ಮೇಕೆದಾಟು ಯೋಜನೆಗೆ CWC ಒಪ್ಪಿಗೆ; ಅಡ್ಡಗಾಲು ಹಾಕಲು ತಮಿಳುನಾಡು ಸಿದ್ಧತೆ
ಸುದ್ದಿ ಸಾಗರ

ಮೇಕೆದಾಟು ಯೋಜನೆಗೆ CWC ಒಪ್ಪಿಗೆ; ಅಡ್ಡಗಾಲು ಹಾಕಲು ತಮಿಳುನಾಡು ಸಿದ್ಧತೆ

ಯೋಜನೆಗೆ ಸಿಡಬ್ಲ್ಯುಸಿ ಒಪ್ಪಿಗೆ ನೀಡಿರುವುದು ತಮಿಳುನಾಡಿನ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ. ಹೀಗಾಗಿ ಈ ವಿಚಾರವನ್ನು ಸುಪ್ರೀಂಕೋರ್ಟ್‌ಗೆ ಎಳೆಯುವ ಚಿಂತನೆಯಲ್ಲಿ ತಮಿಳುನಾಡಿದೆ.

ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಒಪ್ಪಿಗೆ ನೀಡಿದೆ. ಯೋಜನೆ ಅನುಷ್ಠಾನ ಸಂಬಂಧ ಪೂರ್ವ ಸಾಧ್ಯತಾ ವರದಿ ಸಲ್ಲಿಸುವಂತೆ ಸಿಡಬ್ಲ್ಯುಸಿ ರಾಜ್ಯ ಸರಕಾರಕ್ಕೆ ತಿಳಿಸಿದೆ. ಆದರೆ, ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ತಮಿಳುನಾಡು ಸಿದ್ಧತೆ ನಡೆಸುತ್ತಿದೆ. ಸಿಡಬ್ಲ್ಯುಸಿ ಯೋಜನೆಗೆ ಒಪ್ಪಿಗೆ ನೀಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತಮಿಳುನಾಡು ಪರ ಹಿರಿಯ ವಕೀಲ ಶೇಖರ್‌ ನಫಾಡೆ ಜತೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಾಣದಿಂದ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಕರ್ನಾಟಕ ಸರಕಾರ ಹೇಳಿದ್ದರೂ ಯೋಜನೆಗೆ ತಮಿಳುನಾಡು ಆಕ್ಷೇಪಿಸುತ್ತಲೇ ಬಂದಿದೆ. ಈಗ ಯೋಜನೆಗೆ ಸಿಡಬ್ಲ್ಯುಸಿ ಒಪ್ಪಿಗೆ ನೀಡಿರುವುದು ತಮಿಳುನಾಡಿನ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ. ಹೀಗಾಗಿ ಈ ವಿಚಾರವನ್ನು ಸುಪ್ರೀಂಕೋರ್ಟ್‌ಗೆ ಎಳೆಯುವ ಚಿಂತನೆಯಲ್ಲಿ ತಮಿಳುನಾಡಿದೆ.

ಅಲ್ಲದೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಯೋಜನೆಗೆ ತಡೆ ನೀಡುವಂತೆ ಪಳನಿಸ್ವಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಯೋಜನೆಯನ್ನು ತಡೆಹಿಡಿಯಲು ತಮಿಳುನಾಡು ಸರಕಾರದ ಜತೆಗೆ ಕೇಂದ್ರ ಸಂಪುಟದಲ್ಲಿರುವ ತಮಿಳುನಾಡಿನ ಸಂಸದರೂ ಪ್ರಯತ್ನ ನಡೆಸಿದ್ದಾರೆ. ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡಿನ ಜನರಿಗೆ ಅನನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪೊನ್‌ ರಾಧಾಕೃಷ್ಣನ್ ಹೇಳಿದ್ದಾರೆ.

ಕರ್ನಾಟಕ- ತಮಿಳುನಾಡು ಗಡಿಭಾಗವಾದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲು ಮುಂದಾಗಿರುವುದರಿಂದ ಕರ್ನಾಟಕ ಕೃಷಿಗೆ ನೀರು ಬಳಕೆ ಮಾಡುವುದಿಲ್ಲ. ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಹರಿಸುತ್ತೇವೆ. ಈ ಯೋಜನೆಗೆ ತಮಿಳುನಾಡು ಸರಕಾರ ಆಕ್ಷೇಪಿಸುವುದು ಸರಿಯಲ್ಲ. ಅಗತ್ಯಬಿದ್ದರೆ ತಮಿಳುನಾಡು ಸರಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಯವಾಗುತ್ತದೆಯೇ ಎಂಬ ಬಗ್ಗೆ ಕೇಂದ್ರ ಜಲ ಆಯೋಗ ಹಲವು ಸುತ್ತಿನ ಸಭೆ ನಡೆಸಿದೆ. ಅಣೆಕಟ್ಟು ನಿರ್ಮಾಣದಿಂದ ಪ್ರತಿ ವರ್ಷ ತಮಿಳುನಾಡಿಗೆ ಬಿಡುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಯೋಜನಾ ವರದಿ ಸಿದ್ಧಪಡಿಸುವಂತೆ ಆಯೋಗ ರಾಜ್ಯಕ್ಕೆ ನಿರ್ದೇಶನ ನೀಡಿದೆ.

ಮೇಕೆದಾಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ 5,912 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 66 ಟಿಎಂಸಿ ನೀರು ಸಂಗ್ರಹದ ಅಣೆಕಟ್ಟೆಯನ್ನು ನಿರ್ಮಿಸಿ, ಅಲ್ಲಿಂದ ಬೆಂಗಳೂರು, ರಾಮನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಈ ಯೋಜನೆಯ ಉದ್ದೇಶ.