ಗೌರಿ ಲಂಕೇಶ್‌ ನೆನಪು ಬಿತ್ತಿದ ‘ಗೌರಿ ದಿನ’; ಅಭಿವ್ಯಕ್ತಿ ಹತ್ತಿಕ್ಕುವ ಶಕ್ತಿಗಳ ವಿರುದ್ಧ ಆಕ್ರೋಶ
ಸುದ್ದಿ ಸಾಗರ

ಗೌರಿ ಲಂಕೇಶ್‌ ನೆನಪು ಬಿತ್ತಿದ ‘ಗೌರಿ ದಿನ’; ಅಭಿವ್ಯಕ್ತಿ ಹತ್ತಿಕ್ಕುವ ಶಕ್ತಿಗಳ ವಿರುದ್ಧ ಆಕ್ರೋಶ

ಇಡೀ ದಿನ ನಡೆದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಅಭಿವ್ಯಕ್ತಿ ದಮನಕ್ಕೆ ನಡೆಯುತ್ತಿರುವ ಸಂಚು ಹಾಗೂ ಐದು ಮಂದಿ ಸಾಮಾಜಿಕ ಕಾರ್ಯಕರ್ತರ ಬಂಧನವನ್ನು ಖಂಡಿಸಲಾಯಿತು.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ ಒಂದು ವರ್ಷ. ಗೌರಿ ಲಂಕೇಶ್‌ ನೆನಪಿನಲ್ಲಿ ‘ಗೌರಿ ಲಂಕೇಶ್‌ ಬಳಗ’ ಮತ್ತು ‘ಗೌರಿ ಮೆಮೋರಿಯಲ್ ಟ್ರಸ್ಟ್‌’ ಬೆಂಗಳೂರಿನಲ್ಲಿ ‘ಗೌರಿ ದಿನ’ ಆಯೋಜಿಸಿತ್ತು. ಇಡೀ ದಿನದ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್‌ ಸ್ಮರಣೆಯ ಜತೆಗೆ ಅಭಿವ್ಯಕ್ತಿ ಹತ್ತಿಕ್ಕುವವರ ವಿರುದ್ಧ ಲೇಖಕರು, ಚಿಂತಕರು, ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ ಗೌರಿ ಸಮಾಧಿ ಬಳಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೌರ್ಯ ಹೋಟೆಲ್‌ ಬಳಿ ಗಾಂಧಿ ಪ್ರತಿಮೆ ಎದುರು ಹಕ್ಕೊತ್ತಾಯ ಕಾರ್ಯಕ್ರಮ ನಡೆಯಿತು. ‘ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು. ಸನಾತನ ಸಂಸ್ಥೆಯ ಚಟುವಟಿಕೆಗಳನ್ನು ನಿಷೇಧಿಸಬೇಕು. ಈ ಸಂಸ್ಥೆಯ ನಾಯಕರನ್ನು ಬಂಧಿಸಬೇಕು’ ಎಂದು ಒತ್ತಾಯಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿ ಅಗ್ನಿವೇಶ್‌, “ಬಡವರು, ಆದಿವಾಸಿಗಳು, ರೈತರ ಪರವಾಗಿ ಧ್ವನಿಯೆತ್ತುವವರನ್ನು ನಗರದ ನಕ್ಸಲರು ಎಂದು ಕರೆಯುವುದಾದರೆ ನಾವೂ ನಗರದ ನಕ್ಸಲರೇ. ನಮ್ಮ ಮಾತಿಗೆ ನೀವು ಬುಲೆಟ್‌ ಮೂಲಕ ಪ್ರತಿಕ್ರಿಯಿಸಿದರೆ ನಾವು ಬ್ಯಾಲೆಟ್‌ (ಮತದಾನ) ಮೂಲಕ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಹೇಳಿದರು.

“ಆರ್‌ಎಸ್‌ಎಸ್‌ ಎಂದರೆ ಬಹುಮುಖಿ ರಾಕ್ಷಸ ಇದ್ದಂತೆ. ಬೇರೆ ಬೇರೆ ಹೆಸರುಗಳಲ್ಲಿ ಆರ್‌ಎಸ್‌ಎಸ್‌ ಅಸ್ತಿತ್ವ ಇದೆ. ಅದರ ನಾಯಕ ಹಿಟ್ಲರ್‌. ಈ ಸಂಘಟನೆಯ ನಾಯಕರೆಲ್ಲಾ ಅದೇ ತತ್ವವನ್ನು ಪಾಲಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನದ್ದು ರಾಜಕೀಯ ಹಿಂದುತ್ವ. ಹಿಂದೂಗಳ ಏಕತೆ ಬಗ್ಗೆ ಮಾತನಾಡುವವರಿಗೆ ದಾಬೋಲ್ಕರ್‌, ಗೋವಿಂದರಾವ್‌ ಪಾನ್ಸರೆ, ಎಂ.ಎಂ.ಕಲಬುರ್ಗಿ ಹಿಂದೂಗಳಾಗಿ ಕಾಣಲಿಲ್ಲವೇ” ಎಂದು ಸ್ವಾಮಿ ಅಗ್ನಿವೇಶ್‌ ಪ್ರಶ್ನಿಸಿದರು.

“ದ್ವೇಷ ಮತ್ತು ಹಿಂಸೆಗೆ ಧರ್ಮ ರಕ್ಷಣೆ ಹೆಸರಿನಲ್ಲಿ ಈಗ ಪ್ರಭುತ್ವದ ಬೆಂಬಲ ಸಿಗುತ್ತಿದೆ. ದ್ವೇಷಕ್ಕೆ ಪ್ರಭುತ್ವದ ಬೆಂಬಲ ಸಿಕ್ಕಿದರೆ ಆಗುವ ಅನಾಹುತಗಳನ್ನು ನಾಲ್ಕು ವರ್ಷಗಳಿಂದ ನೋಡುತ್ತಿದ್ದೇವೆ. ನಮಗೆ ಪ್ರೀತಿಯ ಭಾರತ ಬೇಕು, ದ್ವೇಷದ ಭಾರತ ಅಲ್ಲ” ಎಂದು ಲೇಖಕ ಪ್ರೊ. ರಹಮತ್‌ ತರೀಕೆರೆ ಹೇಳಿದರು.

ರಾಜಭವನ ಚಲೋ ಬಳಿಕ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ’ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯಕರ್ತರು, ಲೇಖಕರು, ಪತ್ರಕರ್ತರು, ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಅಭಿವ್ಯಕ್ತಿ ದಮನಕ್ಕೆ ನಡೆಯುತ್ತಿರುವ ಸಂಚು ಹಾಗೂ ನಗರ ನಕ್ಸಲರ ಹೆಸರಿನಲ್ಲಿ ಐದು ಮಂದಿ ಸಾಮಾಜಿಕ ಕಾರ್ಯಕರ್ತರ ಬಂಧನವನ್ನು ಸಮಾವೇಶದಲ್ಲಿ ಖಂಡಿಸಲಾಯಿತು.

ಅಂತಿಮ ಹಂತದಲ್ಲಿ ತನಿಖೆ:

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. “ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಗಿದಿದೆ. ತನಿಖೆ ಸದ್ಯ ಅಂತಿಮ ಹಂತದಲ್ಲಿದೆ. ಇನ್ನೆರಡು ತಿಂಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಿದ್ದೇವೆ” ಎಂದು ಎಸ್‌ಐಟಿ ತನಿಖಾಧಿಕಾರಿ ಎಂ.ಎನ್‌. ಅನುಚೇತ್‌ ಹೇಳಿದ್ದಾರೆ.