<b> ಮೆಗಾನ್‌ ಮಾರ್ಕೆಲ್‌ ಮತ್ತು ಪ್ರಿನ್ಸ್‌ ಹ್ಯಾರಿ</b>
ವಿದೇಶ

‘ಬ್ರಿಟನ್‌ ರಾಜವಿವಾಹ’: ಹಾಲಿವುಡ್‌ ನಟಿಯ ವರಿಸುತ್ತಿರುವ ಹ್ಯಾರಿ!

ವೇಲ್ಸ್‌ನ ರಾಜಕುಮಾರ ಹ್ಯಾರಿ ಮತ್ತು ಹಾಲಿವುಡ್ ನಟಿ ಮಾರ್ಕೆಲ್‌ ಅದ್ಧೂರಿ ವಿವಾಹ ವಿಂಡ್ಸರ್‌ನ ಸೇಂಟ್‌ ಜಾರ್ಜ್‌ ಚರ್ಚ್‌ನಲ್ಲಿ ಮೇ19ರಂದು ನಡೆಯಲಿದೆ.

ವೇಲ್ಸ್‌ನ ರಾಜಕುಮಾರ ಹ್ಯಾರಿ ಶನಿವಾರ ಹಾಲಿವುಡ್‌ ನಟಿ ಮೆಗಾನ್‌ ಮಾರ್ಕೆಲ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆ ‘ವರ್ಷದ ರಾಜವಿವಾಹ’ ಎಂದು ಕರೆಸಿಕೊಂಡಿದೆ.

ರಾಜಕುಮಾರ ಹ್ಯಾರಿ ಮತ್ತು ನಟಿ ಮಾರ್ಕೆಲ್‌ರ ಅದ್ದೂರಿ ವಿವಾಹ ವಿಂಡ್ಸರ್‌ ಅವೆನ್ಯೂದಲ್ಲಿರುವ ಸೇಂಟ್‌ ಜಾರ್ಜ್‌ ಚರ್ಚ್‌ನಲ್ಲಿ ಮೇ 19 ಶನಿವಾರದಂದು ನಡೆಯಲಿದೆ. ಬೆಳಗ್ಗೆ ಸುಮಾರು 11:15ರ ನಂತರದಿಂದ ವಿವಾಹ ವಿಧಿಗಳು ಪ್ರಾರಂಭಗೊಳ್ಳಲಿವೆ.

ಮಧ್ಯಾಹ್ನ 1 ಗಂಟೆ ವೇಳೆಗೆ ವಿಂಡ್ಸರ್‌ ಅವೆನ್ಯೂದಲ್ಲಿ ಸಾರೋಟಿನಲ್ಲಿ ಮಧುಮಕ್ಕಳ ಮರೆವಣಿಗೆ ನಡೆಯಲಿದೆ. ಮೆರವಣಿಗೆ ನಂತರ ಸೇಂಟ್‌ ಜಾರ್ಜ್‌ ಹಾಲ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಸಂಜೆ ಸುಮಾರು 200 ಜನ ಆಪ್ತರು ಮತ್ತು ಕುಟುಂಬದವರಿಗಾಗಿ ಖಾಸಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ಆರತಕ್ಷತೆ ಕಾರ್ಯಕ್ರಮಕ್ಕೆ 600 ಜನ ಅತಿಥಿಗಳಿಗಷ್ಟೇ ಆಹ್ವಾನ ಪತ್ರಿಕೆ ನೀಡಲಾಗಿದೆ.

ಸೇಂಟ್‌ ಜಾರ್ಜ್‌ ಚರ್ಚ್‌
ಸೇಂಟ್‌ ಜಾರ್ಜ್‌ ಚರ್ಚ್‌

ಯಾರೀತ ಪ್ರಿನ್ಸ್ ಹ್ಯಾರಿ?:

ವೇಲ್ಸ್‌ನ ರಾಜಕುಮಾರ ಹ್ಯಾರಿ ಪೂರ್ಣ ಹೆಸರು ಹೆನ್ರಿ ಚಾರ್ಲ್ಸ್‌ ಆಲ್ಬರ್ಟ್‌ ಡೇವಿಡ್‌. ಈತ ಜನಿಸಿದ್ದು 1984ರ ಸೆಪ್ಟೆಂಬರ್‌ 15ರಂದು. ವೇಲ್ಸ್‌ನ ರಾಜ ಚಾರ್ಲ್ಸ್ ಮತ್ತು ರಾಣಿ ಡಯಾನಾ ಜೋಡಿಯ ಪುತ್ರ. ಬ್ರಿಟಿಶ್‌ ರಾಜ ವಂಶದ ಕುಡಿ ಈ ಆಲ್ಬರ್ಟ್ ಡೇವಿಡ್‌. ಇಂಗ್ಲೆಂಡ್‌ನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಹ್ಯಾರಿ, ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆಫ್ಘಾನಿಸ್ತಾನದ ಯುದ್ಧಭೂಮಿಯಲ್ಲಿ ಇಂಗ್ಲೆಂಡ್‌ ಪಡೆಯ ಸೇನೆಯಲ್ಲಿದ್ದ ಹ್ಯಾರಿ 2015ರಲ್ಲಿ ಸೇನೆಯಿಂದ ಇಂಗ್ಲೆಂಡ್‌ಗೆ ಮರಳಿದ್ದರು.

ವೇಲ್ಸ್‌ನ ರಾಜ ಕುಟುಂಬ.
ವೇಲ್ಸ್‌ನ ರಾಜ ಕುಟುಂಬ.

ಮೆಗಾನ್‌ ಮಾರ್ಕೆಲ್‌ ಯಾರು?:

ಮೆಗಾನ್‌ ಮಾರ್ಕೆಲ್‌ ಹೆಸಾರಾಂತ ಬಾಲಿವುಡ್‌ ನಟಿ. 1981ರ ಆಗಸ್ಟ್ 4ರಂದು ಲಾಸ್‌ ಎಂಜಲೀಸ್‌ನಲ್ಲಿ ಜನಿಸಿದರು. ಇವರ ತಂದೆ ಥಾಮಸ್‌ ಮಾರ್ಕೆಲ್‌ ಜನಪ್ರಿಯ ಫೋಟೊಗ್ರಾಫರ್‌. ಮಾರ್ಕೆಲ್‌ ತಾಯಿ ಡೋರಿಯಾ. ಸದ್ಯ ಮೇಗಾನ್‌ ಮಾರ್ಕೆಲ್‌ ಟೊರೊಂಟೋ ನಗರದಲ್ಲಿ ವಾಸಿಸುತ್ತಿದ್ದಾರೆ. 2003ರಲ್ಲಿ ನಾರ್ಥ್‌ ವೆಸ್ಟ್ರನ್‌ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿರುವ ಮೆಗಾನ್‌, ಆ ವರ್ಷವೇ ತಮ್ಮ ನಟನೆಯ ಬದುಕನ್ನು ಆರಂಭಿಸಿದ್ದರು. ಕೆಲವೇ ದಿನಗಳಲ್ಲಿ ಪ್ರಮುಖ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರಕಿತ್ತು. ಅದ್ಭುತ ಪ್ರದರ್ಶನಗಳನ್ನು ಕಂಡ ‘ಗೆಟ್ ಹಿಮ್‌ ಟು ದಿ ಗ್ರೀಕ್‌’, ‘ರಿಮೆಂಬರ್ ಮಿ’ ಹಾಗೂ ‘ಹಾರಿಬಲ್‌ ಬಾಸಸ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮೆಗಾನ್‌ತಮ್ಮದೇ ಆದ ವೆಬ್‌ಸೈಟ್‌ಅನ್ನು ತೆರೆದಿದ್ದರು. ಆಹಾರ, ಆರೋಗ್ಯ, ಸೌಂದರ್ಯಗಳ ಕುರಿತು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಈ ವೇಳೆ ಹ್ಯಾರಿ ಮತ್ತು ಮೇಗಾನ್‌ ಪರಸ್ಪರ ಭೇಟಿಯಾಗಿದ್ದರು. 2017ರ ಸೆಪ್ಟೆಂಬರ್‌ ವೇಳೆಗೆ ರಾಜಕುಮಾರ ಹ್ಯಾರಿ ಮತ್ತು ಮೆಗಾನ್‌ ನಡುವೆ ಪ್ರೀತಿ ಅಂಕುರಿಸಿತ್ತು. ನಂತರದ ಕೆಲವೇ ದಿನಗಳಲ್ಲಿ ವಿವಾಹವೂ ನಿಶ್ಚಯವಾಗಿತ್ತು. ಈ ಮೊದಲೇ 2011ರಲ್ಲಿ ಮೇಗಾನ್‌ ಚಿತ್ರ ನಿರ್ಮಾಪಕರೊಬ್ಬರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆದಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿರುವ ಮೆಗಾನ್‌, ಇನ್ಸ್ಟಾಗ್ರಾಮ್‌ನಲ್ಲಿ ಸುಮಾರು 19 ಲಕ್ಷದಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಟ್ವಿಟರ್‌ನಲ್ಲಿ 3.5 ಲಕ್ಷ ಅನುಯಾಯಿಗಳಿದ್ದಾರೆ.

ಜಗತ್ತಿನ ಗಮನ ಸೆಳೆದ ಮದುವೆ:

ಹ್ಯಾರಿ ಮತ್ತು ಮೆಗಾನ್ ಮದುವೆ ಜಗತ್ತಿನ ಗಮನ ಸೆಳೆದಿದೆ. ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಮತ್ತು ಕಾರ್ಮಿಕ ನಾಯಕ ಜೆರೆಮಿ ಕಾರ್ಬಿನ್‌ರ ಹೆಸರುಗಳು ಅಥಿತಿಗಳ ಪಟ್ಟಿಯಲ್ಲಿಲ್ಲ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೂಡ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ. ಹ್ಯಾರಿಗೆ ಆಪ್ತರೆನಿಸಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ರಿ ಮಿಶೆಲ್‌ ಒಬಾಮಾರನ್ನೂ ಕೂಡ ಆಹ್ವಾನಿಸಿಲ್ಲ. ಸ್ಥಳೀಯ ಪ್ರಮುಖರಷ್ಟೇ ರಾಜ ಕುಟುಂಬದಿಂದ ಆಹ್ವಾನವನ್ನು ಪಡೆದಿದ್ದಾರೆ.

ವಧು ಮೆಗಾನ್‌ ಮಾರ್ಕೆಲ್‌ರ ತಂದೆ ಥಾಮಸ್‌ ಮಾರ್ಕೆಲ್‌ ಬುಧವಾರ ಹೃದಯ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಆ ಕಾರಣದಿಂದಾಗಿ ಮಗಳ ಮದುವೆಯಲ್ಲಿ ಅವರು ಭಾಗವಹಿಸುತ್ತಿಲ್ಲ. ಈ ಕುರಿತು ಸ್ವತಃ ಮಾರ್ಕೆಲ್‌ ಅವರೇ ಸ್ಪಷ್ಟನೆ ನೀಡಿದ್ದಾರೆ.

ರಾಜ ವಿವಾಹವನ್ನು ನೇರವಾಗಿ ಕಣ್ತುಂಬಿಕೊಳ್ಳಲು ವಿಂಡ್ಸರ್‌ ಅವೆನ್ಯೂದಲ್ಲಿ ಸುಮಾರು 1 ಲಕ್ಷ ಜನ ಸೇರುವ ಸಾಧ್ಯತೆಯಿದೆ. ನಗರಕ್ಕೆ ಬರುವ ಎಲ್ಲಾ ರೈಲುಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಜನಜಂಗುಳಿಯಿಂದ ಪರದಾಡುವ ಸ್ಥಿತಿ ಉಂಟಾಗುತ್ತದೆ ಎಂದು ರೈಲ್ವೆ ಇಲಾಖೆಯೇ ತಿಳಿಸಿದೆ.

ಪ್ರಮುಖ ನಿಲ್ದಾಣಗಳಲ್ಲಿ ನೂಕು ನುಗ್ಗಲನ್ನು ತಡೆಯುವ ಸಲುವಾಗಿ ಸರದಿಯಲ್ಲಿ ನಿಲ್ಲುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ವಿಂಡ್ಸರ್‌ ಅವೆನ್ಯೂದಿಂದ ಸುತ್ತಮುತ್ತಲಿನ ನಗರಗಳಿಗೆ ಪ್ರತಿ 20 ನಿಮಿಷಗಳಿಗೊಂದು ರೈಲು ಸಂಚರಿಸಲಿದ್ದು, ಸ್ಥಳೀಯ ರೈಲುಗಳಿಗೆ ಹೆಚ್ಚಿನ ಬೋಗಿಗಳನ್ನು ಅಳವಡಿಸಲಾಗುತ್ತದೆ. ದೂರದೂರುಗಳಿಂದಲೂ ಕೂಡ 4 ಗಂಟೆಗೊಂದರಂತೆ ರೈಲುಗಳು ಬರಲಿವೆ. ಆದರೆ ವಿಂಡ್ಸರ್‌ ಅವೆನ್ಯೂದಲ್ಲಿ ಜನಜಂಗುಳಿ ಹೆಚ್ಚಾದರೆ ನಂತರದಲ್ಲಿ ಬರುವ ರೈಲುಗಳು ವಿಂಡ್ಸರ್‌ ನಿಲ್ದಾಣದಲ್ಲಿ ನಿಲ್ಲಿಸುವುದೇ ಇಲ್ಲ. ಭದ್ರತೆಯ ದೃಷ್ಟಿಯಿಂದ ಪೊಲೀಸರು ಈ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ವಿವಾಹವನ್ನು ವೀಕ್ಷಿಸಲು ಬರುವವರು ಅತೀ ಕಡಿಮೆ ಲಗೇಜ್‌ಗಳನ್ನು ತರುವಂತೆಯೂ ಕೂಡ ಕಟ್ಟಪ್ಪಣೆ ಮಾಡಲಾಗಿದೆ. ತಪಾಸಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶುಕ್ರವಾರ ರಾತ್ರಿಯಿಂದಲೇ ಮಧುಮಕ್ಕಳ ಮೆರವಣಿಗೆಯ ಸಾರೋಟು ಸಾಗುವ ದಾರಿಯುದ್ಧಕ್ಕೂ ಯಾವುದೇ ವಾಹನಗಳನ್ನೂ ಬಿಡದಂತೆ ಎಚ್ಚರಿಕೆ ವಹಿಸಲು ಪೋಲೀಸರಿಗೆ ಸೂಚಿಸಲಾಗಿದೆ. ಆ ದಾರಿಯನ್ನು ಬಣ್ಣ ಬಣ್ಣದ ಬಂಟಿಗ್ಸ್ ಮತ್ತು ಬ್ಯಾನರ್‌ಗಳಿಂದ ಅಲಂಕಾರ ಮಾಡಲಾಗಿದೆ. ನೇರವಾಗಿ ಮೆರವಣಿಗೆ ನೋಡಲು ಸಾಧ್ಯವಾಗದವರಿಗಾಗಿ ನಗರದ ಅಲೆಕ್ಸಾಂಡ್ರಾ ಉದ್ಯಾನವನದಲ್ಲಿ ದೊಡ್ಡ ಸ್ಕ್ರೀನ್‌ ಮೇಲೆ ಮೆರವಣಿಗೆಯ ನೇರ ಪ್ರಸಾರವನ್ನು ತೋರಿಸಲು ವ್ಯವಸ್ಥೆ ಮಾಡಲಾಗಿದೆ.

ಬ್ಯಾನರ್‌ನಿಂದ ಅಲಂಕೃತಗೊಂಡ ರಸ್ತೆ ಬದಿಯ ಕಟ್ಟಡ.
ಬ್ಯಾನರ್‌ನಿಂದ ಅಲಂಕೃತಗೊಂಡ ರಸ್ತೆ ಬದಿಯ ಕಟ್ಟಡ.

ಈ ರಾಜ ವಿವಾಹದ ವೈಭವವನ್ನು ಬ್ರಿಟನ್‌ ಎಲ್ಲಾ ಸುದ್ಧಿ ಮಾಧ್ಯಮಗಳು ವಿಶ್ವದ ಜನತೆಗೆ ತೋರಿಸಲಿವೆ. ಹಲವಾರು ಅಂತರರಾಷ್ಟ್ರೀಯ ಮಾಧ್ಯಮಗಳೂ ಕೂಡ ವಿವಾಹದ ಲೈವ್ ಅಪ್‌ಡೇಟ್‌ ನೀಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡಿವೆ. ನೂರಾರು ರೇಡಿಯೋ ಚಾನೆಲ್‌ಗಳೂ ಕೂಡ ವಿವಾಹದ ಮಾಹಿತಿಯನ್ನು ಜನರಿಗೆ ನೀಡಲಿವೆ.

ಇದರ ಮಧ್ಯೆಯೇ ಬ್ರಿಟನ್‌ನ ಮಾಧ್ಯಮಗಳು ರಾಜವಿವಾವನ್ನು ಅತಿಯಾಗಿ ಆಡಂಬರ ಮಾಡುತ್ತಿವೆ ಎಂದು ಹಲವರು ಟೀಕಿಸಿದ್ದಾರೆ. ಬಿಬಿಸಿ ಬ್ರೇಕ್‌ಫಸ್ಟ್‌ ನ್ಯೂಸ್‌ ಪೂರ್ತಿ ರಾಜ ವಿವಾಹದ ಸುದ್ದಿಯೇ ಬಿತ್ತರವಾಗಿದ್ದಕ್ಕೆ ಹಲವರು ಆಕ್ಷೇಪಿಸಿದ್ದಾರೆ. ‘ರಾಜ ವಿವಾಹ ಬಿಟ್ಟು ಬೇರೆ ಸುದ್ದಿಗಳೇ ಇಲ್ಲವೇ?’ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.