ಮುಂದುವರಿದ ಮಳೆ ಅವಾಂತರ; ಕೇರಳ, ಕರ್ನಾಟಕ ತತ್ತರ
ಸುದ್ದಿ ಸಾಗರ

ಮುಂದುವರಿದ ಮಳೆ ಅವಾಂತರ; ಕೇರಳ, ಕರ್ನಾಟಕ ತತ್ತರ

ಕೇರಳ ಹಾಗೂ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಗುರುವಾರವೂ ಮಳೆ ಅಬ್ಬರಿಸುತ್ತಿದೆ. ಮಳೆಯ ಅವಾಂತರದಿಂದ ಎರಡೂ ರಾಜ್ಯಗಳ ಕರಾವಳಿ, ಮಲೆನಾಡು ಭಾಗಗಳು ಅಕ್ಷರಶಃ ನೀರಲ್ಲಿ ಮುಳುಗಿವೆ.

ಕೇರಳ ಹಾಗೂ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಕೇರಳದಲ್ಲಿ ಮಳೆಯಿಂದ ಸೃಷ್ಟಿಯಾದ ಅವಾಂತರಕ್ಕೆ ಈ ವರೆಗೆ 73 ಮಂದಿ ಬಲಿಯಾಗಿದ್ದಾರೆ. ಕರ್ನಾಟಕದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಗೆ ಹಲವೆಡೆ ರಸ್ತೆಗಳ ಮೇಲೆ ಗುಡ್ಡ ಕುಸಿತ ಉಂಟಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದ ಕೆಲವೆಡೆ ಮನೆಗಳ ಗೋಡೆಗಳು ಕುಸಿದಿವೆ.

ಗುರುವಾರ ಮತ್ತು ಶುಕ್ರವಾರ ಮತ್ತೆ ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೇರಳದಲ್ಲಿ ಮಳೆ ಬಿರುಸಾಗಿರುವುದರಿಂದ 12 ಜಿಲ್ಲೆಗಳಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ವಾಯುಸೇನೆ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಮುಳುಗಡೆ ಪ್ರದೇಶದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಕೇರಳದಲ್ಲಿ ಮುಂದಿನ ಮೂರು ದಿನಗಳ ಕಾಲ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಸಮುದ್ರ ತೀರದ ಪ್ರದೇಶಗಳು ಹಾಗೂ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಪ್ರವಾಹದ ಕಾರಣದಿಂದ ಸದ್ಯಕ್ಕೆ ಕೇರಳಕ್ಕೆ ಬರದಂತೆ ಕೇರಳ ಸರಕಾರ ಪ್ರವಾಸಿಗರಲ್ಲಿ ಮನವಿ ಮಾಡಿದೆ. ಕೇರಳದ ಪ್ರಮುಖ ಪ್ರವಾಸಿ ಸ್ಥಳಗಳಾದ ಕೊಚ್ಚಿ, ಅಲಪ್ಪುಳ (ಅಲೆಪ್ಪಿ) ಬಹುತೇಕ ಮುಳುಗಿವೆ. ಮುನ್ನಾರ್‌ ಕಣಿವೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಪ್ರವಾಸಿಗರ ವಾಹನಗಳು ಮುನ್ನಾರ್‌ ಪ್ರವೇಶಿಸದಂತೆ ತಡೆಯಲಾಗಿದೆ.

Also read: ದೇವರ ಸ್ವಂತನಾಡಲ್ಲೀಗ ಮಹಾಮಳೆ ತಂದ ಕೊಳೆ ತೊಳೆಯುವ ಧಾವಂತ

ಮಳೆ ಸೃಷ್ಟಿಸಿರುವ ಅವಾಂತರದಿಂದ ಕೇರಳದಲ್ಲಿ ಸಾವಿರಾರು ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಉಳಿಯುವಂತಾಗಿದೆ. ಹಿನ್ನೀರಿನಲ್ಲಿ ದೋಣಿಮನೆಗಳ ವಿಹಾರವೇ ಪ್ರಮುಖ ಆದಾಯ ಮೂಲವಾಗಿದ್ದ ಅಲೆಪ್ಪಿ, ಕೊಲ್ಲಂಗಳಲ್ಲಿ ಈಗ ದೋಣಿಮನೆಗಳು ನೀರಲ್ಲಿ ಮುಳುಗಿವೆ. ಸದ್ಯಕ್ಕೆ ಅಲ್ಲಿನ ಆರ್ಥಿಕತೆಗೆ ಪೆಟ್ಟು ಬಿದ್ದಿವೆ.

ಕೇರಳ ಸರಕಾರ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ದೇಶಕ್ಕೆ ಮೀಸಲಿರಿಸಿದ್ದ 30 ಕೋಟಿ ರೂಪಾಯಿಯನ್ನು ಪ್ರವಾಹ ಪರಿಹಾರ ಕಾರ್ಯಗಳಿಗೆ ವಿನಿಯೋಗಿಸಲು ತೀರ್ಮಾನಿಸಿದೆ. ಪ್ರವಾಹ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕೇಂದ್ರ ಸರಕಾರ ಕೈ ಜೋಡಿಸಿದೆ. ವಾಯುಸೇನೆಯ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ಭಾರೀ ಮಳೆಯಿಂದ ದಕ್ಷಿಣ ಕರ್ನಾಟಕದ ಬಹುತೇಕ ಜಲಾಶಯಗಳು ಉಕ್ಕಿ ಹರಿಯುತ್ತಿವೆ. ಲಿಂಗನಮಕ್ಕಿ, ಹಾರಂಗಿ, ಕೆಆರ್‌ಎಸ್, ಕಬಿನಿ, ಗೊರೂರು ಜಲಾಶಯಗಳಿಂದ ನದಿ ಪಾತ್ರಕ್ಕೆ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ. ಇದರಿಂದ ನದೀ ತೀರ ಪ್ರದೇಶದ ಕೆಲ ಗ್ರಾಮಗಳು ಹಾಗೂ ಕೃಷಿ ಭೂಮಿ ಜಲಾವೃತಗೊಂಡಿವೆ.

Also read: ‘ಕೇರಳ ಪ್ರವಾಹದ ಸಾಕ್ಷತ್ ವರದಿ’: ದೇವರ ನಾಡಿನ ಮೊದಲ ಬಲಿಯನ್ನು ಹುಡುಕುತ್ತಾ...

ಮಳೆಯ ಕಾರಣ ಸುಳ್ಯ, ಬಂಟ್ವಾಳ ತಾಲ್ಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ‌ಸುಬ್ರಹ್ಮಣ್ಯ ಕುಲ್ಕುಂದ ಕುದುರೆಮಜಲು ಎಂಬಲ್ಲಿ ಸುಮಾರು 15 ಮನೆಗಳು ಮುಳುಗಡೆಯಾಗಿವೆ. ಈ ಮನೆಗಳ ಕುಟುಂಬಗಳನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಿ ತಾತ್ಕಾಲಿಕ ಸೂರು ಒದಗಿಸಲಾಗಿದೆ.

ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ಸಂಪೂರ್ಣ ಜಲಾವೃತವಾಗಿದೆ. ಕುಮಾರಧಾರ, ದರ್ಪಣ ತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ಸುಬ್ರಹ್ಮಣ್ಯ ಸುತ್ತಮುತ್ತಲಿನ ಕಲ್ಮಕಾರು, ಬಾಳುಗೋಡು, ಗುತ್ತಿಗಾರು, ಬಳ್ಪ, ಏನೆಕಲ್, ಪಂಜ ಸೇರಿದಂತೆ ಹಲವು ಕಡೆಗಳಲ್ಲಿ ಸೇತುವೆಗಳು ಮುಳುಗಿವೆ. ಇದರಿಂದ ಕುಕ್ಕೆ ಸುಬ್ರಹ್ಮಣ್ಯದ ಸಂಪರ್ಕ ಕಡಿತವಾಗಿದೆ. ಮಡಿಕೇರಿ ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.

ಇನ್ನು ಮಳೆ ಕರಾವಳಿ ಭಾಗದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲೂ ಅವಾಂತರ ಸೃಷ್ಟಿಸಿದೆ. ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಹಿತ್ತಲ ಶಿರೂರ ಗ್ರಾಮದಲ್ಲಿ ಮಳೆಯಿಂದಾಗಿ ಬುಧವಾರ ರಾತ್ರಿ ಗೋಡೆ ಕುಸಿದು ಬಿದ್ದು ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ.

ಮಿತಿ ಮೀರುತ್ತಿರುವ ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯದಿಂದ ಈ ರೀತಿಯ ಪ್ರಾಕೃತಿಕ ವಿಕೋಪಕ್ಕೆ ಮನುಷ್ಯ ತುತ್ತಾಗಬೇಕಿದೆ. ಮೊದಲೆಲ್ಲಾ ಚೀನಾ, ಜಪಾನ್‌ ಹಾಗೂ ಉತ್ತರ ಭಾರತದಿಂದ ಬರುತ್ತಿದ್ದ ಭಾರೀ ಪ್ರವಾಹದ ಸುದ್ದಿಗಳು ಈಗ ದಕ್ಷಿಣ ಭಾರತದಿಂದಲೂ ಬರುವಂತಾಗಿವೆ.