samachara
www.samachara.com
ಎಂದಿಗಾಗಲಿದೆ ಅಸಮಾನತೆಯ ಅಂತ್ಯ; ‘ದಲಿತ ಭಾರತ’ಕ್ಕೆ ಸಿಕ್ಕಿದೆಯೇ  ಸ್ವಾತಂತ್ರ್ಯ?
ಸುದ್ದಿ ಸಾಗರ

ಎಂದಿಗಾಗಲಿದೆ ಅಸಮಾನತೆಯ ಅಂತ್ಯ; ‘ದಲಿತ ಭಾರತ’ಕ್ಕೆ ಸಿಕ್ಕಿದೆಯೇ ಸ್ವಾತಂತ್ರ್ಯ?

ಭಾರತಕ್ಕೇನೋ ಸ್ವಾತಂತ್ರ್ಯ ಸಿಕ್ಕು 72 ವರ್ಷಗಳಾಗಿವೆ. ಆದರೆ, ದೇಶದ ದಲಿತರಿಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿದೆಯೇ? ದೇಶದ ದಲಿತರು ಇಂದು ಅನುಭವಿಸುತ್ತಿರುವ ಸಾಮಾಜಿಕ ಸ್ವಾತಂತ್ರ್ಯ ಎಂಥದ್ದು?

ದಯಾನಂದ

ದಯಾನಂದ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 72ನೇ ವರ್ಷದ ಸಂಭ್ರಮದಲ್ಲಿ ಇಂದು ದೇಶ ಮುಳುಗಿದೆ. ಶಾಲಾ ಕಾಲೇಜುಗಳಲ್ಲಿ, ಜಿಲ್ಲಾ ಕ್ರೀಡಾಂಗಣಗಳಲ್ಲಿ ವಿದ್ಯಾರ್ಥಿಗಳು ಪರೇಡ್‌ ನಡೆಸಿ, ಸಿಹಿ ತಿಂದು ಸ್ವಾತಂತ್ರ್ಯದ ಸಂಭ್ರಮ ಆಚರಿಸಿದರೆ, ಬಹುತೇಕ ಯುವಜನರು ತ್ರಿವರ್ಣದ ಬಟ್ಟೆ ತೊಟ್ಟು, ತ್ರಿವರ್ಣದ ಡಿಪಿ, ಪ್ರೊಫೈಲ್‌ ಫೋಟೊಗಳನ್ನು ಹಾಕಿಕೊಂಡು ಸ್ವಾತಂತ್ರ್ಯೋತ್ಸವದ ಗುಂಗಿನಲ್ಲಿದ್ದಾರೆ. ಆದರೆ, ಈ ದೇಶದ ದಲಿತರಿಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿದೆಯೇ?

ಇಂಥ ಗಂಭೀರ ಪ್ರಶ್ನೆಯನ್ನು ಹಾಕಿಕೊಂಡು ಉತ್ತರ ಹುಡುಕಲು ಮುಂದಾದರೆ ತೀವ್ರವಾದ ನಿರಾಸೆ ಮುತ್ತುತ್ತದೆ. ಬಹುತ್ವದ ಭಾರತಕ್ಕೆ ‘ವಿವಿಧತೆಯಲ್ಲಿ ಏಕತೆ’ ಎಂಬ ಭ್ರಮಾಘೋಷವನ್ನು ಒಗ್ಗಿಸಿರುವ ವ್ಯವಸ್ಥೆ, ‘ಇಲ್ಲಿ ಎಲ್ಲವೂ ಸರಿಯಾಗಿದೆ’ ಎಂಬ ಯಥಾಸ್ಥಿತಿವಾದಕ್ಕೇ ನೀರೆರೆಯುತ್ತಿದೆ. ಮುಸುಕಿರುವ ಭ್ರಮೆಯನ್ನು ಸರಿಸಿ ನಿಜವಾದ ಭಾರತವನ್ನು ನೋಡುವ ಕಣ್ಣುಗಳಿಗೆ ಇಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಪ್ರಿಯ ಸತ್ಯವೂ ಕಾಣುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು, ಭಾರತವನ್ನು ‘ಸರ್ವತಂತ್ರ ಸ್ವತಂತ್ರ ಗಣರಾಜ್ಯ’ ಎಂದು ಘೋಷಿಸಿಕೊಂಡು ಏಳು ದಶಕಗಳು ಕಳೆದರೂ ಈ ದೇಶದ ಬಹುಪಾಲು ದಲಿತರಿಗೆ ಇನ್ನೂ ತಮ್ಮವರಲ್ಲದ ಸಮುದಾಯಗಳ ಹಟ್ಟಿಗಳ ಒಳಕ್ಕೆ ಹೋಗುವ ಸ್ವಾತಂತ್ರ್ಯ, ದಲಿತೇತರರ ಮನೆಗಳನ್ನು ಪ್ರವೇಶಿಸುವ ಸ್ವಾತಂತ್ರ್ಯ, ಸಮವಾಗಿ ಕೂರುವ ಸ್ವಾತಂತ್ರ್ಯ, ಕೊನೆಗೆ ಉಳಿದ ಜನರನ್ನು ಮುಟ್ಟಿಸಿಕೊಳ್ಳುವ ಸ್ವಾತಂತ್ರ್ಯವೂ ಸಿಕ್ಕಿಲ್ಲ.

ದೇಶದ ದಲಿತರ ಸಾಮಾಜಿಕ ಸ್ಥಿತಿ ಸ್ವಾತಂತ್ರ್ಯ ಪೂರ್ವಕ್ಕೂ ಸ್ವಾತಂತ್ರ್ಯಾನಂತರವೂ ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿದೆ. ಶಿಕ್ಷಣ ಹಾಗೂ ಮೀಸಲಾತಿಯ ಕಾರಣಕ್ಕೆ ಒಂದಷ್ಟು ದಲಿತರು ವಿದ್ಯಾವಂತರಾಗಿ ಆರ್ಥಿಕವಾಗಿ ಸುಧಾರಣೆ ಕಂಡಿದ್ದಾರೆ. ಆದರೆ, ಬಹುಸಂಖ್ಯೆಯ ದಲಿತರು ಇಂದಿಗೂ ಸಾಮಾಜಿಕ ಸ್ವಾತಂತ್ರ್ಯವೂ ಇಲ್ಲದ, ಆರ್ಥಿಕ ಸ್ವಾತಂತ್ರ್ಯವೂ ಇಲ್ಲದ ಹೀನಾಯ ಸ್ಥಿತಿಯಲ್ಲಿ ಇದೇ ‘ಭವ್ಯ ಭಾರತ’ದಲ್ಲಿ ಬದುಕು ದೂಡುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಅಂಗವಾಗಿ ಬಿಹಾರದ ಬಡ್ಡಿ ಎಂಬ ಗ್ರಾಮದಲ್ಲಿ ದಲಿತರು ರಾಷ್ಟ್ರಧ್ವಜ ಹಾರಿಸಿದ್ದರು. ಆದರೆ, ದಲಿತರು ಈ ರಾಷ್ಟ್ರದ ‘ಘನತೆ’ಯ ಪ್ರತೀಕವಾದ ರಾಷ್ಟ್ರಧ್ವಜವನ್ನು ಹಾರಿಸುವುದು ಅಕ್ಷಮ್ಯ ಅಪರಾಧ ಎಂದು ಭಾವಿಸಿದ ಆ ಗ್ರಾಮದ ಸವರ್ಣೀಯರು ರಾಷ್ಟ್ರಧ್ವಜ ಹಾರಿಸಿದ ಕಾರಣಕ್ಕೆ ಸುಮಾರು 40 ಮಂದಿ ದಲಿತರ ಮೇಲೆ ಹಲ್ಲೆ ನಡೆಸಿ, ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಈ ಘಟನೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ‘ಅಪರಾಧ’ಕ್ಕಾಗಿ ದಲಿತನೊಬ್ಬ ಸಾವಿಗೀಡಾಗಿದ್ದ.

ಸ್ವಾತಂತ್ರ್ಯ ಬಂದ ನಂತರ ದೇಶವನ್ನು ಆರ್ಥಿಕವಾಗಿ ಸ್ವಾವಲಂಭಿಯಾಗಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡ ಸರಕಾರಗಳು ಸಾಮಾಜಿಕ ಸಮಾನತೆಯ ಕಡೆಗೆ ಯೋಚಿಸಿದ್ದು ಕಡಿಮೆ. ನಗರೀಕರಣ ಪ್ರಕ್ರಿಯೆ ಬೆಳೆದ ವೇಗದಲ್ಲೇ ನಗರಗಳಲ್ಲೂ ಮೇಲೂ ಕೀಳು ಎಂಬ ತರತಮ ಆರಂಭವಾಗಿತ್ತು. ಹಳ್ಳಿಗಳ ದೊಡ್ಡ ಸ್ವರೂಪಗಳಂತೆ ನಗರಗಳು ಬೆಳದವೇ ಹೊರತು, ನಗರಗಳೂ ಈ ದೇಶದ ದಲಿತರನ್ನು ಮೇಲೆತ್ತಲು ಸೋತವು. ಶುಚಿಗೊಳಿಸುವ ಪೌರಕಾರ್ಮಿಕರಾಗಿ ನಗರಗಳಿಗೆ ದಲಿತರು ಅಗತ್ಯವಾಗಿ ಕಂಡರೇ ಹೊರತು ನಗರದ ಜೀವನದಲ್ಲಿ ಅವರಿಗೂ ಸಮಪಾಲು ಸಿಗಬೇಕೆಂದು ಯೋಚಿಸಿದ ಮನಸ್ಸುಗಳು ಕಡಿಮೆ.

ನಗರ ಪ್ರದೇಶಗಳಲ್ಲಿ ದಲಿತರು ತಮ್ಮ ಮೂಲವನ್ನು ಅಗತ್ಯಕ್ಕೆ ತಕ್ಕಂತೆ ಮರೆ ಮಾಚಿ ಬದುಕುವ ಸ್ಥಿತಿಯನ್ನು ನಿರ್ಮಿಸಿಕೊಳ್ಳಬೇಕಾಯಿತು. ಆದರೆ, ಗ್ರಾಮೀಣ ಪ್ರದೇಶದಲ್ಲಿ ಈ ಅನುಕೂಲ ಇರಲಿಲ್ಲ. ದಲಿತನೊಬ್ಬ ಪ್ರಾಧ್ಯಾಪಕನಾದರೂ, ಐಎಎಸ್‌ ಅಧಿಕಾರಿಯಾದರೂ ಅವನು ದೇವಾಲಯದಿಂದ, ಮೇಲ್ವರ್ಗದ ಜನರ ಮನೆಗಳಿಂದ ಹೊರಗೇ ಉಳಿಯಬೇಕಾದ ಸ್ಥಿತಿ ಈ ದೇಶದ ಹಳ್ಳಿಗಳಲ್ಲಿ ಈ ಹೊತ್ತಿಗೂ ಇದೆ. ಹಲವು ಹಳ್ಳಿಗಳಲ್ಲಿ ಇಂದಿಗೂ ದಲಿತರು ತಮಟೆ ಬಾರಿಸುವುದು, ಚಪ್ಪಲಿ ಹೊಲೆಯುವುದು, ಸತ್ತ ದನ ಹೊರುವುದು ಕಡ್ಡಾಯ. ಇವನ್ನು ಮಾಡಲು ದಲಿತರು ನಿರಾಕರಿಸಿದರೆ ಹಿಂದೆಯೇ ಸಾಮಾಜಿಕ ಬಹಿಷ್ಕಾರದಂತ ಕೆಟ್ಟ ಶಿಕ್ಷೆಯನ್ನು ಹಳ್ಳಿಯ ವ್ಯವಸ್ಥೆ ವಿಧಿಸುತ್ತದೆ.

ಬ್ರಾಹ್ಮಣನ ಹೆಂಡತಿ ಗರ್ಭಿಣಿಯಾದರೆ ಕೂಡಲೇ ಅವರು ಯಾವುದಾದರೂ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶ ಹುದ್ದೆ ಖಾಲಿ ಇದೆಯೇ ಎಂದು ಚಿಂತಿಸುತ್ತಾರೆ. ಆದರೆ, ನಮ್ಮ ಮಹಿಳೆಯರು ಗರ್ಭಿಣಿಯಾದರೆ ನಗರಸಭೆಯಲ್ಲಿ ಯಾವುದಾದರೂ ಕಸಗುಡಿಸುವ ಕೆಲಸ ಖಾಲಿ ಇದೆಯೇ ಎಂದು ಚಿಂತಿಸಬೇಕೇ ಹೊರತು ಇದಕ್ಕಿಂತ ಉತ್ತಮ ದಿಕ್ಕು ಕಾಣುವುದಿಲ್ಲ.
- ಡಾ. ಬಿ.ಆರ್‌. ಅಂಬೇಡ್ಕರ್‌

ದಲಿತರು ಎಂದರೆ ಅವರು ಕೆಳಗೇ ಇರಬೇಕು, ಮನೆಯ ಹೊರಗೇ ಇರಬೇಕು, ಅವರು ಮುಟ್ಟಿಸಿಕೊಳ್ಳಲು ಅರ್ಹರಲ್ಲ ಎಂಬ ಮನಸ್ಥಿತಿಯೇ ಬಹುತೇಕರಲ್ಲಿದೆ. ಹೊಸ ತಲೆಮಾರು ಕೂಡಾ ಹಳೆಯ ಅನಿಷ್ಠ ಪದ್ಧತಿಗಳನ್ನೇ ಮುಂದುವರಿಸುತ್ತಿದೆ. ಮೀಸಲಾತಿಯಿಂದ ದಲಿತರಿಗೆ ಮಹಾ ಲಾಭವಾಗಿದೆ ಎಂಬ ಹಸಿ ಸುಳ್ಳನ್ನೂ ಮೀಸಲಾತಿ ವಿರೋಧಿಗಳು ವ್ಯವಸ್ಥಿತವಾಗಿ ಹಬ್ಬುತ್ತಿದ್ದಾರೆ. ಹೀಗಾಗಿ ಹೊಸ ತಲೆಮಾರಿನ ಶೂದ್ರ ವರ್ಗಗಳೂ ಕೂಡಾ ದಲಿತರನ್ನು ತಮ್ಮೆಲ್ಲಾ ಅವಕಾಶಗಳನ್ನು ಕಿತ್ತುಕೊಂಡ ಶತ್ರುಗಳಂತೆ ಕಾಣುತ್ತಿವೆ.

Also read: ಆಶಯದ ನೆಲೆಯಲ್ಲಷ್ಟೇ ಉಳಿದಿರುವ ಸಮಾನತೆ; ಹೊಸ್ತಿಲಾಚೆ ನಿಂತಿರುವ ಮೀಸಲಾತಿ ಚರ್ಚೆ!

ಗ್ರಾಮದ ಕುಡಿಯುವ ನೀರಿನ ಬಾವಿ, ಬೋರ್‌ವೆಲ್‌ಗಳಿಂದ ಹಿಡಿದು ಟೀ ಅಂಗಡಿಯವರೆಗೂ ದಲಿತರು ಇಂದಿಗೂ ಮುಟ್ಟಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ. ದಲಿತರಿಗೆ ಬಾಯಾರಿದರೆ ಇಂದಿಗೂ ಬೊಗಸೆ ಒಡ್ಡಬೇಕಾದ ಪರಿಸ್ಥಿತಿ ಹಳ್ಳಿಗಳಲ್ಲಿದೆ. ಸಣ್ಣ ಅಂಗಡಿಗಳಲ್ಲಿ ದಲಿತರು ಟೀ ಕುಡಿಯಬೇಕೆಂದರೆ ಚಿಪ್ಪು ಅಥವಾ ಪ್ಲಾಸ್ಟಿಕ್‌ ಲೋಟಗಳೇ ಗತಿ. ಇನ್ನು ಹಲವು ಊರುಗಳಲ್ಲಿ ದಲಿತರಿಗೆ ಚೌರ ಮಾಡಿಸಿಕೊಳ್ಳುವ ಅನುಕೂಲ ಕೂಡಾ ಇಲ್ಲ. ಈ ಊರಿನ ದಲಿತರು ದೂರದ ಊರಿನ ಕಟಿಂಗ್‌ ಷಾಪುಗಳಲ್ಲಿ ಕಟಿಂಗ್‌, ಶೇವಿಂಗ್‌ ಮಾಡಿಸಿಕೊಳ್ಳಬೇಕಾದ ಸ್ಥಿತಿ ಇದೆ.

ದಲಿತ ಮಹಿಳೆಯನ್ನು ಅಂಗನವಾಡಿಯಲ್ಲಿ ಅಡುಗೆ ಕೆಲಸಕ್ಕೆ ನೇಮಿಸಿದ್ದ ಕಾರಣಕ್ಕೆ ಆ ಅಂಗನವಾಡಿಗೆ ತಮ್ಮ ಮಕ್ಕಳನ್ನೇ ಕಳಿಸದ ಹಾಗೂ ಆ ದಲಿತ ಮಹಿಳೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಊರಿನ ಸವರ್ಣೀಯರು ಒತ್ತಡ ಹೇರಿದ್ದ ಘಟನೆ ಕೆಲ ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶಿವನಗರ ಎಂಬ ಗ್ರಾಮದಲ್ಲಿ ನಡೆದಿತ್ತು. ಆ ಮಹಿಳೆ ಕೆಲಸಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಾಗ ಊರಿನ ಇಡೀ ದಲಿತ ಸಮುದಾಯವನ್ನೇ ಬಹಿಷ್ಕಾರ ಹಾಕಲಾಗಿತ್ತು.

ಭಾರತ ಎಂಬ ಭೌಗೋಳಿಕ ಪ್ರದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆಯೇ ಹೊರತು ಈ ದೇಶದ ದಲಿತರಿಗೆ, ತಳ ಸಮುದಾಯಗಳಿಗೆ ನಿಜಕ್ಕೂ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಹೀಗೆ ಮಾತನಾಡುವವರಿಗೆ ಅನಾಯಾಸವಾಗಿ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ.
- ಡಾ. ರವಿಕುಮಾರ್‌ ನೀಹ, ದಲಿತ ಲೇಖಕ

ದಲಿತ ಹುಡುಗ ಹುಡುಗಿಯರ ಜತೆಗೆ ಸವರ್ಣೀಯರು ತಮ್ಮ ಮಕ್ಕಳನ್ನು ಆಡಲೂ ಬಿಡದ ಅದೆಷ್ಟೋ ಹಳ್ಳಿಗಳಿವೆ. ಊರಿನಲ್ಲಿ ಸವರ್ಣೀಯರು ದಾರಿಯಲ್ಲಿ ಹೋಗುವಾಗ ಮರೆಯಾಗಿ ಪಕ್ಕಕ್ಕೆ ನಿಲ್ಲಬೇಕಾದ ವ್ಯವಸ್ಥೆ ಇಂದಿಗೂ ಸಾಕಷ್ಟು ಕಡೆಗಳಲ್ಲಿದೆ. ದಲಿತರು ಉಳಿದ ಜಾತಿಗಳ ಜನರನ್ನು ಪ್ರೀತಿಸುವುದು, ಮದುವೆಯಾಗಿ ಅದೇ ಊರಿನಲ್ಲಿ ಇರುವುದು ಇಂದಿಗೂ ಹಗಲುಗನಸಿನಂತಿದೆ. ಸವರ್ಣೀಯ ಯುವತಿಯ ಜತೆಗೆ ಕೇವಲ ಸ್ನೇಹವಿದ್ದ ಕಾರಣಕ್ಕೇ ಸವರ್ಣೀಯರು ದಲಿತ ಯುವಕನನ್ನು ಹೊಡೆದುಕೊಲ್ಲುವ ಮಟ್ಟಕ್ಕೆ ಹೋಗಿದ್ದ ಗುಬ್ಬಿ ಅಭಿಷೇಕ್ ಪ್ರಕರಣ ಇನ್ನೂ ಹಸಿಯಾಗಿಯೇ ಇದೆ.

Also read: ಗುಬ್ಬಿ ದಲಿತ ದೌರ್ಜನ್ಯ; ‘ಸಮಾಚಾರ’ ಸರಣಿ

ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿಯೂ ದಲಿತರು ಇನ್ನೂ ಹಿಂದುಳಿದಿದ್ದಾರೆ. ಅಲ್ಲೊಂದು ಇಲ್ಲೊಂದು ಉದಾಹರಣೆಗಳನ್ನು ಬಿಟ್ಟರೆ ದಲಿತರ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿ ಎಂಬುದು ಹೇಳಿಕೊಳ್ಳುವ ಪ್ರಮಾಣದಲ್ಲಿ ಆಗಿಲ್ಲ. ಪ್ರೌಢಶಾಲೆ, ಪಿಯುಸಿ ಹಂತದಲ್ಲೇ ಶಿಕ್ಷಣದಿಂದ ದೂರಾಗುವ ದಲಿತರಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ತೀರಾ ಕಡಿಮೆ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೂಡಾ ದಲಿತರು ಮುಟ್ಟಿಸಿಕೊಳ್ಳಲಾರದವೇ ಆಗಿದ್ದಾರೆ. ಉನ್ನತ ಶಿಕ್ಷಣದಲ್ಲಿ ದಲಿತರು ಅನುಭವಿಸುತ್ತಿರುವ ತಾರತಮ್ಯದ ಬಗ್ಗೆ ಪ್ರೊ. ಸುಖ್‌ದೇವ್‌ ಥೋರಟ್‌ ವರದಿ ಬೆಳಕು ಚೆಲ್ಲಿತ್ತು.

ದನದ ಮಾಂಸ ಸಾಗಣೆ ಹೆಸರಲ್ಲಿ ದಲಿತರನ್ನು ಬಡಿದುಕೊಲ್ಲುವ, ದಲಿತರು ಮದುವೆ ದಿಬ್ಬಣ ಹೋಗಲು ತೀವ್ರವಾಗಿ ಆಕ್ಷೇಪಿಸುವ ಘಟನೆಗಳು ವರದಿಯಾಗುತ್ತಲೇ ಇವೆ. ಇದೇ ಜನವರಿ ತಿಂಗಳಲ್ಲಿ ಭೀಮಾ ಕೊರೆಗಾಂವ್‌ ವಿಜಯೋತ್ಸವ ಆಚರಿಸಲು ಮುಂದಾಗಿದ್ದ ದಲಿತರ ಮೇಲೆ ಕಲ್ಲು ತೂರಿದ್ದ ಘಟನೆ ಇನ್ನೂ ಮಾಸಿಲ್ಲ. ದಲಿತರು ಸವರ್ಣೀಯರ ಸೇವೆ ಮಾಡಲಷ್ಟೇ ಬದುಕಬೇಕಾದ ಗುಲಾಮರು ಎಂಬ ಮನಸ್ಥಿತಿ ಇಂದಿಗೂ ಜೀವಂತವಾಗಿರುವುದರಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.

ಸ್ವಾತಂತ್ರ್ಯಾನಂತರದ ಜಾಗತೀಕರಣ, ಉದಾರೀಕರಣಗಳ ಪ್ರಭಾವಳಿಯಲ್ಲಿ ದಲಿತರಿಗೂ ಸಿಕ್ಕಿರುವ ನ್ಯಾಯ ಎಷ್ಟು ಎಂಬುದನ್ನು ಅವಲೋಕಿಸಬೇಕಿದೆ. ಜಾಗತೀಕರಣದಿಂದ ಸ್ಪರ್ಧೆ ಹೆಚ್ಚುತ್ತದೆ. ಸ್ಪರ್ಧೆಯಿಂದ ಜ್ಞಾನ ಹೆಚ್ಚುತ್ತದೆ. ಜ್ಞಾನದಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂಬ ಆಧುನಿಕ ಅರ್ಥಶಾಸ್ತ್ರ ಸಿದ್ಧಾಂತದ ಪರಿಣಾಮ ದಲಿತರ ಮೇಲೆ ಆಗಿದೆಯೇ? ಈ ಸ್ಪರ್ಧೆಯೊಳಗೆ, ಜಾಗತೀಕರಣದ ಓಟದೊಳಗೆ ಶಿಕ್ಷಣ ಪಡೆದ ಎಷ್ಟು ಮಂದಿ ದಲಿತರಿಗೆ ಓಡಲಾದರೂ ಅವಕಾಶ ಸಿಕ್ಕಿದೆ? ಸಿಕ್ಕಿದ್ದರೂ ಎಲ್ಲಿಯವರೆಗೆ ಅವರು ಓಟದಲ್ಲಿದ್ದರು ಎಂಬುದೂ ಉತ್ತರ ಸಿಗದ ಪ್ರಶ್ನೆಯಾಗಿದೆ.

ದಲಿತರು ರಾಷ್ಟ್ರಧ್ವಜ ಹಾರಿಸುವುದನ್ನು ಸಹಿಸದ, ದಲಿತ ಮಹಿಳೆ ಅಂಗನವಾಡಿಯಲ್ಲಿ ಅಡುಗೆ ಕೆಲಸಕ್ಕೆ ಸೇರುವುದನ್ನು ಸಹಿಸದ, ದಲಿತರ ಮದುವೆ ದಿಬ್ಬಣ ಸಹಿಸದ, ದಲಿತರು ಘನತೆಯಿಂದ ಬದುಕುವುದನ್ನು ಸಹಿಸದ ಜನರಿರುವ ಭಾರತದಲ್ಲಿ ದಲಿತರಿಗೆ ಸ್ವಾತಂತ್ರ್ಯ ಎಂಬುದು ಇನ್ನೂ ದೂರದ ಬೆಟ್ಟವಾಗಿಯೇ ಇದೆ. ಪರಿಸ್ಥಿತಿ ಹೀಗಿರುವ ದಲಿತ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ದಲಿತ ಗಾಂಧಿಯೊಬ್ಬ ಹುಟ್ಟಿಬರಬೇಕು ಎಂದು ಕಾಯುತ್ತಾ ಕೂರುವ ಬದಲು ವಿದ್ಯಾವಂತ ದಲಿತರು ದಲಿತ ಹೊಸ ತಲೆಮಾರಿಗೆ ವಾಸ್ತವದ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ಕಾದರೂ ಮುಂದಾಗಬೇಕು.