samachara
www.samachara.com
ಮಹಾಮಳೆಗೆ ತತ್ತರಿಸಿದ ಜನ: ಭಾನುವಾರದ ಮಧ್ಯಾಹ್ನದ ವೇಳೆಗೆ ಹೇಗಿದೆ ಕೊಡಗು?
ಸುದ್ದಿ ಸಾಗರ

ಮಹಾಮಳೆಗೆ ತತ್ತರಿಸಿದ ಜನ: ಭಾನುವಾರದ ಮಧ್ಯಾಹ್ನದ ವೇಳೆಗೆ ಹೇಗಿದೆ ಕೊಡಗು?

ಕೊಡಗಿನಲ್ಲಿ ಎಡೆಬಿಡದೆ ಸುರಿದು ಶನಿವಾರ ಮಧ್ಯಾಹ್ನದ ವೇಳೆಗೆ ಕೊಂಚ ಬಿಡುವು ಪಡೆದಿದ್ದ ಮಳೆರಾಯ, ರಾತ್ರಿಯ ವೇಳೆಗೆ ಮತ್ತೆ ಆರ್ಭಟಿಸಿದ್ದಾನೆ, ಇಲ್ಲಿಯವರೆಗೂ 8 ಜನರನ್ನು ಬಲಿಪಡೆದಿದ್ದಾನೆ.

ಕೊಡಗಿನಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ ಕೊಂಚ ಬಿಡುವು ಪಡೆದಿದ್ದ ಮಳೆ ರಾತ್ರಿ ಮತ್ತೆ ಅಬ್ಬರಿಸಿದೆ. ಪರಿಣಾಮವಾಗಿ ಇನ್ನೂ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದ ಕೊಡಗಿನ ಜನತೆ ಭಯಭೀತರಾಗಿದ್ದಾರೆ.

ಇನ್ನು ಕೊಡಗಿನಲ್ಲಿ ಅವಾಂತರ ಸೃಷ್ಟಿಸಿದ್ದ ಮಳೆ ಈಗ ಚಿಕ್ಕಮಗಳೂರಿನಲ್ಲೂ ಸಂಕಷ್ಟ ಪರಿಸ್ಥಿತಿ ನಿರ್ಮಿಸುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗಳ ಬದಿಯ ಗುಡ್ಡ ಕುಸಿಯಲು ಆರಂಭಿಸಿದ್ದು, ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ.

ಎನ್.ಆರ್.ಪುರ, ಶೃಂಗೇರಿ, ಕಳಸ, ಹೊರನಾಡು, ಕುದುರೆಮುಖ, ಮೂಡಿಗೆರೆ, ಕೆರೆಕಟ್ಟೆ, ಕೊಪ್ಪ, ಬಾಳೆಹೊನ್ನೂರಿನ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಸ್ಥಿತಿಯಲ್ಲಿದೆ. ಭದ್ರಾ ಮತ್ತು ಹೇಮಾವತಿ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ನೀರು ನುಗ್ಗಿರುವ ಕಾರಣ ನೂರಾರು ಎಕರೆ ಭತ್ತದ ಬೆಳೆ ನಾಶವಾಗಿದೆ.

ಮಳೆಯಿಂದಾಗಿ ಕೊಡಗಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೊಡಗು ಭಾಗದಲ್ಲಿ 845 ಮನೆಗಳು ಸಂಪೂರ್ಣ ನಾಶಗೊಂಡಿವೆ. ದಕ್ಷಿಣ ಕನ್ನಡದಲ್ಲಿಯೂ 361 ಮನೆಗಳಿಗೆ ಹಾನಿಯಾಗಿದೆ.

ಕೊಡಗಿನ ಭಾಗಮಂಡಲ, ನಾಪೊಕ್ಲು ಅಯ್ಯಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ಸಂಚಾರ ಇಲ್ಲದಂತಾಗಿದೆ. ಒಟ್ಟು 98 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕುಶಾಲನಗರ- ಮಡಿಕೇರಿ ರಸ್ತೆಯಲ್ಲಿ ಮಣ್ಣು ಕುಸಿತದಿಂದ ರಸ್ತೆ ಮುಚ್ಚಿಹೋಗಿದೆ. ಮಡಿಕೇರಿ- ಹಾಸನ ರಸ್ತೆಯೂ ಮಣ್ಣು ಕುಸಿತದಿಂದ ಸಂಪೂರ್ಣ ಬಂದ್‌ ಆಗಿದೆ.

ಕೊಡಗು ಭಾಗದ ವಿವಿಧೆಡೆ 58 ಸೇತುವೆಗಳು ಹಾನಿಗೊಳಗಾಗಿದ್ದು, ಉಳಿದಂತೆ ಬಹುತೇಕ ಸೇತುವೆಗಳು ಮುಳುಗಿವೆ. 243 ಸರ್ಕಾರಿ ಕಟ್ಟಡಗಳು ನೆಲಕಚ್ಚಿದ್ದು, 3000ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಹೆಚ್ಚು ಹಾನಿ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು ನಷ್ಟದ ಅಂದಾಜಿನಲ್ಲಿ ತೊಡಗಿದ್ದಾರೆ.

ಶನಿವಾರ ನೆರೆಗೆ ಸಿಲುಕಿದ್ದ 317 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಂದು ಮಕ್ಕಂದೂರು ಸುತ್ತಮುತ್ತಲಿನ ಪ್ರದೇಶದ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಗುವುದು ಎಂದು ಕೊಡಗಿನ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮುಕ್ಕೋಡ್ಲು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡಿದ್ದ 80 ಜನರನ್ನು ರಕ್ಷಣೆ ಮಾಡಲಾಗಿದ್ದು, ಸೋಮವಾರಪೇಟೆಯ ತಾಕೇರಿ ಗ್ರಾಮಸ್ಥರನ್ನು ಬೇರೆಡೆಗೆ ಸಾಗಿಸುವ ಚಿಂತನೆ ರಕ್ಷಣಾ ಪಡೆಗಳ ಮುಂದಿದೆ.

ಕಳೆದ 3-4 ದಿನಗಳಲ್ಲಿ ನೆರೆಗೆ ತತ್ತರಿಸಿದ್ದ 600ಕ್ಕೂ ಹೆಚ್ಚು ಜನರನ್ನು ಈವರೆಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ ಮಡಿಕೇರಿ ನಗರದಲ್ಲಿ ಈಗಾಗಲೇ ಹಲವಾರು ಮನೆಗಳು ನೆಲಸಮವಾಗಿದ್ದು, ಒಟ್ಟು 3,000ಕ್ಕೂ ಹೆಚ್ಚು ಜನ ನಿರಾಶ್ರಿತರ ಶಿಬಿರಗಳಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ.

ಒಟ್ಟು 31 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದ್ದು, ಅಗತ್ಯ ಆಹಾರ‌ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ನರವಿನ ಭರಪೂರವೇ ಹರಿದು ಬರುತ್ತಿದೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು ತಮ್ಮ ಒಂದು ತಿಂಗಳ ವೇತನವನ್ನು ಪ್ರವಾಹ ಪೀಡಿತ ಕೇರಳ ಮತ್ತು ಕೊಡಗುಗಳಿಗೆ ನೀಡಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶನಿವಾರದಂದು ಕೊಡಗಿನ ಕೆಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಭಾನುವಾರವೂ ಸಹ ಕೊಡಗಿನ ಇನ್ನಿತರೆ ಭಾಗಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ನಿರಾಶ್ರಿತರ ಶಿಬಿರಗಳಿಗೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ.

ಅದಾಗಲೇ ನೆರಯಲ್ಲಿ ಸಿಲುಕಿ ಹೈರಾಣಾಗಿದ್ದ ಕೊಡಗಿನ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುಳ್ಳು ಸುದ್ದಿಗಳು ಮತ್ತಷ್ಟು ಚಿಂತೆಗೆ ದೂಡಿದ್ದವು. ‘ಹಾರಂಗಿ ಜಲಾಶಯದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಯಾವಾಗ ಬೇಕಾದರೂ ಜಲಾಶಯ ಹೊಡೆದು ನೀರು ಎಲ್ಲವನ್ನೂ ಕೊಚ್ಚಿ ಹಾಕಬಹುದು’ ಎಂಬ ವದಂತಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಈ ಕುರಿತು ಸ್ಪಷ್ಟನೆ ನೀಡಿರುವ ಕಾವೇರಿ ನೀರಾವರಿ ನಿಗಮ ನಿಯಮಿತ ಪುನರ್ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆರ್‌.ಕೆ. ರಾಜೇಗೌಡ ಇದೊಂದು ವದಂತಿ ಎಂದಿದ್ದಾರೆ. ಜಲಾಶಯ ಒಡೆಯುವ ಸಾಧ್ಯತೆಗಳನ್ನು ಅಲ್ಲಗೆಳೆದು, ಜಲಾಶಯ ಭದ್ರವಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ. ಜತೆಗೆ ಕೊಡಗಿನಲ್ಲಿ ಭೂಕಂಪ ಸಂಭವಿಸಲಿದೆ ಎಂಬ ವಂದತಿಯೂ ಹರಿದಾಡಿತ್ತು. ಇದೂ ಕೂಡ ಸುಳ್ಳು ಸುದ್ದಿ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟನೆ ನೀಡಿದೆ.

ರಕ್ಷಣಾ ಪಡೆ ಸಿಬ್ಬಂದಿಗಳು ಕೊಡಗಿನ ಜನರ ರಕ್ಷಣೆಯಲ್ಲಿ ತೊಡಗಿ, ನೂರಾರು ಜನರನ್ನು ರಕ್ಷಿಸಿದ್ದಾರಾದರೂ ಇನ್ನೂ ನೂರಾರು ಜನ ಕಾಣೆಯಾಗಿದ್ದಾರೆ. ಇಲ್ಲಿಯವರೆಗೂ ಮಳೆಯಿಂದಾಗಿ 8 ಜನ ಮೃತಪಟ್ಟಿರುವುದಾಗಿ ಅಂಕಿ ಸಂಖ್ಯೆಗಳು ಹೇಳುತ್ತಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.