ಜಾಗತಿಕ ಮಟ್ಟದಲ್ಲಿ ಗಗನಕ್ಕೇರುತ್ತಿರುವ ತೈಲಬೆಲೆ; ಇಲ್ಲಿವೆ ಪ್ರಮುಖ ಕಾರಣಗಳು
ವಿದೇಶ

ಜಾಗತಿಕ ಮಟ್ಟದಲ್ಲಿ ಗಗನಕ್ಕೇರುತ್ತಿರುವ ತೈಲಬೆಲೆ; ಇಲ್ಲಿವೆ ಪ್ರಮುಖ ಕಾರಣಗಳು

ತೈಲಬೆಲೆ ಏರಿಕೆಯ ಬಿಸಿ ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ತಗುಲಿದೆ. 2014ರ ನವೆಂಬರ್‌ನಿಂದ ಆರಂಭಗೊಂಡ ಈ ಏರಿಕೆ, ಇಂದು ಪ್ರತಿ ಬ್ಯಾರೆಲ್‌ ಕಚ್ಚಾ ತೈಲಕ್ಕೆ 80 ಡಾಲರ್‌ಗಳನ್ನು ತಲುಪಿದೆ.

ತೈಲಬೆಲೆ ಏರಿಕೆಯ ಬಿಸಿ ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ತಗಲಿದೆ. 2014ರ ನವೆಂಬರ್‌ನಿಂದ ಆರಂಭಗೊಂಡ ಈ ಏರಿಕೆ, ಇಂದು ಪ್ರತಿ ಬ್ಯಾರೆಲ್‌ ಕಚ್ಚಾ ತೈಲಕ್ಕೆ 80 ಡಾಲರ್‌ಗಳನ್ನು ತಲುಪಿದೆ. ಕಳೆದ ವರ್ಷದಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಇನ್ನೂ ಹೆಚ್ಚಾಗುವ ಸಾಧ್ಯತೆಗಳೂ ಕೂಡ ಜಗತ್ತಿನ ಮುಂದಿದೆ. ಈ ಏರಿಕೆಯ ಹಿಂದಿನ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ.

ಡೊನಾಲ್ಡ್‌ ಟ್ರಂಪ್‌ ನಿರ್ಧಾರಗಳು:

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೈಲಬೆಲೆ ಏರಿಕೆಗೆ ಕಾರಣವಾಗುತ್ತಿವೆ. ಇತ್ತೀಚಿಗೆ ಇರಾನ್‌ ಜತೆಗಿನ ಅಣು ಒಪ್ಪಂದವನ್ನು ಏಕಾಏಕಿ ಮುರಿದು ದಿಗ್ಭಂಧನವನ್ನು ವಿಧಿಸಿದ್ದೂ ಕೂಡ ಕಚ್ಚಾ ತೈಲದ ಬೆಲೆ ಏರಿಸುತ್ತಿದೆ.

ದಿಗ್ಬಂಧನದ ಪರಿಣಾಮವಾಗಿ ಇರಾನ್‌ನ ಕಚ್ಚಾ ತೈಲ ರಫ್ತು ಉದ್ಯಮದಲ್ಲಿ ಕುಸಿತ ಕಾಣಿಸಿಕೊಳ್ಳುತ್ತಿದೆ. ಜಗತ್ತಿನ ತೈಲ ಇಂಧನ ಬಳಕೆಯ ಒಟ್ಟು ಪ್ರಮಾಣದಲ್ಲಿ ಶೇ.4ರಷ್ಟನ್ನು ಇರಾನ್‌ ಒದಗಿಸುತ್ತಿತ್ತು. ದಿನವೊಂದಕ್ಕೆ 24 ಲಕ್ಷ ಬ್ಯಾರೆಲ್‌ಗಳಷ್ಟು ತೈಲವನ್ನು ಇರಾನ್‌ ಪೂರೈಸುತ್ತಿತ್ತು. ಒಂದು ಬ್ಯಾರೆಲ್‌ ಎಂದರೆ 119.24 ಲೀಟರ್‌. ಎಂದರೆ ಪ್ರತಿಯೊಂದು ದಿನಕ್ಕೆ 28.62 ಕೋಟಿ ಲೀಟರ್‌ಗಳಷ್ಟು ತೈಲ ಇರಾನ್‌ನಿಂದ ದೊರೆಯುತ್ತಿತ್ತು. ಈಗ ಈ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಈ ಇಳಿಕೆ ಕಚ್ಚಾತೈಲ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

ಪ್ಯಾರೀಸ್‌ ಮೂಲದ ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಪ್ರಕಾರ, ಈ ದಿಗ್ಬಂಧನದ ಪರಿಣಾಮಗಳೇನು ಎನ್ನುವುದನ್ನು ಈಗಲೇ ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಇತರೆ ತೈಲೋತ್ಪಾದಕರು ಹುಟ್ಟಿಕೊಳ್ಳಬಹುದು ಅಥವಾ ಇಂಧನಕ್ಕಾಗಿ ಜಗತ್ತು ಪರದಾಡುವ ಸ್ಥಿತಿಯೂ ಉಂಟಾಗಬಹುದು. ಸದ್ಯಕ್ಕೆ ಜಗತ್ತಿಗೆ ಅತೀ ಹೆಚ್ಚು ಕಚ್ಚಾತೈಲವನ್ನು ಪೂರೈಸುವ ಸೌದಿ ಅರೇಬಿಯಾ, ಇರಾನ್‌ ಜಾಗವನ್ನು ತಾನು ತುಂಬುವುದಾಗಿ ತಿಳಿಸಿದೆ. ಆದರೆ ಎಷ್ಟರಮಟ್ಟಿಗೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇರಾನ್‌ನದ್ದು ಕೆಲವು ದಿನಗಳ ಕತೆಯಾದರೆ, ಮಧ್ಯಪ್ರಾಚ್ಯದ ದೇಶಗಳ ಮೇಲೆ 2012ರ ಅವಧಿಯಲ್ಲಿ ವಿಧಿಸಿದ್ದ ದಿಗ್ಬಂಧನಗಳು ದಿನವೊಂದಕ್ಕೆ 12 ಲಕ್ಷ ಬ್ಯಾರಲ್‌ಗಳಷ್ಟು ತೈಲೋತ್ಪಾದನೆ ಕಡಿಮೆಯಾಗಲು ಕಾರಣವಾಗಿತ್ತು. ಈಗ ಈ ಸಾಲಿನಲ್ಲಿ ಇರಾನ್‌ ನಿಂತಿದ್ದು ಜಾಗತಿಕ ತೈಲ ಬೇಡಿಕೆಯನ್ನು ಹೆಚ್ಚಾಗಿಸಿದೆ.

ಸೌದಿ ಅರೇಬಿಯಾ ಮತ್ತು ರಷ್ಯಾ:

ಸೌದಿ ಮತ್ತು ರಷ್ಯಾ ದೇಶಗಳು ಸೇರಿದಂತೆ ಪ್ರಮುಖ ತೈಲೋತ್ಪನ್ನ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆಗೊಳಿಸಿರುವುದು ತೈಲಬೆಲೆ ಏರಿಕೆಯ ಪ್ರಮುಖ ಕಾರಣಗಳಲ್ಲೊಂದು. ಈಗಾಗಲೇ ಸತತ 17 ತಿಂಗಳಿಂದ ಜಗತ್ತಿಗೆ ಅಗತ್ಯವಿರುವಷ್ಟು ತೈಲವನ್ನು ಈ ರಾಷ್ಟ್ರಗಳು ಉತ್ಪಾದಿಸುತ್ತಿಲ್ಲ. ಜಾಗತಿಕ ತೈಲ ಬೇಡಿಕೆಯನ್ನು ಹೆಚ್ಚಾಗಿಸಿ, ಬೆಲೆ ಏರಿಸುವುದು ಈ ತಂತ್ರದ ಹಿಂದಿನ ಉದ್ದೇಶ ಎನ್ನಲಾಗಿದೆ.

ಓಪಿಇಸಿ (ತೈಲ ರಫ್ತುದಾರ ದೇಶಗಳ ಒಕ್ಕೂಟ) ಮತ್ತು ರಷ್ಯಾ ಜಗತ್ತಿನ ಒಟ್ಟಾರೆ ತೈಲ ಬೇಡಿಕೆಯ ಶೇ.40ರಷ್ಟನ್ನು ಪೂರೈಸುತ್ತವೆ. ಇದೇ ಅಂಶವನ್ನಿಡಿದು ತೈಲೋತ್ಪಾದನೆಯನ್ನು ಕಡಿತಗೊಳಿಸಿರುವ ಈ ದೇಶಗಳು ಬೆಲೆ ಏರಿಕೆಗೆ ಮುಖ್ಯ ಕಾರಣಗಳಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಶಕ್ತಿಯೇನು ಎನ್ನುವುದನ್ನು ಸಾಬೀತು ಪಡಿಸುತ್ತಿವೆ. ಈ ತೈಲೋತ್ಪಾದನಾ ಕಡಿತವನ್ನು 2018ರ ಕೊನೆಯವರೆಗೂ ಮುಂದುವರಿಸುವ ಯೋಚನೆಯಲ್ಲಿ ಈ ದೇಶಗಳಿವೆ. ಹೀಗೇ ಮುಂದುವರಿದರೆ ತೈಲ ಬೆಲೆ ಇನ್ನಷ್ಟು ಮೇಲಕ್ಕೇರುವುದರಲ್ಲಿ ಸಂಶಯವಿಲ್ಲ.

ವೆನುಜುವೆಲಾ:

ವೆನುಜುವೆಲಾ ಹೇರಳವಾದ ಪೆಟ್ರೋಲಿಯ್‌ ಸಂಪನ್ಮೂಲವನ್ನು ಹೊಂದಿರುವ ದಕ್ಷಿಣ ಅಮೆರಿಕಾ ಖಂಡದ ದೇಶ. ವೆನುಜುವೆಲಾ ದೇಶದಲ್ಲಿ ಉಂಟಾಗುತ್ತಿರುವ ರಾಜಕೀಯ ಹಾಗೂ ಆರ್ಥಿಕ ಕುಸಿತ ತೈಲೋತ್ಪಾದನೆಯನ್ನು ಕುಂಠಿತಗೊಳಿಸಿದೆ. ಪರಿಣಾಮವಾಗಿ ಜಗತ್ತಿಗೆ ಸರಬರಾಜಾಗುತ್ತಿದ್ದ ತೈಲದ ಪ್ರಮಾಣ ಕಡಿಮೆಯಾಗಿದೆ. ಈ ತೈಲೋತ್ಪಾದನಾ ಕುಸಿತ ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ.

ಅಂತರರಾಷ್ಟ್ರೀಯ ಇಂಧನ ಏಜೆನ್ಸಿ ಹೇಳುವ ಪ್ರಕಾರ ವೆನುಜುವೆಲಾ ಆರ್ಥಿಕತೆಯೊಳಗಿನ ಭ್ರಷ್ಟಾಚಾರ, ದೇಶದ ರಾಜಕೀಯ ದುಸ್ಥಿತಿ, ಹಣ ಪಾವತಿ ಸಮಸ್ಯೆ ಇತ್ಯಾದಿಗಳು ವೆನೆಜುವೆಲಾ ಮೇಲೆ ಮಾತ್ರವಲ್ಲದೆ ಇಡೀ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿವೆ.

ವೆನುಜುವೆಲಾದ ಸರಕಾರಿ ತೈಲ ಮತ್ತು ಅನಿಲ ಉತ್ಪಾದನಾ ಕಂಪನಿ ತನ್ನ ಕಾರ್ಮಿಕರಿಗೆ ನೀಡುತ್ತಿರುವ ಕಡಿಮೆ ವೇತನ, ಭದ್ರತೆಯ ಕೊರತೆ ಮತ್ತು ಕಾರ್ಮಿಕರಿಗೆ ರಕ್ಷಣೆಯಿಲ್ಲದಿರುವುದು ಕಾರ್ಮಿಕರು ಕೆಲಸ ತೊರೆಯಲು ಕಾರಣವಾಗುತ್ತಿದೆ. ಕೆಲಸಗಾರರಿಲ್ಲದ ಕಾರಣ ತೈಲದ ಉತ್ಪಾದನೆಯೂ ಕುಂಠಿತಗೊಂಡಿದೆ. ಹೆಚ್ಚಿನ ಲಾಭವನ್ನು ಪಡೆಯುತ್ತಿಲ್ಲದ ಕಂಪನಿ ತನ್ನ ಕಾರ್ಮಿಕರಿಗೆ ಕಡಿಮೆ ಸಂಬಳವನ್ನು ನೀಡಿ ಇರುವ ಕೆಲಸಗಾರರನ್ನೂ ಕಳೆದುಕೊಳ್ಳುತ್ತಿದೆ ಎನ್ನುತ್ತದೆ ಅಂತರರಾಷ್ಟ್ರೀಯ ಇಂಧನ ಏಜೆನ್ಸಿ.

ಜಾಗತಿಕ ಇಂಧನ ಪೂರೈಕೆಯಲ್ಲಿ ಇರಾನ್‌ನಷ್ಟೇ ಪ್ರಭಾವವನ್ನು ವೆನುಜುವೆಲಾ ಕೂಡ ಬೀರಬಲ್ಲದು. ಈ ಎರಡೂ ದೇಶಗಳು ಈಗ ಸಮರ್ಪಕವಾಗಿ ತೈಲ ಪೂರೈಕೆ ಮಾಡದಿರುವುದು ಜಾಗತಿಕ ತೈಲಬೆಲೆ ಏರಿಕೆಗೆ ಕಾರಣವಾಗಿ ನಿಂತಿದೆ. ಮಧ್ಯಪ್ರಾಚ್ಯ ದೇಶಗಳ ಸಾಲಿನಲ್ಲಿರುವ ಇರಾನ್‌ ಮಾತ್ರವಲ್ಲದೇ ಇರಾಕ್‌, ಲಿಬಿಯಾ, ಸಿರಿಯಾ ಮತ್ತು ಯೆಮನ್‌ ಕೂಡ ತೈಲ ಬೇಲೆ ಏರಿಕೆ ಮತ್ತು ಇಳಿಕೆಯ ಮೇಲೆ ತಮ್ಮದೇ ಆದ ಪ್ರಭಾವ ಬೀರಬಲ್ಲವು. ಆದರೆ ಈಗ ಈ ದೇಶಗಳಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತಷ್ಟು ತೈಲಬೆಲೆ ಏರಿಕೆಗೆ ಕಾರಣವಾಗಬಹುದೆಂಬ ನಿರೀಕ್ಷೆಗಳಿವೆ. ತೈಲೋತ್ಪನ್ನ ರಾಷ್ಟ್ರಗಳಲ್ಲಿನ ಗಡಿ ವಿವಾದಗಳೂ ಕೂಡ ಭವಿಷ್ಯದ ತೈಲ ಪೂರೈಕೆ ಮೇಲೆ ಪ್ರಭಾವ ಬೀರಬಹುದು ಎಂದು ಅಂತರರಾಷ್ಟ್ರೀಯ ಇಂಧನ ಏಜೆನ್ಸಿ ಎಚ್ಚರಿಕೆ ನೀಡಿದೆ.

ಇವು ತೈಲಬೆಲೆ ಏರಿಕೆಯ ಮುಖ್ಯ ಕಾರಣಗಳು. ಇದಷ್ಟೇ ಅಲ್ಲದೇ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಕೂಡ ತೈಲ ಬೆಲೆ ಏರಿಳಿತವನ್ನು ನಿರ್ಧರಿಸುವ ಅಂಶವಾಗಿದೆ. ಸದ್ಯಕ್ಕೆ ಜಾಗತಿಕ ಆರ್ಥಿಕತೆ ಶೇ.3.9ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯೇನೋ ಹೌದು. ಆದರೆ ಈ ಬೆಳವಣಿಗೆ ಹೀಗೇ ಮುಂದುವರಿಯುತ್ತದೆಯೇ ಎನ್ನು ಪ್ರಶ್ನೆಯೂ ಕಾಡುತ್ತಿದೆ. ಒಂದು ವೇಳೆ ಜಾಗತಿಕ ಆರ್ಥಿಕತೆ ಕುಸಿತ ಕಂಡರೆ ತೈಲ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.

ಅಂತರರಾಷ್ಟ್ರೀಯ ಇಂಧನ ಏಜೆನ್ಸಿ ಹೇಳುವಂತೆ ಮೇ ತಿಂಗಳ ಮೂರನೇ ವಾರದಲ್ಲಿ ಪ್ರತಿದಿನವೊಂದರ ಜಾಗತಿಕ ತೈಲ ಬೇಡಿಕೆಯ ಏರಿಕೆ ಪ್ರಮಾಣ 14 ಲಕ್ಷ ಬ್ಯಾರಲ್‌ಗಳಿಂದ 15 ಲಕ್ಷ ಬ್ಯಾರಲ್‌ಗಳಷ್ಟು ಏರಿಕೆ ಕಂಡಿದೆ. ಅಂದಾಜಿನ ಪ್ರಕಾರ ಈ ವರ್ಷದ ಹೆಚ್ಚುವರಿ ತೈಲ ಬೇಡಿಕೆ ಸರಿಸುಮಾರು 10 ಕೋಟಿ ಬ್ಯಾರಲ್‌ ತಲುಪಿದೆ. ಎಂದರೆ 1,192 ಕೋಟಿ ಲೀಟರ್‌ ತೈಲದ ಕೊರೆತೆ ಉಂಟಾಗಲಿದೆ. ಈಗಾಗಲೇ ಭಾರತದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 100 ರೂಪಾಯಿಗಳನ್ನು ಮುಟ್ಟಲು ಹವಣಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಭಾರತೀಯರು ತಮ್ಮ ವಾಹನಗಳನ್ನು ಬದಿಗಿಟ್ಟು, ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆ ಅಥವಾ ಸೈಕಲ್‌ಗಳನ್ನು ಅವಲಂಬಿಸುವ ಕಾಲ ದೂರ ಇಲ್ಲ.

ಮಾಹಿತಿ ಮೂಲ: ದಿ ಗಾರ್ಡಿಯನ್‌