samachara
www.samachara.com
ಹುಬ್ಬಳ್ಳಿಯಲ್ಲೊಂದು ಹೈಟೆಕ್‌ ನ್ಯಾಯಾಲಯ; ಇದು ಏಷ್ಯಾದಲ್ಲೇ ಮಾದರಿ ಕಟ್ಟಡ
ಸುದ್ದಿ ಸಾಗರ

ಹುಬ್ಬಳ್ಳಿಯಲ್ಲೊಂದು ಹೈಟೆಕ್‌ ನ್ಯಾಯಾಲಯ; ಇದು ಏಷ್ಯಾದಲ್ಲೇ ಮಾದರಿ ಕಟ್ಟಡ

ಹುಬ್ಬಳ್ಳಿಯ ಹೊಸೂರು– ಉಣಕಲ್‌ ರಸ್ತೆಯ ತಿಮ್ಮಸಾಗರ ಬಳಿ 5 ಎಕರೆ 15 ಗುಂಟೆ ವಿಸ್ತಾರವಾದ ಜಾಗದಲ್ಲಿ 122 ಕೋಟಿ ರೂಪಾಯಿ ವೆಚ್ಚದಲ್ಲಿ ಕೋರ್ಟ್‌ ಕಟ್ಟಡ ನಿರ್ಮಾಣವಾಗಿದೆ.

Team Samachara

ಹುಬ್ಬಳ್ಳಿಯಲ್ಲೊಂದು ಕೆಂಪುಬಣ್ಣದ ಅಪರೂಪದ ಕಟ್ಟಡ ಭಾನುವಾರ ಉದ್ಘಾಟನೆಗೊಂಡಿದೆ. ಈ ಕಟ್ಟಡದ ಉದ್ಘಾಟನೆಗೆ ಸುಪ್ರಿಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳೇ ಬಂದಿದ್ದರು. ಈ ಕಟ್ಟಡ ಭಾರತಕ್ಕೆ ಮಾತ್ರವಲ್ಲ ಏಷ್ಯಾ ಖಂಡದಲ್ಲೇ ಅಪರೂಪ ಎನ್ನಲಾಗಿದೆ.

ಇದು ಹುಬ್ಬಳ್ಳಿಯ ತಾಲ್ಲೂಕು ನ್ಯಾಯಾಲಯಗಳ ಸಂಕೀರ್ಣ. ಹೈಕೋರ್ಟ್‌ನ ಮಾದರಿಯಲ್ಲೇ ಈ ತಾಲ್ಲೂಕು ನ್ಯಾಯಾಲಯವನ್ನೂ ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯ ಹೊಸೂರು– ಉಣಕಲ್‌ ರಸ್ತೆಯ ತಿಮ್ಮಸಾಗರ ಬಳಿ 5 ಎಕರೆ 15 ಗುಂಟೆ ವಿಸ್ತಾರವಾದ ಜಾಗದಲ್ಲಿ 122 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ.

ಸುಸಜ್ಜಿತ ಕೋರ್ಟ್‌ ಹಾಲ್‌, ಆರಾಮದಾಯಕ ಕುರ್ಚಿಗಳು, ನ್ಯಾಯಾಧೀಶರು ಹಾಗೂ ವಕೀಲರು ವಿಚಾರಣೆ ವೇಳೆ ಮಾತನಾಡಲು ಮೈಕ್‌ ವ್ಯವಸ್ಥೆ, ಅತ್ಯಾಧುನಿಕ ಧ್ವನಿ ವ್ಯವಸ್ಥೆ, ಪ್ರತಿ ಕೋರ್ಟ್‌ ಹಾಲ್‌ನಲ್ಲಿ 30 ಕುರ್ಚಿಗಳು, ಲಿಫ್ಟ್‌, ಆಧುನಿಕ ಕಮೋಡ್‌ ಹೊಂದಿರುವ ಶೌಲಾಯಗಳು – ಹೀಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಹುಬ್ಬಳ್ಳಿಯ ತಾಲ್ಲೂಕು ನ್ಯಾಯಾಲಯ.

ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ಈ ನ್ಯಾಯಾಲಯ ಕಟ್ಟಡ ಮಾದರಿ ನ್ಯಾಯಾಲಯ ಸಂಕೀರ್ಣವಾಗಿದೆ. ಹಲವು ಕೊಠಡಿಗಳ ಜತೆಗೆ ಇಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಗಳು ಕೂಡಾ ಇವೆ.

ಕಟ್ಟಡದ ತಳಭಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗ ಮೀಸಲಿಡಲಾಗಿದೆ. ಬೇಸ್‌ಮೆಂಟ್‌ನಲ್ಲಿ 400 ಕಾರುಗಳನ್ನು ನಿಲ್ಲಿಸಬಹುದಾದಷ್ಟು ನಿಲುಗಡೆ ವ್ಯವಸ್ಥೆ ಇದೆ. ಗ್ರೌಂಡ್‌ ಫ್ಲೋರ್‌ನಲ್ಲಿ ಸುಮಾರು ಒಂದು ಸಾವಿರ ಬೈಕ್‌ಗಳನ್ನು ನಿಲ್ಲಿಸಬಹುದಾದಷ್ಟು ಜಾಗವಿದೆ. ಕಟ್ಟಡದಲ್ಲಿ ಏಳು ಅಂತಸ್ತಿಗೆ ಎರಡು ಲಿಫ್ಟ್‌ಗಳ ವ್ಯವಸ್ಥೆ ಇದೆ. ಒಂದನ್ನು ವಕೀಲರು, ಸಾರ್ವಜನಿಕರು ಹಾಗೂ ಸಿಬ್ಬಂದಿ ಬಳಕೆ ಮಾಡಬಹುದು. ಇನ್ನೊಂದು ಲಿಫ್ಟ್‌ ನ್ಯಾಯಾಧೀಶರ ಬಳಕೆಗಾಗಿ ಮೀಸಲಾಗಿದೆ.

ಹುಬ್ಬಳ್ಳಿಯಲ್ಲೊಂದು ಹೈಟೆಕ್‌ ನ್ಯಾಯಾಲಯ; ಇದು ಏಷ್ಯಾದಲ್ಲೇ ಮಾದರಿ ಕಟ್ಟಡ

ಮೊದಲ ಮಹಡಿಯಲ್ಲಿ 3 ಜೆಎಂಎಫ್‌ ಕೋರ್ಟ್‌ ಹಾಲ್‌ ಹಾಗೂ ಒಂದು ಸಭಾಂಗಣ, ಎರಡನೇ ಮಹಡಿಯಲ್ಲಿ 4 ಸಿವಿಲ್‌ ಕೋರ್ಟ್‌ ಹಾಲ್‌ಗಳು, 3ನೇ ಮಹಡಿಯಲ್ಲಿ 4 ಹಿರಿಯ ಸಿವಿಲ್‌ ಕೋರ್ಟ್‌ಗಳು, 4ನೇ ಮಹಡಿಯಲ್ಲಿ 4 ಜಿಲ್ಲಾ ನ್ಯಾಯಾಲಯದ ಕಲಾಪ ಸಭಾಂಗಣಗಳು ಹಾಗೂ 5ನೇ ಮಹಡಿಯಲ್ಲಿ ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯಗಳಿವೆ.

ನ್ಯಾಯಾಲಯ ಸಂಕಿರಣದ ಆವರಣದಲ್ಲಿ ಉಚಿತ ವೈಫೈ ವ್ಯವಸ್ಥೆ ಇದೆ. ವಕೀಲರು ಹಾಗೂ ಕಕ್ಷಿದಾರರು ಉಚಿತ ಅಂತರ್ಜಾಲ ಸೌಲಭ್ಯವನ್ನು ಬಳಸಿಕೊಳ್ಳಬಹುದು. ನ್ಯಾಯಾಲಯದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಅಳವಡಿಸಲಾಗಿದೆ. ನಿರಂತರ ವಿದ್ಯುತ್‌ ಪೂರೈಕೆಗಾಗಿ 11 ಕೆ.ವಿ. ಸ್ಟೇಷನ್‌ ಆರಂಭಿಸಲಾಗಿದೆ. ಜೊತೆಗೆ ಮೂರು ಜನರೇಟರ್‌ಗಳೂ ಇವೆ.

ಹೀಗೆ ಹಲವು ವೈಶಿಷ್ಟ್ಯಗಳೊಂದಿಗೆ ನಿರ್ಮಾಣವಾಗಿ ಉದ್ಘಾಟನೆಗೊಂಡಿರುವ ಹುಬ್ಬಳ್ಳಿಯ ತಾಲ್ಲೂಕು ನ್ಯಾಯಾಲಯಗಳ ಸಂಕೀರ್ಣ ಈಗ ಹುಬ್ಬಳ್ಳಿಯ ಹೆಮ್ಮೆ ಎನಿಸಿದೆ. ಅಂದಹಾಗೆ ದೇಶದ ಇತಿಹಾಸದಲ್ಲೇ ಭಾರತದ ಮುಖ್ಯ ನ್ಯಾಯಮೂರ್ತಿಯವರು ಉದ್ಘಾಟಿಸಿದ ಮೊದಲ ತಾಲ್ಲೂಕು ನ್ಯಾಯಾಲಯ ಎಂಬ ಹೆಗ್ಗಳಿಕೆಯೂ ಈ ಕಟ್ಟಡದ್ದಾಗಿದೆ.