ಮೋದಿಯೇ ಎದುರಾಳಿ, ರಫೇಲ್‌ ಪ್ರಮುಖಾಸ್ತ್ರ; 2019ರ ಚುನಾವಣೆಗೆ ಇವೇ ‘ಕೈ’ ಪಟ್ಟುಗಳು!
ಸುದ್ದಿ ಸಾಗರ

ಮೋದಿಯೇ ಎದುರಾಳಿ, ರಫೇಲ್‌ ಪ್ರಮುಖಾಸ್ತ್ರ; 2019ರ ಚುನಾವಣೆಗೆ ಇವೇ ‘ಕೈ’ ಪಟ್ಟುಗಳು!

ಕರ್ನಾಟಕದ ಉತ್ತರ ತುದಿಯಿಂದ ಜನಧ್ವನಿ ಹೆಸರಿನ ರ್ಯಾಲಿ ಆರಂಭಿಸಿರುವ ಕಾಂಗ್ರೆಸ್ 2019ರ ಚುನಾವಣೆಗೆ ಮೋದಿ ಹಾಗೂ ರಫೇಲ್‌ ಹಗರಣಗಳನ್ನೇ ಪ್ರಮುಖ ಅಸ್ತ್ರವಾಗಿಸಿಕೊಳ್ಳಲಿದೆ.

2019ರ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್‌ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ರಫೇಲ್‌ ಹಗರಣವನ್ನೇ ಚುನಾವಣೆಯ ಪ್ರಮುಖ ಅಸ್ತ್ರವಾಗಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಲೋಕಸಭೆಯಲ್ಲಿ ರಫೇಲ್‌ ಒಪ್ಪಂದದ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬೀದರ್‌ನಲ್ಲಿ ಸೋಮವಾರ ನಡೆದ ‘ಜನಧ್ವನಿ ರ್ಯಾಲಿ’ಯಲ್ಲೂ ಅದೇ ವಿಚಾರವನ್ನು ಮುಂದಿಟ್ಟುಕೊಂಡು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಫೇಲ್‌ ಹಗರಣ, ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಿರುವುದು ಹಾಗೂ ಉದ್ಯೋಗ ಸೃಷ್ಟಿ ಹಾಗೂ ಭ್ರಷ್ಟಾಚಾರ, ಕಪ್ಪು ಹಣ ನಿಯಂತ್ರಣದಲ್ಲಿ ಬಿಜೆಪಿ ಸರಕಾರ ಸೋತಿರುವುದನ್ನು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ತಮ್ಮ ಪ್ರಶ್ನೆಗಳಿಗೆ ಕಣ್ಣಲ್ಲಿ ಕಣ್ಣಿಟ್ಟು ಉತ್ತರ ಕೊಡುವಂತೆ ರಾಹುಲ್‌, ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆಯೇ ದೀರ್ಘವಾಗಿ ಮಾತನಾಡಿದ ರಾಹುಲ್‌, ಮೋದಿ ತಮ್ಮನ್ನು ದೇಶದ ರಕ್ಷಕ ಎಂದು ಹೇಳಿಕೊಳ್ಳುತ್ತಲೇ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ದೇಶದ ಸಾರ್ವಜನಿಕ ಹಣವನ್ನು ದೊಡ್ಡ ದೊಡ್ಡ ಉದ್ಯಮಿಗಳ ಅನುಕೂಲಕ್ಕೆ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ರಫೇಲ್‌ ಯುದ್ಧ ವಿಮಾನಗಳ ಖರೀದಿಯಲ್ಲಿ ಅನಿಲ್‌ ಅಂಬಾನಿಗೆ ಅನುಕೂಲ ಮಾಡಿಕೊಡಲು ದೇಶದ ಸಾರ್ವಜನಿಕರ ಹಣವನ್ನು ಮೋದಿ ಲೂಟಿ ಮಾಡಿದ್ದಾರೆ. ನರೇಂದ್ರ ಮೋದಿ ದೇಶದ ಸಾರ್ವಜನಿಕರ ಹಣವನ್ನು ಕಳ್ಳತನ ಮಾಡಿದ್ದಾರೆ. ಮೋದಿ ನನ್ನ ಸವಾಲಿಗೆ ಉತ್ತರ ಕೊಡಲಿ. ನನ್ನ ಕಣ್ಣಲ್ಲಿ ಕಣ್ಣಿಟ್ಟು ಉತ್ತರ ಕೊಡಲಿ” ಎಂದಿದ್ದಾರೆ ರಾಹುಲ್‌.

“ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸರಳಗೊಳಿಸಿ, ಸರಳವಾದ ತೆರಿಗೆ ವ್ಯವಸ್ಥೆ ಜಾರಿಗೆ ತರುತ್ತೇವೆ. ಮೋದಿ ಹಿಂದೂಸ್ತಾನದ ಪ್ರಧಾನಮಂತ್ರಿ ಅಲ್ಲ. ಶ್ರೀಮಂತ ಉದ್ಯಮಿಗಳ ಪ್ರಧಾನಮಂತ್ರಿ. ತಮ್ಮನ್ನು ದೇಶದ ರಕ್ಷಕ, ಸೇವಕ ಎಂದು ಹೇಳಿಕೊಂಡು ದೇಶದ ವ್ಯವಸ್ಥೆಯನ್ನು ಉದ್ಯಮಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತಿದ್ದಾರೆ” ಎಂದು ರಾಹುಲ್‌ ಆರೋಪಿಸಿದ್ದಾರೆ.

“ರಫೇಲ್‌ ಅಕ್ರಮದ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಜನ ಸಾಮಾನ್ಯರಿಗೆ ಮಾಹಿತಿ ನೀಡಬೇಕು. ಮೋದಿ ಸರಕಾರದ ಅಕ್ರಮಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ದೇಶದ ವ್ಯವಸ್ಥೆ ಮತ್ತೆ ಸರಿದಾರಿಗೆ ಬರಬೇಕೆಂದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು” ಎಂದಿದ್ದಾರೆ ರಾಹುಲ್‌.

Also read: ‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?

ರಾಹುಲ್‌ ಭಾಷಣಕ್ಕೂ ಮುನ್ನಾ ಮಾತನಾಡಿದ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ, “ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕೆಂದರೆ, ಜನರು ಒಂದಾಗಿ ಬಾಳಬೇಕೆಂದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು. ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು. ಜನತೆ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮೋಡಿಗೆ ಮರುಳಾಗಬಾರದು” ಎಂದು ಹೇಳಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಮಾತನಾಡಿ, “ಮೋದಿ ಅವರು ದೀರ್ಘಕಾಲ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಜನರನ್ನು ಮೂರ್ಖರನ್ನಾಗಿ ಮಾಡಲು ಹೋಗಿ ಮೋದಿ ಅವರೇ ಮೂರ್ಖರಾಗುತ್ತಿದ್ದಾರೆ. ಅವರು ಕೊಟ್ಟ ಭರವಸೆಗಳ್ಯಾವೂ ಈಡೇರಿಲ್ಲ ಎಂಬುದು ಈಗ ಜನಕ್ಕೂ ಗೊತ್ತಾಗಿದೆ” ಎಂದರು.

“ಕಪ್ಪು ಹಣ ವಾಪಸ್‌ ತರುತ್ತೇವೆ, ಕೋಟಿ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಣ ಹಾಕುತ್ತೇವೆ ಎಂಬ ಭರವಸೆ ನೀಡಿದ್ದರು ಮೋದಿ. ಆದರೆ, ಆ ಭರವಸೆಗಳೆಲ್ಲಾ ಹುಸಿಯಾಗಿವೆ. ಮನ್‌ ಕಿ ಬಾತ್‌ನಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ಕಾಮ್‌ ಕಿ ಬಾತ್‌ ಆಗಬೇಕು. ಮೋದಿ ಹೇಳುವ ‘ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌’ ದೇಶದಲ್ಲಿ ಕಾಣುತ್ತಿಲ್ಲ. ಈಗ ಮೋದಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ” ಎಂದಿದ್ದಾರೆ.

ಕರ್ನಾಟಕದ ಉತ್ತರ ತುದಿಯಾದ ಬೀದರ್‌ನಲ್ಲಿ ರ್ಯಾಲಿ ಆರಂಭಿಸಿರುವ ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯಲ್ಲಿ ಸಡಿಲಗೊಂಡಿರುವ ಪಕ್ಷದ ಬೇರುಗಳನ್ನು ಲೋಕಸಭಾ ಚುನಾವಣೆ ವೇಳೆಗೆ ಭದ್ರಗೊಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿರುವಂತಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಬಲ ಪಡಿಸಿ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆದಷ್ಟೂ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಕಸರತ್ತನ್ನು ಕಾಂಗ್ರೆಸ್‌ ಈಗಿನಿಂದಲೇ ನಡೆಸುತ್ತಿದೆ. ಬೀದರ್‌ನ ಜನಧ್ವನಿ ರ್ಯಾಲಿ ಈ ಕಸರತ್ತಿನ ನಾಂದಿಯಂತಿದೆ. ಅಲ್ಲದೆ ಮೋದಿಯನ್ನೇ ತಮ್ಮ ಪ್ರಮುಖ ಎದುರಾಳಿಯಾಗಿಸಿಕೊಂಡು, ರಫೇಲ್ ಹಗರಣವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಜ್ಜಾಗಿರುವುದು ಕಾಣುತ್ತಿದೆ.