samachara
www.samachara.com
ಸಿರಿಯಾ ಮೇಲೆ ಅಮೆರಿಕಾ ವೈಮಾನಿಕ ದಾಳಿ
ವಿದೇಶ

ಸಿರಿಯಾ ಮೇಲೆ ಅಮೆರಿಕಾ ವೈಮಾನಿಕ ದಾಳಿ

ಅಮೆರಿಕಾದ ಸೈನ್ಯ ಸಿರಿಯಾದಲ್ಲಿ ವೈಮಾನಿಕ ದಾಳಿಯನ್ನು ಆರಂಭಿಸಿದೆ. ಅಮೆರಿಕಾದ 12 ಬೃಹತ್‌ ಯುದ್ಧ ನೌಕೆಗಳು ಸಿರಿಯಾದ ಕಡಲ ತೀರವನ್ನು ತಲುಪಿವೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಇಷ್ಟು ದಿನಗಳ ಕಾಲ ಸಿರಿಯಾ ಮೇಲೆ ಯುದ್ಧದ ಬೆದರಿಕೆಯನ್ನು ಒಡ್ಡುತ್ತಲೇ ಬಂದಿದ್ದ ಅಮೆರಿಕಾ ಈಗ ಸಮರ ಕಣಕ್ಕಿಳಿದಿದೆ. ಅಮೆರಿಕಾದ ಜತೆಗೆ ಬ್ರಿಟನ್‌ ಮತ್ತು ಫ್ರಾನ್ಸ್‌ಗಳೂ ಸಹ ಯುದ್ಧ ಭೂಮಿಗಿಳಿದಿವೆ. ಸಿರಿಯಾದ ಸರಕಾರ ನಡೆಸಿದ್ದ ರಾಸಾಯನಿಕ ದಾಳಿಗೆ ಪ್ರತಿಯಾಗಿ ವೈಮಾನಿಕ ದಾಳಿ ನಡೆಸುತ್ತಿರುವುದಾಗಿ ಟ್ರಂಪ್‌ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಿರಿಯಾದ ಅಧ್ಯಕ್ಷ ಬಶರ್‌ ಅಸಾದ್‌ ಉಗ್ರರ ಹಿಡಿತದಲ್ಲಿರುವ ಸಿರಿಯಾದ ಪ್ರದೇಶಗಳ ಮೇಲೆ ರಾಸಾಯನಿಕ ದಾಳಿ ನಡೆಸಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಸಿರಿಯಾದ ಪೂರ್ವ ಭಾಗದಲ್ಲಿರುವ ಘೌಟಾ ನಗರ ಮೇಲೆ ಬಶರ್‌ ಅಸ್ಸದ್‌ ದಾಳಿ ನಡೆಸಿದ್ದಾರೆ ಎಂಬ ವರದಿ ಜಗತ್ತಿನೆಲ್ಲೆಡೆ ಬಿತ್ತರವಾಗಿತ್ತು. ಆದರೆ, ಸಿರಿಯಾ ಸರಕಾರ ರಾಸಾಯನಿಕ ದಾಳಿಯ ಆರೋಪವನ್ನು ತಳ್ಳಿಹಾಕಿತ್ತು.

ವೈದ್ಯಕೀಯ ಪರಿಹಾರ ಸಂಸ್ಥೆ ಈ ವಿಷಯುಕ್ತ ರಾಸಾಯನಿಕ ದಾಳಿಯ ಕಾರಣದಿಂದಾಗಿ ನೂರಾರು ಜನ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದಿತ್ತು. ವಿಶ್ವಸಂಸ್ಥೆ ಈ ರಾಸಾಯನಿಕ ದಾಳಿಯನ್ನು ಖಂಡಿಸಿತ್ತು. ಆದರೆ ಸಿರಿಯಾ ಮತ್ತು ರಷ್ಯಾ ಈ ದಾಳಿಯನ್ನು ಅಲ್ಲಗೆಳೆದಿದ್ದವು. ರಾಸಾಯನಿಕ ದಾಳಿ ನಡೆದಿದೆ ಎನ್ನುವುದು ಸುಳ್ಳು ಸುದ್ದಿ ಎಂದು ಸಿರಿಯಾದ ಸರಕಾರಿ ಸ್ವಾಮ್ಯದ ಮಾಧ್ಯಮ ಮತ್ತು ರಷ್ಯಾದ ವಿದೇಶಾಂಗ ಸಚಿವಾಲಯಗಳು ತಿಳಿಸಿದ್ದವು.

Also read: ಸಿರಿಯಾ ರಾಸಾಯನಿಕ ದಾಳಿಗೆ 70ಕ್ಕೂ ಹೆಚ್ಚು ಅಮಾಯಕರ ಬಲಿ

ಪುಟ್ಟ ರಾಷ್ಟ್ರ ಸಿರಿಯಾದಲ್ಲಿನ ರಾಸಾಯನಿಕ ದಾಳಿ ವಿಶ್ವದ ಎರಡು ಪ್ರಮುಖ ಮಿಲಿಟರಿ ಶಕ್ತಿಗಳಾದ ಅಮೆರಿಕಾ ಮತ್ತು ರಷ್ಯಾದ ನಡುವೆ ವಾಗ್ವಾದವನ್ನು ಹುಟ್ಟುಹಾಕಿತ್ತು. ಸಿರಿಯಾವನ್ನು ಮುಂದಿಟ್ಟುಕೊಂಡು ಅಮೆರಿಕಾ ಮತ್ತು ರಷ್ಯಾಗಳು ಟೀಕೆ ಪ್ರತಿಟೀಕೆಗಳಲ್ಲಿ ನಿರತವಾಗಿದ್ದವು. ಈ ಟೀಕಾ ಸಮರ ತಾರಕಕ್ಕೇರಿ, ಎರಡೂ ದೇಶಗಳು ಪರಸ್ಪರ ಎಚ್ಚರಿಕೆಗಳನ್ನು ಕೊಟ್ಟುಕೊಂಡಿದ್ದವು.

ಈ ರಾಸಾಯನಿಕ ದಾಳಿಯ ಹಿಂದೆ ರಷ್ಯಾ ಪಾತ್ರವಿದೆ ಎಂದಿದ್ದ ಟ್ರಂಪ್‌, ಸಿರಿಯಾದ ಮೇಲಿನ ರಾಸಾಯನಿಕ ದಾಳಿಗೆ ಪ್ರತಿದಾಳಿಯಾಗಿ ಕ್ಷಿಪಣಿಗಳ ಮಳೆಯೇ ಸುರಿಯಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದರು. ಪ್ರತಿಯಾಗಿ ಅಮೆರಿಕಾದ ಕ್ಷಿಪಣಿಗಳು ಸಿರಿಯಾದ ಮೇಲೆ ಬಂದರೆ ಹೊಡೆದುರುಳಿಸುತ್ತೇವೆ ಎಂದು ರಷ್ಯಾ ಪ್ರತ್ಯುತ್ತರ ನೀಡಿತ್ತು. ಸಿರಿಯಾದ ಅಧ್ಯಕ್ಷ ಬಶರ್‌ ಅಸಾದ್‌ ಯಾವಾಗ ಬೇಕಾದರೂ ಸಂಭವಿಸಬಹುದಾದ ಯುದ್ಧಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕುಳಿತಿದ್ದರು.

Also read: ಸಿರಿಯಾದಲ್ಲಿ ನೆತ್ತರ ಹೊಳೆ, ಅಧ್ಯಕ್ಷ ಅಸಾದ್ ಮತ್ತು ಐತಿಹಾಸಿಕ ಸತ್ಯಗಳು  

ಕಳೆದ ಶನಿವಾರವೂ ಕೂಡ ರಾಸಾಯನಿಕ ವಿಷ ದಾಳಿ ನಡೆದಿದೆ ಎಂಬ ಸುದ್ದಿ ಹೊರಬಿದ್ದ ಮೇಲೆ ಟ್ವಿಟ್ಟರ್‌ ಮೂಲಕ ರಷ್ಯಾವನ್ನು ಕೆಣಕಿದ್ದ ಟ್ರಂಪ್‌, ರಷ್ಯಾ ಯುದ್ಧಕ್ಕೆ ಸಿದ್ಧಗೊಳುವಂತೆ ಸೂಚಿಸಿದ್ದರು. ರಷ್ಯನ್ನರನ್ನು ಮನುಷ್ಯರನ್ನು ಕೊಂದು ಮಜಾ ಮಾಡುವವರು ಎಂದು ಟ್ರಂಪ್‌ ಅಣಕಿಸಿದ್ದರು. ಅಮೆರಿಕಾದಿಂದ ಸಿರಿಯಾದ ಕಡೆಗೆ ಸ್ಮಾರ್ಟ್‌ ಕ್ಷಿಪಣಿಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನೂ ಕೂಡ ಟ್ರಂಪ್‌ ನೀಡಿದ್ದರು.

ಟ್ರಂಪ್‌ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡಿದ್ದ ರಷ್ಯಾ, ಪೂರ್ವಾಗ್ರಹವಿಲ್ಲದೆ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಸಿರಿಯಾ ಸರಕಾರ ಅಮೆರಿಕಾ ಅಧ್ಯಕ್ಷರ ಸಂದೇಶವನ್ನು ಅನಗತ್ಯ ಕಿರುಚಾಟ ಎಂದಿತ್ತು.

ಇದರ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಟ್ರಂಪ್‌ ರಷ್ಯಾಗೂ ಎಚ್ಚರಿಕೆಯನ್ನು ನೀಡಿದ್ದಾರೆ. ನಾಗರಿಕ ರಾಷ್ಟ್ರಗಳನ್ನು ಬಿಟ್ಟು ಶತ್ರು ದೇಶವಾದ ಇರಾನ್‌ ಜತೆ ಮೈತ್ರಿ ಬೆಳೆಸದಂತೆ ಎಚ್ಚರಿಸಿದ್ದಾರೆ. ಈ ಕುರಿತು ಶೀಘ್ರವಾಗಿ ತೀರ್ಮಾನಿಸುವಂತೆ ಟ್ರಂಪ್‌ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ಹೇಳಿದ್ದಾರೆ.

ವಾಗ್ದಾಳಿಯನ್ನು ಮುಂದುವರೆಸಿದ್ದ ಟ್ರಂಪ್‌, ಶುಕ್ರವಾರದಂದು ಮತ್ತೊಂದು ಟ್ವೀಟ್‌ ಮಾಡಿದ್ದರು. ಸಿರಿಯಾದಲ್ಲಿನ ರಾಸಾಯನಿಕ ದಾಳಿಗೆ ಪ್ರತಿಯಾಗಿ ಯಾವಾಗ ಬೇಕಾದರೂ ದಾಳಿ ನಡೆಯಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಈ ದಾಳಿ ಆದಷ್ಟು ಬೇಗ ನಡೆಯಬಹುದು ಅಥವಾ ತಡವಾದರೂ ಆಗಬಹುದು ಎಂದಿದ್ದರು.

ಈ ಹೇಳಿಕೆ ನೀಡಿ ದಿನ ಕಳೆಯುವುದರೊಳಗೆ ಅಮೆರಿಕಾದ ಸೈನ್ಯ ಸಿರಿಯಾದಲ್ಲಿ ವೈಮಾನಿಕ ದಾಳಿಯನ್ನು ಆರಂಭಿಸಿದೆ. ಶನಿವಾರ ಮುಂಜಾನೆ 4 ಗಂಟೆಯಿಂದಲೇ ದಾಳಿಗೆ ನಿಂತಿದೆ. ಡೆಮಾಸ್ಕಸ್‌ ನಗರದ ಮೇಲೆ ದಾಲಿ ನಡೆಸುತ್ತಿದ್ದು, ಶನಿವಾರ ಮಧ್ಯಾಹ್ನದ ವೇಳೆ ಸುಮಾರು 100 ಕ್ಷಿಪಣಿಗಳನ್ನು ಅಮೆರಿಕಾ ಮತ್ತದರ ಮಿತ್ರ ರಾಷ್ಟ್ರಗಳು ಸಿಡಿಸಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಅಮೆರಿಕಾದ 12 ಬೃಹತ್‌ ಯುದ್ಧ ನೌಕೆಗಳು ಸಿರಿಯಾದ ಕಡಲ ತೀರವನ್ನು ತಲುಪಿವೆ. ಅಷ್ಟೇ ಅಲ್ಲದೇ ಯುಎಸ್‌ಎಸ್‌ ಹ್ಯಾರಿ ಎಸ್‌ ಟ್ರೂಮನ್‌ ಎಂಬ ಅಣ್ವಸ್ತ್ರ ಸಜ್ಜಿತ ಹಡಗಿನ ಜತೆ ಇನ್ನೂ 5 ಹಡಗುಗಳನ್ನು ಯುರೋಪ್‌ ಹಾಗೂ ಮಧ್ಯಪ್ರಾಚ್ಯದತ್ತ ಕಳುಹಿಸಲು ಅಮೆರಿಕಾ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಅಮೆರಿಕಾದ ಜತೆಗೆ ಫ್ರಾನ್ಸ್‌ ಮತ್ತು ಬ್ರಿಟನ್‌ಗಳೂ ಕೂಡ ಕೈಜೋಡಿಸಿರುವುದು ಜಗತ್ತಿನೆಲ್ಲೆಡೆ ಆತಂಕ ಮನೆ ಮಾಡುವುದಕ್ಕೆ ಕಾರಣವಾಗಿದೆ.

Also read: ಸಿರಿಯಾದಲ್ಲಿ ಮುಂದುವರಿದ ಮಾರಣಹೋಮ: ಹರಿಯುತ್ತಿರುವ ನೆತ್ತರಿಗೆ ಕೊನೆಯೆಂದು?

ಯುಎಸ್‌ಎಸ್‌ ಹ್ಯಾರಿ ಎಸ್‌ ಟ್ರೂಮನ್‌ ಹಡಗು 90 ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಮುಂದಿನ ವಾರದಲ್ಲಿ ಈ ಹಡಗುಗಳು ಪ್ರಯಾಣ ಆರಂಭಿಸಲಿವೆ. ಮೆಡಿಟರೇನಿಯನ್‌ ಸಮುದ್ರದಲ್ಲಿ ಈಗಾಗಲೇ ಅಮೆರಿಕಾದ 4 ಯುದ್ಧ ನೌಕೆಗಳು ಜಾರ್ಜಿಯಾ ಮತ್ತು ಜಾನ್‌ ವಾರ್ನರ್‌ ಎಂಬ ಜಲಾಂತರ್ಗಾಮಿಗಳ ಜತೆ ಪ್ರಯಾಣ ಬೆಳಸಿವೆ ಎನ್ನಲಾಗಿದೆ.

ಯುಎಸ್‌ಎಸ್‌ ಹ್ಯಾರಿ ಎಸ್‌ ಟ್ರೂಮನ್‌ ಯುದ್ಧ ನೌಕೆ.
ಯುಎಸ್‌ಎಸ್‌ ಹ್ಯಾರಿ ಎಸ್‌ ಟ್ರೂಮನ್‌ ಯುದ್ಧ ನೌಕೆ.

2003ರಲ್ಲಿ ಅಮೆರಿಕಾ ಇರಾಕ್‌ ದೇಶದ ಮೇಲೆ ಇಂತಹದ್ದೇ ಸರ್ವ ಸಜ್ಜಿತ ಯುದ್ಧ ನಡೆಸಿತ್ತು. ಇದರ ನಂತರ ಇಷ್ಟು ಸಿದ್ಧತೆಗಳನ್ನು ನಡೆಸಿಕೊಂಡು ಮುಂದಡಿಯಿಟ್ಟಿರುವ ಮೊದಲ ಸನ್ನಿವೇಶವಿದು. ಜತೆಗೆ ರಷ್ಯಾ ಮತ್ತು ಅಮೆರಿಕಾಗಳು ಎದುರು ಬದುರಾಗಿ ನಿಂತಿರುವುದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಲಿದೆಯೇ ಎನ್ನುವ ಭಯವೂ ಸಹ ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ.

ಅಮೆರಿಕಾ ಹೂಡಿರುವ ಈ ಯುದ್ಧದ ಕುರಿತಂತೆ ರಷ್ಯಾದ ಅಧ್ಯಕ್ಷ ಪುಟಿನ್‌ ಇದು ಆಕ್ರಮಣಕಾರಿ ನೀತಿ ಎಂದಿದ್ದಾರೆ. ಸಿರಿಯಾದಲ್ಲಿ ರಷ್ಯಾದ ಸೈನ್ಯ ತನಿಖೆ ನಡೆಸಿದ್ದು, ಯಾವುದೇ ರಾಸಾಯನಿಕ ದಾಳಿ ನಡೆದಿಲ್ಲ ಎಂದು ಪುಟಿನ್‌ ಹೇಳಿದ್ದಾರೆ. ಸತ್ಯಾಂಶಗಳು ಬಯಲಾಗುವ ಮುಂಚೆ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ದಾಳಿಗೆ ನಿಂತಿವೆ ಎಂದು ಅಮೆರಿಕಾವನ್ನು ಜರಿದಿದ್ದಾರೆ.

ಐಸಿಸ್‌ ಉಗ್ರರ ಉಪಟಳ, ಸಿರಿಯಾ ಸರಕಾರದ ದಾಳಿ, ಸಿರಿಯಾ ನಾಗರೀಕರ ಮಾರಣ ಹೋಮ, ಬಲಾಢ್ಯ ರಾಷ್ಟ್ರಗಳ ಹಸ್ತಕ್ಷೇಪ, ಈ ಎಲ್ಲಾ ಬೆಳವಣಿಗೆಗಳು ಜಗತ್ತನ್ನು ಎಲ್ಲಿಗೆ ಕೊಂಡಯ್ಯಲಿದೆ ಎನ್ನುವ ಪ್ರಶ್ನೆಗಳು ಈಗ ಜನರ ಮುಂದಿವೆ.