samachara
www.samachara.com
ಇರಾನ್‌ಗೆ ಟ್ರಂಪ್‌ ದಿಗ್ಬಂಧನ: ಭಾರತದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂ. ಮುಟ್ಟಿದರೂ ಅಚ್ಚರಿ ಇಲ್ಲ!
ವಿದೇಶ

ಇರಾನ್‌ಗೆ ಟ್ರಂಪ್‌ ದಿಗ್ಬಂಧನ: ಭಾರತದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂ. ಮುಟ್ಟಿದರೂ ಅಚ್ಚರಿ ಇಲ್ಲ!

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಇರಾನ್ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದ ಟ್ರಂಪ್‌ ದಿಗ್ಬಂಧನ ಹೇರಿದ್ದಾರೆ. ಈ ನಡೆ ಅಮೆರಿಕಾ ಹಾಗೂ ಇರಾನ್‌ ಹೊರತುಪಡಿಸಿ ಭಾರತೀಯರ ಹಣೆಯ ಮೇಲೂ ಚಿಂತೆಯ ಗೆರೆಗಳು ಮೂಡುವಂತೆ ಮಾಡಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಇರಾನ್‌ನೊಂದಿಗಿನ ಅಣು ಒಪ್ಪಂದವನ್ನು ಮುರಿದುಕೊಂಡಿದ್ದಾರೆ. 2015ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಬರಾಕ್‌ ಒಬಾಮಾ ಮಾಡಿಕೊಂಡಿದ್ದ ಒಪ್ಪಂದವನ್ನು ಕಡೆಗಣಿಸಿರುವ ಟ್ರಂಪ್‌ ನಡೆ, ಅಮೆರಿಕಾ ಹಾಗೂ ಇರಾನ್‌ ಹೊರತುಪಡಿಸಿ ಇತರೆ ದೇಶಗಳ ಹಣೆಯ ಮೇಲೂ ಗೆರೆಗಳು ಮೂಡುವಂತೆ ಮಾಡಿದೆ.

ಡೊನಾಲ್ಡ್‌ ಟ್ರಂಪ್‌ ಒಪ್ಪಂದ ಮುರಿಯುವುದಷ್ಟೇ ಅಲ್ಲದೇ ಇರಾನ್‌ ಮೇಲೆ ಆರ್ಥಿಕ ದಿಗ್ಭಂಧನವನ್ನು ಹೇರಿದ್ದು, ಭಾರತವೂ ಕೂಡ ಚಿಂತೆಗೊಳಪಡುವಂತೆ ಮಾಡಿದೆ. ಮುಂದೇನಾಗಬಹುದು ಎಂದು ಭಾರತೀಯರೂ ಕೂಡ ಈಗ ಚಿಂತಿಸುವಂತಾಗಿದೆ. ಈ ದಿಗ್ಬಂಧನದಿಂದ ಇರಾನ್‌ ಹಾಗೂ ಭಾರತದ ಸಂಬಂಧಗಳೂ ಕೂಡ ಹಾಳಾಗುವ ನಿರೀಕ್ಷೆಯಿದ್ದು, ಭಾರತದ ಮೇಲೆ ಉಂಟಾಗಬಹುದಾದ ಮುಖ್ಯ ಪರಿಣಾಮಗಳು ಹೀಗಿವೆ.

1. ಚಾಬಹಾರ್ ಬಂದರು ಅಭಿವೃದ್ಧಿ ಯೋಜನೆ

ಚಾಬಹಾರ್‌ ಪೋರ್ಟ್. 
ಚಾಬಹಾರ್‌ ಪೋರ್ಟ್. 
ವಿಕಿಪೀಡಿಯಾ. 

ಚಾಬಹಾರ್‌ ಇರಾನ್‌ ದೇಶದಲ್ಲಿರುವ ಪ್ರಮುಖ ಬಂದರು. ಈ ಬಂದರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ 500 ಮಿಲಿಯನ್‌ ಡಾಲರ್‌ಗಳಿಗಿಂತಲೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಯನ್ನು ಭಾರತ ಕೈಗೊಂಡಿದೆ. ಈಗಾಗಲೇ ನಿಧಾನ ಗತಿಯಲ್ಲಿ ಸಾಗುತ್ತಿರುವ ಈ ಯೋಜನೆಯನ್ನು ಮುಂದುವರೆಸಿದರೆ ಡೊನಾಲ್ಡ್‌ ಟ್ರಂಪ್‌ ಕೆಂಗಣ್ಣು ಭಾರತದ ಮೇಲೂ ತಿರುಗಬಹುದಾದ ಅಪಾಯವಿದೆ. ಈ ವಿಷಯದ ಆಧಾರದ ಮೇಲೆ ಟ್ರಂಪ್‌ ಭಾರತದ ಮೇಲೆ ಹಗೆ ಸಾಧಿಸಬಹುದು.

ಚಾಬಹಾರ್‌ ಇರುವುದು ಒಮನ್‌ ಕೊಲ್ಲಿ ಪ್ರದೇಶದಲ್ಲಿ. ಚೀನಾದ ಸುಪರ್ಧಿಯಲ್ಲಿರುವ ಪಾಕಿಸ್ಥಾನದಲ್ಲಿನ ಗ್ವಡಾರ್‌ ಬಂದರಿನಿಂದ ಚಾಬಹಾರ್‌ ಕೇವಲ 85 ಕಿಮೀಗಳಷ್ಟು ದೂರವಿದೆ. ಪಾಕಿಸ್ತಾನದ ಗ್ವಡಾರ್‌ ಮೂಲಕ ಸರಕು ಸಾಗಾಟ ಸಾಧ್ಯವಿಲ್ಲದ ಕಾರಣ ಭಾರತ ಚಾಬಹಾರ್‌ನನ್ನು ನೆಚ್ಚಿಕೊಂಡಿದೆ. ಇರಾನ್‌, ಆಫ್ಘಾನಿಸ್ತಾನ್‌ ಮತ್ತು ಭಾರತಗಳ ನಡುವಿನ ವ್ಯವಹಾರದಲ್ಲಿ ಪ್ರಮುಖ ಪಾತ್ರವಹಿಸಿರುವ ಚಾಬಹಾರ್‌ ಬಂದರು ಭಾರತದ ಸಾಗಾಣಿಕಾ ವೆಚ್ಚ ಮತ್ತು ಸಮಯವನ್ನು ಮೂರು ಪಟ್ಟು ಕಡಿಮೆಯಾಗಿಸಿದೆ.

ಚಾಬಹಾರ್‌ ಬಂದರಿನ ಮೊದಲ ಹಂತದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡು, 2017ರ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಂಡಿತ್ತು. ಫೆಬ್ರವರಿಯಲ್ಲಿ ಭಾರತ ಮತ್ತು ಇರಾನ್‌ಗಳ ನಡುವೆ ಮತ್ತೊಂದು ವ್ಯವಹಾರ ಏರ್ಪಟ್ಟಿತ್ತು. ಈ ಒಪ್ಪಂದದ ಪ್ರಕಾರ ಇರಾನ್‌ ಚಾಬಹಾರ್‌ ಬಂದರಿನ ಒಂದು ಭಾಗವನ್ನು 18 ತಿಂಗಳ ಅವಧಿಗೆ ಭಾರತಕ್ಕೆ ಬಿಟ್ಟುಕೊಟ್ಟಿದೆ. ಆದರೆ ಡೊನಾಲ್ಡ್‌ ಟ್ರಂಪ್‌ನ ನಿರ್ಧಾರ ಈ ಒಪ್ಪಂದವನ್ನು ಬುಡಮೇಲು ಮಾಡುವ ಸಾಧ್ಯತೆಗಳಿವೆ.

2. ತೈಲ ಬೆಲೆ ಏರಿಕೆ

ವಿಶ್ವದಲ್ಲೇ ಅತಿಹೆಚ್ಚು ತೈಲವನ್ನು ಬೇಡುವ ಮೂರನೇ ರಾಷ್ಟ್ರ ಭಾರತವಾಗಿದ್ದು, ಇರಾನ್‌ನಿಂದಲೂ ಅಪಾರ ಪ್ರಮಾಣದ ತೈಲ ಭಾರತಕ್ಕೆ ಅಮದಾಗುತ್ತದೆ. ಭಾರತಕ್ಕೆ ಹೆಚ್ಚು ತೈಲ ಪೂರೈಕೆ ಮಾಡುವ ಮೂರನೇ ರಾಷ್ಟ್ರ ಇರಾನ್‌.

ಇರಾಕ್‌, ಸೌದಿ ಅರೇಬಿಯಾಗಳನ್ನು ಹೊರತುಪಡಿಸಿದರೆ ಭಾರತದ ಚಾಲಕ ಶಕ್ತಿಯಾಗಿರುವ ತೈಲದ ಹೆಚ್ಚು ಭಾಗವನ್ನು ಇರಾನ್‌ ಪೂರೈಸುತ್ತಿದೆ. ಬರೀ ಭಾರತಕ್ಕಷ್ಟೇ ಅಲ್ಲದೇ ಇರಾನ್‌ಗೂ ಇದರಿಂದ ಲಾಭವಿದೆ. ಯುರೋ ಮುಖಾಂತರ ಅತಿ ಹೆಚ್ಚು ತೈಲವನ್ನು ಕೊಳ್ಳುವ ಮೋರನೇ ದೇಶ ಭಾರತ. ಭಾರತವನ್ನು ಕೈಬಿಟ್ಟರೆ ಇರಾನ್‌ ತಾನೇ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಆದ್ದರಿಂದ ತೈಲ ಪೂರೈಕೆಯಲ್ಲಿ ಹೆಚ್ಚು ಕಡಿಮೆಯಾಗದು ಎನ್ನುವ ಅಭಿಪ್ರಾಯಗಳಿವೆ.

ಪೂರೈಕೆಯಲ್ಲಿ ಬದಲಾವಣೆಯಾಗದು ಎನ್ನುವುದೇನೋ ನಿಜ. ಆದರೆ ತೈಲ ಬೆಲೆ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ಭಾರತದ ಮುಂದಿವೆ. ಇದೀಗ ಅಮೆರಿಕಾ ಹೇರಿರುವ ಹೊಸ ದಿಗ್ಬಂಧನ ಇರಾನ್‌ನನ್ನು ಆರ್ಥಿಕ ಸಂಕಷ್ಟಗಳಿಗೆ ದೂಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇರಾನ್‌ನ ಅತಿ ದೊಡ್ಡ ಸಂಪನ್ಮೂಲವಾಗಿರುವ ತೈಲವೇ ಈಗ ಇರಾನ್‌ನ ಹೊಟ್ಟೆ ತುಂಬಿಸಬೇಕಿದೆ. ಆದ ಕಾರಣ ಇರಾನ್‌ ತೈಲಬೆಲೆಯನ್ನು ಏರಿಸಬಹುದು. ಹಾಗೇನಾದರೂ ಇರಾನ್‌ ಬೆಲೆ ಹೆಚ್ಚಿಸಿದರೆ ಈಗಾಗಲೇ ಬೆಲೆ ಏರಿಕೆಯಿಂದ ಹೈರಾಣಾಗಿರುವ ಭಾರತೀಯರು ಮತ್ತಷ್ಟು ಆರ್ಥಿಕ ಹೊರೆಯನ್ನು ಹೊರಬೇಕಾಗುತ್ತದೆ.

ಪೆಟ್ರೋಲ್, ಡೀಸೆಲ್‌ ಅಷ್ಟೇ ಅಲ್ಲದೇ, ಗೃಹಬಳಕೆ ಅನಿಲದ ಬೆಲೆಯೂ ಹೆಚ್ಚಾಗುತ್ತದೆ. ಉತ್ಪಾದನಾ ಮೊತ್ತವೂ ಹೆಚ್ಚಳಗೊಂಡು ದಿನನಿತ್ಯ ಬಳಕೆಯ ವಸ್ತುಗಳು ಆಕಾಶಕ್ಕೇರಲಿವೆ.

3. ಶಾಂಗೈ ಕೋ ಆಪರೇಷನ್‌ ಆರ್ಗನೈಸೇಷನ್ ಸದಸ್ಯತ್ವ

ಸಧ್ಯ ಶಾಂಗೈ ಕೋ ಆಪರೇಷನ್‌ ಆರ್ಗನೈಸೇಷನ್‌ನ ಭಾಗವಾಗಿ ಚೀನಾ, ಪಾಕಿಸ್ತಾನ ಮತ್ತು ಭಾರತ ದೇಶಗಳಿವೆ. ಇರಾನ್‌ನನ್ನೂ ಕೂಡ ಈ ಆರ್ಗನೈಸೇಷನ್‌ನ ಭಾಗವಾಗಿಸಿಕೊಳ್ಳಬೇಕು ಎಂದು ಚೀನಾ ವಾದಿಸುತ್ತಲೇ ಬರುತ್ತಿದೆ.

ಈಗಾಗಲೇ ಚೀನಾ ಅಮೆರಿಕಾದ ಶತ್ರು ರಾಷ್ಟ್ರವಾಗಿ ಕಾಣಿಸಿಕೊಂಡಿದೆ. ಈಗ ಇರಾನ್‌ ಕೂಡ ಅಮೆರಿಕಾದ ಶತ್ರುವಾಗಿದೆ. ಈ ಎರಡೂ ರಾಷ್ಟ್ರಗಳೇನಾದರೂ ಶಾಂಗೈ ಕೋ ಆಪರೇಷನ್‌ ಆರ್ಗನೈಸೇಷನ್‌ನ ಭಾಗವಾದರೆ ಇಡೀ ಆರ್ಗನೈಸೇಷನ್‌ ಅಮೆರಿಕಾ ವಿರೋಧಿ ಎಂದು ಬಿಂಬಿಸಿಕೊಳ್ಳುತ್ತದೆ. ಸಂಘದ ಸದಸ್ಯತ್ವ ಪಡೆದಿರುವ ಭಾರತವೂ ಕೂಡ ಅಮೆರಿಕಾದ ಶತ್ರುತ್ವವನ್ನು ಎದುರಿಸಬೇಕಾಗುತ್ತದೆ. ಈ ನಡೆ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ಇವೆಲ್ಲವೂ ಅಮೆರಿಕಾ ಇರಾನ್‌ನ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನದಿಂದ ಭಾರತದ ಮೇಲಾಗಬಹುದಾದ ನೇರ ಪರಿಣಾಮಗಳು. ಇವಷ್ಟೇ ಅಲ್ಲದೇ ಇತ್ಯಾದಿ ಪರೋಕ್ಷ ಪರಿಣಾಮಗಳಿಗೂ ಕೂಡ ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಉಂಟಾಗಬಹುದು. ಅಮೆರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳ ಜತೆಗಿನ ಸಂಬಂಧ ಹಳಸಬಹುದು. ವ್ಯಾಪಾರ ವಹಿವಾಟುಗಳು ಕುಸಿಯಬಹುದು. ವಿನಾ ಕಾರಣ ಶತ್ರುಗಳು ವೃದ್ಧಿಯಾಗಬಹುದು. ಇವು ಡೊನಾಲ್ಡ್‌ ಟ್ರಂಪ್‌ ನಿರ್ಧಾರದ ಪರಿಣಾಮಗಳು.