ಇಂಧನ ಬೆಲೆ ಏರಿಕೆ ವಿರೋಧಿಸಿ ನಾಳೆ ‘ಭಾರತ್‌ ಬಂದ್‌’; ರಾಜ್ಯ ಸರಕಾರದ ಬೆಂಬಲ
ಸುದ್ದಿ ಸಾಗರ

ಇಂಧನ ಬೆಲೆ ಏರಿಕೆ ವಿರೋಧಿಸಿ ನಾಳೆ ‘ಭಾರತ್‌ ಬಂದ್‌’; ರಾಜ್ಯ ಸರಕಾರದ ಬೆಂಬಲ

ನಾಳಿನ ಭಾರತ್‌ ಬಂದ್‌ಗೆ ರಾಜ್ಯ ಸರಕಾರ ಬೆಂಬಲ ಘೋಷಿಸಿದೆ. ಹೀಗಾಗಿ ನಾಳೆ ರಾಜ್ಯದ ಜನಜೀವನ ಸ್ತಬ್ಧವಾಗುವ ಸಾಧ್ಯತೆ ಇದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಿರೋಧ ಪಕ್ಷಗಳು, ಕಾರ್ಮಿಕ ಸಂಘಟನೆಗಳು ನಾಳೆ (ಸೆಪ್ಟೆಂಬರ್ 10) ಭಾರತ್‌ ಬಂದ್‌ಗೆ ಕರೆ ಕೊಟ್ಟಿವೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸೇರಿದಂತೆ ಹಲವು ಸಂಘಟನೆಗಳು ಬಂದ್‌ ಬೆಂಬಲಿಸಿವೆ.

“ಬಂದ್‌ಗೆ ಸರಕಾರದ ಸಂಪೂರ್ಣ ಬೆಂಬಲ ಇದೆ” ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯದಲ್ಲಿ ಬಂದ್‌ಗೆ ಸರಕಾರವೇ ಬೆಂಬಲ ನೀಡಿರುವುದರಿಂದ ಸರಕಾರಿ ಬಸ್‌ ಸಂಚಾರ ಸ್ಥಗಿತಗೊಳ್ಳಲಿದ್ದು, ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವುದು ಅನುಮಾನವಿದೆ. ಬ್ಯಾಂಕ್‌ಗಳು, ವಿಮಾ ಕಂಪೆನಿಗಳು ಸೇರಿದಂತೆ ಹಲವು ಖಾಸಗಿ ಕಚೇರಿಗಳು ಸಹ ನಾಳೆ ರಜೆ ಇರಲಿವೆ.

Also read: ‘ಸತ್ತಂತಿಹ ವಿರೋಧ ಪಕ್ಷಗಳನ್ನು ಬಡಿದೆಚ್ಚರಿಸಿ’: ಇಂಧನ ಬೆಲೆ ಏರುತ್ತಿದ್ದರೂ ಏಳದ ಜನಾಕ್ರೋಶ

ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಿಸುವುದನ್ನು ಆಯಾ ಜಿಲ್ಲಾಧಿಕಾರಿಗಳ ವಿವೇಚನೆ ಬಿಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಕಲಬುರ್ಗಿ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಾಲೆಗಳಿಗೆ ನಾಳೆ ರಜೆ ಘೋಷಿಸಿವೆ.

ಬಂದ್‌ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು, ಆಟೊಗಳು, ಓಲಾ ಮತ್ತು ಉಬರ್ ಕ್ಯಾಬ್‌ಗಳ ಸಂಚಾರ ರದ್ದಾಗಲಿದೆ. ಪರಿಸ್ಥಿತಿ ನೋಡಿಕೊಂಡು ಕಾರ್ಯಾಚರಣೆ ನಡೆಸಲು ಮೆಟ್ರೊ ನಿಗಮ ನಿರ್ಧರಿಸಿದೆ. ಆಸ್ಪತ್ರೆಗಳು, ಔಷಧ ಮಳಿಗೆಗಳು, ಆಂಬುಲೆನ್ಸ್‌ ಸೇರಿದಂತೆ ತುರ್ತು ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ಇದೆ.