ಹಾರ್ವೆ ವೈನ್‌ಸ್ಟೀನ್‌
ವಿದೇಶ

ಕೊನೆಗೂ ಪೊಲೀಸರಿಗೆ ಶರಣಾದ ಲೈಂಗಿಕ ಕಿರುಕುಳ ಆರೋಪಿ ಹಾರ್ವೆ ವೈನ್‌ಸ್ಟೀನ್‌ 

ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದ್ದ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‌ಸ್ಟೀನ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾರೆ. ಹಲವು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಾರ್ವೆ ಮೇಲಿತ್ತು.

ಅತ್ಯಾಚಾರ ಹಾಗೂ ಹಲವು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಹಾಲಿವುಡ್‌ ನಿರ್ಮಾಪಕ ಹಾರ್ವೆ ವೈನ್‌ಸ್ಟೀನ್‌ (66) ಶುಕ್ರವಾರ ನ್ಯೂಯಾರ್ಕ್‌ ಪೊಲೀಸರಿಗೆ ಶರಣಾಗಿದ್ದಾರೆ.

ಹಾರ್ವೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹಾಲಿವುಡ್‌ ನಟಿಯೊಬ್ಬರು 2004ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಈ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ಆಗ ನ್ಯೂಯಾರ್ಕ್‌ ಪೊಲೀಸರು ಹೇಳಿದ್ದರು. ಆದರೆ, ಕೊನೆಗೂ ಹಾರ್ವೆ ತಾವೇ ಪೊಲೀಸರಿಗೆ ಶರಣಾಗಿದ್ದಾರೆ.

ಅವಕಾಶ ಹುಡುಕಿಕೊಂಡು ಬರುವ ಹೊಸ ನಟಿಯರಿಗೆ ಹಾರ್ವೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿತ್ತು. ಹಾಲಿವುಡ್‌ನ ಬಹುತೇಕ ನಟಿಯರು ತಾವು ಹಾರ್ವೆಯಿಂದ ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು.

ಹಾರ್ವೆ ಲೈಂಗಿಕ ಕಿರುಕುಳದ ವಿರುದ್ಧ ಸಿಡಿದೆದಿದ್ದ ನೊಂದ ಮಹಿಳೆಯರು #MeToo ಅಭಿಯಾನ ನಡೆಸಿದ್ದರು. ಹಾರ್ವೆ ಲೈಂಗಿಕ ಕಿರುಕುಳ ಎಸಗಿದ್ದ ಪ್ರಮಾಣ ಎಂಥದ್ದು ಎಂಬುದು ಈ ಅಭಿಯಾನದ ಮೂಲಕ ಬೆಳಕಿಗೆ ಬಂದಿತ್ತು. ಸುಮಾರು 75 ಮಹಿಳೆಯರು ತಾವು ಹಾರ್ವೆಯಿಂದ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದರು.

ಪತಿಯ ವಿರುದ್ಧ ಆರೋಪಗಳು ಹೆಚ್ಚಾದ ಬೆನ್ನಲ್ಲೇ ಹಾರ್ವೆ ಪತ್ನಿ ಜಿಯಾರ್ಜಿನಾ ಚಾಪ್‌ಮನ್‌ ತಾವು ಪತಿಯನ್ನು ತೊರೆಯುತ್ತಿರುವುದಾಗಿ ಹೇಳಿದ್ದರು.

ಮೈ ಲೆಫ್ಟ್‌ ಫುಟ್‌, ಲಯನ್‌, ಶೇಕ್ಸ್‌ಪಿಯರ್‌ ಇನ್‌ ಲವ್‌ ಸೇರಿದಂತೆ ಹಲವು ಚಿತ್ರಗಳನ್ನು ಹಾರ್ವೆ ನಿರ್ಮಿಸಿದ್ದಾರೆ. ಹಾರ್ವೆ ನಿರ್ಮಿಸಿದ ಚಿತ್ರಗಳ ಪೈಕಿ 300ಕ್ಕೂ ಅಧಿಕ ಚಿತ್ರಗಳು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವು.

“ಹಾರ್ವೆ ಬಾಲಿವುಡ್‌ ನಟಿ ಐಶ್ವರ್ಯಾ ರೈ ಮೇಲೂ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದರು. ಐಶ್ವರ್ಯಾ ಭೇಟಿ ಮಾಡಿಸುವಂತೆ ನನ್ನನ್ನು ಒತ್ತಾಯಿಸುತ್ತಿದ್ದರು” ಎಂದು ಸಿಮೋನೆ ಶೆಫೀಲ್ಡ್‌ ಹೇಳಿದ್ದರು.

ಇಷ್ಟು ದಿನ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಲೇ ಬಂದ ಹಾರ್ವೆ ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಹಾರ್ವೆ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.