samachara
www.samachara.com
ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?
/NDTV.com
ಸುದ್ದಿ ಸಾಗರ

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ಭಾರತದ ಸ್ವತಂತ್ರಕ್ಕಾಗಿ ಹಂಬಲಿಸಿದ ಎಲ್ಲಾ ಹೋರಾಟಗಾರರಿಗೂ ಕೂಡ ತಮ್ಮ ತಮ್ಮದೇ ಆದ ಸ್ವತಂತ್ರ ಭಾರತದ ಮಾದರಿಗಳಿದ್ದವು. ಇಂದು ಭಾರತ ಆ ಯಾವ ಮಾದರಿಗೆ ಹತ್ತಿರವಾಗಿದೆ? 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಇಂದು ಭಾರತದುದ್ದಕ್ಕೂ 72ನೇ ಸ್ವತಂತ್ರ್ಯೋತ್ಸವದ ಸಂಭ್ರಮ. ಶಾಲೆ, ಕಾಲೇಜು, ಕಚೇರಿ, ಆಸ್ಪತ್ರೆ, ಕಾರ್ಖಾನೆ ಸೇರಿದಂತೆ ವಾಟ್ಸ್‌ಆಪ್‌, ಫೇಸ್‌ಬುಕ್‌ ಇನ್ನಿತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವತಂತ್ರ್ಯ ಭಾರತದ ಕೀರ್ತಿ ಮೊಳಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಗುತ್ತಿದೆ. ಆದರೆ ಅಂದು ಹೋರಾಟಗಾರರು ಹಂಬಲಿಸಿದ್ದ ಸ್ವಾತಂತ್ರ್ಯವನ್ನು ಇಂದಿನ ಭಾರತೀಯರು ಅನುಭವಿಸುತ್ತಿದ್ದಾರೆಯೇ ಎಂದು ಚಿಂತಿಸುವವರ ಸಂಖ್ಯೆ ಕಡಿಮೆ. ಹಾಗಾದರೆ ನಮ್ಮ ಕೆಲವು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭಾರತ ಹೇಗಿರಬೇಕಿತ್ತು? ಮುಂದೆ ಓದಿ...

ಗಾಂಧಿಯ ಗ್ರಾಮ ಸ್ವರಾಜ್ಯ’:

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ಸ್ವತಂತ್ರ ಭಾರತ ಗಾಂಧಿಯ ಕನಸಿನಂತೆ ಸಾಕಾರಗೊಂಡಿದ್ದರೆ ಇಂದು ಭಾರತೀಯ ಸರಕಾರಗಳ ದೃಷ್ಟಿಕೋನ ಗ್ರಾಮಗಳ ಅಭಿವೃದ್ಧಿ ಕಡೆಗೆ ಇರುತ್ತಿತ್ತು. ಗಾಂಧಿಯ ಗ್ರಾಮಾಭಿವೃದ್ಧಿ ಎಂದರೆ ರಸ್ತೆ, ಚರಂಡಿ, ಸಮುದಾಯ ಭವನಗಳ ನಿರ್ಮಾಣವಲ್ಲ. ಹಳ್ಳಿಗಳು ಬಡತನ ಮುಕ್ತವಾಗಿರುತ್ತಿದ್ದವು. ಕೃಷಿ ಪ್ರಾಮುಖ್ಯತೆ ಪಡೆಯುತ್ತಿತ್ತು. ನಗರಗಳ ಸುತ್ತಮುತ್ತ ಕೈಗಾರಿಕಾ ವಲಯಗಳ ಸ್ಥಾಪನೆಯ ಬದಲಾಗಿ ಹಳ್ಳಿ ಹಳ್ಳಿಗಳಲ್ಲಿ ಗುಡಿ ಕೈಗಾರಿಕೆಗಳಿರುತ್ತಿದ್ದವು. ಅಧಿಕಾರ ಕೇಂದ್ರೀಕೃತವಾಗಿರದೇ, ಹಳ್ಳಿಗಳಿಂದ ದಿಲ್ಲಿಯತ್ತ ಸಾಗುತ್ತಿತ್ತು. ಇಲ್ಲಿ ಭಾರತೀಯನ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಆಗಿರುತ್ತಿತ್ತು.

ಗಾಂಧಿ ಕನಸಿದಂತೆ ಭಾರತ ತನ್ನದೇ ಮಾದರಿಯ ಶಿಕ್ಷಣ ಪದ್ಧತಿಯನ್ನು ಅನುಸರಿಸಬೇಕಿತ್ತು. ಪಾಶ್ಚಿಮಾತ್ಯ ಶಿಕ್ಷಣದಿಂದ ಭಾರತದ ಸಂಸ್ಕೃತಿ ನಾಶವಾಗುತ್ತದೆ ಎಂದು ನಂಬಿದ್ದ ಗಾಂಧಿ, ಕೌಶಲ್ಯ ಆಧಾರಿತವಾದ ಶಿಕ್ಷಣ ಬೇಕು ಎಂದು ಬಯಸಿದ್ದರು. ಭಾರತೀಯರು ಪಡೆದ ಶಿಕ್ಷಣ ಅವರಿಗೆ ಉಪಯುಕ್ತವಾಗುವಂತೆ ಇರಬೇಕಿತ್ತು. ಶಿಕ್ಷಣ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಧ್ಯಯನಗಳಿಂದ ಕೂಡಿರಬೇಕಿತ್ತು. ಶಿಕ್ಷಣದಿಂದಾಗಿ ಸ್ವ ಅರಿವು ಜಾಗೃತಗೊಳ್ಳಬೇಕಿತ್ತು, ಸಾಮಾಜಿಕ ಪಿಡಿಗುಗಳನ್ನು ಬಗೆಹರಿಸುವತ್ತ ಸುಶಿಕ್ಷಿತರು ಗಮನ ಹರಿಸಬೇಕಿತ್ತು. ಶಿಕ್ಷಣ ಪಡೆದವರು ಎಲ್ಲಾ ವೃತ್ತಿಗಳು ಸಮಾನವೆಂದು ಭಾವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿತ್ತು. ಎಲ್ಲಾ ವೃತ್ತಿಗಳಿಗೂ ಸಮಾನ ಗೌರವ ಮತ್ತು ಸಮಾನ ವೇತನ ದೊರೆಯಬೇಕಿತ್ತು.

ಗಾಂಧಿ ಭಾರತದಲ್ಲಿ ವ್ಯಾಪಕವಾಗಿ ಕಾಣಿಸುತ್ತಿದ್ದುದು ಸತ್ಯ ಮತ್ತು ಅಹಿಂಸೆ. ಇಲ್ಲಿ ಸೈನ್ಯಕ್ಕೆ ಜಾಗವೇ ಇರುತ್ತಿರಲಿಲ್ಲ. ಪೊಲೀಸರಿದ್ದರೂ ಕೂಡ ಅಗತ್ಯಕ್ಕಿಂತ ಹೆಚ್ಚಿನ ಆಯುಧಗಳನ್ನು ಬಳಸುತ್ತಿರಲಿಲ್ಲ. ಜನ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳತ್ತ ಗಮನ ಕೊಡುತ್ತಿದ್ದರೇ ವಿನಃ ತಮ್ಮ ಹಕ್ಕುಗಳಿಗಾಗಿ ಬಡಿದಾಡುತ್ತಿರಲಿಲ್ಲ. ಏಕೆಂದರೆ ಯಾರ ಹಕ್ಕುಗಳಿಗೂ ಕೂಡ ಅಲ್ಲಿ ಚ್ಯುತಿ ಬರುತ್ತಿರಲಿಲ್ಲ.

ಸ್ವಾತಂತ್ರವೆಂದರೆ ಕೇವಲ ಅಧಿಕಾರದ ಹಸ್ತಾಂತರವಲ್ಲ ಎಂದು ಗಾಂಧಿ ನಂಬಿದ್ದರು. ಭಾರತಕ್ಕೆ ದೊರೆತ ಸ್ವಾತಂತ್ರ್ಯ ನಾನು ಬಯಸಿದ ಸ್ವಾತಂತ್ರವಲ್ಲ ಎಂದೂ ಗಾಂಧಿ ಹೇಳಿದ್ದರು. ಗಾಂಧಿ ಪ್ರಕಾರ ಪ್ರಜಾಪ್ರಭುತ್ವ ಎನ್ನುವುದು ಸರಕಾರಕ್ಕಿಂತಲೂ ದೊಡ್ಡದು. ನಿಜವಾದ ಪ್ರಜಾಪ್ರಭುತ್ವದಲ್ಲಿ ಹಿಂಸೆ ಇರುವುದಿಲ್ಲ. ಹಿಂಸೆಯ ಬದಲಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆ ದೊರೆಯುತ್ತದೆ. ಗಾಂಧಿಯ ಪ್ರಕಾರ ಪ್ರಜಾಪ್ರಭುತ್ವ ಎಂದರೆ ಜೀವನ ಸಾಗಿಸುವ ಮಾರ್ಗ.

ಗಾಂಧಿಯ ಭಾರತದಲ್ಲಿ ರಷ್ಯಾ ಮಾದರಿಯ ವ್ಯಾಪಕ ಕೈಗಾರಿಕೀಕರಣ ನಡೆಯುವುದರ ಬದಲು ದೇಶದ ಬಹುಪಾಲು ಜನ ಜೀವಿಸುತ್ತಿದ್ದ ಹಳ್ಳಿಗಳಲ್ಲಿ ಚಿಕ್ಕ ಪುಟ್ಟ ಕೈಗಾರಿಕೆಗಳು ತೆರೆಯಲ್ಪಡುತ್ತಿದ್ದವು. ಗಾಂಧಿಗೆ ಬೇಕಿದ್ದದ್ದು ಹಳ್ಳಿಗಳ ಅಭಿವೃದ್ಧಿಯೇ ಹೊರತು ಬಂಡವಾಳಶಾಹಿ ವ್ಯವಸ್ಥೆಯಲ್ಲ.

ಭಗತ್‌ ಸಿಂಗ್‌ ಪೂರ್ಣ ಸ್ವರಾಜ್ಯದ ಭಾರತ:

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ಹುತಾತ್ಮ ಭಗತ್‌ ಸಿಂಗ್‌ಗೆ ಬೇಕಾಗಿದ್ದದ್ದು ಜಾತಿ, ಮತ, ಧರ್ಮ, ವರ್ಣ, ವರ್ಗ, ಸಮುದಾಯಗಳೆಲ್ಲವನ್ನೂ ಮೀರಿದ ಮಾನವತೆ ಮತ್ತು ಭ್ರಾತೃತ್ವ. ಗಾಂಧಿಯ ಅಹಿಂಸಾವಾದಿ ಸಿದ್ಧಾಂತವನ್ನು ಕಟುವಾಗಿ ಟೀಕಿಸಿದ ಭಗತ್‌ ಸಿಂಗ್‌ ಬಯಸಿದ್ದು ‘ಪೂರ್ಣ ಸ್ವರಾಜ್ಯ’. ಗಾಂಧಿ ನೇತೃತ್ವದ ಕಾಂಗ್ರೆಸ್‌ ಹೋರಾಟದಿಂದ ತಮ್ಮ ಕನಸಿನ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಭಗತ್‌ ಸಿಂಗ್‌ಗೆ ಇರಲಿಲ್ಲ.

ರಷ್ಯಾ ಕ್ರಾಂತಿಯಿಂದ ಪ್ರಭಾವಿತರಾಗಿದ್ದ ಭಗತ್‌ ಸಿಂಗ್‌, ಮಾರ್ಕ್ಸ್‌, ಲೆನಿನ್‌ ಸಿದ್ಧಾಂತಗಳಿಂದ ಪ್ರೇರೇಪಿತರಾಗಿದ್ದರು. “ಇಂದಲ್ಲ ನಾಳೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುತ್ತಾರೆ, ಆ ಜಾಗವನ್ನು ಭಾರತೀಯರು ತುಂಬುತ್ತಾರೆ. ಅದು ನಿಜವಾದ ಸ್ವಾತಂತ್ರ್ಯವಲ್ಲ,” ಎಂಬ ಭಾವನೆ ಭಗತ್‌ ಸಿಂಗ್‌ರಲ್ಲಿ ಗಟ್ಟಿಯಾಗಿ ಬೇರು ಬಿಟ್ಟಿತ್ತು. ಭಾರತದ ಇಡೀ ವ್ಯವಸ್ಥೆಯನ್ನು ಬದಲಾಯಿಸಿ ಮಾರ್ಕ್ಸ್‌ವಾದದ ಅಧಾರದ ಮೇಲೆ ಭಾರತವನ್ನು ಕಟ್ಟುವ ಕನಸನ್ನು ಭಗತ್‌ ಸಿಂಗ್‌ ಹೊಂದಿದ್ದರು. ತಮ್ಮ ‘To Young political workers’ ಬರಹಗಳಲ್ಲಿ ಭಗತ್‌ ಸಿಂಗ್‌ ತಮ್ಮ ರಾಜಕೀಯ ದೃಷ್ಟಿಕೋನಗಳನ್ನು ವಿವರಿಸಿದ್ದರು. ಸಾಮ್ರಾಜ್ಯಶಾಹಿ, ಬಂಡವಾಳಶಾಹಿಗಳಿಂದ ಮುಕ್ತವಾದ ಭಾರತ ನಿರ್ಮಿಸುವತ್ತ ಭಗತ್‌ ಸಿಂಗ್‌ ಉತ್ಸುಕರಾಗಿದ್ದರು.

‘ಅರಾಜಕತೆ’ಯ ಕಡೆಗೆ ಭಗತ್‌ ಸಿಂಗ್‌ ಒಲವಿತ್ತು. ಅರಾಜಕತೆ ಎಂಬ ಪದವನ್ನು ಕೇಳಿದ ಕೂಡಲೇ ಭಾರತೀಯರು ಭಯಭೀತರಾಗುತ್ತಾರೆ ಎಂದಿದ್ದ ಭಗತ್, ಸಾಲು ಸಾಲು ಲೇಖನಗಳಲ್ಲಿ ಅರಾಜಕತೆಯ ಬಗ್ಗೆ ವಿವರಿಸಿದ್ದರು. ಭಗತ್‌ ಸಿಂಗ್‌ರ ಅರಾಜಕತೆಯೆಂದರೆ ಅದು ‘ಸಂಪೂರ್ಣ ಸ್ವಾತಂತ್ರ್ಯ’. ಇಲ್ಲಿ ಯಾರೂ ಕೂಡ ದೇವರು ಅಥವಾ ಧರ್ಮದ ಗೀಳಿಗೆ ಬೀಳುವುದಿಲ್ಲ. ದುಡ್ಡು ಅಥವಾ ದುರಾಸೆಗಳಿಗೆ ಬಲಿಯಾಗುವುದಿಲ್ಲ. ಸರಕಾರಗಳ ಹಿಡಿತ ಇರುವುದಿಲ್ಲ. ಅರಾಜಕತೆಯಲ್ಲಿ ದೇವರು, ಧರ್ಮ, ಆರಾಧನಾ ಸ್ಥಳಗಳು, ಅಧಿಕಾರ, ಖಾಸಗಿ ಆಸ್ತಿಗಳಿಗೆ ಜಾಗವೇ ಇರುವುದಿಲ್ಲ. ರಾಜನಿಲ್ಲದೇ ಜನ ನೆಮ್ಮದಿಯಾಗಿ ಬಾಳುವಂತಹ ಈ ವ್ಯವಸ್ಥೆ ಸಾರ್ವತ್ರಿಕ ಸಹೋದರತ್ವಕ್ಕೆ ಬೆಲೆ ಕೊಡುತ್ತಿತ್ತು.

ಸುಭಾಷ್‌ ಚಂದ್ರ ಭೋಸರ ರಾಷ್ಟ್ರೀಯ ಸಮಾಜವಾದೀ ಭಾರತ:

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ಸುಭಾಷ್‌ ಚಂದ್ರ ಭೋಸ್‌ ಬಯಸಿದ ಸ್ವತಂತ್ರ ಭಾರತದ ಪರಿಕಲ್ಪನೆ ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗಿತ್ತು. ಬಾಲ್ಯದಲ್ಲಿ ಭೋಸ್‌ ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರ ಭಾರತದ ಪರಿಕಲ್ಪನೆಗಳಿಂದ ಪ್ರೇರೇಪಿತರಾಗಿದ್ದರು. ಭೋಸರ ರಾಜಕೀಯ ಮತ್ತು ಸಾಮಾಜಿಕ ನಿಲುವಿನಲ್ಲಿ ಹಿಂದು ಆಧ್ಯಾತ್ಮಿಕತೆಯ ಸೆಳೆತ ಹೆಚ್ಚಾಗಿದ್ದರೂ ಕೂಡ ಕಟ್ಟರ್‌ ಹಿಂದುತ್ವದತ್ತ ಭೋಸ್‌ ಗಮನ ಹರಿದಿರಲಿಲ್ಲ. ತಮ್ಮನ್ನು ತಾವು ಸಮಾಜವಾದಿ ಎಂದು ಕರೆದುಕೊಂಡ ಭೋಸ್‌, ಸ್ವಾಮಿ ವಿವೇಕಾನಂದರ ಸಾಮಾಜವಾದವನ್ನು ಭಾರತದಲ್ಲಿ ನೆಲೆಗೊಳಿಸಲು ಚಿಂತಿಸಿದ್ದರು.

ಗಾಂಧಿಯ ರಾಜಕೀಯ ನಿಲುವುಗಳ ಜತೆ ಭಿನ್ನಾಭಿಪ್ರಾಯ ಮೂಡಿದಾಗ ರಾಷ್ಟ್ರೀಯ ಕಾಂಗ್ರೆಸ್‌ಅನ್ನು ಬಿಟ್ಟು ಹೊರನಡೆದ ಭೋಸ್‌ಗೆ ಕಮ್ಯುನಿಸ್ಟ್‌ ಮತ್ತು ನಾಸ್ತಿಕ ಸೋಷಿಯಲಿಸ್ಟ್‌ ಸಿದ್ಧಾಂತಗಳಲ್ಲೂ ಸಹಮತವಿರಲಿಲ್ಲ.

ಸುಭಾಷ್‌ ಚಂದ್ರ ಭೋಸ್‌ ಮೊದಲು ಆಧುನಿಕ ಯುರೋಪ್‌ ದೇಶಗಳಲ್ಲಿದ್ದ ಸೋಷಿಯಲಿಸಮ್‌ ಮತ್ತು ಫ್ಯಾಸಿಸಂ ನಡುವಿನ ದಾರಿ ನಮ್ಮದಾಗಬೇಕು ಎಂದಿದ್ದರು. ನಂತರದಲ್ಲಿ ಅವರ ಆಲೋಚನೆಗಳು ಬದಲಾಗಿ ಎರಡರ ನಡುವೆ ಹೊಸದೊಂದನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದರು. ರಾಷ್ಟ್ರೀಯತೆ ಮತ್ತು ಧಾರ್ಮಿಕತೆಯನ್ನು ವಿರೋಧಿಸುವ ಕಮ್ಯುನಿಸಂ ಸುಭಾಷರಿಗೆ ಒಗ್ಗಿರಲಿಲ್ಲ.

1944ರ ಹೊತ್ತಿಗೆ ಇಂಡಿಯನ್‌ ನ್ಯಾಷನಲ್‌ ಆರ್ಮಿಯನ್ನು ಸಿದ್ಧಗೊಳಿಸಿದ್ದ ಸುಭಾಷ್‌ ಚಂದ್ರ ಭೋಸ್‌ ‘ನ್ಯಾಷನಲ್‌ ಸೋಷಿಯಲಿಸಂ ಮತ್ತು ಕಮ್ಯುನಿಸಂ ಎರಡರ ಅಂಶಗಳನ್ನೂ ಒಳಗೊಂಡು ನಮ್ಮ ಸಿದ್ಧಾಂತ ರೂಪುಗೊಳ್ಳಬೇಕು’ ಎಂದರು. ಮಹಿಳಾ ಸಬಲೀಕರಣ, ಜಾತ್ಯಾತೀತತೆ ಸೇರಿದಂತೆ ಇನ್ನಿತರ ಉದಾರವಾದಿ ಆಲೋಚನೆಗಳು ಸುಭಾಷ್‌ ಚಂದ್ರ ಭೋಸ್‌ರಲ್ಲಿ ಮೇಳೈಸಿದ್ದವು. ಪ್ರಜಾಪ್ರಭುತ್ವದಿಂದ ಭಾರತದ ಸಮಗ್ರ ಬದಲಾವಣೆ ಸಾಧ್ಯವೇ ಇಲ್ಲ ಎನ್ನುವುದು ಅವರ ವಾದವಾಗಿತ್ತು. ಇತ್ತ ಪ್ರಜಾಪ್ರಭುತ್ವವೂ ಅಲ್ಲದ, ಅತ್ತ ಕಮ್ಯುನಿಸ್ಟ್‌ ರಾಷ್ಟ್ರವೂ ಅಲ್ಲದ, ರಾಷ್ಟ್ರೀಯತೆಯನ್ನು ಒಳಗೊಂಡ ಸಮಾಜವಾದಿ ಭಾರತವನ್ನು ಕಟ್ಟಲು ಸುಭಾಷ್‌ ಚಂದ್ರ ಭೋಸ್‌ ಮುಂದಾಗಿದ್ದರು.

ಅಂಬೇಡ್ಕರ್‌ ಚಿಂತನೆಯ ‘ಸ್ಟೇಟ್‌ ಸೋಷಿಯಲಿಸ್ಟ್‌ ಭಾರತ’:

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಕೊಟ್ಟ ಡಾ. ಬಿ.ಆರ್‌.ಅಂಬೇಡ್ಕರ್‌, ಸ್ವತಂತ್ರ ಭಾರತ ಎಲ್ಲಾ ರೀತಿಯ ತಾರತಮ್ಯಗಳಿಂದ ಮುಕ್ತವಾಗಬೇಕು ಎಂದು ಬಯಸಿದ್ದರು. ಸಹಸ್ರಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳು ಘನತೆಯ ಜೀವನವನ್ನು ನಡೆಸಬೇಕು ಎಂದು ಅಂಬೇಡ್ಕರ್‌ ಬಯಸಿದ್ದರು.

ಮಹಿಳೆಗೆ ಪುರುಷನಷ್ಟೇ ಅವಕಾಶಗಳು ಲಭ್ಯವಾಗಬೇಕು ಎನ್ನುವುದು ಅಂಬೇಡ್ಕರರ ವಾದವಾಗಿತ್ತು. ಮಾನವನೊಬ್ಬನಿಗೆ ಜೀವಿಸುವ ಹಕ್ಕು, ಶಿಕ್ಷಣ ಪಡೆಯುವ ಹಕ್ಕು, ಇಚ್ಛಿಸಿದ ದೇವರನ್ನು ಪೂಜಿಸುವ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳು ಖಂಡಿತವಾಗಿ ದೊರೆಯಲೇಬೇಕು ಎಂದು ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ಅಂಬೇಡ್ಕರರ ಭಾರತದಲ್ಲಿ ಎಲ್ಲಾ ಧರ್ಮಗಳು, ಮತ, ಪಂಗಡ, ವರ್ಗಗಳು ಒಂದೇ ಆಗಿರುತ್ತಿದ್ದವು. ಮೇಲು ಕೀಳುಗಳಿಲ್ಲದ ಸಮಸಮಾಜದಲ್ಲಿ ಜನ ಬದುಕುತ್ತಿದ್ದರು.

ನೆಹರೂ ಚಿಂತನೆಯ ಸಮಾಜವಾದಿ ಭಾರತ:

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ನೆಹರೂ ಭಾರತವನ್ನು ಸಮಾಜವಾದಿ ರಾಷ್ಟ್ರವಾಗಿ ಕಟ್ಟುವ ಯೋಚನೆಯನ್ನು ಹೊಂದಿದ್ದರು. ರಷ್ಯಾದ ಕೈಗಾರಿಕಾ ಅಭಿವೃದ್ಧಿಯತ್ತ ಅವರ ಮನಸು ಹರಿದಿತ್ತು. ಗಾಂಧಿಯ ಗ್ರಾಮ ಸ್ವರಾಜ್ಯಕ್ಕೆ ಸಂಪೂರ್ಣ ವಿರುದ್ಧವಾಗಿ ದೇಶಾದ್ಯಂತ ದೊಡ್ಡ ದೊಡ್ಡ ಕಾರ್ಖಾನೆಗಳ ನಿರ್ಮಾಣವಾಗಬೇಕು ಎಂದು ನೆಹರೂ ಚಿಂತಿಸಿದ್ದರು. ನಗರಗಳ ಅಭಿವೃದ್ಧಿ, ದೊಡ್ಡ ದೊಡ್ಡ ಡ್ಯಾಂಗಳ ನಿರ್ಮಾಣ, ರಸ್ತೆ, ಮೂಲಭೂತ ಸೌಲಭ್ಯಗಳು ಅಭಿವೃದ್ಧಿಯಾಗಬೇಕು ಎನ್ನುವುದು ನೆಹರೂರವರ ಆಲೋಚನೆ.

ಸಂಪೂರ್ಣವಾಗಿ ಆಧುನಿಕಗೊಳ್ಳುವ ಭಾರತದಲ್ಲಿ ಬಡತನ ಇರಬಾರದು ಎಂಬ ದೃಷ್ಟಿಕೋನವನ್ನು ಹೊಂದಿದ್ದ ನೆಹರೂ ವರ್ಗ ರಹಿತ ಸಮಾಜದ ನಿರ್ಮಾಣವನ್ನು ಬಯಸಿದ್ದರು. ಎಲ್ಲರಿಗೂ ಸಮಾನ ಅವಕಾಶಗಳು ದೊರೆತು, ಅವರ ದುಡಿಮೆಗೆ ತಕ್ಕ ನ್ಯಾಯಯುತವಾದ ಪಾಲು ಅವರದಾಗಬೇಕು ಎಂದು ನೆಹರೂ ಚಿಂತಿಸಿದ್ದರು. ಸಾಮಾಜಿಕ ನ್ಯಾಯವುಳ್ಳ, ಭದ್ರತೆಯಿಂದ ಕೂಡಿದ ತಾರತಮ್ಯ ರಹಿತ ಭಾರತ ನೆಹರೂರವರ ಬಯಕೆಯಾಗಿತ್ತು.

ಚಂದ್ರಶೇಖರ್‌ ಆಜಾದ್‌ರ ಸ್ವತಂತ್ರ ಭಾರತ:

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ಪ್ರಾರಂಭದಲ್ಲಿ ಚಂದ್ರಶೇಖರ್‌ ಆಜಾದ್‌ ಕೂಡ ಸ್ವಾತಂತ್ರ ಹೋರಾಟ ಅರಂಭಿಸಿದ್ದು ಗಾಂಧಿ ನೇತೃತ್ವದ ಕಾಂಗ್ರೆಸ್‌ ಜತೆ. ಆದರೆ ಕೆಲ ದಿನಗಳಲ್ಲಿ ಆಜಾದ್‌ರಿಗೆ ಗಾಂಧಿವಾದದ ಬಗ್ಗೆ ಬೇಸರ ಮೂಡಿತ್ತು. ಅಹಿಂಸೆಯನ್ನು ಬಿಟ್ಟು ಕ್ರಾಂತಿಕಾರಿ ಹೋರಾಟದತ್ತ ಆಜಾದ್‌ ಮುಖ ಮಾಡಿದ್ದರು. ಹಿಂದೂಸ್ತಾನ್‌ ರಿಪಬ್ಲಿಕನ್‌ ಅಸೋಸಿಯೇಷನ್‌ ಜತೆ ಕೈಜೋಡಿಸಿದ ಅಜಾದ್‌, ಸಮಾಜವಾದೀ ಧೋರಣೆಯ ಭಾರತವನ್ನು ರೂಪಿಸಲು ಮನಸು ಮಾಡಿದ್ದರು. ನಂತರ ಭಗತ್‌ ಸಿಂಗ್‌ರೊಟ್ಟಿಗೆ ಕೂಡಿಕೊಂಡಾಗ ಭಗತ್‌ ಸಿಂಗ್‌ ಅಲೋಚನೆಯ ಭಾರತದ ನಿರ್ಮಾಣದತ್ತ ಚಂದ್ರಶೇಖರ್‌ ಆಜಾದ್‌ ತುಡಿದಿದ್ದರು.

ಬಾಲ ಗಂಗಾಧರ ತಿಲಕರ ‘ಹಿಂದುತ್ವ ಭಾರತ’:

ಹ್ಯಾಪಿ ಇಂಡಿಪೆಂಡೆನ್ಸ್‌ ಡೇ; ಹೋರಾಟಗಾರರು ಬಯಸಿದ್ದ ‘ಸ್ವತಂತ್ರ ಭಾರತ’ ಹೇಗಿತ್ತು?

ಬಾಲ ಗಂಗಾಧರ ತಿಲಕರು ಬ್ರಿಟಿಷ್‌ ಸಾಮಾಜ್ಯಶಾಹಿಯನ್ನು ವಿರೋಧಿಸುವ ಹಿಂದೂ ಪರವಾದ ಸಿದ್ಧಾಂತವನ್ನು ತಮ್ಮದಾಗಿಸಿಕೊಂಡಿದ್ದರು. ಸಮಾಜವಾದ, ಸಮತಾವಾದ, ಉದಾರವಾದಗಳಲ್ಲೆಲ್ಲಾ ಅವರಿಗೆ ಆಸಕ್ತಿ ಇರಲಿಲ್ಲ. ರಾಮಾಯಣ, ಮಹಾಭಾರತಗಳನ್ನು ಸಂಪೂರ್ಣವಾಗಿ ನೆಚ್ಚಿಕೊಂಡಿದ್ದ ಬಾಲ ಗಂಗಾಧರ ತಿಲಕರು ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿ, ಭಾರತ ಮೊದಲಿನಂತಾಗಲಿ ಎಂದು ಬಯಸಿದ್ದರು. 1918ರಲ್ಲಿ ಬಂದ ಅಸ್ಪೃಷ್ಯತಾ ವಿರೋಧಿ ಕಾಯ್ದೆಗೆ ಸಹಿ ಹಾಕಲು ತಿಲಕ್‌ ವಿರೋಧಿಸಿದ್ದರು. ಅಂತರ್ಜಾತಿ ವಿವಾಹವನ್ನು ತಿರಸ್ಕರಿಸಿದ್ದರು. ಮಹಿಳಾ ಹಕ್ಕುಗಳನ್ನು ಸಂಪೂರ್ಣವಾಗಿ ಗಟ್ಟಿ ಧ್ವನಿಯಲ್ಲಿ ವಿರೋಧಿಸಿದ್ದರು. ತಿಲಕ್‌ ‘ಕರ್ಮ ಯೋಗ’ ಸಿದ್ಧಾಂತದ ಪ್ರಕಾರ ಭಾರತ ಮತ್ತೆ ತನ್ನ ಹಿಂದಿನ ಸ್ಥಿತಿಗೆ ಮರಳಬೇಕಿತ್ತು.

ಇವು ದೇಶದ ಪ್ರಮುಖ ಸ್ವತಂತ್ರ ಹೋರಾಟಗಾರರು ಕಟ್ಟಿಕೊಂಡಿದ ಭಾರತದ ಕಲ್ಪನೆ. ಪ್ರಸಕ್ತ ಭಾರತ ಈ ಯಾರೊಬ್ಬರ ಕನಸಿನ ಜತೆಗಾದರೂ ತಾಳೆಯಾಗುತ್ತಿದೆಯೇ? ನೀವೇ ಯೋಚಿಸಿ...