ಸಿಖ್‌ ವಿರೋಧಿ ಗಲಭೆಗೆ ಕಾಂಗ್ರೆಸ್‌ ಕಾರಣವಲ್ಲ ಎಂದ ರಾಹುಲ್ ಗಾಂಧಿ
ಸುದ್ದಿ ಸಾಗರ

ಸಿಖ್‌ ವಿರೋಧಿ ಗಲಭೆಗೆ ಕಾಂಗ್ರೆಸ್‌ ಕಾರಣವಲ್ಲ ಎಂದ ರಾಹುಲ್ ಗಾಂಧಿ

ಸಿಖ್‌ ವಿರೋಧಿ ಹಿಂಸಾಚಾರದಲ್ಲಿ ಕಾಂಗ್ರೆಸ್‌ ಪಕ್ಷದ ಪಾತ್ರ ಇಲ್ಲ ಎಂದಿರುವ ರಾಹುಲ್‌ ಗಾಂಧಿ ಇದರ ಜತೆಗೆ ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಹತ್ಯೆಗಳನ್ನೂ ಸ್ಮರಿಸಿದ್ದಾರೆ.

ಭಾರತದಲ್ಲಿ ನಡೆದಿದ್ದ ಸಿಖ್‌ ವಿರೋಧಿ ಹಿಂಸಾಚಾರ ಈಗ ಲಂಡನ್‌ನಲ್ಲಿ ಸುದ್ದಿಯಾಗಿದೆ. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಸಿಖ್‌ ವಿರೋಧಿ ಹಿಂಸಾಚಾರದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಆ ಹಿಂಸಾಚಾರದಲ್ಲಿ ಕಾಂಗ್ರೆಸ್‌ ಪಾತ್ರ ಇರಲಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಲಂಡನ್‌ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಸಂವಾದ ಕಾರ್ಯಕ್ರಮದ ವೇಳೆ ಕೇಳಲಾದ ಪ್ರಶ್ನೆಗೆ, “1984ರ ಸಿಖ್‌ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್‌ನ ಪಾತ್ರ ಇರಲಿಲ್ಲ” ಎಂದು ಹೇಳಿದ್ದಾರೆ.

“ಸಿಖ್‌ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಪಾತ್ರವಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅದೊಂದು ದುರಂತ, ಅದೊಂದು ಯಾತನಾಮಯ ಅನುಭವ. ಆದರೆ, ಆ ಗಲಭೆಯಲ್ಲಿ ಕಾಂಗ್ರೆಸ್‌ ಪಾತ್ರ ಇರಲಿಲ್ಲ” ಎಂದಿದ್ದಾರೆ.

ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್‌ ವಿರೋಧಿ ಹಿಂಸಾಚಾರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೇ ನೇರವಾಗಿ ಭಾಗವಹಿಸಿದ್ದರು ಎಂಬ ಆರೋಪವಿದೆ. ಸಿಖ್‌ ವಿರೋಧಿ ಹಿಂಸಾಚಾರ ಹೆಚ್ಚಲು ಕಾಂಗ್ರೆಸ್‌ ಪಕ್ಷವೇ ಕಾರಣ ಎನ್ನಲಾಗಿದೆ. ಈ ಹಿಂಸಾಚಾರದಿಂದ ದೆಹಲಿಯಲ್ಲಿ ಸುಮಾರು 3000 ಮಂದಿ ಸಾವನ್ನಪ್ಪಿದರೆ, ದೇಶದ ವಿವಿಧ ಭಾಗಗಳಲ್ಲಿ 8000 ಮಂದಿ ಸಾವನ್ನಪ್ಪಿದ್ದರು.

1984ರ ಅಕ್ಟೋಬರ್‌ 31ರಂದು ಇಂದಿರಾ ಗಾಂಧಿ ಹತ್ಯೆ ನಡೆಯಿತು. ಇಂದಿರಾ ಗಾಂಧಿ ಅವರ ಇಬ್ಬರು ಸಿಖ್‌ ಅಂಗರಕ್ಷಕರೇ ಅವರನ್ನು ಗುಂಡಿಟ್ಟು ಕೊಂಡಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ಸಿಖ್ಖರನ್ನು ಗುರಿಯಾಗಿಸಿಕೊಂಡು ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ ಹಿಂಸಾಚಾರ ನಡೆಯಿತು.

ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಹಿಂಸಾಚಾರಗಳಿಗೆ ಪ್ರತಿಕ್ರಿಯಿಸಿದ್ದ ರಾಜೀವ್‌ ಗಾಂಧಿ, “ಒಂದು ದೊಡ್ಡ ಮರ ಉರುಳಿ ಬಿದ್ದಾಗ ಜೀವ ಹಾನಿಯಾಗುವುದು ಸ್ವಾಭಾವಿಕ” ಎಂದು ಹೇಳಿದ್ದರು. ಕಾಂಗ್ರೆಸ್‌ ಕಾರ್ಯಕರ್ತರನ್ನೇ ಸಿಖ್‌ ವಿರೋಧಿ ಹಿಂಸಾಚಾರಕ್ಕೆ ರಾಜೀವ್‌ ಗಾಂಧಿ ಇಳಿಸಿದ್ದಾರೆ ಎಂಬ ಆರೋಪವೂ ಇತ್ತು.

ಇಂದಿರಾ ಗಾಂಧಿ ಹತ್ಯೆ ಹಾಗೂ ಸಿಖ್‌ ವಿರೋಧಿ ಹಿಂಸಾಚಾರ ನಡೆದು ಮೂರು ದಶಕಗಳು ಕಳೆದಿವೆ. ಆದರೆ, ಹಿಂಸಾಚಾರದ ಕಪ್ಪು ಮಸಿ ಇನ್ನೂ ಕಾಂಗ್ರೆಸ್‌ಗೆ ಅಂಟಿಯೇ ಇದೆ. ಇದನ್ನು ತೊಳೆದುಕೊಳ್ಳಲು ಈಗ ರಾಹುಲ್‌ ಗಾಂಧಿ ಪ್ರಯತ್ನಿಸುತ್ತಿರುವಂತಿದೆ.

“ಭೂಮಿ ಮೇಲೆ ಯಾರು ಯಾರ ವಿರುದ್ಧ ಹಿಂಸಾಚಾರ ನಡೆಸಿದರೂ ಅದಕ್ಕೆ ನನ್ನ ವಿರೋಧವಿದೆ. ಯಾರಿಗಾದರೂ ನೋವಾದಾಗ ನನಗೂ ನೋವಾಗುತ್ತದೆ. ಹಿಂಸಾಚಾರ ನಡೆಸಿದವರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಲೇಬೇಕು” ಎಂದಿದ್ದಾರೆ ರಾಹುಲ್‌.

“ನನ್ನ ತಂದೆಯನ್ನು ಕೊಂದವರ ಬಗ್ಗೆಯೂ ನನಗೆ ಸಹಾನುಭೂತಿ ಇದೆ. ನನ್ನ ತಂದೆಯನ್ನು ಕೊಂದಿದ್ದ ಪ್ರಭಾಕರನ್‌ (ಎಲ್‌ಟಿಟಿಇ) ಹತ್ಯೆ ಸಂದರ್ಭದಲ್ಲೂ ನನಗೆ ಬೇಸರವಾಗಿತ್ತು. ಪ್ರಭಾಕರನ್‌ ಸ್ಥಾನದಲ್ಲಿ ನನ್ನ ತಂದೆಯನ್ನೂ, ಪ್ರಭಾಕರನ್‌ ಮಕ್ಕಳ ಸ್ಥಾನದಲ್ಲಿ ನನ್ನನ್ನೂ ಇಟ್ಟು ನೋಡಿದಾಗ ನನಗೆ ತೀವ್ರ ನೋವಾಗಿತ್ತು” ಎಂದು ರಾಹುಲ್‌ ಹೇಳಿದ್ದಾರೆ.

“ಯಾವುದೇ ಹಿಂಸಾಚಾರದಿಂದ ಹಾನಿಗೊಳಗಾದವರಿಗೆ ಅದರ ನೋವು ಏನು ಎಂಬುದು ಅರ್ಥವಾಗುತ್ತದೆ. ಆದರೆ, ಬಹುತೇಕ ಜನರಿಗೆ ಹಿಂಸಾಚಾರದ ನೋವು ಏನು ಎಂಬುದು ಅರ್ಥವಾಗಿಲ್ಲ. ಹಿಂಸಾಚಾರ ಎಂಬುದು ಅಮಾನವೀಯ” ಎಂದಿದ್ದಾರೆ.

ಸಿಖ್‌ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್‌ನ ಪಾತ್ರವಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳುವ ಜತೆಗೆ ರಾಜೀವ್‌ ಗಾಂಧಿ ಹತ್ಯೆಯನ್ನೂ ಅದರ ಜತೆಗೆ ಎಲ್‌ಟಿಟಿಇ ಅಧ್ಯಾಯವನ್ನು ನೆನಪಿಸಿದ್ದಾರೆ ರಾಹುಲ್‌. ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಹತ್ಯೆಗಳನ್ನು ಸ್ಮರಿಸುವ ಮೂಲಕ ಕಾಂಗ್ರೆಸ್ ಪಕ್ಷ ತಮ್ಮ ಕುಟುಂಬದಿಂದ ದೊಡ್ಡ ಬಲಿದಾನಗಳನ್ನು ಪಡೆದಿದೆ ಎಂಬುದನ್ನು ಹೇಳಲು ರಾಹುಲ್‌ ಪ್ರಯತ್ನಿಸಿರುವಂತಿದೆ.