samachara
www.samachara.com
ದಿಯೊರಿಯ ಲೈಂಗಿಕ ಹಗರಣ: ಪತ್ತೆಯಾದ ‘ಕೆಂಪು ಕಾರು’
ಸುದ್ದಿ ಸಾಗರ

ದಿಯೊರಿಯ ಲೈಂಗಿಕ ಹಗರಣ: ಪತ್ತೆಯಾದ ‘ಕೆಂಪು ಕಾರು’

ಮುಜಫರ್‌ಪುರ- ದಿಯೊರಿಯ ಬಾಲಕಿಯರ ಆಶ್ರಯ ನಿವಾಸಗಳ ಲೈಂಗಿಕ ಹಗರಣಗಳು ಟಿಪ್‌ ಆಫ್‌ ಐಸ್‌ ಬರ್ಗ್‌ ಅಷ್ಟೇ. ಇಂಥ ಎಷ್ಟೋ ಆಶ್ರಯ ನಿವಾಸಗಳ ಸತ್ಯ ಇನ್ನಷ್ಟೇ ಹೊರಬರಬೇಕಿದೆ.

Team Samachara

ಬಿಹಾರದ ಮುಜಫರ್‌ಪುರದ ಆಶ್ರಯ ನಿವಾಸದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಉತ್ತರ ಪ್ರದೇಶದ ದಿಯೊರಿಯದ ಆಶ್ರಯ ನಿವಾಸದ ಬಾಲಕಿಯರನ್ನು ಲೈಂಗಿಕ ಹಗರಣ ಜಾಲಕ್ಕೆ ತಳ್ಳಲಾಗಿತ್ತು ಎಂಬುದು ಬೆಳಕಿಗೆ ಬಂದಿತ್ತು.

ಬಿಹಾರದ ಆಶ್ರಯ ನಿವಾಸದಲ್ಲಿ ಬಾಲಕಿಯೊಬ್ಬಳನ್ನು ಕೊಂದು ಹೂಳಲಾಗಿದೆ ಎಂಬ ಆರೋಪವಿತ್ತು. ದಿಯೊರಿಯದ ಆಶ್ರಯ ನಿವಾಸದಲ್ಲಿ ಕೆಂಪು ಮತ್ತು ಬಿಳಿಯ ಬಣ್ಣದ ಕಾರುಗಳಲ್ಲಿ ಬಾಲಕಿಯರನ್ನು ಸಂಜೆ ವೇಳೆ ವೇಶ್ಯಾವಾಟಿಕೆಗೆ ಕರೆದುಕೊಂಡು ಹೋಗಲಾಗುತ್ತಿತ್ತು ಎಂದು ಆಶ್ರಯ ನಿವಾಸದಿಂದ ತಪ್ಪಿಸಿಕೊಂಡು ಬಂದಿದ್ದ ಬಾಲಕಿಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದಳು.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶದ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ವೇಶ್ಯಾವಾಟಿಕೆಗೆ ಬಳಸಲಾಗುತ್ತಿತ್ತು ಎನ್ನಲಾದ ಕೆಂಪು ಬಣ್ಣದ ಕಾರನ್ನು ಸೋಮವಾರ ಪತ್ತೆ ಹಚ್ಚಿದ್ದಾರೆ. ಇದೇ ಕಾರಿನಲ್ಲಿ ಆಶ್ರಯ ನಿವಾಸದ ಬಾಲಕಿಯರನ್ನು ಗೋರಖ್‌ಪುರ, ವಾರಣಾಸಿ ಸೇರಿದಂತೆ ಹಲವು ಕಡೆಗಳಿಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.

ದಿಯೊರಿಯ ಆಶ್ರಯ ನಿವಾಸದಿಂದ ತಪ್ಪಿಸಿಕೊಂಡು ಬಂದಿದ್ದ 10 ವರ್ಷದ ಬಾಲಕಿ ಆಗಸ್ಟ್‌ 5ರಂದು ಪೊಲೀಸರೆದುರು ಆಶ್ರಯ ನಿವಾಸದ ನಗ್ನ ಸತ್ಯವನ್ನು ಬಿಚ್ಚಿಟ್ಟಿದ್ದಳು. ಕೆಂಪು ಮತ್ತ ಬಿಳಿ ಬಣ್ಣದ ಕಾರುಗಳಲ್ಲಿ ಬಾಲಕಿಯರನ್ನು ಸಂಜೆ ಕರೆದುಕೊಂಡು ಹೋಗಿ ಮರು ದಿನ ಆಶ್ರಯ ನಿವಾಸಕ್ಕೆ ತಂದು ಬಿಡಲಾಗುತ್ತಿತ್ತು ಎಂದು ಬಾಲಕಿ ಹೇಳಿದ್ದಳು. ಆಶ್ರಯ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಇತರೆ ಬಾಲಕಿಯರೂ ಇದೇ ಮಾಹಿತಿಯನ್ನು ನೀಡಿದ್ದರು.

ಪತ್ತೆಯಾಗಿರುವ ಕೆಂಪು ಬಣ್ಣದ ಕಾರು ಆಶ್ರಯ ನಿವಾಸದ ಮಾಲಕಿ ಗಿರಿಜಾ ತ್ರಿಪಾಠಿ ಕುಟುಂಬಕ್ಕೆ ಸೇರಿದ್ದು ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಸದ್ಯ ಗಿರಿಜಾ, ಆಕೆಯ ಪತಿ ಮೋಹನ್‌ ಮತ್ತು ಅವರ ಮಗಳು ಕಾಂಚನಲತಾ ಮೂರೂ ಮಂದಿಯನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗಿರಿಜಾ ತ್ರಿಪಾಠಿ ಸೂಕ್ತ ದಾಖಲೆಗಳಿಲ್ಲದೆ ಆಶ್ರಯ ನಿವಾಸ ನಡೆಸುತ್ತಿರುವ ಬಗ್ಗೆ ದಿಯೊರಿಯ ಆಡಳಿತ ಈ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿದ್ದ ಮೂರು ಮಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಆದರೆ, ಅಧಿಕಾರಿಗಳು ಈ ಮಾಹಿತಿಯನ್ನು ನಿರ್ಲಕ್ಷ್ಯಿಸಿದ್ದರು ಎಂಬುದು ಎಸ್‌ಐಟಿ ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳ ನೆರಳಿನಲ್ಲೇ ಈ ಲೈಂಗಿಕ ಹಗರಣ ನಡೆಯುತ್ತಿತ್ತೇ ಎಂಬ ಅನುಮಾನಕ್ಕೂ ಇದು ಎಡೆ ಮಾಡಿಕೊಟ್ಟಿದೆ.

ಅಲಹಾಬಾದ್‌ ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಉತ್ತರ ಪ್ರದೇಶ ಸರಕಾರ ದಿಯೊರಿಯದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಆಶ್ರಯ ನಿವಾಸದ ವ್ಯಾಪ್ತಿಯ ಪೊಲೀಸ್‌ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದೆ. ಇದರ ಜತೆಗೆ ಸ್ಥಳೀಯ ಪೊಲೀಸ್‌ ಠಾಣೆಯ ಇಬ್ಬರು ಸಿಬ್ಬಂದಿ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ. ದಿಯೊರಿಯದಲ್ಲಿ ಈ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿದ್ದ ಮೂರು ಮಂದಿ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯುತ್ತಿದೆ.

ಆಗಸ್ಟ್‌ 5ರಂದು ಈ ಆಶ್ರಯ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸರು 23 ಮಂದಿ ಬಾಲಕಿಯರನ್ನು ರಕ್ಷಿಸಿದ್ದರು.

ದಿಯೊರಿಯ ಲೈಂಗಿಕ ಹಗರಣ: ಪತ್ತೆಯಾದ ‘ಕೆಂಪು ಕಾರು’

ಮುಜಫರ್‌ಪುರ ಪ್ರಕರಣ:

ಇತ್ತ ಬಿಹಾರದ ಮುಜಫರ್‌ಪುರ ಆಶ್ರಯ ನಿವಾಸದ ಲೈಂಗಿಕ ಹಗರಣ ಮೊದಲ ಬಾರಿಗೆ ದೇಶವನ್ನು ಬೆಚ್ಚಿ ಬೀಳಿಸಿತ್ತು. ಆಶ್ರಯ ನಿವಾಸಗಳಲ್ಲಿರುವ ಬಾಲಕಿಯರು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಮೂಡುವಂತೆ ಮಾಡಿತ್ತು ಈ ಪ್ರಕರಣ.

ಮುಜಫರ್‌ಪುರ ಲೈಂಗಿಕ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್‌ ಠಾಕೂರ್‌ ಪುತ್ರ ರಾಹುಲ್‌ ಆನಂದ್‌ ಎಂಬಾತನನ್ನು ಬಂಧಿಸಿದೆ. ರಾಹುಲ್‌ ಆನಂದ್‌ ‘ಪ್ರಾತಃ ಕಮಲ್‌’ ಎಂಬ ಹಿಂದಿ ದೈನಿಕ ಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕನಾಗಿದ್ದಾನೆ.

ಸಿಬಿಐ ತಂಡ ಬೀಗಮುದ್ರೆ ಮಾಡಿದ್ದ ಆಶ್ರಯ ನಿವಾಸದ ಬಾಗಿಲು ತೆರೆದು ಪರಿಶೀಲನೆ ನಡೆಸಿದೆ. ಒಬ್ಬ ಬಾಲಕಿಯನ್ನು ಹೊಡೆದು ಕೊಂದು ಹೂಳಲಾಗಿದೆ ಎಂಬ ಆರೋಪದ ಕಾರಣಕ್ಕೆ ಅಗೆಯಲಾಗಿದ್ದ ಜಾಗವನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಈವರೆಗೆ ಹೊಡೆದು ಕೊಂದು ಹೂಳಲಾಗಿದೆ ಎಂಬ ಬಾಲಕಿಯ ಕಳೇಬರ ಸಿಕ್ಕಿಲ್ಲ.

ಠಾಕೂರ್‌ ‘ಸೇವಾ ಸಂಕಲ್ಪ್‌’ ಸ್ವಯಂಸೇವಾ ಸಂಸ್ಥೆಯ ಹೆಸರಿನಲ್ಲಿ ಆಶ್ರಯ ನಿವಾಸ ನಡೆಸುತ್ತಿದ್ದ. ಈ ಸಂಸ್ಥೆಗೆ ಸರಕಾರದಿಂದ ಆರ್ಥಿಕ ನೆರವು ದೊರೆಯುತ್ತಿತ್ತು. ಈ ಆಶ್ರಯ ನಿವಾಸದಲ್ಲಿದ್ದ 30ಕ್ಕೂ ಹೆಚ್ಚು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಒಬ್ಬ ಬಾಲಕಿಯನ್ನು ಹೊಡೆದು ಕೊಂದು ಆಶ್ರಯ ನಿವಾಸದ ಒಳಗೇ ಹೂಳಲಾಗಿದೆ ಎಂಬ ಆರೋಪವಿದೆ.

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ನ ಅಧ್ಯಯನ ವರದಿಯೊಂದು ಈ ಲೈಂಗಿಕ ಹಗರಣವನ್ನು ಮೊದಲು ಬೆಳಕಿಗೆ ತಂದಿತ್ತು. ಸಂಸ್ಥೆಯು ಈ ಅಧ್ಯಯನ ವರದಿಯನ್ನು ಏಪ್ರಿಲ್‌ ತಿಂಗಳಲ್ಲಿ ಉತ್ತರ ಪ್ರದೇಶದ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿತ್ತು. ಮೇ 31ರಂದು ಆಶ್ರಯ ನಿವಾಸದ ಮಾಲೀಕ ಠಾಕೂರ್‌ ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಜುಲೈ 26ರಂದು ಬಿಹಾರ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ಠಾಕೂರ್‌ ಜತೆಗೆ ಬಿಹಾರದ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮಾ ಪತಿ ನಂಟು ಹೊಂದಿದ್ದ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಮಂಜು ವರ್ಮಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಎರಡೂ ಪ್ರಕರಣಗಳು ಸರಕಾರದಿಂದ ಆರ್ಥಿಕ ನೆರವು ಪಡೆಯುವ ಇಂಥ ಆಶ್ರಯ ನಿವಾಸಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿವೆ. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳ ಬಂಧನವಾಗಿದೆ. ಆದರೆ, ಈ ಜಾಲಕ್ಕೆ ಕಡಿವಾಣ ಹಾಕುವ ಬಗ್ಗೆ ಸರಕಾರಗಳು ಕಠಿಣ ನಿಲುವು ತಳೆದರೆ ಮಾತ್ರ ಇಂಥ ಪ್ರಕರಣಗಳು ಮರುಕಳಿಸುವುದು ಕೊಂಚ ಮಟ್ಟಗೆ ತಗ್ಗಬಹುದು.

ಅಲ್ಲದೆ, ಮುಜಫರ್‌ಪುರ ಮತ್ತು ದಿಯೊರಿಯ ಪ್ರಕರಣಗಳು ಟಿಪ್‌ ಆಫ್‌ ಐಸ್‌ ಬರ್ಗ್‌ ಅಷ್ಟೇ. ದೇಶದ ವಿವಿಧ ಭಾಗಗಳಲ್ಲಿರುವ ಬಾಲಕಿರಯ ಆಶ್ರಯ ನಿವಾಸಗಳಲ್ಲಿ ನಡೆಯುತ್ತಿರುವ ಹಗರಣಗಳು ಇನ್ನಷ್ಟೇ ಹೊರಬರಬೇಕಿದೆ.