಂಕರ್‌ಗಳು ಮುಂದಕ್ಕೆ ಚಲಿಸಿದ್ದವು. ಕ್ಯಾಮರಾವೊಂದರಲ್ಲಿ ಸೆರೆಯಾಗಿದ್ದ ಈ ದೃಶ್ಯವನ್ನು ಸುದ್ದಿ ಮಾಧ್ಯಮಗಳು ಇಡೀ ಜಗತ್ತಿಗೆ ಬಿತ್ತರಿಸಿದ್ದವು. ಅಂದು ಎಲ್ಲರ ಬಾಯಲ್ಲೂ ಆತ ‘ಟ್ಯಾಂಕ್‌ಮ್ಯಾನ್‌’ ಎಂದು ಹೆಸರು ಪಡೆದಿದ್ದ.

ಟ್ಯಾಂಕ್‌ಮ್ಯಾನ್‌ ನೆನಪಿನಲ್ಲಿ ಪ್ರತಿಭಟನಾಕಾರರು ಸೇರಬಹುದೆಂಬ ಕಾರಣಕ್ಕಾಗಿ ಪ್ರತಿ ವರ್ಷ ಜೂನ್‌ 5 ರಂದು ಟಿಯಾನಾನ್ಮೆನ್‌ ಚೌಕದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಇರುತ್ತದೆ. ಬೀಜಿಂಗ್‌ ನಗರದೊಳಗಿನ ಮಾನವ ಹಕ್ಕು ಹೋರಾಟಗಾರರನ್ನು ನಗರದಿಂದ ಹೊರಗೆ ಕಳಿಸಲಾಗುತ್ತದೆ.

ಘಟನೆ ಜರುಗಿ 29 ವರ್ಷಗಳು ಕಳಿದ ಬಳಿಕ ಮೊದಲಿಗೆ ಚೀನಾದ ಕಾರ್ಟೂನಿಸ್ಟ್ ಬದಿಕಾವೋ ಟ್ಯಾಂಕ್‌ಮ್ಯಾನ್‌ ನೆನಪು ಮಾಡಿಕೊಂಡಿದ್ದಾರೆ. ಟ್ವಿಟ್ಟರ್‌ ಮೂಲಕ ಚೀನೀ ಜನತೆಗೆ ಟ್ಯಾಂಕ್‌ಮ್ಯಾನ್‌ನ ನೆನಪು ಮಾಡಿಸಿದ್ದಾರೆ. ನಂತರದಲ್ಲಿ ಟ್ವಿಟ್ಟರ್‌ನಲ್ಲಿ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಶುರುವಾಗಿದ್ದು, #TankMan2018 ಮತ್ತು #TankMen2018 ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಹಲವಾರು ಜನ ಟ್ವೀಟ್‌ ಮಾಡಿದ್ದಾರೆ.

ಚಿತ್ರಕಾರ ಬದಿಕಾವೋ ಪ್ರಕಾರ, ಚೀನಾದ ಯುವಜನರಲ್ಲಿ ಆದರ್ಶಗಳು ಇಲ್ಲವಾಗಿವೆ. ತಮ್ಮ ಜವಾಬ್ದಾರಿಯನ್ನು ಯುವಜನರು ಮರೆತಿದ್ದಾರೆ. ಸಾಮಾನ್ಯ ವ್ಯಕ್ತಿ ಕೂಡ ಬದಲಾವಣೆಯನ್ನು ತರಬಹುದು ಎಂಬ ವಿಶ್ವಾಸ ಇಲ್ಲವಾಗಿದೆ. ಇವೆಲ್ಲವನ್ನೂ ಉದ್ದೀಪಿಸುವ ಸಲುವಾಗಿ ಮತ್ತೊಮ್ಮೆ ಟ್ಯಾಂಕ್‌ಮ್ಯಾನ್‌ನನ್ನು ನೆನಪಿಸಿಕೊಳ್ಳಲಾಗಿದೆ.

“ಇಂದಿನ ದಿನಕ್ಕೆ ಟ್ಯಾಂಕ್‌ಮ್ಯಾನ್‌ ಹೆಚ್ಚು ಪ್ರಸ್ತುತವೆನಿಸುತ್ತಾನೆ. ಜನ ಅದನ್ನು ಗಮನಿಸಬೇಕಿದೆ,” ಎನ್ನುತ್ತಾರೆ ಬದಿಕಾವೋ.

ಟ್ಯಾಂಕ್‌ಮ್ಯಾನ್‌ ಹೆಸರಿನಲ್ಲಿ ಸಾಂಕೇತಿಕ ಪ್ರಭಟನೆ ನಡೆಸುವ ಹೋರಾಟಗಾರರಿಗೆ ಬದಿಕಾವೋ ಕೆಲವು ನಿರ್ದೇಶನಗಳನ್ನು ನೀಡಿದ್ದರು. ಅಂದು ಟ್ಯಾಂಕ್‌ಮ್ಯಾನ್‌ ಧರಿಸಿದ್ದಂತೆ ಬಿಳಿ ಅಂಗಿ, ಕಪ್ಪು ಪ್ಯಾಂಟ್‌, ಕಪ್ಪು ಶೂ ಧರಿಸಿ, ಎರಡೂ ಕೈಗಳಲ್ಲಿ ಎರಡು ಬ್ಯಾಗ್‌ಗಳನ್ನಿಡಿದು, ಅದರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತೆ ತಿಳಿಸಿದ್ದರು. ಚೀನಾದಲ್ಲಿ ನಿಷೇಧಕ್ಕೆ ಒಳಪಟ್ಟಿರುವ ‘ಪೆಪ್ಪಾ’ ಹೆಸರಿನ ಹಂದಿಯ ಚಿತ್ರ ಮತ್ತು ‘ಪೂಹ್‌’ ಹೆಸರಿನ ವೈನ್‌ ಚಿತ್ರಗಳನ್ನು ಹೊಂದಿರುವ ಬ್ಯಾಗ್‌ಗಳನ್ನು ಹಿಡಿದುಕೊಳ್ಳುವಂತೆ ಸೂಚಿಸಿದ್ದರು. ಜತೆಗೆ ಇತ್ತೀಚಿಗೆ ನಿಷೇಧಕ್ಕೆ ಒಳಗಾದ, ಚೀನಾದ “#MeToo” ಪ್ರತಿಭಟನಾಕಾರರು ಬಳಸಿದ್ದ ‘mi tu’ ಪದಗಳನ್ನೂ ಕೂಡ ಬಳಸುವಂತೆ ತಿಳಿಸಿದ್ದರು.

ಬದಿಕಾವೋ ಕರೆಗೆ ಓಗೊಟ್ಟ ಝೋವ್‌ ಫೆಂಗ್ಸೋ, ಬದಿಕಾವೋ ನಿರ್ದೇಶನದಂತೆ ಫೋಟೊ ತೆಗೆದುಕೊಂಡು ಟ್ವೀಟ್ಟರ್‌ ಮೂಲಕ ಜನರಿಗೆ ತಲುಪಿಸಿದ್ದಾರೆ. ಝೋವ್‌ 1989ರ ಅವಧಿಯಲ್ಲಿ ಚೀನಾದ ಹೋರಾಟಗಳಲ್ಲಿ ವಿದ್ಯಾರ್ಥಿ ನಾಯಕರಾಗಿ ಹೆಸರು ಗಳಿಸಿದ್ದವರು. ಈಗ ವಾಶಿಂಗ್‌ಟನ್‌ ನಗರದಲ್ಲಿದ್ದು, ಅಲ್ಲಿಂದಲೇ ಟ್ಯಾಂಕ್‌ಮನ್‌ನ ನೆನಪು ಮಾಡಿಕೊಂಡಿದ್ದಾರೆ.

ಇದಾದ ಬಳಿಕ ಟ್ಯಾಂಕ್‌ ಮ್ಯಾನ್‌ ಆಂದೋಲನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೆನಾಡಾದಿಂದ ನ್ಯೂಝಿಲ್ಯಾಂಡ್‌ವರೆಗೂ ಹಬ್ಬಿರುವ ಚೀನೀಯರು ಟ್ಯಾಂಕ್‌ಮ್ಯಾನ್‌ ಹೆಸರಿನಲ್ಲಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ.

ಸೋಮವಾರ ಚೀನಾ ಅಡಳಿತ ಎಲ್ಲಿಯೂ ಕೂಡ ಟಿಯಾನಾನ್ಮೆಯ್ ಹೆಸರು ಹರಿದಾಡಲು ಅವಕಾಶ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಟಿಯಾನಾನ್ಮೆನ್‌ ಹೆಸರಿನ ಮೇಲೆ ನಿ‍ಷೇಧ ಹೇರಲಾಗಿದೆ. ಆದಾಗ್ಯೂ ಸಹ ಹಾಂಗ್‌ಕಾಂಗ್‌ ನಗರದ ಮಾನವ ಹಕ್ಕು ಹೋರಾಟಗಾರರು ಮೇಣದ ಬತ್ತಿಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಚೀನಾದಲ್ಲಿರುವ ಅಮೆರಿಕಾದ ಕಾರ್ಯದರ್ಶಿ ಮೈಕ್‌ ಪೊಂಪೋ, 1989ರ ಜೂನ್‌ 4ರಂದು ಸತ್ತವರ ಸಂಖ್ಯೆ ಎಷ್ಟು ಎಂಬ ಲೆಕ್ಕವನ್ನು ನೀಡುವಂತೆ ಚೀನಾ ಸರಕಾರವನ್ನು ಆಗ್ರಹಿಸಿದ್ದಾರೆ. ಕಳೆದುಹೋದವರ, ಬಂಧನಕ್ಕೆ ಒಳಪಟ್ಟವರ ಮಾಹಿತಿಯನ್ನು ನೀಡುವಂತೆ ಕೇಳಿದ್ದಾರೆ.

ಇತಿಹಾಸಕಾರರ ಪ್ರಕಾರ ಟ್ಯಾಂಕ್‌ ಮ್ಯಾನ್‌ ಅದಾದ ನಂತರ ತೈವಾನ್‌ಗೆ ತೆರೆಳಿ ತಲೆ ಮರೆಸಿಕೊಂಡಿದ್ದಾನೆ. ಆತ ಇಂದು ಬದುಕಿರಬಹುದು, ಇಲ್ಲದೆಯೂ ಇರಬಹುದು. ಆದರೂ ಕೂಡ ಲೆಕ್ಕವಿಲ್ಲದಷ್ಟು ಜನರ ಸಾವು ನೋವಿನ ನಡುವೆಯೂ, ಟ್ಯಾಂಕ್‌ ಮ್ಯಾನ್‌ನ ಧೈರ್ಯ ಜನರಲ್ಲಿ ಸ್ಫೂರ್ತಿ ತುಂಬುತ್ತಿದೆ. ಜಾಗತಿಕ ಇತಿಹಾಸದಲ್ಲಿ ಚೀನಾ ರಾಷ್ಟ್ರ ಇರುವವರೆಗೂ ಟ್ಯಾಂಕ್‌ ಮ್ಯಾನ್‌ ಸದಾ ಭರವಸೆಯ ದಂತಕತೆಯಾಗಿ ಉಳಿದುಕೊಳ್ಳುತ್ತಾನೆ.

ಟ್ಯಾಂಕ್‌ ಮ್ಯಾನ್‌ ಚೀನಾದ ದೊಡ್ಡ ದೊಡ್ಡ ಟ್ಯಾಂಕರ್‌ಗಳ ಮುಂದೆ ನಿಂತು ಪ್ರಜಾಪ್ರಭುತ್ವಕ್ಕಾಗಿ ಹಂಬಲಿಸಿದ್ದ ನೆನಪನ್ನು ಹಲವಾರು ಅನಿವಾಸಿ ಚೀನೀಯರು ಮತ್ತೆ ಮಾಡಿಕೊಂಡಿದ್ದಾರೆ. ಅದರ ಕೆಲವು ಪೋಸ್ಟ್‌ಗಳು ಇಲ್ಲಿವೆ.