700 ಕೋಟಿ ಯುಎಇ ನೆರವಿಗೆ ಒಪ್ಪಲಿ, ಇಲ್ಲವೇ ಕೇಂದ್ರವೇ ಪರಿಹಾರ ಕೊಡಲಿ: ಕೇರಳ ಆಗ್ರಹ
ಸುದ್ದಿ ಸಾಗರ

700 ಕೋಟಿ ಯುಎಇ ನೆರವಿಗೆ ಒಪ್ಪಲಿ, ಇಲ್ಲವೇ ಕೇಂದ್ರವೇ ಪರಿಹಾರ ಕೊಡಲಿ: ಕೇರಳ ಆಗ್ರಹ

700 ಕೋಟಿ ರೂಪಾಯಿ ನೀಡಲು ಮುಂದೆ ಬಂದಿರುವ ಯುಎಇ ನೆರವು ಸ್ವೀಕಾರಕ್ಕೆ ಒಪ್ಪಿ, ಇಲ್ಲವೇ ನೀವೇ ಪರಿಹಾರ ಕೊಡಿ ಎಂದು ಕೇರಳ ಸರಕಾರ ಕೇಂದ್ರಕ್ಕೆ ಒತ್ತಾಯಿಸಿದೆ.

ಅರಬ್ ಸಂಯುಕ್ತ ಸಂಸ್ಥಾನವು (ಯುಎಇ) ಪರಿಹಾರ ರೂಪದಲ್ಲಿ ಕೊಡಲು ಮುಂದೆ ಬಂದಿರುವ 700 ಕೋಟಿ ರೂಪಾಯಿಯನ್ನು ಸ್ವೀಕರಿಸಲು ಒಪ್ಪಿಗೆ ನೀಡಿ ಇಲ್ಲವೇ ನೀವೇ ಪರಿಹಾರ ನೀಡಿ ಎಂದು ಕೇರಳ ಸರಕಾರ ಕೇಂದ್ರಕ್ಕೆ ಒತ್ತಾಯಿಸಿದೆ.

“ನೈಸರ್ಗಿಕ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ವಿದೇಶಿ ಸರಕಾರಗಳಿಂದ ನೆರವು ಪಡೆಯಬಹುದು ಎಂಬ ಅಂಶ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಸೂಚಿಯ 9ನೇ ಅಧ್ಯಾಯವಾದ ಅಂತರರಾಷ್ಟ್ರೀಯ ಸಹಕಾರದಲ್ಲಿದೆ. ವಿದೇಶಿ ನೆರವು ಪಡೆಯಬಾರದೆಂಬ ನಿಲುವಿಗೇ ಕೇಂದ್ರ ಸರಕಾರ ಅಂಟಿಕೊಂಡರೆ ಕೇಂದ್ರವೇ ನಮಗೆ ಹೆಚ್ಚಿನ ನೆರವು ನೀಡಲಿ” ಎಂದು ಕೇರಳದ ಹಣಕಾಸು ಸಚಿವ ಥಾಮಸ್‌ ಐಸಾಕ್‌ ಒತ್ತಾಯಿಸಿದ್ದಾರೆ.

“ಯುಎಇ 700 ಕೋಟಿ ರೂಪಾಯಿ ನೆರವು ನೀಡಲು ಮುಂದಾಗಿರುವುದನ್ನು ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಸ್ವಾಗತಿಸಿದ್ದರು. ನೈಸರ್ಗಿಕ ಹಾನಿ ಸಂಭವಿಸಿದ ಸಂದರ್ಭದಲ್ಲಿ ರಾಷ್ಟ್ರಗಳು ಪರಸ್ಪರ ಸಹಾಯ ಮಾಡುವುದು ಅಗತ್ಯ. 2016ರ ಮೇ ತಿಂಗಳಲ್ಲಿ ಕೇಂದ್ರ ಸರಕಾರವೇ ಜಾರಿಗೆ ತಂದಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಸೂಚಿಯಲ್ಲಿ ವಿದೇಶಿ ನೆರವು ಪಡೆಯಬಹುದೆಂಬುದು ಸ್ಪಷ್ಟವಾಗಿದೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಯುಎಇಯಿಂದ ನೆರವು ಪಡೆಯಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿರುವುದು ಕೇವಲ ತಾಂತ್ರಿಕ ಕಾರಣ ಎಂದಿರುವ ಪಿಣರಾಯಿ ವಿಜಯನ್‌ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಅಗತ್ಯ ಬಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ.

Also read: ಕೇರಳದ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’: 700 ಕೋಟಿ ಯುಎಇ ನೆರವಿಗೆ ಅಡ್ಡಿಯಾದ ನೀತಿ

‘ವಿಕೋಪ ಸಂದರ್ಭದಲ್ಲಿ ಭಾರತ ಸರಕಾರ ವಿದೇಶಗಳ ನೆರವು ಕೇಳಬಾರದು. ಆದರೆ, ವಿದೇಶಿ ಸರಕಾರಗಳು ತಾವಾಗಿಯೇ ಸದುದ್ದೇಶದಿಂದ ಸಂತ್ರಸ್ತರಿಗೆ ನೆರವು ನೀಡಲು ಮುಂದೆ ಬಂದರೆ ಕೇಂದ್ರ ಸರಕಾರ ಅದನ್ನು ಸ್ವೀಕರಿಸಬಹುದು. ಕೇಂದ್ರ ಗೃಹ ಇಲಾಖೆಯು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ ಜತೆಗೆ ನೆರವು ನೀಡಬಯಸುವ ವಿದೇಶದೊಂದಿಗೆ ಸಂಪರ್ಕ ಸಾಧಿಸಬಹುದು’ ಎನ್ನುತ್ತದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಸೂಚಿ.

ಯುಎಇ ತಾನಾಗಿಯೇ ನೆರವು ನೀಡಲು ಮುಂದೆ ಬಂದಿರುವುದರಿಂದ ಭಾರತದ ಯಾವುದೇ ನೀತಿಗಳಿಗೆ ಇದು ಅಡ್ಡಿಯಾಗುವುದಿಲ್ಲ. ಹೀಗಾಗಿ 700 ಕೋಟಿ ರೂಪಾಯಿ ನೆರವನ್ನು ಕೇರಳ ಯುಎಇಯಿಂದ ಪಡೆಯಲು ಕೇಂದ್ರ ಸರಕಾರ ಒಪ್ಪಿಗೆ ನೀಡಬಹುದಾಗಿದೆ. ಅಥವಾ ಕೇರಳ ಸರಕಾರ ಒತ್ತಾಯಿಸಿರುವಂತೆ ಕೇಂದ್ರ ಸರಕಾರವೇ ದೊಡ್ಡ ಮೊತ್ತದ ಪರಿಹಾರವನ್ನು ಕೇರಳಕ್ಕೆ ಕೊಡಬೇಕಿದೆ.