ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ನೋಬೆಲ್‌ ಶಾಂತಿ ಪುರಸ್ಕಾರ?
ವಿದೇಶ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ನೋಬೆಲ್‌ ಶಾಂತಿ ಪುರಸ್ಕಾರ?

ಅಮೆರಿಕಾದ ಮಿಚಿಗನ್‌ನಲ್ಲಿ ಶನಿವಾರ ಟ್ರಂಪ್‌ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ಜನ “ನೋಬೆಲ್, ನೋಬೆಲ್‌!” ಎಂಬ ಘೋಷಣೆಗಳನ್ನು ಕೂಗಿದ್ದರು. ನೋಬೆಲ್ ಪ್ರಶಸ್ತಿಯನ್ನು ಆಶಸಿದ ಜನಗಳತ್ತ ನಗೆ ಬೀರಿದ್ದ ಟ್ರಂಪ್‌ ಧನ್ಯವಾದ ಅರ್ಪಿಸಿದ್ದರು.

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಹಲವಾರು ವಿಮರ್ಶಕರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೋಬೆಲ್‌ ಶಾಂತಿ ಪುರಸ್ಕಾರಕ್ಕೆ ಅರ್ಹರು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಶುಕ್ರವಾರ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾಗಳ ಭೇಟಿಯ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ-ಇನ್‌ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.

2018 ನೋಬೆಲ್‌ ಶಾಂತಿ ಪ್ರಶಸ್ತಿಗೆ 329 ಜನರ ಸಂಭವನೀಯ ಪಟ್ಟಿ ಸಿದ್ಧ ಪಡಿಸಿಲಾಗಿದೆ. ಈ ಪಟ್ಟಿಯಲ್ಲಿ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ-ಇನ್‌ ಹೆಸರುಗಳೂ ಕೂಡ ಸೇರಿಕೊಂಡಿವೆ. ಒಂದು ವೇಳೆ ಡೊನಾಲ್ಡ್‌ ಟ್ರಂಪ್‌ಗೆ ನೋಬೆಲ್‌ ಶಾಂತಿ ಪ್ರಶಸ್ತಿ ದೊರೆತರೆ, ಈ ಪ್ರಶಸ್ತಿಗೆ ಭಾಜನರಾದ 5ನೇ ಅಮೆರಿಕಾ ಅಧ್ಯಕ್ಷ ಎಂಬ ಕೀರ್ತಿ ಟ್ರಂಪ್‌ ಮುಡಿಗೇರಲಿದೆ.

ಕೊರಿಯಾ ಪರ್ಯಾಯ ದ್ವೀಪ 1945ರಲ್ಲಿ ನಡೆದ ಯುದ್ಧದ ನಂತರ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ಎಂಬ ಎರಡು ದೇಶಗಳಾಗಿ ವಿಭಜನೆಯಾಗಿತ್ತು. ಅಂದಿನಿಂದಲೂ ಕೂಡ ಎರಡೂ ದೇಶಗಳು ಒಂದರ ಮೇಲೊಂದು ಕತ್ತಿ ಮಸೆಯುತ್ತದ್ದವು.

ಆದರೆ ಕಳೆದ ವಾರದಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ-ಇನ್‌ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪರಸ್ಪರ ಭೇಟಿಯಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದರು. 7 ದಶಕಗಳಿಗಿಂತಲೂ ಹೆಚ್ಚಿನ ವೈಮನಸ್ಯಕ್ಕೆ ಮುಕ್ತಾಯ ಹಾಡಿದ್ದರು.

ಈ ವೈಮನಸ್ಯ ಕೊನೆಗೊಳ್ಳಲು ಕಾರಣವಾಗಿದ್ದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಂಬ ಮಾತುಗಳು ಕೇಳಿ ಬಂದಿದ್ದವು.

ಎರಡೂ ದೇಶಗಳ ನಾಯಕರು ಭೇಟಿಯಾಗಿ ದೀರ್ಘಕಾಲದ ಯುದ್ಧಕ್ಕೆ ಮುಕ್ತಾಯ ಹಾಡಿದ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ಗೆ ದಕ್ಷಿಣ ಕೊರಿಯಾ ಮೊದಲ ಮಹಿಳಾ ಅಧ್ಯಕ್ಷೆ ಲೀ ಹೀ-ಹೋ ಕಡೆಯಿಂದ ಟೆಲಿಗ್ರಾಫ್‌ ಬಂದಿತ್ತು. ಟೆಲಿಗ್ರಾಮ್‌ನಲ್ಲಿ ಲೀ ಹೀ-ಹೋ ಮೂನ್‌ಗೆ ಶುಭ ಹಾರೈಸಿ ‘ನೀವು ನೋಬೆಲ್‌ ಶಾಂತಿ ಪ್ರಶಸ್ತಿಗೆ ಭಾಜನರಾಗಬೇಕು’ ಎಂದಿದ್ದರು.

ಪ್ರತಿಕ್ರಿಯೆಯಾಗಿ, “ನಾವು ಶಾಂತಿಯನ್ನು ಪಡೆದುಕೊಂಡಿದ್ದೇವೆ. ನೋಬೆಲ್‌ ಪ್ರಶಸ್ತಿ ದಕ್ಕಬೇಕಿರುವುದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ,” ಎಂದು ಪ್ರತಿಕ್ರಿಯಿಸಿದ್ದರು.

ಕಳೆದ ಕೆಲವು ತಿಂಗಳಿಂದ ಮೂನ್‌ ಜೇ ಇನ್‌ ಹಲವಾರು ಬಾರಿ ಟ್ರಂಪ್‌ಗೆ ಧನ್ಯವಾದಗಳನ್ನು ತಿಳಿಸಿದ್ದರು. ಕೋರಿಯಾ ದೇಶಗಳ ಸಲುವಾಗಿ ಶ್ರಮಿಸುತ್ತಿರುವ ಟ್ರಂಪ್‌ಗೆ ಆಭಾರಿಯಾಗಿರುವುದಾಗಿ ಮೂನ್‌ ಹೇಳಿದ್ದರು. ಟ್ರಂಪ್‌ ದಕ್ಷಿಣ ಕೊರಿಯಾದ ಮೇಲೆ ಹೇರಿದ್ದ ಹಲವಾರು ಆರ್ಥಿಕ ದಿಗ್ಭಂಧನಗಳು ಮತ್ತು ಯುದ್ಧದ ಭೀತಿ ಕೊರಿಯಾ ದೇಶಗಳು ಒಂದಾಗಲು ಕಾರಣವಾಗಿದೆ ಎಂದಿದ್ದ ಮೂನ್‌, ಅಣ್ವಸ್ತ್ರ ಹೋರಾಟವನ್ನು ಬದಿಗೊತ್ತಿ ದೇಶಗಳು ಅಪ್ಪಿಕೊಳ್ಳಲು ಟ್ರಂಪ್‌ ಗರಿಷ್ಟ ಪ್ರಯತ್ನ ಪಟ್ಟಿದ್ದಾರೆ ಎಂದು ಶ್ಲಾಘಿಸಿದ್ದರು.

ಅಮೆರಿಕಾ ಸಂಯುಕ್ತ ಸಂಸ್ಥಾನದ ಭಾಗವಾಗಿರುವ ಮಿಚಿಗನ್‌ ರಾಜ್ಯದಲ್ಲಿ ಶನಿವಾರ ಡೊನಾಲ್ಡ್‌ ಟ್ರಂಪ್‌ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ನೆರೆದಿದ್ದ ಜನ "ನೋಬೆಲ್‌, ನೋಬೆಲ್, ನೋಬೆಲ್‌!” ಎಂಬ ಘೋಷಣೆಗಳನ್ನು ಕೂಗಿದ್ದರು. ನೋಬೆಲ್ ಪ್ರಶಸ್ತಿ ದೊರೆಯಬೇಕೆಂದು ಆಶಸಿದ ಜನಗಳತ್ತ ನಗೆ ಬೀರಿದ್ದ ಟ್ರಂಪ್‌ ಧನ್ಯವಾದಗಳನ್ನು ಅರ್ಪಿಸಿದ್ದರು.

ಟ್ರಂಪ್‌ಗೆ ನೋಬೆಲ್‌ ಬಹುಮಾನ ಘೋಷಿಸಬೇಕು ಎಂಬ ಮಾತುಗಳು ಕೇಳಿದ ಬಂದ ಕೆಲವೇ ಗಂಟೆಗಳಲ್ಲಿ ಹಲವಾರು ಜನ ಈ ಕುರಿತು ಲೇವಡಿ ಮಾಡಿದ್ದಾರೆ. ಸಿರಿಯಾದ ಮೇಲೆ ಅಮೆರಿಕಾ ನಡೆಸುತ್ತಿರುವ ಯುದ್ಧವನ್ನು ನೆನಪಿಸಿ, ಟ್ರಂಪ್‌ನ ಶಾಂತಿಪ್ರಿಯತೆಯನ್ನು ಪ್ರಶ್ನಿಸಿದ್ದಾರೆ.

ಸೋಮವಾರ ಮಾಡಿರುವ ತಮ್ಮ ಟ್ವಿಟ್‌ನಲ್ಲಿ ಟ್ರಂಪ್‌ ಉತ್ತರ ಹಾಗು ದಕ್ಷಿಣ ಕೊರಿಯಾಗಳ ಗಡಿಯಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ರನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಸರ್ವಾಧಿಕಾರಿ ಮನೋಭಾವದ ಕಿಮ್‌ನ ವ್ಯಕ್ತಿತ್ವ ಬದಲಾಗಿ ಶಾಂತಿ ಮಾತುಕತೆಗೆ ಮುಂದಾಗುವುದರಲ್ಲಿ ನನ್ನ ಪಾತ್ರವೂ ದೊಡ್ಡದಿದೆ ಎಂದಿದ್ದರು ಟ್ರಂಪ್‌. ಈಗ ಕಿಮ್‌ರನ್ನು ಭೇಟಿಯಾಗಲು ಉತ್ಸುಕತೆ ತೋರಿಸಿದ್ದಾರೆ. ಮತ್ತೊಂದು ಶಾಂತಿ ಮಾತುಕತೆಯ ಮೂಲಕ ಉತ್ತರ ಕೊರಿಯಾ ಜಗತ್ತಿನ ಮೇಲೆ ಹೇರಿದ್ದ ಅಣ್ವಸ್ತ್ರ ಭೀತಿಯನ್ನು ತೊಡೆದುಹಾಕಲು ಟ್ರಂಪ್‌ ಮುಂದಾಗಿದ್ದಾರೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆಯಿದ್ದ ವೈಮನಸ್ಯವನ್ನು ದೂರ ಮಾಡುವಲ್ಲಿ ಟ್ರಂಪ್‌ ಪಾತ್ರವೂ ಇರಬಹುದು. ಎರಡೂ ದೇಶಗಳ ನಡುವಿನ ದಶಕಗಳ ವೈರತ್ವಕ್ಕೆ ಟ್ರಂಪ್‌ ನಾಂದಿ ಹಾಡಿರುವುದಾಗಿ ಮೂನ್‌ ಭಾವಿಸಿರಬಹುದು. ಇದಕ್ಕಾಗಿಯೇ ಟ್ರಂಪ್‌ಗೆ ನೋಬೆಲ್‌ ಶಾಂತಿ ಪುರಸ್ಕಾರ ದೊರೆಯಬೇಕೆಂಬ ಮಾತುಗಳು ಕೇಳಿಬಂದಿದೆ.

ಕೊರಿಯಾ ವಿಚಾರದಲ್ಲಿ ಶಾಂತಿ ಬಯಸಿ, ಸಿರಿಯಾದ ಮೇಲೆ ವಾಯುದಾಳಿ ನಡೆಸಿ ಸಹಸ್ರಾರು ಮುಗ್ಧ ಜನರ ಸಾವು ನೋವಿಗೆ ಕಾರಣವಾಗುತ್ತಿರುವ ಟ್ರಂಪ್‌ಗೆ ಅದೇಗೆ ಶಾಂತಿ ನೋಬೆಲ್‌ ನೀಡಲಾಗುತ್ತದೆ ಎಂಬ ಪ್ರಶ್ನೆಗಳು ಈಗ ತಲೆ ಎತ್ತಿವೆ. ಅಮೆರಿಕಾದ ಕೋಟ್ಯಾಂತರ ಪ್ರಜೆಗಳೇ ಟ್ರಂಪ್‌ ತಮ್ಮ ಅಧ್ಯಕ್ಷನಲ್ಲ ಎಂದು ತಿರಸ್ಕರಿಸಿರುವಾಗ ಜಗತ್ತು ಟ್ರಂಪ್‌ಗೆ ನೋಬೆಲ್‌ ಪ್ರಶಸ್ತಿಯನ್ನಿತ್ತು ಶಾಂತಿ ಧೂತ ಎಂಬ ಬಿರುದು ನೀಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.