samachara
www.samachara.com
ಸ್ಪಷ್ಟನೆಯಲ್ಲೂ ಮರೆಯಾದ ಸೌಜನ್ಯ; ಇದು ರಕ್ಷಾ ಮಂತ್ರಿ ಸಿಟ್ಟಿನ ಮುಂದುವರಿದ ಭಾಗ
ಸುದ್ದಿ ಸಾಗರ

ಸ್ಪಷ್ಟನೆಯಲ್ಲೂ ಮರೆಯಾದ ಸೌಜನ್ಯ; ಇದು ರಕ್ಷಾ ಮಂತ್ರಿ ಸಿಟ್ಟಿನ ಮುಂದುವರಿದ ಭಾಗ

ಕೊಡಗಿನ ಘಟನೆ ಬಗ್ಗೆ ರಕ್ಷಣಾ ಇಲಾಖೆ ನೀಡಿರುವ ಸ್ಪಷ್ಟೀಕರಣದಲ್ಲೂ ರಕ್ಷಾಸಚಿವರ ಸಿಟ್ಟು ಮುಂದುವರಿದಿರುವುದು ಕಾಣುತ್ತಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಕೊಡಗಿನಲ್ಲಿ ಸಭೆ ನಡೆಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ವಿರುದ್ಧ ಸಿಟ್ಟಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ, ಶನಿವಾರ ಈ ಸಂಬಂಧ ರಕ್ಷಣಾ ಇಲಾಖೆಯಿಂದ ಸ್ಪಷ್ಟನೆಯೊಂದು ಹೊರ ಬಿದ್ದಿದ್ದು, ಇದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಿಟ್ಟು ಮುಂದುವರಿದಿದೆ.

ರಕ್ಷಣಾ ಇಲಾಖೆ ನೀಡಿರುವ ಈ ಸ್ಪಷ್ಟನೆಯಲ್ಲಿ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆರೋಪ, ಟೀಕೆಗಳನ್ನು ಮಾಡಲಾಗಿದೆ. “ಜಿಲ್ಲಾ ಉಸ್ತುವಾರಿ ಸಚಿವರು ರಕ್ಷಣಾ ಸಚಿವರ ವಿರುದ್ಧ ಟೀಕೆ ಮಾಡಿರುವುದು ಅವರಿಗೆ ಭಾರತದ ರಾಜಕೀಯ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವ ಮತ್ತು ತಿಳಿವಳಿಕೆ ಇಲ್ಲ ಎನ್ನುವುದನ್ನು ತೋರಿಸುತ್ತದೆ” ಎಂದು ಸ್ಪಷ್ಟೀಕರಣ ಪ್ರಕಟಣೆಯಲ್ಲಿ ಹೇಳಲಾಗಿದೆ.

“ಹಾನಿಗೀಡಾದ ಪ್ರದೇಶಗಳ ಭೇಟಿಯ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ಸಂವಾದ ನಡೆಸುವಾಗ ಜಿಲ್ಲಾ ಉಸ್ತುವಾರಿ ಸಚಿವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಮೊದಲು ಸಭೆ ನಡೆಸಬೇಕು ಎನ್ನುವುದು ಅವರ ವಾದವಾಗಿತ್ತು. ಆದರೆ, ನಿವೃತ್ತ ಸೈನಿಕರ ಯೋಗಕ್ಷೇಮವೂ ರಕ್ಷಣಾ ಇಲಾಖೆಯ ಆದ್ಯತೆಗಳಲ್ಲಿ ಒಂದಾದ ಕಾರಣ ರಕ್ಷಣಾ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದರು. ಆದರೆ, ಅಧಿಕಾರಿಗಳ ಸಭೆ ಮೊದಲು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಒತ್ತಾಯಿಸಿದರು” ಎನ್ನುತ್ತದೆ ಸ್ಪಷ್ಟನೆ.

“ಜಿಲ್ಲಾಡಳಿತವೇ ಅಂತಿಮಗೊಳಿಸಿದ ಕಾರ್ಯಕ್ರಮದ ಪ್ರಕಾರವೇ ಸಭೆ ನಡೆಸಿದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೀಡಿದ ಪ್ರತಿಕ್ರಿಯೆ ಮತ್ತು ಅವರ ಟೀಕೆ ದುರದೃಷ್ಟಕರ. ಇನ್ನು ರಕ್ಷಣಾ ಮಂತ್ರಿಗಳ ಬಗ್ಗೆ ಮಾಡಿರುವ ವೈಯಕ್ತಿಕ ಟೀಕೆಯು ಕೀಳು ಅಭಿರುಚಿಯಿಂದ ಕೂಡಿದ್ದಾಗಿದೆ. ಅವರ ಈ ನಡವಳಿಕೆಯು ಪ್ರತಿಕ್ರಿಯೆಗೂ ಯೋಗ್ಯವಲ್ಲ” ಎನ್ನಲಾಗಿದೆ.

ಮಾಧ್ಯಮಗಳಲ್ಲಿ ವರದಿಯಾದ ಪರಿವಾರದ ಬಗ್ಗೆ ಸ್ಪಷ್ಟನೆ ನೀಡುತ್ತಾ, ರಕ್ಷಣಾ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ನಿವೃತ್ತ ಸೈನಿಕರ ಕಲ್ಯಾಣವೂ ಒಂದು. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರೂ ಸೇರಿರುತ್ತಾರೆ. ಈ ಅರ್ಥದಲ್ಲಿ ಪರಿವಾರ ಎನ್ನುವ ಪದ ಬಳೆಕಯಾಗಿದೆ. ಆದರೆ, ಇದು ಅಪಾರ್ಥಕ್ಕೆ ಕಾರಣವಾಗಿದೆ ಎನ್ನುತ್ತದೆ ಸ್ಪಷ್ಟನೆ ಪತ್ರ.

Also read: ಪರಿಹಾರದಲ್ಲೂ ‘ಪರಿವಾರ’ ಮರೆಯದ ಸಚಿವೆಯನ್ನು ದಾರಿ ತಪ್ಪಿಸಿದ್ದು ಪ್ರತಾಪ್ ಸಿಂಹ!

ನಿರ್ಮಲಾ ಸೀತಾರಾಮನ್‌ ಮಾತನಾಡಿದ ಬಗೆ, ಸಾ.ರಾ. ಮಹೇಶ್‌ ಮತ್ತು ಜಿಲ್ಲಾಧಿಕಾರಿ ವಿರುದ್ಧ ಸಿಟ್ಟಾದ ರೀತಿ, ಮಾಧ್ಯಮಗಳೆದುರಲ್ಲೇ, “ಕೇಂದ್ರ ಸಚಿವರು ಇಲ್ಲಿ ರಾಜ್ಯದ ಸಚಿವರು ಹೇಳಿದಂತೆ ಕೇಳಬೇಕಾಗಿದೆ” ಎಂದು ಹೇಳಿದ್ದನ್ನೆಲ್ಲಾ ಈ ಸ್ಪಷ್ಟನೆ ಪತ್ರ ಸಮರ್ಥಿಸಿಕೊಂಡಿದೆ.

ಕೇಂದ್ರ ಸಚಿವರು ದೊಡ್ಡವರು, ರಾಜ್ಯದ ಸಚಿವರು ಅವರ ಅಧೀನರು ಎಂಬ ಮನಸ್ಥಿತಿ ಈ ಸ್ಪಷ್ಟೀಕರಣ ಪತ್ರದಲ್ಲೂ ಮುಂದುವರಿದಿದೆ. ನಡೆದುದ್ದನ್ನು ವಿವರಿಸಿ ಸ್ಪಷ್ಟನೆ ಕೊಡಲು ಹೊರಟ ಈ ಪತ್ರ ಮತ್ತಷ್ಟು ಅಸಮಾಧಾನವನ್ನು ಹೊರಹಾಕಿದೆ. ಸ್ಪಷ್ಟೀಕರಣದ ಈ ಪತ್ರ ಸೌಜನ್ಯದ ಗೆರೆಯನ್ನು ಮೀರಿ ಪ್ರತ್ಯಾರೋಪದ ಟೀಕೆಯನ್ನು ಮುಂದುವರಿಸಿದೆ.