samachara
www.samachara.com
ಕಾಬೂಲ್‌ ಧಾರ್ಮಿಕ ಸಮಾವೇಶದ ಮೇಲೆ ಆತ್ಮಹತ್ಯಾ ದಾಳಿ; 14ಕ್ಕೂ ಹೆಚ್ಚು ಸಾವು
ವಿದೇಶ

ಕಾಬೂಲ್‌ ಧಾರ್ಮಿಕ ಸಮಾವೇಶದ ಮೇಲೆ ಆತ್ಮಹತ್ಯಾ ದಾಳಿ; 14ಕ್ಕೂ ಹೆಚ್ಚು ಸಾವು

ಆಘ್ಫಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆಯುತ್ತಿದ್ದ ಧಾರ್ಮಿಕ ಮುಖಂಡರ ಸಮಾವೇಶದ ವೇಳೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆದು 14ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ನಡೆದಿರುವ ಆತ್ಮಹತ್ಯಾ ಬಾಂಬ್‌ ದಾಳಿಗೆ 14 ಮಂದಿ ಬಲಿಯಾಗಿದ್ದಾರೆ. ಘಟನೆಯಲ್ಲಿ 17ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಮೃತಪಟ್ಟವರ ಪೈಕಿ 7 ಮಂದಿ ಧಾರ್ಮಿಕ ಮುಖಂಡರು ಮತ್ತು 4 ಮಂದಿ ಭದ್ರತಾ ಸಿಬ್ಬಂದಿ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಾಬೂಲ್‌ನ ಪಾಲಿಟೆಕ್ನಿಕ್‌ ವಿಶ್ವವಿದ್ಯಾಲಯದ ಬಳಿ ನಡೆಯುತ್ತಿದ್ದ ಧಾರ್ಮಿಕ ಸಮಾವೇಶದಲ್ಲಿ ಈ ಬಾಂಬ್‌ ದಾಳಿ ನಡೆದಿದೆ. ಈ ಸಮಾವೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಸಮಾವೇಶದಲ್ಲಿ ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧವನ್ನು ವಿರೋಧಿಸಿ ಫತ್ವಾ ಹೊರಡಿಸಿದ ಬಳಿಕ ಈ ದಾಳಿ ನಡೆದಿದೆ.

“ಧಾರ್ಮಿಕ ಮುಖಂಡರ ಸಮಾವೇಶ ನಡೆಯುತ್ತಿದ್ದ ಲೋಯಾ ಜಿರ್ಗಾ ಟೆಂಟ್‌ನ ಹೊರಗೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದೆ. ಸಮಾವೇಶ ಮುಗಿಸಿಕೊಂಡು ಧಾರ್ಮಿಕ ಮುಖಂಡರು ಟೆಂಟ್‌ನಿಂದ ಹೊರ ಹೋಗುವ ವೇಳೆ ಆತ್ಮಹತ್ಯಾ ದಾಳಿ ನಡೆಸಲಾಗಿದೆ” ಎಂದು ಕಾಬೂಲ್‌ ಪೊಲೀಸ್‌ ವಕ್ತಾರ ಹಸ್ಮತ್‌ ತಿಳಿಸಿದ್ದಾರೆ.

ತಾಲಿಬಾನ್‌ ಸೇರಿದಂತೆ ಯಾವುದೇ ಭಯೋತ್ಪಾದಕ ಸಂಘಟನೆ ಈವರೆಗೆ ದಾಳಿಯ ಹೊಣೆ ಹೊತ್ತಿಲ್ಲ. ಕಾಬೂಲ್‌ ಪೊಲೀಸರೂ ಇನ್ನೂ ಯಾವುದೇ ಸಂಘಟನೆಯ ದಾಳಿಯ ಶಂಕೆ ವ್ಯಕ್ತಪಡಿಸಿಲ್ಲ.

ಹಲವು ವರ್ಷಗಳ ಯುದ್ಧದಿಂದ ಆಫ್ಘಾನಿಸ್ತಾನ ಜರ್ಜರಿತವಾಗಿದೆ. ಯುದ್ಧಕ್ಕೆ ಕಡಿವಾಣ ಹಾಕಲು ಧಾರ್ಮಿಕ ಮುಖಂಡರು ಯುದ್ಧ ವಿರೋಧಿ ಫತ್ವಾ ಹೊರಡಿಸಿದ್ದರು. ಆದರೆ, ಈ ಫತ್ವಾ ಹೊರಡಿಸಿದ ಬೆನ್ನಲ್ಲೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆದು ಹಲವರು ಪ್ರಾಣಕಳೆದುಕೊಳ್ಳುವಂತಾಗಿದೆ. ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್‌ ದಾಳಿಗಳು ಹೆಚ್ಚಾಗುತ್ತಿದ್ದು, ಪ್ರಾಣಹಾನಿ ಸಂಖ್ಯೆ ಏರುತ್ತಿದೆ.