ಶಿಕ್ಷಣಕ್ಕಾಗಿ ಹೆಚ್ಚಿದ ಭಾರತೀಯರ ವಲಸೆ; ವಿದೇಶಗಳಿಂದ ಇಲ್ಲಿಗಿಲ್ಲ ಹೆಚ್ಚಿನ ವಿದ್ಯಾರ್ಥಿಗಳು
ಸುದ್ದಿ ಸಾಗರ

ಶಿಕ್ಷಣಕ್ಕಾಗಿ ಹೆಚ್ಚಿದ ಭಾರತೀಯರ ವಲಸೆ; ವಿದೇಶಗಳಿಂದ ಇಲ್ಲಿಗಿಲ್ಲ ಹೆಚ್ಚಿನ ವಿದ್ಯಾರ್ಥಿಗಳು

ಉನ್ನತ ವಿದ್ಯಾಭ್ಯಾಸಕ್ಕೆಂದು ವಿದೇಶದತ್ತ ತೆರಳುತ್ತಿರುವ ಭಾರತೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಶಿಕ್ಷಣಕ್ಕಾಗಿ ಭಾರತಕ್ಕೆ ಬರುವ ವಿದೇಶಿಗರ ಸಂಖ್ಯೆ ಮಾತ್ರ ಕುಸಿಯುತ್ತಿದೆ. 

ದೇಶದ ಸರಕಾರಗಳು ಉನ್ನತ ಶಿಕ್ಷಣವನ್ನು ಸಧೃಡಗೊಳಿಸಿ, ಯುವಜನತೆಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳುತ್ತಲೇ ಬರುತ್ತಿವೆ. ಆದರೆ ದಿನದಿಂದ ದಿನಕ್ಕೆ ಉನ್ನತ ಶಿಕ್ಷಣವನ್ನು ಅರಸಿ ವಿದೇಶಗಳತ್ತ ಮುಖ ಮಾಡುತ್ತಿರುವ ಯುವಜನತೆಯ ಸಂಖ್ಯೆ ಏರುತ್ತಲೇ ಸಾಗುತ್ತಿದೆ. ಇದೇ ವೇಳೆ ಉತ್ತಮ ಶಿಕ್ಷಣವನ್ನು ಬಯಸಿ ಭಾರತದತ್ತ ಬರುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ವಿದೇಶಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ವಸತಿ ಮತ್ತು ಟ್ಯೂಷನ್‌ ವೆಚ್ಚ 4 ವರ್ಷಗಳ ಅವಧಿಯಲ್ಲಿ ಶೇ.44ರಷ್ಟು ಹೆಚ್ಚಳ ಕಂಡಿದೆ. 2013-14ನೇ ವಿತ್ತೀಯ ಸಾಲಿನಲ್ಲಿ ವಿದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಟ್ಯೂಷನ್‌ ಹಾಗೂ ವಸತಿ ವೆಚ್ಚಕ್ಕೆಂದು 1.9 ಬಿಲಿಯನ್‌ ಡಾಲರ್‌ಗಳನ್ನು ಖರ್ಚು ಮಾಡಿದ್ದರು. 2017-18ನೇ ವಿತ್ತೀಯ ಸಾಲಿನಲ್ಲಿ ಈ ಮೊತ್ತ 2.8 ಮಿಲಿಯನ್‌ ಡಾಲರ್‌ಗಳಿಗೆ ಏರಿಕೆಯಾಗಿದೆ. ಭಾರತದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದೇಶಿ ವಿದ್ಯಾರ್ಥಿಗಳು 2015-16ನೇ ಸಾಲಿನಲ್ಲಿ 557 ಮಿಲಿಯನ್‌ ಡಾಲರ್‌ಗಳನ್ನು ವ್ಯಯಿಸಿದ್ದರು. ಈ ಮೊತ್ತ 2017-18ಕ್ಕೆ 479 ಮಿಲಿಯನ್‌ ಡಾಲರ್‌ಗಳಿಗೆ ಇಳಿಕೆಯಾಗಿದೆ.

ಈ ಹಿಂದೆ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಲು ಮಾಡಿದ ಖರ್ಚು ಶೇ.20ರಷ್ಟು ಕಡಿಮೆಯಾಗಿತ್ತು. 2015-16ರಲ್ಲಿ ವಿದೇಶದ ವಿದ್ಯಾಭ್ಯಾಸಕ್ಕೆಂದು ಭಾರತದ ವಿದ್ಯಾರ್ಥಿಗಳು 2.47 ಬಿಲಿಯನ್‌ ಡಾಲರ್‌ಗಳನ್ನು ವ್ಯಯಿಸಿದ್ದರು. 2016-17ರಲ್ಲಿ ಈ ಮೊತ್ತ 1.98 ಬಿಲಿಯನ್‌ ಡಾಲರ್‌ಗಳಿಗೆ ಇಳಿಕೆಯಾಗಿತ್ತು. ಭಾರತದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಕೇಂದ್ರೀಯ ವಿಶ್ವವಿದ್ಯಾಲಯಗಳು ಸ್ಥಾಪನೆಗೊಳ್ಳುತ್ತಿದ್ದು ಉತ್ತಮ ಗುಣಮಟ್ಟದ ಶಿಕ್ಷಣ ಭಾರತದ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ, ಆದ್ದರಿಂದ ಭಾರತದ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಿ ವಿದ್ಯಾಭ್ಯಾಸಕ್ಕೆಂದು ಮಾಡುತ್ತಿದ್ದ ಖರ್ಚಿನಲ್ಲಿ ಗಣನೀಯ ಇಳಿಕೆ ಕಂಡಿದೆ ಎಂದು ಸರಕಾರ ಮತ್ತು ಶಿಕ್ಷಣ ತಜ್ಞರು ಹೇಳಿದ್ದರು. ಆದರೆ ಈಗ ಮತ್ತೆ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ವಿದೇಶಿ ವಿದ್ಯಾಭ್ಯಾಸದ ಖರ್ಚಿನ ಈ ಅನುಕ್ರಮ ಬೆಳವಣಿಗೆಯು ವಿದ್ಯಾಭ್ಯಾಸಕ್ಕೆಂದು ವಿದೇಶದತ್ತ ಮುಖ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಕೂಡ ಹೆಚ್ಚಿದೆ ಎನ್ನುವುದನ್ನು ಸೂಚಿಸುತ್ತದೆ. ಭಾರತದ ವಿದ್ಯಾರ್ಥಿಗಳಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯಾ ದೇಶಗಳು ನೆಚ್ಚಿನ ಶಿಕ್ಷಣ ತಾಣಗಳಾಗಿವೆ.

2014-15ನೇ ಶೈಕ್ಷಣಿಕ ಸಾಲಿನಲ್ಲಿ ಭಾರತದ 1,32,888 ಭಾರತೀಯ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. 2016-17ನೇ ಸಾಲಿಗೆ ಈ ಸಂಖ್ಯೆ 1,86,267ಕ್ಕೆ ಏರಿಕೆ ಕಂಡಿದೆ. ಅಮೆರಿಕಾದಂತೆಯೇ ಅಸ್ಟ್ರೇಲಿಯಾ ಕೂಡ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಆಸ್ಟ್ರೇಲಿಯಾದಲ್ಲಿರುವ ಭಾರತದ ರಾಯಭಾರಿ ಡೆಪ್ಯುಟಿ ಹೈಕಮಿಷನರ್‌ ರಾಡ್‌ ಹಿಲ್ಟನ್‌ ಹೇಳುವಂತೆ 2016ರಲ್ಲಿ ಸುಮಾರು 60,000 ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಈಗ ಈ ಸಂಖ್ಯೆ ಸುಮಾರು 68,000 ತಲುಪಿದೆ.

ಭಾರತದಿಂದ ಹೊರಹೋಗಿ ವಿದ್ಯಾಭ್ಯಾಸ ಪಡೆಯುತ್ತಿರುವವರ ಸಂಖ್ಯೆ ಏರುಗತಿಯಲ್ಲಿದೆ. ಆದರೆ ವಿದೇಶದಿಂದ ಭಾರತಕ್ಕೆ ಬಂದು ಓದುವವರ ಸಂಖ್ಯೆ ಮಾತ್ರ ಕುಸಿತ ಕಾಣುತ್ತಿದೆ. 2018ರ ಜನವರಿ 1ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಲೋಕಸಭೆಯ ಮುಂದಿಟ್ಟಿದ್ದ ಅಂಕಿ ಅಂಶಗಳ ಪ್ರಕಾರ 2016ರಲ್ಲಿ ಭಾರತ 37,947 ವಿದೇಶಿ ವಿದ್ಯಾರ್ಥಿಗಳಿಗೆ ವಿಸಾ ನೀಡಿತ್ತು. 2017ರಲ್ಲಿ ಭಾರತದಿಂದ ವಿದ್ಯಾಭ್ಯಾಸಕ್ಕೆಂದು ವಿಸಾ ಪಡೆದಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 36,887ಕ್ಕೆ ಇಳಿಕೆ ಕಂಡಿದೆ.

‘ಫತೇಹ್‌ ಎಜುಕೇಷನ್‌’ ಎಂಬ ಸಂಸ್ಥೆ ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ದೇಶಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಇಚ್ಚಿಸುವ ಭಾರತದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ‘ಲೈವ್‌ ಮಿಂಟ್‌’ ಸುದ್ದಿ ಸಂಸ್ಥೆಯ ಜತೆ ಮಾತನಾಡಿರುವ ಈ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಸುನೀತ್‌ ಸಿಂಗ್‌ ಕೊಚ್ಚಾರ್, ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಮಾಡುತ್ತಿರುವ ಖರ್ಚು ವೆಚ್ಚ ಹೆಚ್ಚಾಗಲು ಮೂರು ಕಾರಣಗಳನ್ನು ಗುರುತಿಸುತ್ತಾರೆ.

ಸುನೀತ್‌ ಸಿಂಗ್‌ ಕೊಚ್ಚಾರ್‌ ಪ್ರಕಾರ ಭಾರತದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯುವ ಆಸಕ್ತಿ ಹೆಚ್ಚುತ್ತಿದ್ದು, ದೇಶದ ಶಿಕ್ಷಣ ಅವರು ಬಯಸುವ ಗುಣಮಟ್ಟವನ್ನು ಹೊಂದಿಲ್ಲ. ಎರಡನೆಯದಾಗಿ ಭಾರತೀಯರು ಉನ್ನತ ಶಿಕ್ಷಣ ಪಡೆಯಬೇಕು ಎಂದು ಬಯಸುತ್ತಿರುವ ದೇಶಗಳಲ್ಲಿ ಶಿಕ್ಷಣ ವೆಚ್ಚ ಹೆಚ್ಚಾಗುತ್ತಿದೆ, ಜತೆಗೆ ಹಣದುಬ್ಬರವೂ ಕೂಡ ಖರ್ಚು ವೆಚ್ಚ ಹೆಚ್ಚಾಗಲು ಕಾರಣವಾಗುತ್ತಿದೆ. ವೆಚ್ಚ ಹೆಚ್ಚಾಗಲು ಮೂರನೇ ಕಾರಣವೆಂದರೆ ಈ ಹಿಂದೆ ಹಲವಾರು ವಿದ್ಯಾರ್ಥಿ ವೇತನಗಳು ದೊರೆಯುತ್ತಿದ್ದವು. ಈಗ ವಿದ್ಯಾರ್ಥಿ ವೇತನಗಳ ದೊರೆಯುವಿಕೆ ಕಡಿಮೆಯಾಗುತ್ತಿದೆ.

‘ಎಜುಶೈನ್ ಅಡ್ವೈಸರೀಸ್‌’ ಸಂಸ್ಥೆಯ ಮ್ಯಾನೇಜಿಂಗ್‌ ಪಾರ್ಟ್ನರ್‌ ಕಲ್ಪೇಶ್‌ ಬ್ಯಾಂಕರ್‌ ಹೇಳುವ ಪ್ರಕಾರ, “ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಅಮೆರಿಕಾ ದೇಶಗಳು ಕಳೆದ 2-3 ವರ್ಷಗಳಿಂದ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನೀಡುವುದಕ್ಕೆ ಹೆಚ್ಚಿನ ಉತ್ಸುಕತೆ ತೋರಿಸುತ್ತಿವೆ. ಇದರಿಂದಾಗಿ ವಿದೇಶಕ್ಕೆ ತೆರಳುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷಣದ ಖರ್ಚು ವೆಚ್ಚವೂ ಕೂಡ ಏರಿಕೆ ಕಾಣುತ್ತಿದೆ.”

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೇಳುವಂತೆ ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳನ್ನು ಭಾರತದತ್ತ ಆಕರ್ಷಿಸಲು ಹಲವಾರು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ದೇಶದ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸಲು ಸರಕಾರ ಮುಂದಾಗಿದೆ. ಆದರೆ ಇದರ ಫಲಿತಾಂಶ ಸಿಗಲು ಇನ್ನೂ ಕೆಲವ ವರ್ಷಗಳ ಕಾಲ ಕಾಯಬೇಕು.

ಇವುಗಳ ಹೊರತಾಗಿ ಭಾರತ ಸರಕಾರ ವಿದೇಶಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ದೇಶದ ಶಿಕ್ಷಣ ಸಂಸ್ಥೆಗಳಿಗೆ ತರಲು ಪ್ರಯತ್ನ ನಡೆಸುತ್ತಿದೆ. ಈಗ ಸುಮಾರು 50,000 ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಇನ್ನು 4 ವರ್ಷಗಳಲ್ಲಿ ಈ ಸಂಖ್ಯೆಯನ್ನು 2 ಲಕ್ಷಕ್ಕೆ ಏರಿಸುವ ಗುರಿಯನ್ನು ಸರಕಾರ ಹೊಂದಿದೆ. ಇದರ ಜತೆಗೆ ದೇಶದ 6 ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರಕಾರ ‘ಇನ್ಸ್ಟಿಟ್ಯೂಟ್‌ ಆಫ್‌ ಎಮಿನೆನ್ಸ್‌’ ಮಾನ್ಯತೆಯನ್ನು ನೀಡಿದ್ದು, ಈ ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳಲ್ಲಿ ಶೇ.25ರಷ್ಟನ್ನು ವಿದೇಶಿ ವಿದ್ಯಾರ್ಥಿಗಳಿಗೆ ಕಾದಿರಿಸಲು ಚಿಂತಿಸಲಾಗುತ್ತಿದೆ.

ಹೊರದೇಶಗಳ ವಿದ್ಯಾರ್ಥಿಗಳಿಗೆ ದೇಶದಲ್ಲಿ ಶಿಕ್ಷಣ ಕಲ್ಪಿಸಬೇಕು ಎನ್ನುವುದೇನೋ ಸರಿ, ಆದರೆ ಹೊರದೇಶಗಳಿಗೆ ಹೋಗಲು ಸಾಧ್ಯವಾಗದೇ ಭಾರತದಲ್ಲಿಯೇ ಉನ್ನತ ವಿದ್ಯಾಭ್ಯಾಸ ಪಡೆಯಲು ಮುಂದಾಗುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆಯೇ ಎನ್ನುವುದನ್ನು ಸರಕಾರ ಗಮನಿಸಲೇಬೇಕಿದೆ. ಜತೆಗೆ ‘ಇನ್ಸ್ಟಿಟ್ಯೂಟ್‌ ಆಫ್‌ ಎಮಿನೆನ್ಸ್’ ಎಂಬ ಮಾನ್ಯತೆ ಪಡೆದಿರುವ ವಿಶ್ವ ವಿದ್ಯಾಲಯಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ತಲುಪಬಲ್ಲವೇ ಎನ್ನುವುದರ ಕಡೆಗೂ ಚಿತ್ತ ಹರಿಸಬೇಕಿದೆ.