ಡೋಂಟ್‌ ವರಿ; ಬೆಂಗಳೂರಲ್ಲಿ ದೊಡ್ಡ ಪ್ರಮಾಣದ ಭೂಕಂಪದ ಸಾಧ್ಯತೆಯೇ ಇಲ್ಲ!
ಸುದ್ದಿ ಸಾಗರ

ಡೋಂಟ್‌ ವರಿ; ಬೆಂಗಳೂರಲ್ಲಿ ದೊಡ್ಡ ಪ್ರಮಾಣದ ಭೂಕಂಪದ ಸಾಧ್ಯತೆಯೇ ಇಲ್ಲ!

ಭೂಗರ್ಭ ವಿಜ್ಞಾನಿಗಳ ಪ್ರಕಾರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಾಧ್ಯವೇ ಇಲ್ಲ. ಹೀಗಾಗಿ ಭೂಕಂಪದ ಸುದ್ದಿಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಗುರುವಾರ ಮಧ್ಯಾಹ್ನ ದೊಡ್ಡ ಪ್ರಮಾಣದ ಸದ್ದು ಕೇಳಿ ಬಂದಿದೆ. ಈ ಸದ್ದು ಭೂಕಂಪನದಿಂದಾಗಿದೆ ಎಂಬ ವದಂತಿಗಳು ಹಬ್ಬಿವೆ. ಆದರೆ, ಭೂಗರ್ಭ ವಿಜ್ಞಾನಿಗಳ ಪ್ರಕಾರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಭೂಕಂಪನ ಸಾಧ್ಯವೇ ಇಲ್ಲ.

ಮೋಡಗಳ ಡಿಕ್ಕಿಯಿಂದ ಈ ಸದ್ದು ಕೇಳಿಬಂದಿರಬಹುದು ಎಂದು ಕೆಲ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಬೆಂಗಳೂರಿನ ಯಾವ ಭಾಗದಲ್ಲೂ ಭೂಮಿ ಕಂಪಸಿದ ಅನುಭವವಾಗಿಲ್ಲ. ಬೆಂಗಳೂರಿನಲ್ಲಿ ಭೂಕಂಪದ ಯಾವುದೇ ಕಂಪನ ದಾಖಲಾಗಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭೂಗರ್ಭ ವಿಜ್ಞಾನಿಗಳು ಹೇಳುವ ಪ್ರಕಾರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕಂಪ ಸಾಧ್ಯವಿಲ್ಲ. ಏಕೆಂದರೆ ಬೆಂಗಳೂರು ಇರುವ ಪ್ರದೇಶದ ಭೂಗರ್ಭ ಶಿಲೆ ಅತ್ಯಂತ ಪುರಾತನವಾದುದು. ಸುಮಾರು 450 ಕೋಟಿ ವರ್ಷದಷ್ಟು ಹಳೆಯದಾದ ಪುರಾತನ ಶಿಲೆಯ ಮೇಲಿದೆ ಬೆಂಗಳೂರು. ಹೀಗಾಗಿ ದೊಡ್ಡ ಪ್ರಮಾಣದ ಭೂಕಂಪ ಬೆಂಗಳೂರಿನಲ್ಲಾಗುವುದಿಲ್ಲ. ಇಲ್ಲಿನ ಅಡಿಪಾಯವೇ ಭದ್ರವಾಗಿದೆ. ಹೀಗಾಗಿ ಬೆಂಗಳೂರಿಗರಿಗೆ ಭೂಕಂಪದ ಭಯಬೇಡ ಎಂಬ ಧೈರ್ಯ ತುಂಬುತ್ತಾರೆ ಭೂಗರ್ಭ ವಿಜ್ಞಾನಿ ಟಿ.ಆರ್‌. ಅನಂತರಾಮ್‌.

“ಬೆಂಗಳೂರಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಭೂಕಂಪಗಳಾದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದ ಕಂಪನ ಉಂಟಾಗಿದ್ದ ಉದಾಹರಣೆಗಳಿವೆ. ಹಿಂದೆ ತಮಿಳುನಾಡಿನ ಹೊಸೂರಿನಲ್ಲಿ ಭೂಕಂಪವಾಗಿದ್ದಾಗ ಬೆಂಗಳೂರಿನಲ್ಲಿ ಭೂಮಿ ಕಂಪಿಸಿತ್ತು. 1993ರಲ್ಲಿ ಮಹಾರಾಷ್ಟ್ರದ ಕಿಲಾರಿಯಲ್ಲಿ ಭೂಕಂಪವಾದಾಗಲೂ ಕೂಡಾ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದ ಕಂಪನವಾಗಿತ್ತು. ಮದ್ದೂರಿನಲ್ಲಿ ಭೂಕಂಪವಾಗಿದ್ದಾಗಲೂ ಬೆಂಗಳೂರಿನ ಭೂಮಿ ಕಂಪಿಸಿತ್ತು. ಆದರೆ, ಈ ಕಂಪನ ಕೆಲವೇ ಸೆಕೆಂಡ್‌ಗಳದ್ದು” ಎನ್ನುತ್ತಾರೆ ಅವರು.

“ಬೆಂಗಳೂರಿನ ಭೂತಳದಲ್ಲಿರುವ ಶಿಲೆಗೆ ಹೋಲಿಸಿದರೆ ಹಿಮಾಲಯ ಪರ್ವತ ಪ್ರದೇಶಗಳು ತೀರಾ ಇತ್ತೀಚಿನವು. ಹಿಮಾಲಯ ಪರ್ವತಗಳು ಸುಮಾರು 6 ಕೋಟಿ ವರ್ಷಗಳಷ್ಟು ಹಿಂದಿನವು. ಹೀಗಾಗಿ ಅಲ್ಲಿ ಪದೇ ಪದೇ ಭೂಕಂಪನವಾಗುತ್ತಿರುತ್ತದೆ. ಹಿಮಾಲಯ ಪರ್ವತ ಪ್ರದೇಶದ ಸ್ವಲ್ಪ ಅಲುಗಿದರೂ ಉತ್ತರಾಖಂಡ ಸುತ್ತಮುತ್ತ ಭೂಕಂಪವಾಗುತ್ತದೆ. ಆದರೆ, ಬೆಂಗಳೂರು ಭೂತಳ ಆ ರೀತಿ ಇಲ್ಲ” ಎಂಬುದು ಅವರ ಮಾತು.

“ಈ ಹಿಂದೆ ಕೂಡಾ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಭೂಕಂಪ ಆಗಿರುವ ಉದಾಹರಣೆಗಳಿಲ್ಲ. ದೂರದಲ್ಲೆಲ್ಲೋ ಭೂಕಂಪವಾಗಿದ್ದರೆ ಬೆಂಗಳೂರಿನಲ್ಲೂ ಸಣ್ಣ ಪ್ರಮಾಣದ ಕಂಪನಗಳು ಉಂಟಾಗಿವೆಯಷ್ಟೆ. ಆದರೆ, ಆ ಕಂಪನಗಳ ತೀವ್ರತೆ ತುಂಬಾ ಕಡಿಮೆ” ಎನ್ನುತ್ತಾರೆ ಅನಂತರಾಮ್‌.

ಬೆಂಗಳೂರಲ್ಲಿ ಈ ಹಿಂದೆ ಕೂಡಾ ಹಲವು ಸಲ ಭಾರೀ ಪ್ರಮಾಣದ ಸದ್ದುಗಳು, ಸಣ್ಣಗೆ ಭೂಮಿ ಕಂಪಿಸಿದ ಅನುಭವಗಳಾಗಿರುವುದು ನಿಜ. ಆದರೆ, ವಿಜ್ಞಾನಿಗಳ ಪ್ರಕಾರ ಬೆಂಗಳೂರಲ್ಲಿ ಜೀವ ಹಾನಿ, ಆಸ್ತಿ ಹಾನಿಯಾಗುವ ಪ್ರಮಾಣದ ಭೂಕಂಪದ ಸಾಧ್ಯತೆಯೇ ಕಡಿಮೆ. ಹೀಗಾಗಿ ಭೂಕಂಪದ ಸುದ್ದಿಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.