ಸಲಿಂಗಕಾಮ ಸಿಂಧು, ಸೆಕ್ಷನ್‌ 377 ಅಸಿಂಧು: ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು
ಸುದ್ದಿ ಸಾಗರ

ಸಲಿಂಗಕಾಮ ಸಿಂಧು, ಸೆಕ್ಷನ್‌ 377 ಅಸಿಂಧು: ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು

ಐಪಿಸಿ ಸೆಕ್ಷನ್‌ 377ರಡಿ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ.

ಸಲಿಂಗಕಾಮ ಅಪರಾಧವಲ್ಲ ಎಂದಿರುವ ಸುಪ್ರೀಂಕೋರ್ಟ್ 158 ವರ್ಷಗಳಷ್ಟು ಹಳೆಯದಾದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಕುರಿತಂತೆ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಟನ್‌ ಎಫ್‌. ನಾರಿಮನ್‌, ಎ.ಎಮ್‌. ಖಾನ್ವೀಲ್ಕರ್‌, ಡಿ.ವೈ. ಚಂದ್ರಚೂಡ್‌ ಹಾಗೂ ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು ಈ ಮೈಲುಗಲ್ಲಿನ ಸಹಮತದ ತೀರ್ಪು ನೀಡಿದೆ. “ಸಾಮಾಜಿಕ ಕಟ್ಟುಪಾಡುಗಳ ಹೆಸರಿನಲ್ಲಿ ವೈಯಕ್ತಿಕ ಹಕ್ಕುಗಳನ್ನು ಕಡೆಗಣಿಸುವುದು ಸರಿಯಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

“ವೈವಿಧ್ಯತೆಯನ್ನು ಗೌರವಿಸಬೇಕು. ಸಲಿಂಗಕಾಮ ಅಪರಾಧ ಎನ್ನುವ ಸೆಕ್ಷನ್‌ 377ರ ಹಿಂದೆ ಯಾವುದೇ ತರ್ಕವಿಲ್ಲ. ಸಲಿಂಗಕಾಮಿಗಳಿಗೂ ಗೌರವದಿಂದ ಬದುಕುವ ಹಕ್ಕಿದೆ. ಅವರ ಹಕ್ಕನ್ನೂ ಇತರರು ಗೌರವಿಸಬೇಕು” ಎಂದು ನ್ಯಾಯಪೀಠ ಹೇಳಿದೆ.

ಈವರೆಗೂ ಭಾರತದಲ್ಲಿ ಐಪಿಸಿ ಸೆಕ್ಷನ್‌ 377ರ ಪ್ರಕಾರ ಸಲಿಂಗಕಾಮ ಅಪರಾಧವಾಗಿತ್ತು. ಸಲಿಂಗಕಾಮವನ್ನು ಅಸ್ವಾಭಾವಿಕ ಎಂದು ಕರೆದಿದ್ದ ಈ ಸೆಕ್ಷನ್‌, ‘ನಿಸರ್ಗಕ್ಕೆ ವಿರುದ್ಧವಾಗಿ ಯಾವುದೇ ವ್ಯಕ್ತಿಯು ಪುರುಷ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ’ ಎಂದು ಹೇಳಿತ್ತು. ಸೆಕ್ಷನ್‌ 377ರಡಿ ಈ ಅಪರಾಧಕ್ಕಾಗಿ ಹತ್ತು ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿತ್ತು.

ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದರಿಂದ ಸೆಕ್ಷನ್‌ 377ರ ಅಡಿಯಲ್ಲಿ ಇನ್ನುಮುಂದೆ ಸಲಿಂಗಕಾಮವನ್ನು ತರಲು ಅವಕಾಶವಿಲ್ಲ. ಆದರೆ, ಪ್ರಾಣಿಗಳೊಂದಿಗೆ ಹಾಗೂ ಸಂಗಾತಿಯ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸುವುದು ಈ ಸೆಕ್ಷನ್‌ ಕೆಳಗೆ ಅಪರಾಧವಾಗಿಯೇ ಮುಂದುವರಿಯಲಿದೆ. ಹೀಗಾಗಿ ಸೆಕ್ಷನ್‌ 377ಅನ್ನು ಸುಪ್ರೀಂಕೋರ್ಟ್‌ ಸಂಪೂರ್ಣವಾಗಿ ರದ್ದುಗೊಳಿಸಿಲ್ಲ.

ಸೆಕ್ಷನ್ 377– ಸಂವಿಧಾನದ 14, 16 ಹಾಗೂ 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಆದರೆ ಈ ಕುರಿತ ಕಾನೂನು ತಿದ್ದುಪಡಿ ಮಾಡುವುದು ಸಂಸತ್‌ಗೆ ಸೇರಿದ್ದು ಎಂದಿದ್ದ ಸುಪ್ರೀಂಕೋರ್ಟ್ 2013ರಲ್ಲಿ ದೆಹಲಿ ಹೈಕೋರ್ಟ್‌ನ ಈ ತೀರ್ಪನ್ನು ರದ್ದುಗೊಳಿಸಿತ್ತು.

ಸಲಿಂಗಕಾಮವನ್ನು ಅಪರಾಧ ವ್ಯಾಖ್ಯೆಗೆ ಮರಳಿ ತಂದ ಸುಪ್ರೀಂಕೋರ್ಟ್‌ನ 2013ರ ತೀರ್ಪಿನ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿ ನಾಯಕ ಅರುಣ್ ಜೇಟ್ಲಿ ಮೊದಲಾದವರು ಟೀಕಿಸಿದ್ದರು. ಸಲಿಂಗಕಾಮವನ್ನು ಅಪರಾಧ ವ್ಯಾಖ್ಯೆಯಿಂದ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಸಂಸದ ಶಶಿ ತರೂರ್ ಮಂಡಿಸಿದ್ದ ಖಾಸಗಿ ಮಸೂದೆಯು ಲೋಕಸಭೆಯಲ್ಲಿ ಬಹುಮತ ಸಿಗದೆ ಸೋಲು ಕಂಡಿತ್ತು. ‘ಸಲಿಂಗಕಾಮ ಅನೈಸರ್ಗಿಕ’ ಎಂದು ಬಿಜೆಪಿಯ ರಾಜನಾಥ್ ಸಿಂಗ್ ಹಾಗೂ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ಮೊದಲಾದವರು ಆಗ ವಾದಿಸಿದ್ದರು.

ಖಾಸಗಿತನದ ಹಕ್ಕು, ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು. ಲೈಂಗಿಕತೆಯೂ ಖಾಸಗಿ ವಿಚಾರವಾದ್ದರಿಂದ ಸೆಕ್ಷನ್ 377 ಅನ್ನು ರದ್ದುಗೊಳಿಸಬೇಕು ಎಂದು ಸಲಿಂಗಕಾಮಿಗಳು ವಾದಿಸಿದ್ದರು. “ಲೈಂಗಿಕತೆ ಎಂಬುದು ಖಾಸಗಿತನದ ಅಗತ್ಯ ಅಂಶ. ಲೈಂಗಿಕತೆಯ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡುವುದು ವ್ಯಕ್ತಿಯ ಘನತೆಗೆ ಧಕ್ಕೆ ತರುವಂತಹದ್ದು” ಎಂದು ಖಾಸಗಿತನದ ಹಕ್ಕಿನ ತೀರ್ಪಿನಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದರು.

158 ವರ್ಷಗಳ ಹಿಂದೆ ಭಾರತೀಯ ದಂಡ ಸಂಹಿತೆಯನ್ನು ಭಾರತಕ್ಕೆ ನೀಡಿದ ಬ್ರಿಟಿಷರ ನಾಡಿನಲ್ಲೇ ಈಗ ಸಲಿಂಗಕಾಮ ಅಪರಾಧವಾಗಿ ಉಳಿದಿಲ್ಲ. ಹೀಗಾಗಿ ಭಾರತದಲ್ಲಿ ಸಲಿಂಗಕಾಮ ಅಪರಾಧ ಎನ್ನುವ ಸೆಕ್ಷನ್‌ 377 ಅನ್ನು ರದ್ದುಗೊಳಿಸಬೇಕು ಎಂದು ಸಲಿಂಗಕಾಮಿಗಳು ದೇಶದಾದ್ಯಂತ ಹೋರಾಟ ನಡೆಸಿದ್ದರು. ಈಗ ಸುಪ್ರೀಂಕೋರ್ಟ್‌ನ ತೀರ್ಪಿನಿಂದ ಸಲಿಂಗಕಾಮಿಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.