samachara
www.samachara.com
ಕೆಂಪುಕೋಟೆಯಲ್ಲಿ ಭಾರತ ‘ಮುಂಚೂಣಿ’ಯ ಮಂತ್ರ, ಕರ್ನಾಟಕದಲ್ಲಿ ಅಖಂಡತೆಯ ಜಪ
ಸುದ್ದಿ ಸಾಗರ

ಕೆಂಪುಕೋಟೆಯಲ್ಲಿ ಭಾರತ ‘ಮುಂಚೂಣಿ’ಯ ಮಂತ್ರ, ಕರ್ನಾಟಕದಲ್ಲಿ ಅಖಂಡತೆಯ ಜಪ

ಪ್ರಧಾನಿ ನರೇಂದ್ರ ಮೋದಿ, ಭಾರತ ಎಲ್ಲಾ ವಲಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಖಂಡ ಕರ್ನಾಟಕದ ಮಾತನ್ನಾಡಿದ್ದಾರೆ.

Team Samachara

72ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲಿ ಭಾರತ ಮುನ್ನಗ್ಗುತ್ತಿರುವ ಮಾತನ್ನಾಡಿದರೆ, ಬೆಂಗಳೂರಿನ ಮಾಣೆಕ್ ಷಾ ಪರೇಡ್‌ ಮೈದಾನದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಖಂಡ ಕರ್ನಾಟಕದ ಮಂತ್ರ ಜಪಿಸಿದ್ದಾರೆ.

ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ, “ಕಳೆದ ಏಳು ದಶಕಗಳಲ್ಲಿ ಭಾರತ ಸಾಕಷ್ಟು ಸಾಧಿಸಿದೆ. ಇಂದು ವಿಶ್ವ ಮಟ್ಟದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ. ಆರ್ಥಿಕ ಅಭಿವೃದ್ಧಿ, ತಂತ್ರಜ್ಞಾನ ವಲಯದಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಗತ್ತು ಇಂದು ಭಾರತದ ಬೆಳವಣಿಗೆಯ ವೇಗವನ್ನು ಬೆರಗುಗಣ್ಣಿಂದ ನೋಡುವಂತಾಗಿದೆ” ಎಂದಿದ್ದಾರೆ.

ಸುಮಾರು ಒಂದು ಗಂಟೆ ಕಾಲ ಮಾತನಾಡಿದ ಮೋದಿ ತಮ್ಮ ಭಾಷಣದಲ್ಲಿ ತಮಿಳು ಕವಿ ಸುಬ್ರಹ್ಮಣ್ಯ ಭಾರತಿ ಅವರ ಕವನದ ಸಾಲುಗಳನ್ನು ಉದ್ಧರಿಸಿದರು. “ದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರವಾಹಪೀಡಿತರ ಜತೆಗೆ ದೇಶದ ಜನತೆ ಇದ್ದಾರೆ. ಅವರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ” ಎಂದರು.

“2022ರ ವೇಳೆಗೆ ಸಾಧ್ಯವಾದರೆ ಅದಕ್ಕೂ ಮುಂಚೆಯೇ ಭಾರತ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಿಸಲಿದೆ. ದೇಶದ ಹೆಣ್ಣು ಅಥವಾ ಗಂಡು ಮಕ್ಕಳು ರಾಷ್ಟ್ರಧ್ವಜದೊಂದಿಗೆ ಅಂತರಿಕ್ಷ ಯಾನ ಕೈಗೊಳ್ಳಲಿದ್ದಾರೆ” ಎಂದು ಮೋದಿ ಹೇಳಿದ್ದಾರೆ.

ಅಖಂಡ ಕರ್ನಾಟಕಕ್ಕೆ ಭಿನ್ನ ಸ್ವರ ಸಲ್ಲ:
ಪ್ರತ್ಯೇಕ ರಾಜ್ಯ ಬೇಡಿಕೆಯ ಕೂಗು ಸರಿಯಲ್ಲ ಎಂಬುದನ್ನು ತಮ್ಮ ಭಾಷಣದುದ್ದಕ್ಕೂ ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, “ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ತೂ ಭಂಗವಾಗದ ಹಾಗೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹಿಂದಿನ ಸರ್ಕಾರ ಹಾಗೂ ಈಗಿನ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್‌ಗಳು ಇದಕ್ಕೆ ಪೂರಕವಾಗಿವೆ. ಇವೆರಡರ ಅನುಷ್ಠಾನಕ್ಕೆ ಸರ್ಕಾರ ಕಾರ್ಯಪ್ರವೃತ್ತವಾಗಿದೆ” ಎಂದರು.

“ಏಕೀಕರಣ ಚಳವಳಿಯ ಮೂಸೆಯಲ್ಲಿ ಮೂಡಿದ ಅಖಂಡ ಕರ್ನಾಟಕ ಕೋಟ್ಯಾಂತರ ಕನ್ನಡಿಗದ ಕನಸನ್ನು ನನಸು ಮಾಡಿತ್ತು. ಪ್ರತಿ ಕನ್ನಡಿಗರ ಎದೆಯಲ್ಲೂ ಅಭಿಮಾನದ ಅಲೆಯನ್ನು ಉಕ್ಕಿಸಿತ್ತು. ರಾಜ್ಯದ ಅಖಂಡತೆಯ ಸ್ವರೂಪಕ್ಕೆ ಧಕ್ಕೆ ತರುವ ಕ್ಷೀಣ ಸ್ವರಗಳು ಆಗಾಗ ಕೇಳಿ ಬರುತ್ತಲೇ ಇವೆ. ಮೊಳಕೆ ಒಡೆಯುವ ಮುನ್ನವೇ ಅವನ್ನು ಹೊಸಕಿ ಹಾಕುವ ಆತ್ಮಪ್ರಜ್ಞೆ ಕನ್ನಡಿಗರ ಸಂಕಲ್ಪ ಶಕ್ತಿಯ ಪ್ರತೀಕ” ಎಂದರು.

“ಮುಂಬೈ ಕರ್ನಾಟಕ, ಹೈದರಾಬಾದ್‌ ಪ್ರಾಂತ್ಯ, ಮದ್ರಾಸ್‌ ಪ್ರಾಂತ್ಯ, ಮೈಸೂರು ರಾಜ್ಯ, ಕೊಡಗು, ಸವಣೂರು– ಜಮಖಂಡಿ ಮುಧೋಳಗಳಂತಹ ಸಣ್ಣ ಪುಟ್ಟ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕರ್ನಾಟಕಕ್ಕೆ ಏಕೀಕರಣ ಚಳವಳಿಯಿಂದ ಒಂದು ಅಸ್ಮಿತೆ ದೊರಕಿದೆ. ಈ ಸಶಕ್ತ ಚಳವಳಿ ಹುಟ್ಟಿದ್ದು ಗಂಡು ಮೆಟ್ಟಿನ ನಾಡು ಉತ್ತರ ಕರ್ನಾಟಕದ ನೆಲದಲ್ಲಿ” ಎಂದು ಹೇಳಿದರು.

“ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭಿಸಿದ ಹಾಗೂ ಸುವರ್ಣಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ತೃಪ್ತಿ ನನಗಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ್ದೂ ಬೆಳಗಾವಿಯಿಂದಲೇ. ನನ್ನ 47 ಗ್ರಾಮ ವಾಸ್ತವ್ಯಗಳಲ್ಲಿ 27 ಉತ್ತರ ಕರ್ನಾಟಕದಲ್ಲೇ ನಡೆದಿವೆ. ನನ್ನ ಅಭಿಮಾನದ ಬೆಳಗಾವಿಗೆ ಸರ್ಕಾರದ ಕೆಲವು ಇಲಾಖೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇನೆ” ಎಂದರು.

“ದೇಶದ ಪ್ರಗತಿಯ ನಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆ. ಜೊತೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಎಲ್ಲಾ ಜಿಲ್ಲೆಗಳು ಅತ್ಯುತ್ತಮ ಸ್ಥಾನ ಪಡೆಯಬೇಕು. ಅಭಿವೃದ್ಧಿ ಎಂದರೆ ಕೇವಲ ರಸ್ತೆ ಕಟ್ಟಡ, ಮೂಲಸೌಕರ್ಯ ವೃದ್ಧಿ ಮಾತ್ರವಲ್ಲ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ನಮ್ಮ ಸರ್ಕಾರದ ಮಾನದಂಡಗಳು” ಎಂದು ಹೇಳಿದರು.

ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವದಲ್ಲೂ ಹೀಗೆ ನೂರಾರು ಆಶಯಗಳು ಅಧಿಕಾರ ಕೇಂದ್ರದ ಮುಖ್ಯಸ್ಥರ ಬಾಯಿಯಿಂದ ಬರುತ್ತಲೇ ಇರುತ್ತವೆ. ಹೀಗೆ ಆಶಯಗಳ ಕನಸಲ್ಲೇ 72 ಸ್ವಾತಂತ್ರ್ಯ ದಿನಾಚರಣೆಗಳನ್ನು ದೇಶ ಕಂಡಿದೆ. ಆದರೆ, ಆಶಯಗಳ ಸಾಕಾರದ ಫಲಿತಾಂಶ ಮಾತ್ರ ಕಡಿಮೆಯೇ.