samachara
www.samachara.com
‘ಮಹಾಮಳೆ- ಜಲ ಪ್ರವಾಹ’: ಕೇರಳಕ್ಕೆ ನೀಡುತ್ತಿರುವ ಪ್ರಾಮುಖ್ಯತೆ ಕೊಡಗಿಗೆ ಏಕಿಲ್ಲ?
ಸುದ್ದಿ ಸಾಗರ

‘ಮಹಾಮಳೆ- ಜಲ ಪ್ರವಾಹ’: ಕೇರಳಕ್ಕೆ ನೀಡುತ್ತಿರುವ ಪ್ರಾಮುಖ್ಯತೆ ಕೊಡಗಿಗೆ ಏಕಿಲ್ಲ?

ಮಹಾಮಳೆಗೆ ಸಿಲುಕಿ ಕೇರಳಿಗರು ಎಷ್ಟು ಕಷ್ಟ ಅನುಭವಿಸುತ್ತಿದ್ದಾರೋ ಅಷ್ಟೇ ಚಿಂತಾಜನಕ ಸ್ಥಿತಿಯಲ್ಲಿ ಕೊಡಗಿನ ಜನರೂ ಕೂಡ ದಿನ ಕಳೆಯುತ್ತಿದ್ದಾರೆ. ಆದರೆ ಕೇರಳಕ್ಕೆ ಸಿಕ್ಕಿರುವ ಪ್ರಾಮುಖ್ಯತೆ ಕೊಡಗಿಗೆ ಮಾತ್ರ ದೊರೆಯುತ್ತಿಲ್ಲ.

samachara

samachara

ಮಹಾಮಳೆಗೆ ನಲುಗುತ್ತಿರುವ ಕೇರಳದಲ್ಲಿ ಏಲ್ಲೆಲ್ಲೂ ಕೂಡ ನೀರಿನದ್ದೇ ಸಾಮ್ರಾಜ್ಯ. ಇದುವರೆಗೂ ಕೇರಳದಲ್ಲಿನ ಮಹಾಮಳೆ 324 ಜನರನ್ನು ಬಲಿತೆಗೆದುಕೊಂಡು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಕೇರಳದಲ್ಲಿನ ಸುಮಾರು 100 ಜಲಾಶಯಗಳು, ನದಿ ಪಾತ್ರಗಳ ಬಳಿ ವಾಸವಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ. ಈವರೆಗೂ 3,10,000 ಜನರನ್ನು ಸ್ಥಳಾಂತರಿಸಿ, 2,000 ಗಂಜಿ ಕೇಂದ್ರಗಳಲ್ಲಿ ಸುರಕ್ಷಿತವಾಗಿರಿಸಲಾಗಿದೆ.

ನೆರೆಯಿಂದ ತತ್ತರಿಸುತ್ತಿರುವ ಕೇರಳ ರಾಜ್ಯಕ್ಕೆ ನೆರವಿನ ಭರಪೂರವೇ ಹರಿದು ಬರುತ್ತಿದೆ. ಶನಿವಾರ ಕೇರಳದ ನೆರೆಪೀಡಿತ ಭಾಗಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ 500 ಕೋಟಿ ಹಣವನ್ನು ಕೇರಳಕ್ಕೆ ನೀಡುವುದಾಗಿ ಘೋಷಿಸಿದ್ದಾರೆ. ಪ್ರವಾಹದಿಂದಾಗಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಮತ್ತು ತೀವ್ರವಾಗಿ ಅಸ್ವಸ್ತಗೊಂಡವರಿಗೆ 50,000 ರೂಪಾಯಿಗಳ ಪರಿಹಾರ ಹಣ ರಾಷ್ಟ್ರೀಯ ವಿಪತ್ತು ನಿಧಿಯಿಂದ ದೊರೆಯಲಿದೆ.

ಹಲವಾರು ರಾಜ್ಯದ ಮುಖ್ಯಮಂತ್ರಿಗಳು ಸ್ವಾಯತ್ತವಾಗಿ ಮುಂದೆ ಬಂದು ಕೇರಳಕ್ಕೆ ಹಣ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೇರಳಕ್ಕೆ 10 ಕೋಟಿ ಹಣ ನೀಡಲು ಮುಂದಾಗಿದ್ದರೆ, ಒಡಿಶಾ ಸರಕಾರ 5 ಕೋಟಿ ನೆರವು ನೀಡಲು ಸಿದ್ಧವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೇರಳಕ್ಕೆ 10 ಕೋಟಿ ನೀಡಲಿದ್ದು, ತೆಲಂಗಾಣ ಸರಕಾರವೂ ಕೂಡ ಕೇರಳದತ್ತ ಸಹಾಯಹಸ್ತ ಚಾಚಿದೆ.

ಭಾರತೀಯ ನೌಕಾಸೇನೆಯ 51 ಬೋಟ್‌ಗಳು ಮತ್ತು ಅದರ ಸಿಬ್ಬಂದಿಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನೌಕಾ ಸೇನೆಯ ವತಿಯಿಂದ 1,000 ಲೈಫ್‌ ಜಾಕೆಟ್‌ಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ. ಇಂದು 1,300 ರಬ್ಬರ್‌ ಶೂಗಳು ಕೇರಳಿಗರಿಗೆ ತಲುಪಲಿವೆ. ನೌಕಾ ಸೇನೆ ಇಂದು ಬೆಳಗ್ಗೆಯಿಂದ ಸುಮಾರು 1,600 ಊಟದ ಪೊಟ್ಟಣಗಳನ್ನು ನೆರೆಯ ಮಧ್ಯೆ ಇರುವವರಿಗೆ ತಲುಪಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸುಮಾರು 2,000 ಸಿಬ್ಬಂದಿಗಳ 43 ತಂಡ ತಮ್ಮ 163 ಬೋಟ್‌ಗಳ ಜತೆಗೆ ಅಗತ್ಯ ಸಲಕರಣೆಗಳನ್ನು ಬಳಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಕರಾವಳಿ ತಟ ರಕ್ಷಣಾ ಪಡೆಯ 30 ಬೋಟುಗಳು ಮತ್ತು ಸಿಬ್ಬಂದಿ ಕೇರಳದಲ್ಲಿ ಕಾರ್ಯನಿರತರಾಗಿದ್ದಾರೆ. 300 ಲೈಫ್‌ ಜಾಕೆಟ್‌ ಮತ್ತು 144 ನೀರಿನಲ್ಲಿ ತೇಲಿಸುವ ರಬ್ಬರ್‌ ಟ್ಯೂಬ್‌ಗಳನ್ನು ಒದಗಿಸಿದೆ. ಭಾರತೀಯ ವಾಯುಸೇನೆಯ 21 ಹೆಲಿಕಾಫ್ಟರ್‌ ಮತ್ತು 11 ಸಾಗಾಣಿಕಾ ವಿಮಾನಗಳು ಕೇರಳಿಗರ ರಕ್ಷಣೆಗೆ ನಿಂತಿವೆ. ಯಲಹಂಕ ವಾಯುನೆಲೆಯ ವಿಮಾನಗಳೂ ಕೂಡ ಇದರಲ್ಲಿ ಸೇರಿವೆ. ಭಾರತೀಯ ಭೂಸೇನೆಯು 10 ತುಕಡಿ, 10 ತಾಂತ್ರಿಕ ಸಿಬ್ಬಂದಿಗಳ ತಂಡ, 60 ಬೋಟ್‌ ಮತ್ತು 100 ಲೈಫ್‌ ಜಾಕೆಟ್‌ಗಳನ್ನು ಒದಗಿಸಿದೆ.

ರೈಲ್ವೇ ಇಲಾಖೆಯೂ ಕೂಡ ಅದಾಗಲೇ 1.2 ಲಕ್ಷ ನೀರಿನ ಬಾಟಲಿಗಳನ್ನು ಕೇರಳಕ್ಕೆ ತಲುಪಿಸಿದೆ. ಮತ್ತೆ 1.2 ಲಕ್ಷ ನೀರಿನ ಬಾಟಲಿಗಳನ್ನು ಕಳುಹಿಸುತ್ತಿದೆ. ಜತೆಗೆ 2.9 ಲಕ್ಷ ಕುಡಿಯುವ ನೀರನ್ನು ಹೊತ್ತ ವಿಷೇಶ ರೈಲು ಭಾನುವಾರ ಕೇರಳದ ಕಾಯಕುಳಂ ತಲುಪಲಿದೆ.

ರೈಲ್ವೆ ಇಲಾಖೆ ಕೇರಳಿಯರಿಗೆಂದು ಕಳುಹಿಸುತ್ತಿರುವ ಕುಡಿಯುವ ನೀರು.
ರೈಲ್ವೆ ಇಲಾಖೆ ಕೇರಳಿಯರಿಗೆಂದು ಕಳುಹಿಸುತ್ತಿರುವ ಕುಡಿಯುವ ನೀರು.
/times of india

ಒಟ್ಟಾರೆಯಾಗಿ ಕೇರಳದಲ್ಲೀಗ 339 ಮೋಟಾರ್‌ ಚಾಲಿತ ಬೋಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು ಇನ್ನೂ 72 ಬೋಟ್‌ಗಳನ್ನು ನಿಯೋಜಿಸುವ ಯೋಚನೆಯಿದೆ. ಈಗಾಗಲೇ ಕೇರಳಿಗರಿಗೆ 2,800 ಲೈಫ್‌ ಜಾಕೆಟ್‌ಗಳನ್ನು ಒದಗಿಸಲಾಗಿದ್ದು, ಈ ಸಂಖ್ಯೆ 5,000ಕ್ಕೆ ಏರಲಿದೆ. 1,400 ರಬ್ಬರ್‌ ಟ್ಯೂಬ್‌ಗಳು ಬಳಕೆಯಾಗುತ್ತಿದ್ದು, 600 ಟ್ಯೂಬ್‌ಗಳನ್ನು ಹೆಚ್ಚುವರಿಯಾಗಿ ನೀಡಲು ಕೇಂದ್ರ ಸರಕಾರ ಸಿದ್ಧವಾಗಿದೆ. ಇವುಗಳ ಜತೆಗೆ ಅದಾಗಲೇ 1,000 ರೈನ್‌ ಕೋಟ್‌ಗಳನ್ನು ನೀಡಲಾಗಿದ್ದು, ಮತ್ತೆ 1,000 ರೈನ್‌ ಕೋಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.

ಇದುವರೆಗೂ 1 ಲಕ್ಷ ಊಟದ ಪೊಟ್ಟಣಗಳನ್ನು ನೆರೆಪೀಡಿತರಿಗೆ ಹಂಚಲಾಗಿದ್ದು, ಇನ್ನೂ 1 ಲಕ್ಷ ಊಟದ ಪೊಟ್ಟಣಗಳು ಸಿದ್ಧವಾಗುತ್ತಿವೆ. ಹಾಲಿನ ಪುಡಿಯನ್ನು ವಿತರಿಸುವ ಯೋಚನೆಯೂ ಇದೆ. ಇದೆಲ್ಲದರ ಜತೆಗೆ ದೇಶಾದ್ಯಂತ ಲಕ್ಷಾಂತರ ಜನ ತಮ್ಮ ಕೈಯಲ್ಲಿ ಸಾಧ್ಯವಾದದ್ದನ್ನು ಸಂಗ್ರಹಿಸಿ ಕೇರಳದ ನಿರಾಶ್ರಿತರಿಗೆ ತಲುಪಿಸುತ್ತಿದ್ದಾರೆ.

ಕೊಡಗಿನ ಕತೆಯೇನು?:

ಕರ್ನಾಟಕದ ಕೊಡಗು ಜಿಲ್ಲೆಯ ಪರಿಸ್ಥಿತಿ ಕೂಡ ಕೇರಳಕ್ಕಿಂತ ಭಿನ್ನವೇನೂ ಆಗಿಲ್ಲ. ಮಡಿಕೇರಿ ಸುತ್ತಮುತ್ತ, ಘಾಟಿ ಪ್ರದೇಶಗಳಲ್ಲಿ ಹಲವಾರು ಕಡೆ ಗುಡ್ಡ ಕುಸಿದು ರಸ್ತೆ ಸಂಚಾರ ನಿಂತು ಹೋಗಿದೆ. ನಿಂತ ನೆಲವೇ ಕುಸಿಯುತ್ತಿದ್ದು, ಹಲವಾರು ಮನೆಗಳು ಜಖಂಗೊಂಡಿವೆ. ಪುಟ್ಟ ಜಿಲ್ಲೆ ಕೊಡಗು ಸಂಪೂರ್ಣವಾಗಿ ಸಂಪರ್ಕವನ್ನೇ ಕಡಿದುಕೊಂಡಿದ್ದು, ವಿದ್ಯುತ್‌ ಕೂಡ ಇಲ್ಲವಾಗಿದೆ. ಅನ್ನಾಹಾರದ ಜತೆ ಕುಡಿಯಲು ನೀರೂ ಕೂಡ ಇಲ್ಲದಿರುವಂತ ಸ್ಥಿತಿ ತಲುಪಿರುವ ಕೊಡಗಿದಲ್ಲಿ ಜನ ಈಗ ಹೇಗಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಕೂಡ ಲಭ್ಯವಾಗುತ್ತಿಲ್ಲ. ಸಧ್ಯಕ್ಕೆ ಹೆಲಿಕ್ಯಾಫ್ಟರ್‌ ಮೂಲಕ ರಕ್ಷಣಾ ಕಾರ್ಯ ಕೈಗೊಳ್ಳಲು ವಾತಾವರಣವೂ ಕೂಡ ಅಡ್ಡಿಯಾಗಿದೆ.

ಕೊಡಗಿನಿಂದ ಬಂದ ಒಂದು ಚಿತ್ರ. 
ಕೊಡಗಿನಿಂದ ಬಂದ ಒಂದು ಚಿತ್ರ. 

ಈಗಾಗಲೇ 80ಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುವ ಸೈನ್ಯದ ತುಕಡಿ ಕೊಡಗಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಹಲವಾರು ಗ್ರಾಮಗಳಲ್ಲಿನ ಸುಮಾರು 900 ಮಂದಿಯನ್ನು ರಕ್ಷಿಸಲಾಗಿದೆ. 1,300 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, 20 ಗಂಜಿ ಕೇಂದ್ರಗಳಲ್ಲಿ ಇವರೆಲ್ಲರಿಗೂ ಆಶ್ರಯ ಕಲ್ಪಿಸಲಾಗಿದೆ ಎಂಬ ಮಾಹಿತಿಗಳಿವೆ. ಆದಾಗ್ಯೂ ಕೂಡ 500ಕ್ಕೂ ಹೆಚ್ಚು ಜನ ಪ್ರವಾಹದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

ಮುಕ್ಕೋಡ್ಲು ಎಂಬ ಗ್ರಾಮದ ಜನ ತಮ್ಮ ರಕ್ಷಣೆಗಾಗಿ ಸೈನ್ಯ ಬರುತ್ತದೆ. ಹೆಲಿಕಾಫ್ಟರ್‌, ಬೋಟ್‌ಗಳಲ್ಲಿ ನಮ್ಮನ್ನು ರಕ್ಷಿಸಲಾಗುತ್ತದೆ ಎನ್ನವುದೆಲ್ಲಾ ಬರೀ ಬೊಗಳೆ ಎಂದು ಆಡಳಿತ ವರ್ಗದ ವಿರುದ್ಧ ಕಿಡಿ ಕಾರಿದ್ದಾರೆ. ಮಳೆಯಿಂದ ತತ್ತರಿಸಿದ ಮುಕ್ಕೋಡ್ಲು ಗ್ರಾಮಸ್ಥರು ಈಗ ತಾವೇ ಕುಸಿಯುತ್ತಿರುವ ಗುಡ್ಡವನ್ನು ಹತ್ತಿ ಸುರಕ್ಷಿತ ಪ್ರದೇಶಕ್ಕೆ ತೆರಳಲು ಮುಂದಾಗಿದ್ದಾರೆ. ಇದು ಕರ್ನಾಟಕದಲ್ಲಿನ ಪ್ರವಾಹ ಪೀಡಿತರ ಸ್ಥಿತಿ.

ಮುಕ್ಕೋಡ್ಲು ಜನರ ಸಂಕಷ್ಟ.

Posted by Sunil Ponneti on Friday, August 17, 2018

ಕೇವಲ ಕೊಡಗು ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಮಳೆ ಅವಾಂತರ ಸೃಷ್ಟಿಸಿದ್ದು, ಬೆಂಗಳೂರು ಮಂಗಳೂರು ರೈಲು ಮಾರ್ಗದಲ್ಲಿ 50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದಿದೆ. ಚಾರ್ಮಡಿ ಘಾಟ್‌ ರಸ್ತೆಯಲ್ಲಿ 5 ಕಿಲೋಮೀಟರ್‌ಗೂ ಹೆಚ್ಚು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿವೆ. ಜತೆಗೆ ಮಂಜು ಮತ್ತು ತುಂತುರು ಮಳೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಆಗಿದ್ದೂ ಕೂಡ ಕೇರಳಕ್ಕೆ ಸಿಗುತ್ತಿರುವ ಪ್ರಾಮುಖ್ಯತೆ ಕರಾವಳಿ ಮತ್ತು ಮಲೆನಾಡಿನ ಜನರಿಗೆ ಇಲ್ಲವಾಗಿದೆ.

ರಾಷ್ಟ್ರೀಯ ಮಾಧ್ಯಮಗಳೂ ಕೂಡ ಕೇರಳವನ್ನಷ್ಟೇ ಪ್ರಮುಖವಾಗಿ ಕಾಣುತ್ತ, ಕೊಡಗನ್ನು ಕಡೆಗಣಿಸಿವೆ. ಕೇರಳಕ್ಕೆ ಭಾರತೀಯ ಸೈನ್ಯಗಳು, ಕೇಂದ್ರ ಸರಕಾರ, ಬೇರೆ ಬೇರೆ ರಾಜ್ಯ ಸರಕಾರಗಳು ನೀಡುತ್ತಿರುವ ಸಹಾಯದಲ್ಲಿ ಕೆಲಭಾಗವೂ ಕೂಡ ಕರ್ನಾಟಕದ ಪ್ರವಾಹ ಪೀಡಿತ ಭಾಗಗಳಿಗೆ ದೊರೆಯುತ್ತಿಲ್ಲ.

ಕೇರಳದ ಪ್ರವಾಹ ಪೀಡಿತರಿಗೆ ದೊರೆಯುತ್ತಿರುವ ಸಹಾಯ ಹಸ್ತದ ಕುರಿತು ಯಾವುದೇ ವಿರೋಧವಿಲ್ಲ. ಆದರೆ ಅಷ್ಟೇ ಪ್ರಮಾಣದ ಪ್ರಾಮುಖ್ಯತೆ ನೆರೆಯಿಂದ ತತ್ತರಿಸುತ್ತಿರುವ ಕರ್ನಾಟಕದ ಜಿಲ್ಲೆಗಳತ್ತ ಏಕೆ ಹರಿಯುತ್ತಿಲ್ಲ ಎನ್ನುವುದು ಸದ್ಯದ ಪ್ರಶ್ನೆ.