ಕೊಡಗಿಗೆ ಹಾರಂಗಿಯೇ ಅಪಾಯ: ಏನಿದು ಸಿಎನ್‌ಸಿ ಸಿಡಿಸಲು ಹೊರಟ ಬಾಂಬ್‌?
ಸುದ್ದಿ ಸಾಗರ

ಕೊಡಗಿಗೆ ಹಾರಂಗಿಯೇ ಅಪಾಯ: ಏನಿದು ಸಿಎನ್‌ಸಿ ಸಿಡಿಸಲು ಹೊರಟ ಬಾಂಬ್‌?

ಹಾರಂಗಿ ಜಲಾಶಯ ಕೊಡಗಿನ ಹೃದಯದ ಮೇಲೆ ಕುಳಿತಿರುವ ಜೀವಂತ ಆಟಂ ಬಾಂಬ್‌ ಎಂದಿರುವ ಸಿಎನ್‌ಸಿ ಜಲಾಶಯ ಕೆಡವಲು ಒತ್ತಾಯಿಸಿದೆ.

ಕೊಡಗಿನಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ದಿನಕ್ಕೊಂದೊಂದು ಕಾರಣಗಳು ಹುಟ್ಟಿಕೊಳ್ಳುತ್ತಲೇ ಇವೆ. ಈ ಕಾರಣಗಳ ಪಟ್ಟಿಗೆ ಈ ಹಾರಂಗಿ ಜಲಾಶಯವೂ ಸೇರಿದೆ. ಹಾರಂಗಿ ಜಲಾಶಯ ಕೊಡಗಿನ ಹೃದಯದ ಮೇಲೆ ಕುಳಿತಿರುವ ಜೀವಂತ ಆಟಂ ಬಾಂಬ್‌ ಎಂದಿರುವ ಕೊಡವ ನ್ಯಾಷನಲ್‌ ಕೌನ್ಸಿಲ್‌ (ಸಿಎನ್‌ಸಿ), ಹಾರಂಗಿ ಜಲಾಶಯವನ್ನು ಕಿತ್ತುಹಾಕಬೇಕು ಎಂದು ಆಗ್ರಹಿಸಿದೆ.

ಹಾರಂಗಿ ಜಲಾಶಯದ ಹಿನ್ನೀರಿನ ಒತ್ತಡದಿಂದ ದೊಡ್ಡ ಪ್ರಮಾಣದ ಭೂಕುಸಿತ ಉಂಟಾಗಿದೆ ಎಂದು ಸಿಎನ್‌ಸಿ ಹೇಳಿದೆ. “ಮೈಸೂರು ಭಾಗದ ಜನರ ನೀರಿನ ದಾಹ ತಣಿಸಲು 45 ವರ್ಷಗಳ ಹಿಂದೆ ಸ್ಥಳೀಯರ ವಿರೋಧದ ನಡುವೆಯೂ ಹಾರಂಗಿ ಜಲಾಶಯ ನಿರ್ಮಿಸಲಾಯಿತು. ಈ ಜಲಾಶಯದ ಹಿನ್ನೀರಿನ ತೀವ್ರ ಒತ್ತಡದಿಂದ ಹಾರಂಗಿಗೆ ನೀರು ತರುವ ಜಲನಾಶಗಳು ಸೀಳಿ ಹೋಗಿವೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಭಾರೀ ಮಳೆ ಅಥವಾ ಮರ ಕಡಿದಿರುವುದು ಭೂ ಕುಸಿತಕ್ಕೆ ಕಾರಣವಲ್ಲ” ಎಂಬುದು ಸಿಎನ್‌ಸಿ ವಾದ.

“ಕೊಡಗಿಗೆ ಅಪಾಯಕಾರಿಯಾಗಿರುವ ಹಾರಂಗಿ ಜಲಾಶಯವನ್ನು ಕಿತ್ತು ಹಾಕಬೇಕು. ವಿಕೋಪದಿಂದ ಸಂತ್ರಸ್ತರಾಗಿರುವವರಿಗೆ ತಲಾ 2 ಕೋಟಿ ರೂಪಾಯಿ ಪರಿಕಾರ ಕೊಡಬೇಕು. ತಾತ್ಕಾಲಿಕ ಪ್ಯಾಕೇಜ್‌ ಎಂದು ಒಂದು ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಈ ವಿಪತ್ತನ್ನು ನಿರ್ವಹಿಸಲು ಸರಕಾರಗಳಿಗೆ ಸಾಧ್ಯವಾಗದಿದ್ದರೆ ಕೊಡಗನ್ನು ನಮಗೆ ಬಿಟ್ಟುಕೊಡಿ. ನಮ್ಮದು ಸ್ವಾಯತ್ತ ಅಥವಾ ಕೇಂದ್ರಾಡಳಿತ ಪ್ರದೇಶವಾದರೆ ನಮ್ಮ ನೆಲೆಯನ್ನು ನಾವೇ ಪುನರ್‌ ನಿರ್ಮಿಸಿಕೊಳ್ಳುತ್ತೇವೆ” ಎಂದು ಸಿಎನ್‌ಸಿ ಹೇಳಿದೆ.

ಪ್ರತಿ ವರ್ಷ ಪ್ರತ್ಯೇಕ ಕೊಡಗಿನ ಬೇಡಿಕೆ ಇಡುತ್ತಿದ್ದ ಸಿಎನ್‌ಸಿ ಈ ವರ್ಷ ಅದರ ಜತೆಗೆ ನೈಸರ್ಗಿಕ ವಿಕೋಪ ಹಾಗೂ ಹಾರಂಗಿ ಜಲಾಶಯ ವಿಚಾರಗಳನ್ನೂ ಜತೆಗೆ ಎಳೆದು ತಂದಿದೆ. ಪ್ರತಿ ವರ್ಷವೂ ಕೊಡಗಿನ ಪ್ರತ್ಯೇಕತೆಯ ಮಾತನಾಡುವ ಸಿಎನ್‌ಸಿ ಅಧ್ಯಕ್ಷ ನಾಚಪ್ಪ ಕೊಡವ ಈ ಬಾರಿ ಸುದೀರ್ಘವಾಗಿ ಹಾರಂಗಿ ಜಲಾಶಯ ಕೆಡವಬೇಕೆನ್ನುವ ಹಾಗೂ ಸಂತ್ರಸ್ತರಿಗೆ ತಲಾ 2 ಕೋಟಿ ಪರಿಹಾರ ನೀಡಬೇಕೆನ್ನುವ ಒತ್ತಾಯಗಳನ್ನು ಮುಂದಿಟ್ಟಿದ್ದಾರೆ. ಆದರೆ, ವಾಸ್ತವದಲ್ಲಿ ಸಿಎನ್‌ಸಿ ವಾದಕ್ಕೆ ಕೊಡಗಿನ ಬಹುತೇಕರ ಬೆಂಬಲವಿಲ್ಲ.

ಕೊಡಗಿನಲ್ಲಿ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ನೋಡಿದರೆ ಕನ್ನಡ ಮಾತನಾಡುವವರ ಸಂಖ್ಯೆಯೇ ದೊಡ್ಡದಾಗಿದೆ. 2011ರ ಜನಗಣತಿ ಪ್ರಕಾರ ಸೋಮವಾರ ಪೇಟೆ ತಾಲ್ಲೂಕಿನಲ್ಲಿ ಕನ್ನಡ ಭಾಷಿಗರ ಸಂಖ್ಯೆ 55.66 % ಇದ್ದರೆ ಕೊಡವ ಭಾಷಿಗರ ಸಂಖ್ಯೆ 3.39 % ರಷ್ಟಿದೆ. ಮಡಿಕೇರಿಯಲ್ಲಿ ಕನ್ನಡ ಮಾತನಾಡುವವರು 15.70% ಇದ್ದರೆ, ಕೊಡವ ಭಾಷಿಗರ ಸಂಖ್ಯೆ 17.93% ಇದೆ. ವಿರಾಜಪೇಟೆಯಲ್ಲಿ ಮಾತ್ರ ಕೊಡವ ಭಾಷಿಗರು ಕನ್ನಡ ಭಾಷಿಗರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಲ್ಲಿ ಕನ್ನಡ ಭಾಷಿಗರು 21.40% ಇದ್ದರೆ, ಕೊಡವ ಭಾಷಿಗರು 24.38% ಇದ್ದಾರೆ.

ಈ ಅಂಕಿಅಂಶಗಳನ್ನು ನೋಡಿದರೆ ಕೊಡಗಿನಲ್ಲಿ ಕೊಡವ ಭಾಷೆ ಮಾತನಾಡುವವರು ಅಲ್ಪಸಂಖ್ಯಾತರೇ. ಆದರೂ ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಮೂರು ತಾಲ್ಲೂಕುಗಳ ಕೊಡಗು ಜಿಲ್ಲೆಯನ್ನು ಭೌಗೋಳಿಕ ಹಾಗೂ ಸಾಂಸ್ಕೃತಿಕ ಭಿನ್ನತೆಯ ಕಾರಣಕ್ಕೆ ಪ್ರತ್ಯೇಕ ರಾಜ್ಯ ಅಥವಾ ಪ್ರತ್ಯೇಕ ರಾಷ್ಟ್ರದ ಸ್ವಾಯತ್ತತೆ ನೀಡಬೇಕು ಎಂದು ಸಿಎನ್‌ಸಿ ಪ್ರತಿ ವರ್ಷವೂ ಒತ್ತಾಯಿಸುತ್ತಲೇ ಬರುತ್ತಿದೆ. ಈ ಒತ್ತಾಯವನ್ನು ಸಿಎನ್‌ಸಿ ಅಧ್ಯಕ್ಷ ನಾಚಪ್ಪ ಕೊಡವ ಪ್ರತಿ ವರ್ಷ ವ್ರತದಂತ ನಡೆಸಿಕೊಂಡು ಬರುತ್ತಿದ್ದಾರೆ!

“ಪ್ರತ್ಯೇಕ ಕೊಡಗಿನ ಬೇಡಿಕೆ ಕೇವಲ ಸಿಎನ್‌ಸಿ ಹಾಗೂ ನಾಚಪ್ಪ ಕೊಡವ ಅವರದ್ದು ಮಾತ್ರ. ಇಡೀ ಕೊಡಗಿನ ಜನಕ್ಕೆ ಪ್ರತ್ಯೇಕ ರಾಜ್ಯ ಅಥವಾ ಪ್ರತ್ಯೇಕ ರಾಷ್ಟ್ರಬೇಕಾಗಿಲ್ಲ. ಸಿಎನ್‌ಸಿ ಹೇಳುತ್ತಿರುವಂತೆ ಕೊಡಗಿನ ವಿಕೋಪಕ್ಕೆ ಹಾರಂಗಿಯೇ ನೇರ ಕಾರಣ ಎಂದು ಹೇಳಲು ಯಾವುದೇ ತರ್ಕವಿಲ್ಲ. ಹಾರಂಗಿಯಿಂದ ದೂರದಲ್ಲಿರುವ ಹೆಮ್ಮತ್ತಾಳು ಪ್ರದೇಶದಲ್ಲೂ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಹಾರಂಗಿಯಿಂದ ಕೊಡಗಿಗೆ ಹೆಚ್ಚಿನ ಉಪಯೋಗವಿಲ್ಲ ಎಂದು ಹಾರಂಗಿ ಜಲಾಶಯವನ್ನೇ ಕಿತ್ತು ಹಾಕಬೇಕೆನ್ನುವುದು ವಿತಂಡ ವಾದ” ಎನ್ನುತ್ತಾರೆ ಸೋಮವಾರಪೇಟೆಯ ಸ್ಥಳೀಯರೊಬ್ಬರು.

ಹಾರಂಗಿ ಜಲಾಶಯ ನಿರ್ಮಾಣದ ಸಂದರ್ಭದಲ್ಲೂ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದ ನೆನಪು ಕೊಡಗಿನ ಜನಕ್ಕೂ ಇಲ್ಲ. ಅಲ್ಲದೆ, ಹಾರಂಗಿ ಜಲಾಶಯದ ಹಿನ್ನೀರು ಇಡೀ ಕೊಡಗಿನ ಭೂ ಕುಸಿತಕ್ಕೆ ಕಾರಣ ಎಂಬ ಸಿಎನ್‌ಸಿ ವಾದದಲ್ಲೂ ಹುರುಳಿಲ್ಲ. ಏಕೆಂದರೆ, ಹಾರಂಗಿ ಜಲಾಶಯದಿಂದ ಸಾಕಷ್ಟು ದೂರದಲ್ಲಿರುವ ಪ್ರದೇಶಗಳಲ್ಲೂ ಭೂ ಕುಸಿತ ಉಂಟಾಗಿದೆ.

ಪ್ರತ್ಯೇಕ ಕೊಡಗಿನ ಬೇಡಿಕೆಗೆ ಸಿಎನ್‌ಸಿ ಈ ಬಾರಿ ನೈಸರ್ಗಿಕ ವಿಕೋಪ ಹಾಗೂ ಹಾರಂಗಿ ಜಲಾಶಯದ ಬಾಂಬ್‌ ಸಿಡಿಸಲು ಯತ್ನಿಸಿದೆ. ಆದರೆ, ತರ್ಕವಿಲ್ಲದ ವಾದದ ಮೂಲಕ ಸಿಡಿಸಲು ಹೊರಟ ಈ ಬಾಂಬ್‌ ಟುಸ್‌ ಆಗಿದೆ. ಈ ಮೂಲಕ ಪ್ರತಿ ವರ್ಷದಂತೆ ಈ ವರ್ಷವೂ ಈ ಸಿಎನ್‌ಸಿಯ ‘ಪ್ರತ್ಯೇಕ ಹೋರಾಟ’ ಸದ್ದಿಲ್ಲದೆ ಮುಗಿದು ಹೋಗಿದೆ.