samachara
www.samachara.com
ಭಾರತದಲ್ಲಿ ಔದ್ಯೋಗಿಕ ತಾರತಮ್ಯ; ದಿನಗೂಲಿಯಲ್ಲಿನ್ನೂ ಮಹಿಳೆಗೆ 2ನೇ ದರ್ಜೆ
ಸುದ್ದಿ ಸಾಗರ

ಭಾರತದಲ್ಲಿ ಔದ್ಯೋಗಿಕ ತಾರತಮ್ಯ; ದಿನಗೂಲಿಯಲ್ಲಿನ್ನೂ ಮಹಿಳೆಗೆ 2ನೇ ದರ್ಜೆ

ಅಸಂಘಟಿತ ವಲಯದ ಮಹಿಳಾ ಕಾರ್ಮಿಕರು ಪುರುಷರಿಗಿಂತ ಕಡಿಮೆ ದಿನಗೂಲಿ ಪಡೆಯುತ್ತಿದ್ದಾರೆ. ಲಿಂಗ ತಾರತಮ್ಯ ಭಾರತದಲ್ಲಿ ಹೀಗೂ ಮುಂದುವರಿದಿದೆ.

ಭಾರತದಲ್ಲಿ ಲಿಂಗ ತಾರತಮ್ಯಕ್ಕೆ ತುದಿಮೊದಲು ಎಂಬುದಿಲ್ಲ. ಮನೆಯಿಂದ ಹಿಡಿದು ಕಚೇರಿವರೆಗೆ, ಉದ್ಯೋಗದಲ್ಲಿ ಸಂಘಟಿತ ವಲಯದಿಂದ ಅಸಂಘಟಿತ ವಲಯದವರೆಗೆ ಮಹಿಳೆಯನ್ನು ಎರಡನೇ ದರ್ಜೆ ನಾಗರಿಕರಂತೆಯೇ ಕಾಣಲಾಗುತ್ತಿದೆ. ಸಂಬಳದ ವಿಚಾರದಲ್ಲೂ ಮಹಿಳೆಯರು ತಾರತಮ್ಯಕ್ಕೆ ಒಳಗಾಗುತ್ತಲೇ ಇದ್ದಾರೆ. ಭಾರತದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಮಹಿಳೆಯರು ಪಡೆಯುತ್ತಿರುವ ವೇತನ ಈ ವಲಯದ ಪುರುಷರಿಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ.

ಕೃಷಿ ಕಾರ್ಮಿಕರಾಗಿ, ನಿರ್ಮಾಣ ವಲಯದ ಕಾರ್ಮಿಕರಾಗಿ ಹಾಗೂ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿರುವವರಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಪಡೆಯುತ್ತಿರುವ ಸಂಬಳ ಶೇಕಡ 22ರಿಂದ 39ರಷ್ಟು ಅಂತರವಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಇತ್ತೀಚಿನ ಅಧ್ಯಯನ ವರದಿಯೊಂದು ಹೇಳಿದೆ.

ಅಸಂಘಟಿತ ವಲಯದಲ್ಲಿ ವರ್ಷದಿಂದ ವರ್ಷಕ್ಕೆ ದಿನಗೂಲಿ ಹಾಗೂ ಸಂಬಳದಲ್ಲಿ ಏರಿಕೆ ಕಾಣುತ್ತಿದೆ. ಆದರೆ, ಈ ಏರಿಕೆ ಜತೆಗೆ ಮಹಿಳೆಯರಿಗೆ ನೀಡುತ್ತಿರುವ ಕೂಲಿ ಹಣದ ಅಂತರವೂ ಹೆಚ್ಚುತ್ತಿದೆ ಎನ್ನುತ್ತದೆ ಈ ಅಧ್ಯಯನ ವರದಿ.

ಈ ವರದಿಯ ಪ್ರಕಾರ, 2011-12ರ ವೇಳೆಗೆ ಭಾರತದ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ ದಿನಗೂಲಿಯಲ್ಲಿ ಏರಿಕೆ ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ ದಿನಗೂಲಿ 175 ರೂಪಾಯಿ ಇದ್ದರೆ, ನಗರ ಪ್ರದೇಶದಲ್ಲಿ ಈ ಪ್ರಮಾಣ ದುಪ್ಪಟ್ಟಾಗಿದೆ. ನಗರ ಪ್ರದೇಶದಲ್ಲಿ ದಿನಗೂಲಿ 384 ರೂಪಾಯಿಯಷ್ಟಿದೆ. ದೇಶದ ಸರಾಸರಿ ದಿನಗೂಲಿ ಪ್ರಮಾಣ 247 ರೂಪಾಯಿಯಷ್ಟಿದೆ ಎಂದು ಈ ವರದಿ ಹೇಳಿದೆ.

ವರ್ಷದಿಂದ ವರ್ಷಕ್ಕೆ ದಿನಗೂಲಿ ಪ್ರಮಾಣ ಏರಿಕೆಯಾಗುತ್ತಲೇ ಇದ್ದರೂ ಮಹಿಳಾ ಕಾರ್ಮಿಕರು ಸಮಾನ ಕೂಲಿ ಪಡೆಯಲಾಗುತ್ತಿಲ್ಲ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಮಹಿಳೆಯರ ಸಂಬಳದ ತಾರತಮ್ಯ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರ ದಿನಗೂಲಿಯಲ್ಲಿ ತಾರತಮ್ಯದ ಅಂತರ ಸಾಕಷ್ಟು ಹೆಚ್ಚಾಗಿದೆ.

ನಗರ ಪ್ರದೇಶದಲ್ಲಿ ಅಸಂಘಟಿತ ವಲಯದ ಪುರುಷರ ದಿನಗೂಲಿ ಸರಾಸರಿ 470 ರೂಪಾಯಿ ಇದ್ದರೆ, ಮಹಿಳೆಯರ ದಿನಗೂಲಿ 365 ರೂಪಾಯಿಯಷ್ಟಿದೆ. ಗ್ರಾಮೀಣ ಭಾಗದಲ್ಲಿ ಪುರುಷರ ಸರಾಸರಿ ದಿನಗೂಲಿ 324 ರೂಪಾಯಿ ಇದ್ದರೆ, ಮಹಿಳೆಯರ ದಿನಗೂಲಿ 201 ರೂಪಾಯಿಯಷ್ಟಿದೆ. ಇನ್ನು ಕೌಶಲವಿಲ್ಲದ ಕಾರ್ಮಿಕರ ಕೂಲಿ ನೋಡಿದರೆ ನಗರ ಪ್ರದೇಶದಲ್ಲಿ ಪುರುಷರ ದಿನಗೂಲಿ ಸರಾಸರಿ 184 ರೂಪಾಯಿ ಇದ್ದರೆ, ಮಹಿಳೆಯರ ದಿನಗೂಲಿ 112 ರೂಪಾಯಿಯಷ್ಟಿದೆ. ಗ್ರಾಮೀಣ ಭಾಗದ ಕೌಶಲವಿಲ್ಲದ ಕಾರ್ಮಿಕರ ದಿನಗೂಲಿ ನೋಡಿದರೆ ಪುರುಷರು ಸರಾಸರಿ 151 ರೂಪಾಯಿ ಇದ್ದರೆ, ಮಹಿಳೆಯರ ದಿನಗೂಲಿ 104 ರೂಪಾಯಿಯಷ್ಟಿದೆ.

ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ವಲಯದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ. ಆದರೆ, ಮಹಿಳೆಯರಿಗೆ ಪುರುಷರಿಗೆ ಸಿಗುವಷ್ಟು ದಿನಗೂಲಿ ಸಿಗುತ್ತಿಲ್ಲ. ಕೌಶಲವಿಲ್ಲದ ಕಾರಣ ನೀಡಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಪುರುಷರಿಗೆ ನೀಡುವಷ್ಟು ದಿನಗೂಲಿ ನೀಡುತ್ತಿಲ್ಲ.

ಬಡತನ, ಶಿಕ್ಷಣದ ಕೊರತೆ, ಸಾಮಾಜಿಕ ಕಾರಣಗಳಿಂದಾಗಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರು ಇಂದಿಗೂ ತಮ್ಮ ಹಕ್ಕುಗಳ ಅರಿವಿಲ್ಲದೆ ಕಡಿಮೆ ದಿನಗೂಲಿ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೃಷಿ ಕೂಲಿ ಹಾಗೂ ನಗರ ಪ್ರದೇಶದಲ್ಲಿ ಮನೆಗೆಲಸ, ಕಟ್ಟಡ ನಿರ್ಮಾಣ, ಗುತ್ತಿಗೆ ಪೌರ ಕಾರ್ಮಿಕರಾಗಿ ದುಡಿಯುತ್ತಿರುವ ಸಾಕಷ್ಟು ಮಹಿಳೆಯರು ಕಡಿಮೆ ಕೂಲಿ ಪಡೆಯುತ್ತಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮ ದೇಶದಲ್ಲಿ ಇನ್ನೂ ಅಸಂಘಟಿತ ವಲಯದ ಕಾರ್ಮಿಕರಿಗೆ ಅನ್ವಯವೇ ಆಗಿಲ್ಲ. ಅಸಂಘಟಿತ ವಲಯದ ಕಾರ್ಮಿಕರ ಪೈಕಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವಷ್ಟು ಇನ್ನೂ ಜಾಗೃತರಾಗಿಲ್ಲ. ಹೀಗಾಗಿ ದೇಶದಲ್ಲಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರು ಇಂದಿಗೂ ಕಡಿಮೆ ಸಂಬಳಕ್ಕೆ ದುಡಿಯುವಂತಾಗಿದೆ.