ಮಲ್ಯ- ಜೇಟ್ಲಿ ಭೇಟಿ; ಮಾಧ್ಯಮಗಳಿಗೆ ‘ಪೂರ್ಣಸತ್ಯ’ದ ಪಾಠ ಮಾಡಿದ ಶಾಸಕ ಸುರೇಶ್‌ ಕುಮಾರ್‌!
ಸುದ್ದಿ ಸಾಗರ

ಮಲ್ಯ- ಜೇಟ್ಲಿ ಭೇಟಿ; ಮಾಧ್ಯಮಗಳಿಗೆ ‘ಪೂರ್ಣಸತ್ಯ’ದ ಪಾಠ ಮಾಡಿದ ಶಾಸಕ ಸುರೇಶ್‌ ಕುಮಾರ್‌!

ಬಿಜೆಪಿ ಮುಖಂಡರು ಸಾಲು ಸಾಲು ಸುಳ್ಳು ಹೇಳುತ್ತಿರುವಾಗ ಸುಮ್ಮನಿದ್ದ ‘ಸಜ್ಜನ ರಾಜಕಾರಣಿ’ ಸುರೇಶ್‌ ಕುಮಾರ್‌ ಈಗ ‘ಅರ್ಧಸತ್ಯ’ ಹಾಗೂ ‘ಪೂರ್ಣಸತ್ಯ’ಗಳ ಬಗ್ಗೆ ಮಾಧ್ಯಮಗಳಿಗೆ ಪಾಠ ಹೇಳುತ್ತಿದ್ದಾರೆ.

ವಿದೇಶಕ್ಕೆ ಪರಾರಿಯಾಗುವ ಮುನ್ನಾ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿದ್ದೆಎಂಬ ವಿಜಯ್‌ ಮಲ್ಯ ಹೇಳಿಕೆ ಹಾಗೂ ಭೇಟಿ ಅಧಿಕೃತವಲ್ಲ ಎಂಬ ಜೇಟ್ಲಿ ಸ್ಪಷ್ಟೀಕರಣದ ಬಳಿಕ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಮಾಧ್ಯಮಗಳಿಗೆ ‘ಪೂರ್ಣಸತ್ಯ’ದ ಪಾಠ ಮಾಡಿದ್ದಾರೆ.

ಮಲ್ಯ ಪ್ರಕರಣದಲ್ಲಿ ಬುಧವಾರ ನಡೆದ ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಮೊದಲು ಟ್ವೀಟ್‌ ಮಾಡಿದ ಸುರೇಶ್ ಕುಮಾರ್‌, “ಹುಲ್ಲಿನ ಎಸಳನ್ನು ಅರಸುತ್ತಾ ಮುಳುಗುತ್ತಿರುವ ಕಾಂಗ್ರೆಸ್ಸಿನವರಿಗೆ ಮಲ್ಯರ ‘ಅರ್ಧ ಸತ್ಯ’ ಜೇಟ್ಲೀಯವರ ‘ಪೂರ್ಣ ಸತ್ಯ’ಕ್ಕಿಂತ ಅಪ್ಯಾಯಮಾನವಾಗಿರುವುದು ಸಹಜ” ಎಂದಿದ್ದಾರೆ.

ಅದರ ಹಿಂದೆಯೇ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿರುವ ಸುರೇಶ್‌ ಕುಮಾರ್‌, “For Media, Mallya's "ARDHA SATHYA" ( half truth) has more TRP value than Jaitley's "POORNA SATHYA)" ( full truth).” ಎಂದು ಟ್ವೀಟಿಸಿದ್ದಾರೆ. ಇದನ್ನು ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್‌ ಖಾತೆ ಸೇರಿದಂತೆ ಹಲವರು ಈ ರಿಟ್ವೀಟ್‌ ಮಾಡಿದ್ದಾರೆ.

ಕನ್ನಡದ ಟ್ವೀಟ್‌ನಲ್ಲಿ ‘ಕಾಂಗ್ರೆಸ್ಸಿಗರಿಗೆ ಅರ್ಧ ಸತ್ಯ ಆಪ್ಯಾಯಮಾನವಾಗಿದೆ’ ಎಂದಿರುವ ಸುರೇಶ್‌ ಕುಮಾರ್‌, ಇಂಗ್ಲಿಷ್‌ ಟ್ವೀಟ್‌ನಲ್ಲಿ ‘ಮಾಧ್ಯಮಗಳಿಗೆ’ ಎಂದಿದ್ದಾರೆ. ಸುರೇಶ್‌ ಕುಮಾರ್‌ ಕಾಂಗ್ರೆಸ್ಸಿಗರ ಕಾಲೆಳೆಯಲು ಈ ಟ್ವೀಟ್‌ ಮಾಡಿದ್ದಾರೋ ಅಥವಾ ಮಾಧ್ಯಮಗಳ ಕುರಿತು ಮಾತನಾಡಲು ಈ ಟ್ವೀಟ್‌ ಮಾಡಿದ್ದಾರೋ ಎಂಬ ಬಗ್ಗೆಯೇ ಗೊಂದಲವಿದೆ.

ಒಂದು ವೇಳೆ ಸುರೇಶ್‌ ಕುಮಾರ್‌ ಕನ್ನಡದಲ್ಲಿ ಕಾಂಗ್ರೆಸ್ಸಿಗರು ಎಂದು ಹೇಳಿ, ಇಂಗ್ಲಿಷ್‌ನಲ್ಲಿ ಕಾಂಗ್ರೆಸ್ಸಿಗರನ್ನು ಮಾಧ್ಯಮ ಎಂದು ಕರೆದಿದ್ದಾರೋ ಅಥವಾ ಮಾಧ್ಯಮ ಮತ್ತು ಕಾಂಗ್ರೆಸ್‌ ಎರಡೂ ಸುರೇಶ್‌ ಕುಮಾರ್‌ ಅವರಿಗೆ ಒಂದೇ ರೀತಿಯಾಗಿ ಕಾಣುತ್ತಿದೆಯೋ ಗೊತ್ತಾಗುತ್ತಿಲ್ಲ!

ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವ ಸಂಘಟನೆಗಳು ದಂಡಿ ದಂಡಿಯಾಗಿ ಸುಳ್ಳು ಹಬ್ಬುತ್ತಿದ್ದ ಸಂದರ್ಭದಲ್ಲಿ ಸುಮ್ಮನಿದ್ದ, ನರೇಂದ್ರ ಮೋದಿ ಅವರಿಂದ ಹಿಡಿದು ಬಿ.ಎಸ್‌. ಯಡಿಯೂರಪ್ಪವರೆಗೆ ಹಲವು ಬಿಜೆಪಿ ಮುಖಂಡರು ಸಾಲು ಸಾಲು ಸುಳ್ಳು ಹೇಳುತ್ತಿರುವಾಗ ಸುಮ್ಮನಿದ್ದ ‘ಸಜ್ಜನ ರಾಜಕಾರಣಿ’ ಸುರೇಶ್‌ ಕುಮಾರ್‌ ಈಗ ಅರ್ಧ ಸತ್ಯ ಹಾಗೂ ಪೂರ್ಣ ಸತ್ಯಗಳ ಬಗ್ಗೆ ಮಾಧ್ಯಮಗಳಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ.

ಒಂದು ಕಡೆಗೆ, “ಮಲ್ಯ ಮತ್ತು ಜೇಟ್ಲಿ ಸಂಸತ್‌ ಕಾರಿಡಾರ್‌ನಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದ್ದಾರೆ. ಇದಕ್ಕೆ ಸಿಸಿ ಟಿವಿ ದೃಶ್ಯಾವಳಿಯ ಸಾಕ್ಷಿ ಇದೆ” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರೆ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, “ಮಲ್ಯ ಹೆಸರಿನಲ್ಲಿದ್ದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ರಾಹುಲ್‌ ಗಾಂಧಿ ಕುಟುಂಬದ ಒಡೆತನಕ್ಕೆ ಸೇರಿದ್ದು” ಎಂಬ ಬಾಂಬ್‌ ಹಾರಿಸಿದ್ದಾರೆ.

ಜೇಟ್ಲಿ- ಮಲ್ಯ ಎಷ್ಟು ಸಮಯ ಮಾತನಾಡಿದ್ದರು, ಯಾವ ವಿಚಾರಗಳ ಬಗ್ಗೆ ಮಾತನಾಡಿದ್ದರು ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಮೊದಲು ಜೇಟ್ಲಿ ಅವರನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡು, ಬಳಿಕ ಅದು ಅಧಿಕೃತ ಭೇಟಿಯಾಗಿರಲಿಲ್ಲ ಎಂದು ಮಲ್ಯ ಹೇಳಿಕೊಂಡಿದ್ದಾರೆ. ಇತ್ತ ಮಲ್ಯ ಭೇಟಿಯಾಗಿದ್ದನ್ನು ಒಪ್ಪಿಕೊಂಡಿರುವ ಜೇಟ್ಲಿ ಆ ಭೇಟಿಯಲ್ಲಿ ಹೆಚ್ಚೇನೂ ಮಾತುಕತೆ ನಡೆಯಲಿಲ್ಲ ಎಂದು ಹೇಳಿದ್ದಾರೆ.

“ದೇಶ ಬಿಡುವ ಮುನ್ನಾ ನಾನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ ಬ್ಯಾಂಕ್‌ಗಳ ಜತೆಗೆ ಸಾಲ ಬಾಕಿ ಇತ್ಯರ್ಥ ಪಡಿಸಿಕೊಳ್ಳುವ ವಿಚಾರವನ್ನು ತಿಳಿಸಿದ್ದೆ. ಆದರೆ, ಅದು ಅಧಿಕೃತ ಭೇಟಿಯಾಗಿರಲಿಲ್ಲ. ನಾನು ಲಂಡನ್‌ಗೆ ಹೋಗುತ್ತಿರುವುದಾಗಿಯೂ ಜೇಟ್ಲಿ ಅವರಿಗೆ ತಿಳಿಸಿದ್ದೆ” ಎಂದು ಮಲ್ಯ ಹೇಳಿದ್ದಾರೆ.

ಮಲ್ಯ ಹೇಳುತ್ತಿರುವುದು ಅರ್ಧ ಸತ್ಯವೇ ಆದರೂ ಪೂರ್ತಿಯಾಗಿ ಸುಳ್ಳಂತೂ ಅಲ್ಲ. ಅಲ್ಲದೆ, “ಸಂಸತ್‌ ಭವನದಲ್ಲಿ ನನ್ನ ಕೊಠಡಿಗೆ ನಡೆದುಕೊಂಡು ಹೋಗುತ್ತಿರುವಾಗ ಭೇಟಿಯಾದ ಮಲ್ಯ ಬ್ಯಾಂಕ್‌ಗಳೊಂದಿಗೆ ಸಾಲ ಇತ್ಯರ್ಥದ ಬಗ್ಗೆ ಮಾತನಾಡಿದ್ದರು. ಆದರೆ, ಅದು ಅಧಿಕೃತ ಭೇಟಿಯಾಗಿರಲಿಲ್ಲ” ಎಂಬುದನ್ನು ಜೇಟ್ಲಿ ಅವರು ಸ್ಪಷ್ಟನೆಯಲ್ಲೂ ಹೇಳಿಕೊಂಡಿದ್ದಾರೆ. ಆದರೆ, ಸಾಲ ಬಾಕಿ ಇತ್ಯರ್ಥದ ಬಗ್ಗೆ ಮಾತನಾಡಲು ಉದ್ಯಮಿ ಮಲ್ಯ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿದ್ದಂತೂ ನಿಜ.

ಮಲ್ಯ- ಜೇಟ್ಲಿ ಭೇಟಿ ಬೆಳವಣಿಗೆಯ ಬಗ್ಗೆ ಏಳುವ ಸಹಜ ಪ್ರಶ್ನೆಗಳಿವು:

  • ಮಲ್ಯ ದೇಶ ಬಿಡುವುದಕ್ಕೂ ಮುನ್ನಾ ದೊಡ್ಡ ಸಾಲದ ಹೊರೆ ಆತನ ತಲೆಯ ಮೇಲಿದೆ ಎಂಬುದು ಹಣಕಾಸು ಸಚಿವರಾಗಿದ್ದ ಜೇಟ್ಲಿ ಅವರಿಗೆ ಗೊತ್ತೇ ಇರಲಿಲ್ಲವೇ?
  • ಮಲ್ಯ ದೇಶ ಬಿಡುವುದಕ್ಕೂ ಮುನ್ನಾ ತಮ್ಮನ್ನು ಭೇಟಿಯಾಗಿದ್ದ ವಿಷಯವನ್ನು ಜೇಟ್ಲಿ ಇಷ್ಟೂ ದಿನ ಮುಚ್ಚಿಟ್ಟಿದ್ದೇಕೆ?
  • ಒಂದು ವೇಳೆ ಸಂಸತ್‌ನಲ್ಲಿನ ಭೇಟಿ ಅಧಿಕೃತವಾಗಿಲ್ಲದಿದ್ದರೆ ಅಧಿಕೃತವಾಗಿ ಭೇಟಿಯಾಗಿ ಸಾಲ ಇತ್ಯರ್ಥ ವಿಚಾರವನ್ನು ಚರ್ಚಿಸುವ ಬಗ್ಗೆ ಹಣಕಾಸು ಸಚಿವ ಜೇಟ್ಲಿ ಏಕೆ ಮನಸ್ಸು ಮಾಡಲಿಲ್ಲ?
  • ದೊಡ್ಡ ಸಾಲದ ಹೊರೆ ಹೊತ್ತಿದ್ದ ಮಲ್ಯ ತಾವು ದೇಶ ಬಿಡುವ ಸೂಚನೆ ನೀಡಿದ್ದರೂ ಈ ಬಗ್ಗೆ ಜೇಟ್ಲಿ ಜಾಣ ಕಿವುಡು, ಜಾಣ ಕುರುಡು ತೋರಿದ್ದು ಯಾಕೆ?
  • ದೊಡ್ಡ ಉದ್ಯಮಿಯೊಬ್ಬ ಸಾವಿರಾರು ಕೋಟಿ ಸಾಲ ಹೊತ್ತಿರುವ ಸಂದರ್ಭದಲ್ಲಿ ತಾನು ದೇಶ ಬಿಡುತ್ತೇನೆ ಎಂದು ಹೇಳುವಾಗಲೂ ಅದು ಅಧಿಕೃತ ಭೇಟಿಯ ಮಾತುಕತೆಯಲ್ಲ ಎಂದು ಜೇಟ್ಲಿ ಹೊಣೆಗೇಡಿತನ ಪ್ರದರ್ಶಿಸಿದ್ದೇಕೆ?
  • ಅಧಿಕೃತವೋ, ಅನಧಿಕೃತವೋ ಮಲ್ಯ ಸಾಲದ ಇತ್ಯರ್ಥಕ್ಕಾಗಿ ಜೇಟ್ಲಿ ಬಳಿ ಮಾತನಾಡಲು ಪ್ರಯತ್ನಿಸಿರುವುದಂತೂ ನಿಜ. ಹಾಗಿದ್ದರೆ ಜೇಟ್ಲಿ ಈ ವಿಚಾರವನ್ನು ತಮ್ಮ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೇ?
  • ಜೇಟ್ಲಿ ಈ ವಿಚಾರವನ್ನು ಹಣಕಾಸು ಇಲಾಖೆಯ ಅಧಿಕಾರಿಗಳ ಮೂಲಕ ಬ್ಯಾಂಕ್‌ಗಳ ಗಮನಕ್ಕೆ ತರಬಹುದಿತ್ತಲ್ಲವೇ?

ಈ ಎಲ್ಲಾ ಪ್ರಶ್ನೆಗಳಿಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ ಉತ್ತರ ನೀಡಬೇಕಿದೆ. ಜತೆಗೆ ‘ಅರ್ಧಸತ್ಯ’, ‘ಪೂರ್ಣಸತ್ಯ’ಗಳ ಪಾಠ ಹೇಳುತ್ತಿರುವ ಶಾಸಕ ಸುರೇಶ್‌ ಕುಮಾರ್‌ ಅವರೂ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ ಪೂರ್ಣಸತ್ಯ ‘ಶೋಧಿಸುವ’ ಪ್ರಯತ್ನ ಮಾಡಬೇಕಿದೆ.