samachara
www.samachara.com
ಮೂರು ದಶಕಗಳ ಕಾಲ ಹಾರಾಟ ನಡೆಸಿ ದುರಂತ ಅಂತ್ಯ ಕಂಡ   ಬೋಯಿಂಗ್ 737
ವಿದೇಶ

ಮೂರು ದಶಕಗಳ ಕಾಲ ಹಾರಾಟ ನಡೆಸಿ ದುರಂತ ಅಂತ್ಯ ಕಂಡ ಬೋಯಿಂಗ್ 737

ಮೆಕ್ಸಿಕೋ ಹಾಗೂ ಅರ್ಜೈಂಟಾ ಅಧಿಕಾರಿಗಳು ಕಮ್ಯುನಿಸ್ಟ್ ಸರ್ಕಾರದ ವಿಮಾನಯಾನ ಸಂಸ್ಥೆಯನ್ನು ಟೀಕಿಸಿದ್ದಾರೆ. ಹೊಸ ವಿಮಾನವನ್ನು ಖರೀದಿಸದೆ ಹಳೆಯ ವಿಮಾವನ್ನೇ ಮತ್ತೆ ಮತ್ತೆ ಸರ್ವೀಸ್ ಮಾಡಿಸಿ ಹಾರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಫಿಡೆಲ್ ಕಾಸ್ಟ್ರೋ ನಿಧನದ ನಂತರ ಕ್ಯೂಬಾ ಒಂದರ ಹಿಂದೆ ಒಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಫಿಡೆಲ್ ಮೊದಲ ಪುತ್ರ 68 ವರ್ಷದ ಫಿಡಲಿಟೋ ಅವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಫಿಡೆಲ್ ಸಹೋದರ ಕ್ಯೂಬಾ ಅಧ್ಯಕ್ಷ ರೌಲ್ ಕಾಸ್ಟ್ರೋ ಆರೋಗ್ಯ ಸಮಸ್ಯೆಯಿಂದ ತಮ್ಮ ಸ್ಥಾನವನ್ನು ತೆರವುಗೊಳಿಸಿದ್ದರು. ಸದ್ಯ ಕ್ಯೂಬಾ ಸರ್ಕಾರಿ ಸ್ವಾಮ್ಯದ ವಿಮಾನ ಪತನಗೊಂಡಿದ್ದು, ಬರೋಬ್ಬರಿ 107 ಮಂದಿ ಸಾವನ್ನಪ್ಪಿದ್ದಾರೆ.

ರಾಜಧಾನಿ ಹವಾನಾದಿಂದ ಹೊರಟಿದ್ದ ಕ್ಯೂಬಾ ಸರ್ಕಾರಿ ಸ್ವಾಮ್ಯದ ವಿಮಾನ ಬೋಯಿಂಗ್ 737 ಉತ್ತರ ಭಾಗದ ಹವಾನಾ ಜೋಸ್ ಮಾರ್ಟಿನ್ ಏರ್ಪೋರ್ಟ್ ಬಳಿ ಸ್ಫೋಟಗೊಂಡಿದೆ. ಈ ವೇಳೆ ವಿಮಾನದಲ್ಲಿದ್ದ 110 ಮಂದಿ ಪ್ರಯಾಣಿಕರಲ್ಲಿ ಮೂರು ಮಂದಿ ಮಾತ್ರ ಬದುಕುಳಿದಿದ್ದಾರೆ ಎಂದು ಕ್ಯೂಬಾದ ಮಾಧ್ಯಮಗಳು ತಿಳಿಸಿವೆ. ಈ ಸಂಬಂಧ ಕ್ಯೂಬಾ ಸರ್ಕಾರ ದೇಶಾದ್ಯಂತ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.

ರಾಜಧಾನಿ ಹವಾನಾ ವಿಮಾನ ನಿಲ್ದಾಣದಿಂದ ಹೊರಟ ಕೆಲ ನಿಮಿಷಗಳಲ್ಲೇ ವಿಮಾನ ಸ್ಪೋಟಗೊಂಡಿದೆ. ಈ ಸಂಬಂಧ ಕಪ್ಪು ಪೆಟ್ಟಿಗೆ ಸೇರಿದಂತೆ ಅವಶೇಷಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. 2010ರ ನಂತರ ದೇಶದಲ್ಲಿ ನಡೆದ ಮೂರು ವಿಮಾನ ಅಪಘಾತಗಳಲ್ಲಿ ಇದು ದೊಡ್ಡ ಪ್ರಮಾಣದ ನಷ್ಟವನ್ನು ಉಂಟು ಮಾಡಿದೆ. “ವಿಮಾನಯಾನ ಇತಿಹಾಸದಲ್ಲೇ ಇದೊಂದು ಕೆಟ್ಟ ಘಟನೆ,” ಎಂದು ಅಧಿಕಾರಿಗಳು ಹೇಳಿದ್ದಾರೆ.

“ಪೂರ್ವದ ಹೋಲ್ಗೆನ್ ನಗರಕ್ಕೆ ಹೊರಟಿದ್ದ ಬೋಯಿಂದ ವಿಮಾನ ಪ್ರಯಾಣ ಆರಂಭಿಸುವ ವೇಳೆಗೆ ನಿಲ್ದಾಣ ತೇವದಿಂದ ಕೂಡಿತ್ತು. ಜೊತೆಗೆ ಆಕಾಶದಲ್ಲಿ ದಟ್ಟ ಮೋಡಗಳಿದ್ದವು. 37 ವರ್ಷದಷ್ಟು ಹಳೆದಾದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಒಮ್ಮೆಲೆ ಬಲಕ್ಕೆ ದಿಕ್ಕು ಬದಲಿಸಿತು. ಆ ನಂತರ ನಮಗೆ ದೊಡ್ಡದಾದ ಸದ್ದಷ್ಟೇ ಕೇಳಿಸಿತು. ಅದರ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ದಿಕ್ಕು ಸೂಚಕ ಲೈಟ್ ಗಳು ಆಫ್ ಆದವು. ಆ ನಂತರ ನಮಗೆ ಆಕಾಶಕ್ಕೆ ಏರುತ್ತಿದ್ದ ಕಪ್ಪು ಹೊಗೆ ಕಾಣಿಸಿತು” ಎಂದು ಅರ್ಜೆಂಟೈನಾ ಪ್ರವಾಸಿಗ ಬ್ರೈನ್ ಹೊರೈನ್ ಬೂನ್ ವಿಮಾನ ಅಪಘಾತವನ್ನು ಕಣ್ಣಾರೆ ಕಂಡು ಆಘಾತಗೊಂಡಂತೆ ಬಣ್ಣಿಸುತ್ತಾರೆ.

ಮೂರು ದಶಕಗಳ ಕಾಲ ಹಾರಾಟ ನಡೆಸಿ ದುರಂತ ಅಂತ್ಯ ಕಂಡ   ಬೋಯಿಂಗ್ 737

ವಿಮಾನದಲ್ಲಿದ್ದ 110 ಮಂದಿಯಲ್ಲಿ 106 ಮಂದಿ ಪ್ರಯಾಣಿಕರಿದ್ದರೆ, ಇಬ್ಬರು ಪೈಲೆಟ್ ಸೇರಿ 4 ಮಂದಿ ವಿಮಾನ ಸಿಬ್ಬಂದಿಗಳಿದ್ದರು. ಅಪಘಾತದಲ್ಲಿ ವಿಮಾನ ಸಂಪೂರ್ಣವಾಗಿ ಬೆಂಕಿಯಲ್ಲಿ ಬೆಂದು ಹೋಗಿದೆ. ಕ್ಯೂಬನ್ ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತದ ಚಿತ್ರಗಳು ವಿನಿಮಯಗೊಳ್ಳುತ್ತಿದ್ದು, ಬಾರಿ ದುಃಖ ವ್ಯಕ್ತವಾಗುತ್ತಿದೆ. ಕ್ಯೂಬಾದ ನೂತನ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಅಪಘಾತದ ತನಿಖೆಗಾಗಿ ವಿಶೇಷ ತನಿಖಾ ಸಮಿತಿಯನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಜೊತಗೆ ದುರಂತಕ್ಕೆ ಕಾರಣಗಳೇನು ಎಂದು ಶೀಘ್ರ ತಿಳಿಯಲಿದೆ ಎಂದಿದ್ದಾರೆ.

ವಿಮಾನಯಾನವನ್ನು ನಿರ್ವಹಣೆ ಮಾಡುತ್ತಿರುವ ಕ್ಯೂಬಾ ವಿಮಾನ ಸಂಸ್ಥೆಯ ಬಗ್ಗೆ ಪ್ರಯಾಣಿಕರಿಗೆ ಈವರೆಗೂ ಉತ್ತಮ ಅಭಿಪ್ರಾಯವೇ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿಳಂಬ ಪ್ರಯಾಣ, ವಿಮಾನ ರದ್ದು ಇತ್ಯಾದಿಗಳಿಂದ ಕುಖ್ಯಾತವಾಗಿತ್ತು. ಪ್ರಯಾಣಿಕರ ಕೆಂಗಣ್ಣಿಗೆ ಅದು ಗುರಿಯಾಗಿತ್ತು. ಜೊತೆಗೆ ವಿಮಾನ ಸಂಸ್ಥೆ ನಷ್ಟ ತುಂಬಿಕೊಳ್ಳಲು ವಿಮಾನ ಹಾಗೂ ಕಾಪ್ಟರ್ ಗಳನ್ನು ಖಾಸಗಿ ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ಬಾಡಿಗೆ ಕೊಡುತ್ತಿತ್ತು. ಹೀಗಾಗಿ ನಿರ್ವಹಣೆ ಗುಣಮಟ್ಟ ಕುಸಿದಿತ್ತು ಎಂಬ ಎಂಬ ಟೀಕೆಗಳೂ ಕೇಳಿ ಬಂದಿದೆ. ಪಥನವಾದ ವಿಮಾನ 1979ರಲ್ಲಿ ತಯಾರಿಸಿದ್ದು, ವಿಮಾನಯಾನ ಸಂಸ್ಥೆ ಗ್ಲೋಬಲ್ ಏರ್ ಎಂಬ ಸಂಸ್ಥೆಗೆ ಆಗಾಗ ಬಾಡಿಗೆ ನೀಡುತ್ತಿತ್ತು ಎನ್ನುತ್ತಾರೆ ಮೆಕ್ಸಿಕೋ ಅಧಿಕಾರಿಗಳು.

ಇನ್ನು ಅಪಘಾತದಲ್ಲಿ ಗಂಭೀರವಾದ ಸುಟ್ಟ ಗಾಯಗೊಂಡೂ ಬದುಕುಳಿದ ನಾಲ್ವರನ್ನು ಹವಾನಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತಪಟ್ಟವರಲ್ಲಿ ಐದು ಮಂದಿ ವಿದೇಶಿಯರು ಸೇರಿದ್ದು, ವಿಮಾನದ ಇಬ್ಬರು ಪೈಲೆಟ್ ಗಳ ಮೃತದೇಹವನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಮೆಕ್ಸಿಕೋ ಹಾಗೂ ಅರ್ಜೈಂಟಾ ಅಧಿಕಾರಿಗಳು ಕಮ್ಯುನಿಸ್ಟ್ ಸರ್ಕಾರದ ವಿಮಾನಯಾನ ಸಂಸ್ಥೆಯನ್ನು ಟೀಕಿಸಿದ್ದಾರೆ. ಹೊಸ ವಿಮಾನವನ್ನು ಖರೀದಿಸದೆ ಹಳೆಯ ವಿಮಾವನ್ನೇ ಮತ್ತೆ ಮತ್ತೆ ಸರ್ವೀಸ್ ಮಾಡಿಸಿ ಹಾರಿಸಲಾಗುತ್ತಿತ್ತು ಎಂದು ಅವು ಹೇಳಿವೆ. ಈ ಮಧ್ಯೆ ಮೃತರ ಸಂಬಂಧಿಗಳು ತಮ್ಮವರ ದೇಹಗಳನ್ನು ಪಡೆಯಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದು, ದುಃಖ ಮುಗಿಲು ಮುಟ್ಟಿದೆ. ಬೆಂಕಿಯಲ್ಲಿ ಬೆಂದಿರುವ ಕಾರಣ ದೇಹಗಳನ್ನು ಗುರುತಿಸುವುದೇ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಕ್ಯೂಬಾ ವಿಮಾನಯಾನ ಸಂಸ್ಥೆಯ ಬೆನ್ನಿಗೆ ಉತ್ತಮ ಅಭಿಪ್ರಾಯದ ಜೊತೆಗೆ ಅಪಘಾತಗಳ ಕುಖ್ಯಾತಿಯೂ ಅಂಟಿಕೊಂಡಿದೆ. 1989ರಲ್ಲಿ ಹವಾನಾದಿಂದ ಇಟಲಿಗೆ ಹೊರಟಿದ್ದ ವಿಮಾನ ಅಪಘಾತದಲ್ಲಿ 126 ಮಂದಿ ಮೃತಪಟ್ಟಿದ್ದರು. 2010ರಲ್ಲಿ ಹವಾನಾದಿಂದ ಸ್ಯಾಂಟಿಗುವಾಗೆ ಹೊರಟಿದ್ದ ಏರೋ ಕೆರಿಬಿಯನ್ ವಿಮಾನ ಅಪಘಾದಲ್ಲಿ 28 ವಿದೇಶಿಯರೂ ಸೇರಿ 68 ಮಂದಿ ಮೃತಪಟ್ಟಿದ್ದರು. ಕಳೆದ ವರ್ಷ ಕ್ಯೂಬಾ ಸೇನಾ ವಿಮಾನ ಪಥನಗೊಂಡು 8 ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದರು.