ಚಿತ್ರಕೃಪೆ : NDTV.com
ವಿದೇಶ

ನೆತಾನ್ಯಾಹು ‘ಕೇಸ್ 1000 & 2000’: ವಿಶ್ವಾಸದ್ರೋಹದ ಸುಳಿಯಲ್ಲಿ ಇಸ್ರೇಲ್ ಪ್ರಧಾನಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲಿದ್ದ ಎರಡು ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಲಭ್ಯವಾಗಿವೆ ಎಂದು ಇಸ್ರೇಲಿ ಪೊಲೀಸರು ಮಂಗಳವಾರ ತಡರಾತ್ರಿ ತಿಳಿಸಿದ್ದಾರೆ. ಪೊಲೀಸರ ಈ ಹೇಳಿಕೆ ಇಸ್ರೇಲ್ ರಾಜಕೀಯ ಪರಿಸರದಲ್ಲಿ ಕೋಲಾಹಲವನ್ನು ಉಂಟುಮಾಡಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂಬಂಧಿತ ಅಧಿಕಾರಿಗಳು ಪ್ರಧಾನಿ ನೆತನ್ಯಾಹು ಮೇಲಿದ್ದ ಮೋಸ, ಲಂಚ ಪಡೆದಿರುವುದು ಮತ್ತು ವಿಶ್ವಾಸ ದ್ರೋಹದ ಪ್ರಕರಣಗಳ ಕುರಿತಾದ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.ಈ ಕುರಿತು ದೂರದರ್ಶನಗಳಲ್ಲಿ ಹೇಳಿಕೆ ನೀಡಿರುವ ನೆತನ್ಯಾಹು, "ನನ್ನ ಮೇಲಿರುವ ಕೇಸುಗಳು ಖುಲಾಸೆಗೊಳ್ಳುತ್ತವೆ. ನಾನೇನು ಮಾಡಿಲ್ಲ ಆದಕಾರಣ ಅಲ್ಲೇನೂ ಇರಲು ಸಾಧ್ಯವಿಲ್ಲ," ಎಂದಿದ್ದಾರೆ.

ಪೊಲೀಸರು ತಮ್ಮಲ್ಲಿರುವ ದಾಖಲೆಗಳ ವಿಚಾರವನ್ನು ತಿಳಿಸುವ ಕೆಲಹೊತ್ತಿನ ಮುಂಚೆ ಮಾತನಾಡಿದ್ದ ನೆತನ್ಯಾಹು, "ನಾನು ದೇಶದ ಒಳಿತಿಗಾಗಿ ಚಿಂತಿಸುತ್ತೇನೆಯೇ ಹೊರತು ನನ್ನ ಸ್ವಹಿತಾಸಕ್ತಿಯ ಕುರಿತಾಗಲ್ಲ. ಯಾರೂ ಕೂಡ ನನ್ನನ್ನು ಈ ಚಿಂತನೆಗಳಿಂದ ದೂರ ಸರಿಸಲಾರರು. ನನ್ನ ಮೇಲೆ ದಾಳಿಗಾಳಾದರೂ ಕೂಡ ನಾನು ಸುಮ್ಮನಾಗುವವನಲ್ಲ. ನನ್ನ 20 ವರ್ಷಗಳ ಅನುಭವದಲ್ಲಿನ ಬೇರೆ ದಿನಗಳಿಗಿಂತ ಈ ದಿನವೇನು ಭಿನ್ನವಾಗಿಲ್ಲ," ಎಂದಿದ್ದರು.

ಈ ಕುರಿತು ಅಮೆರಿಕಾ ಏನಾದರೂ ಪ್ರತಿಕ್ರಿಯಿಸಿದೆಯೇ ಎಂಬ ಪ್ರಶ್ನೆಗೆ ಇಸ್ರೇಲಿ ವಕ್ತಾರೆ ಹೀದರ್ ನೌರ್ಟ್ ಉತ್ತರಿಸಿ, "ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲಿ ಸರಕಾರದ ಜೊತೆ ಅಮೆರಿಕಾದ ಸಂಬಂಧ ಚೆನ್ನಾಗಿದೆ. ನಾವು ಈ ವಿಷಯವನ್ನು ಇಸ್ರೇಲ್‌ನ ಆಂತರಿಕ ವಿಷಯವನ್ನಾಗಿಯಷ್ಟೇ ಪರಿಗಣಿಸಿದ್ದೇವೆ," ಎಂದಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಎರಡು ಪ್ರಕರಣಗಳ ದಾಖಲಾಗಿದ್ದವು. ಈ ಎರಡು ಪ್ರಕರಣಗಳಿಗೆ 'ಕೇಸ್ 1000' ಹಾಗೂ 'ಕೇಸ್ 2000' ಎಂದು ಹೆಸರು ನಿಡಲಾಗಿತ್ತು.

ನೆತನ್ಯಾಹು ಈ ಪ್ರಕರಣಗಳನ್ನು ಅಲ್ಲಗೆಳೆದಿದ್ದರು.'ಕೇಸ್ 1000'- ಈ ಪ್ರಕರಣದಲ್ಲಿ ನೆತನ್ಯಾಹು ಇತರೆ ದೇಶಗಳ ಉದ್ಯಮಿಗಳಿಂದ 1 ಮಿಲಿಯನ್ ಶೆಕೆಲ್‌ (ಸುಮಾರು 2,80,000 ಡಾಲರ್ ಮೊತ್ತದ) ಬೆಲಬಾಳುವ ಉಡುಗೊರೆಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. 2007ರಿಂದ 2016ರ ಅವಧಿಯಲ್ಲಿ ನೆತನ್ಯಾಹು ಸಿಗಾರ್‌ಗಳು, ಷಾಂಪೇನ್, ಆಭರಣ ಇತ್ಯಾದಿಗಳನ್ನು ಪಡೆದಿರುವುದು ಪ್ರಕರಣದ ಮೂಲ.ಈ ಪ್ರಕರಣ ಮುಖ್ಯವಾಗಿ ನೆತನ್ಯಾಹು ಮತ್ತು ಇಸ್ರೇಲಿ ಬಿಲೇನಿಯರ್ ಹಾಗೂ ಹಾಲಿವುಡ್ ಚಿತ್ರ ನಿರ್ಮಾಪಕ ಆರ್ನೋನ್ ಮಿಲ್ಚಾನ್ ನಡುವಿನ ಸಂಬಂಧವನ್ನು ಕೇಂದ್ರವಾಗಿ ಹೊಂದಿದೆ.

ಕೆಲವು ಉಡುಗೊರೆಗಳನ್ನು ಪಡೆಯುವುದರ ಮೂಲಕ ಮಿಲ್ಚಾನ್‌ ಮೇಲಿದ್ದ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ನೆತನ್ಯಾಹು ಪ್ರಯತ್ನಿಸಿದ್ದರು ಎನ್ನಲಾಗಿದೆ. 'ಕೇಸ್ 2000'ನಲ್ಲಿ ನೆತನ್ಯಾಹು ಇಸ್ರೇಲ್‌ನಲ್ಲಿ ಅತಿಹೆಚ್ಚು ಪ್ರಸಾರ ಹೊಂದಿರುವ ಪ್ರತಿಷ್ಟಿತ ಪತ್ರಿಕೆ 'ಯಡಿಯೋತ್ ಅರ್ಹೊನೋತ್‌'ನಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ, ಈ ಪತ್ರಿಕೆ ಪ್ರತಿಸ್ಪರ್ಧಿ 'ಇಸ್ರೇಲ್ ಹಯೋಮ್' ಪತ್ರಿಕೆಯನ್ನು ದುರ್ಬಲಗೊಳಿಸುವಲ್ಲಿ ನಿರತರಾಗಿದ್ದರು ಎಂದು ಅಪಾದಿಸಲಾಗಿದೆ.

ಈ ಎರಡೂ ಪ್ರಕರಣಗಳ ಕುರಿತು ತನಿಖೆ ಆರಂಭ ಆದಾಗಿನಿಂದಲೂ ನೆತನ್ಯಾನು ತಾನು ನಿರ್ದೋಷಿ ಎನ್ನುತ್ತಲೇ ಬಂದಿದ್ದಾರೆ.ಈಗ ಪೊಲೀಸರು ತಾವು ಕಲೆಹಾಕಿರುವ ಸಾಕ್ಷ್ಯಾಧಾರಗಳನ್ನು ದೇಶದ ಅಟಾರ್ನಿ ಜನರಲ್ ಮುಂದಿರಿಸಿದ್ದಾರೆ. ಪ್ರಧಾನಿ ನೆತನ್ಯಾಹುರನ್ನು ಶಿಕ್ಷಿಸಬೇಕೋ ಬೇಡವೋ ಎಂದ ನಿರ್ಧಾರವನ್ನು ಅಟಾರ್ನಿ ಜನರಲ್ ತೆಗೆದುಕೊಳ್ಳಲಿದ್ದಾರೆ. ಪ್ರಕರಣ ಅತಿ ಬೇಗ ಇತ್ಯರ್ಥವಾಗುತ್ತದೆ ಎಂದೇನೂ ಹೇಳಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೆತಾನ್ಯಾಹು ತಪ್ಪಿತಸ್ಥ ಎಂಬ ತೀರ್ಪು ಹೊರಬಿದ್ದರೆ ಇಸ್ರೇಲಿ ಕಾನೂನಿನ ಪ್ರಕಾರ ನೆತನ್ಯಾಹು ಅಧಿಕಾರದಿಂದ ಪದಚ್ಯುತರಾಗಬೇಕಿದೆ.

ನೆತಾನ್ಯಾಹು ಪ್ರೊಫೈಲ್:

ಬೆಂಜಮಿನ್ ನೆತಾನ್ಯಾಹು ಇಸ್ರೇಲ್‌ನ ಪ್ರಸ್ತುತ ಹಾಗೂ 9ನೇ ಪ್ರಧಾನಮಂತ್ರಿಯಾಗಿದ್ದಾರೆ. 2009ರಿಂದ ಅಧಿಕಾರದಲ್ಲಿರುವ ನೆತನ್ಯಾಹು ಅತಿ ಹೆಚ್ಚು ಕಾಲ ಇಸ್ರೇಲ್ ಪ್ರಧಾನಿ ಪಟ್ಟವನ್ನು ನಿರ್ವಹಿಸಿರುವ ಎರಡನೇ ವ್ಯಕ್ತಿ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಇದಕ್ಕೂ ಮುಂಚೆ ಕೂಡ 1996ರಿಂದ 1999ರವರೆಗೂ ನೆತನ್ಯಾಹು ಪ್ರಧಾನಿ ಪಟ್ಟ ವಹಿಸಿಕೊಂಡಿದ್ದರು.

ಇಸ್ರೇಲ್‌ನ ಲಿಕುಡ್ ಪಾರ್ಟಿಯ ಅಧ್ಯಕ್ಷ ಸ್ಥಾನ ವಹಿಸಿರುವ ನೆತನ್ಯಾಹು ಇಸ್ರೇಲ್‌ನಲ್ಲೇ ಜನ್ಮ ಪಡೆದ ಮೊದಲ ಇಸ್ರೇಲ್ ಪ್ರಧಾನಿ ಎಂಬ ಹೆಗ್ಗಳಿಕೆಯನ್ನೂ ಸಹ ಹೊಂದಿದ್ದಾರೆ.ಇಸ್ರೇಲ್‌ನ ಟೆಲ್‌ ಅವಿವ್‌ ಎಂಬಲ್ಲಿ 1949ರಲ್ಲಿ ಜನಿಸಿದ ಬೆಂಜಮಿನ್ ನೆತನ್ಯಾಹು 1967ರ ವೇಳಗೆ ಇಸ್ರೇಲ್ ಸೈನ್ಯ ಸೇರಿ ಅದೇ ಸಮಯಕ್ಕೆ ನಡೆದ ಆರು ದಿನಗಳ ಯುದ್ಧದಲ್ಲಿ ಭಾಗಿಯಾಗಿದ್ದರು.

ನಂತರ ವಿಶೇಷ ಸೈನಿಕ ದಳವೊಂದರ ನಾಯಕನ ಸ್ಥಾನವನ್ನು ಪಡೆದಿದ್ದರು. ತದ ನಂತರ ಹಲವಾರು ಸೈನಿಕ ಕಾರ್ಚಾರಣೆಗಳಲ್ಲಿ ನೆತನ್ಯಾಹುರವರ ಶ್ರಮವಿತ್ತು. 1973ರಲ್ಲಿ ನಡೆದ ಕಿಪ್ಪೂರ್ ಯುದ್ಧದಲ್ಲಿ ನೆತನ್ಯಾಹು ಮೊದಲ ಸಾಲಿನ ಸೈನಿಕರಾಗಿ ನಿಂತು ಕಾದಾಡಿದ್ದರು. ಸುಯೇಜ್‌ ಕಾಲುವೆ ಕುರಿತಾದ ಕದನದಲ್ಲೂ ಭಾಗವಹಿಸಿದ್ದ ನೆತನ್ಯಾಹು ಸೇನೆಯಿಂದ ನಿವೃತ್ತರಾಗುವ ವೇಳೆಗೆ ಸೈನ್ಯದ ಕ್ಯಾಪ್ಟನ್ ಆಗಿದ್ದರು.ನಂತರ ಭಯೋತ್ಪಾದನೆ ವಿರೋಧಿ ಸಂಸ್ಥೆಯೊಂದನ್ನು ಸ್ಥಾಪಿಸಿ, ಸೇವೆ ಸಲ್ಲಿಸಿದ ನೆತನ್ಯಾಹು 1984ರಿಂದ 1988ರವರೆಗೆ ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ರಾಯಭಾರಿಯಾಗಿದ್ದರು.

1993ರಲ್ಲಿ ಲಿಕೂಡ್ ಪಾರ್ಟಿ ಸೇರಿ, 1996ರ ಚುನಾವಣೆಯಲ್ಲಿ ಪ್ರಧಾನಿ ಪದವಿ ಪಡೆದರು. 1999ರ ಚುನಾವಣೆಯಲ್ಲಿ ಸೋತು ಕೆಲ ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿದಿದ್ದರು. ಮತ್ತೆ ಚುನಾವಣೆಯಲ್ಲಿ ಗೆದ್ದು 1 ವರ್ಷ ವಿದೇಶಾಂಗ ಸಚಿವರಾಗಿ, 2 ವರ್ಷ ಆರ್ಥಿಕ ಸಚಿವರಾಗಿ ಸೇವೆ ಸಲ್ಲಿಸಿ ಇಸ್ರೇಲ್ ಆರ್ಥಿಕತೆಗೆ ಭದ್ರ ಬುನಾದಿಯನ್ನು ಒದಗಿಸಿಕೊಟ್ಟಿದ್ದರು. ಅನಂತರ ಲಿಕುಡ್ ಪಾರ್ಟಿಯ ನಾಯಕತ್ವ ವಹಿಸಿದ ನೆತನ್ಯಾಹು 2006ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

2009ರ ಚುನಾವಣೆಯಲ್ಲಿ ಬಹುಮತ ಗಳಿಸದೆ, ಸಮ್ಮಿಶ್ರ ಸರಕಾರ ರಚಿಸಿ ಪ್ರಧಾನಿ ಹುದ್ದೆಗೇರಿದರು. 2013ರ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಮೂರನೇ ಬಾರಿ ಇಸ್ರೇಲ್ ಪ್ರಧಾನಿಯಾದ ಎರಡನೇ ವ್ಯಕ್ತಿಯಾದರು. 2015ರಲ್ಲೂ ಕೂಡ ಇಸ್ರೇಲಿಗರ ಮನಸ್ಸು ನೆತನ್ಯಾಹು ಕಡೆಗೆ ವಾಲಿ ನಾಲ್ಕನೇ ಬಾರಿ ಪ್ರಧಾನಿ ಪಟ್ಟ ಪಡೆದ ಮೊದಲಿಗರಾದರು.

ಹಿಂದೆ ಹಿಂದೆಯೇ ಮೂರು ಬಾರಿ ಪ್ರಧಾನಿ ಹುದ್ದೆಗೇರಿದ ಕೀರ್ತಿಯೂ ಕೂಡ ನೆತಾನ್ಯಾಹು ಬೆನ್ನಿಗಿದೆ.ಸಧ್ಯಕ್ಕೆ ಇಸ್ರೇಲ್‌ನ ಪ್ರಧಾನಿಯಾಗಿ ಅತಿಹೆಚ್ಚು ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ನೆತನ್ಯಾಹು ಎರಡನೇ ಸ್ಥಾನದಲ್ಲಿದ್ದಾರೆ. ಅಟಾರ್ನಿ ಜನರಲ್‌ರಿಂದ ಹೊರಬೀಳಲಿರುವ ತೀರ್ಪು ಏನಾದರೂ ನೆತಾನ್ಯಾಹು ಪರವಾಗಿತ್ತೆಂದರೆ ಅತಿ ಹೆಚ್ಚು ಕಾಲ ಇಸ್ರೇಲ್ ಪ್ರಧಾನಿಯಾಗಿದ್ದವರ ಸಾಲಿನಲ್ಲಿ ಬೆಂಜಮಿನ್ ನೆತನ್ಯಾಹು ಮೊದಲಿಗರಾಗಿ ನಿಲ್ಲಲಿದ್ದಾರೆ.