samachara
www.samachara.com
ಕೊಡಗಿನಲ್ಲಿ ಗುಡ್ಡಕ್ಕೆ ಹೊಂದಿಕೊಂಡಿರುವ ಮನೆಗಳ ಮೇಲೆ ಮಣ್ಣು ಕುಸಿದಿರುವುದು
ಸುದ್ದಿ ಸಾಗರ

ಮಳೆಗೆ ತತ್ತರಿಸಿದ ಕೊಡಗು; ಇನ್ನೂ 2 ದಿನ ಭಾರೀ ಮಳೆಯ ಮುನ್ಸೂಚನೆ

ಕೊಡಗಿನಲ್ಲಿ ಮಹಾಮಳೆಗೆ ನಿರಂತರವಾಗಿ ಗುಡ್ಡ ಕುಸಿತ, ನೆರೆ ಅವಾಂತರ ಸೃಷ್ಟಿಯಾಗುತ್ತಲೇ ಇದೆ. ಮಳೆ ಹಾನಿಯಿಂದ ರಾಜ್ಯದಲ್ಲಿ ಈವರೆಗೆ ನೂರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ.

ಮಹಾಮಳೆಯಿಂದ ನಲುಗುತ್ತಿರುವ ರಾಜ್ಯಗಳ ಪಟ್ಟಿಗೆ ಈಗ ಕರ್ನಾಟಕವೂ ಸೇರಿದ್ದು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮಳೆಯಿಂದಾಗಿ ತತ್ತರಿಸಿವೆ. ಈವೆರೆಗೂ ರಾಜ್ಯದಲ್ಲಿ ನೂರಾರು ಮಂದಿ ಕಾಣೆಯಾಗಿದ್ದಾರೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರವೂ ಕೂಡಾ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗಿನಲ್ಲಿ ಗುಡ್ಡ ಕುಸಿತ, ಪ್ರವಾಹ ಸ್ಥಿತಿ ಮುಂದುವರಿದಿದೆ. ಹಲವೆಡೆ ಕಣಿವೆ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದರೆ, ಗುಡ್ಡಗಳು ಕುಸಿದು ಮನೆಗಳು ಉರುಳುತ್ತಿವೆ. ಕೊಡಗಿನಲ್ಲಿ ಜನಜೀವನ ಅಕ್ಷರಶಃ ನರಕವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಸಿಬ್ಬಂದಿ, ಗೃಹ ರಕ್ಷಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಯುವಕರು ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಮಳೆಯಿಂದ ನೀರಿನಲ್ಲಿ ಮುಳುಗಿರುವ ಮನೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

Also read: ಮಳೆಗೆ ಬೆಂಡಾದ ಕೊಡಗು: ಸಂಪರ್ಕ ಕಡಿತ, ಆತಂಕದಲ್ಲಿ ಜನ, ಸೃಷ್ಟಿಯಾದ ಭಯಾನಕ ವಾತಾವರಣ

ಮಳೆಯ ಅಬ್ಬರಕ್ಕೆ ದೇಶಾದ್ಯಂತ ಮೃತಪಟ್ಟರಿರುವವರ ಸಂಖ್ಯೆ ಈಗ 868ಕ್ಕೆ ಏರಿಕೆಯಾಗಿದೆ. ಮಳೆಯಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರೆ, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೇರಳಕ್ಕೆ 500 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಿದ್ದಾರೆ.

ಮಳೆಯಿಂದಾಗಿ ಕೇರಳದಲ್ಲಿ 250ಕ್ಕೂ ಹೆಚ್ಚು ಜನ ಅಸುನೀಗಿದ್ದಾರೆ. 14 ಜಿಲ್ಲೆಗಳ 2.11 ಲಕ್ಷ ಮಂದಿ ನೆರೆಯಿಂದಾಗಿ ಸೂರು ಕಳೆದುಕೊಂಡಿದ್ದಾರೆ. ನಿರಾಶ್ರಿತರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೇರಳ ಸರಕಾರದ ಮಾಹಿತಿಯಂತೆ ಈವರೆಗೂ 324 ಮಂದಿ ಮಳೆಯಿಂದ ಪ್ರಾಣ ಬಿಟ್ಟಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 43 ತಂಡಗಳಲ್ಲಿ 2,000ದಷ್ಟು ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, 163 ಬೋಟ್‌ಗಳನ್ನು ಬಳಿಸಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸುತ್ತಿದ್ದಾರೆ. ಭಾರತೀಯ ವಾಯುಸೇನೆಯೂ ಕೂಡ 23 ಹೆಲಿಕಾಪ್ಟರ್‌ ಮತ್ತು 11 ಸಾಗಾಣಿಕಾ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಿದೆ ಎಂದು ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ತುರ್ತು ಪ್ರತಿಕ್ರಿಯೆ ಕೇಂದ್ರದ ಮಾಹಿತಿ ಹೇಳುವಂತೆ ಕೇರಳದ ನಂತರ ಅತಿ ಹೆಚ್ಚು ಜನ ಮಳೆಯಿಂದಾಗಿ ಮೃತಪಟ್ಟಿರುವುದು ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದ 13 ಜಿಲ್ಲೆಗಳಲ್ಲಿ ಮಳೆ ಈವರೆಗೂ 191 ಮಂದಿ ನಾಗರಿಕರನ್ನು ಬಲಿ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳದ 23 ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, 183 ಜನರನ್ನು ಬಲಿ ಪಡೆದಿದೆ. ಮಹಾರಾಷ್ಟ್ರದ 26 ಜಿಲ್ಲೆಗಳು ಮಳೆಯ ಹಾವಳಿಗೆ ತತ್ತರಿಸಿದ್ದು, 139 ಮಂದಿ ಮಳೆಯಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಗುಜರಾತ್‌ ರಾಜ್ಯದಲ್ಲಿ ಒಟ್ಟು 52, ಅಸ್ಸಾಂನ 45 ಮತ್ತು ನಾಗಲ್ಯಾಂಡ್‌ ರಾಜ್ಯದ 11 ಜನ ಮಳೆಯಿಂದಾಗಿ ಮೃತಪಟ್ಟಿದ್ದಾರೆ.

ಕೇರಳದಲ್ಲಿ 2.11 ಲಕ್ಷ ಜನ ತೊಂದರೆಗೆ ಒಳಗಾಗಿದ್ದರೆ, ರಾಜ್ಯದ ಸುಮಾರು 32,500 ಹೆಕ್ಟೇರ್‌ ಪ್ರದೇಶದಷ್ಟು ಬೆಳೆಯನ್ನು ಮಳೆ ಆಹುತಿ ಪಡೆದಿದೆ. ಅಸ್ಸಾಂನಲ್ಲಿ 11.45 ಲಕ್ಷ ಜನ ಮಳೆಯಿಂದ ಸಂಕಷ್ಟಕ್ಕೆ ಈಡಾಗಿದ್ದು, 27,600 ಹೆಕ್ಟೇರ್‌ ಕೃಷಿ ಭೂಮಿಯಲ್ಲಿನ ಬೆಳೆ ನೀರಿನ ಪಾಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 2.27 ಲಕ್ಷ ಜನ ಮಳೆಯಿಂದ ತತ್ತರಿಸಿದ್ದು, 48,550 ಹೆಕ್ಟೇರ್‌ ಕೃಷಿ ಭೂಮಿಯಲ್ಲಿನ ಬೆಳೆ ಮಳೆನೀರಿಗೆ ಕೊಚ್ಚಿಹೋಗಿದೆ.

ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 14 ತಂಡಗಳು ಜನರನ್ನು ರಕ್ಷಿಸುವಲ್ಲಿ ನಿರತವಾಗಿವೆ. ಉತ್ತರ ಪ್ರದೇಶದಲ್ಲಿ ಒಟ್ಟು 9 ತಂಡಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 8 ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಗುಜರಾತ್‌ನಲ್ಲಿ 7, ಮಹಾರಾಷ್ಟ್ರದಲ್ಲಿ 4 ಮತ್ತು ನಾಗಲ್ಯಾಂಡ್‌ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವನ್ನು ರಕ್ಷಣಿಗಾಗಿ ನಿಯೋಜಿಸಲಾಗಿದೆ.