‘ಕಾನೂನಿಗಿಂತ ಕಾವಿ ದೊಡ್ಡದು’: ಪೊಲೀಸರ ಹೂವಿನ ಹಾಸಿಗೆ ಮೇಲೆ ‘ಕನ್ವರಿಯಾ’ಗಳ ಹಿಂಸಾಚಾರ
ಸುದ್ದಿ ಸಾಗರ

‘ಕಾನೂನಿಗಿಂತ ಕಾವಿ ದೊಡ್ಡದು’: ಪೊಲೀಸರ ಹೂವಿನ ಹಾಸಿಗೆ ಮೇಲೆ ‘ಕನ್ವರಿಯಾ’ಗಳ ಹಿಂಸಾಚಾರ

ಒಂದು ಕಡೆ ಧಾರ್ಮಿಕ ಯಾತ್ರೆ ಹೊರಟ ಕನ್ವರಿಯಾಗಳು ಬೀದಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇವರ ಮೇಲೆ ಲಾಠಿ ಬೀಸಬೇಕಿದ್ದ ಯುಪಿ ಪೊಲೀಸರು ಹೂವಿನ ಹಾರ ಹಿಡಿದು ನಿಂತಿದ್ದಾರೆ.

ಅಧಿಕಾರದಲ್ಲಿರುವವರು ಜವಾಬ್ದಾರಿ ಮರೆತು ಧಾರ್ಮಿಕ ಸಮುದಾಯವೊಂದರ ಬಗ್ಗೆ ಸಹಾನುಭೂತಿ ಇಟ್ಟುಕೊಂಡಾಗ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಯೊಂದು ‘ಕನ್ವರ್‌ ಯಾತ್ರೆ’ ಮೂಲಕ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಸಿಕ್ಕಿದೆ.

ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಉತ್ತರ ಪ್ರದೇಶದ ಎಡಿಜಿಪಿ ಮತ್ತು ಇತರ ಹಿರಿಯ ಪೊಲೀಸ್‌ ಅಧಿಕಾರಿಗಳು ಹೆಲಿಕಾಪ್ಟರ್‌ ಬಾಡಿಗೆ ಪಡೆದಿದ್ದರು. ಈ ಹೆಲಿಕಾಪ್ಟರ್‌ ಮೂಲಕ ಯಾತ್ರೆ ಹೊರಟಿದ್ದ ಕನ್ವರಿಯಾಗಳ ಮೇಲೆ ಸ್ವತಃ ಅಧಿಕಾರಿಗಳೇ ಆಕಾಶದಿಂದ ಹೂವಿನ ಮಳೆಗರೆಯಲು ಆರಂಭಿಸಿದ್ದರು. ಹೀಗೆ ಆಕಾಶದಲ್ಲಿ ಉನ್ನತ ಅಧಿಕಾರಿಗಳು ಹೂವು ತೂರುತ್ತಿದ್ದರೆ, ಕೆಳಗೆ ಅದೇ ಇಲಾಖೆಯ ಪೊಲೀಸರು ಕನ್ವರಿಯಾಗಳಿಗೆ ಹೂವಿನ ಹಾರ ಹಾಕಿ, ಆಹಾರ, ನೀರು ನೀಡಿ ಆರತಿ ಎತ್ತಿ ಸ್ವಾಗತಿಸಿ, ಸತ್ಕರಿಸುತ್ತಿದ್ದರು.

ಅದಕ್ಕೂ ಹಿಂದಿನ ದಿನ ಇದೆ ಕನ್ವರಿಯಾಗಳು ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದರು. ದೆಹಲಿಯಲ್ಲಿ ಹಾಡ ಹಗಲೇ ಹೊತ್ತಿನಲ್ಲಿ ಜನ ನಿಬಿಡ ರಸ್ತೆಯಲ್ಲಿ ಅಪ್ಪಟ ಪುಡಿ ರೌಡಿಗಳ ರೀತಿ ಕಾರೊಂದನ್ನು ಪುಡಿಗಟ್ಟಿದ್ದರು. ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಇನ್ನೊಂದು ಕಡೆ ಯಾತ್ರಿಕರ ಪರವಾಗಿ ವಕ್ತಾರಿಕೆಗೆ ಇಳಿದಿದ್ದ ಪೊಲೀಸರು ಯಾತ್ರೆ ತೆರಳುವ ರಸ್ತೆಯಲ್ಲಿದ್ದ ಮುಸ್ಲಿಂ ಸಮುದಾಯದವರಿಗೆ ‘ರೆಡ್‌ ಕಾರ್ಡ್‌’ಗಳನ್ನು ನೀಡಿದ್ದರು. ಯಾವತ್ತೂ ಶಾಂತಿಯಿಂದಿರುವ ಇಲ್ಲಿನ ಅಲ್ಪಸಂಖ್ಯಾತರಿಗೆ ಸಮಸ್ಯೆ ಸೃಷ್ಟಿಸದಂತೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಮನೆಗಳನ್ನೇ ಬಿಟ್ಟು ತೆರಳಿದ್ದರು. ಹಾಗಂಥ ಕನ್ವರ್‌ ಯಾತ್ರೆ ನಡೆಯುವುದು ಈ ವರ್ಷ ಹೊಸದಲ್ಲ.

ಯಾರು ಈ ಕನ್ವರಿಯಾಗಳು?

ಪ್ರತಿ ವರ್ಷ ಕೇಸರಿ ಬಟ್ಟೆ ತೊಟ್ಟ ಶಿವನ ಆರಾಧಕರಾದ ಕನ್ವರಿಯಾಗಳು ಗಂಗೆಯಿಂದ ನೀರನ್ನು ತರಲು ಕಾಲ್ನಡಿಗೆಯಲ್ಲಿ ಯಾತ್ರೆ ಹೊರಡುತ್ತಾರೆ. ಉತ್ತರ ಭಾರತದ ಬೇರೆ ಬೇರೆ ದೇವಸ್ಥಾನಗಳ ಪರವಾಗಿ ಇವರು ಈ ಯಾತ್ರೆ ಕೈಗೊಳ್ಳುತ್ತಾರೆ. ಸುಮಾರು 1980ರಿಂದ ಇದು ನಡೆದು ಬಂದಿದೆ. ಬೆನ್ನ ಮೇಲೆ ಅಡ್ಡಲಾಗಿ ಕೋಲೊಂದನ್ನು ಇಟ್ಟುಕೊಂಡು ಅದರ ಎರಡೂ ತುದಿಗೆ ಬಿಂದಿಗೆ ನೇತುಹಾಕಿಕೊಂಡು ಇವರು ತೆರಳುತ್ತಾರೆ. ಈ ಕೋಲಿನಿಂದಾಗಿ ಇವರಿಗೆ ಕನ್ವರಿಯಾಗಳು ಎಂಬ ಹೆಸರು ಬಂದಿದೆ.

ಪ್ರತಿ ವರ್ಷ ಹೀಗೆ ಶಾಂತವಾಗಿ ನಡೆಯುತ್ತಿದ್ದ ಯಾತ್ರೆ ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಾಗ ಯಾತ್ರೆ ಗಲಭೆಯ ಕಾರಣಕ್ಕೆ ಸುದ್ದಿಯಾಗಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇವರಿಗೆ ಸಿಗುತ್ತಿರುವ ‘ರಾಜ ಮರ್ಯಾದೆ’ ಚರ್ಚೆಗೆ ಗ್ರಾಸವಾಗಿದೆ.

ಈ ಪೊಲೀಸರು ಮತ್ತು ಸ್ಥಳೀಯ ಆಡಳಿತ ವರ್ಗದ ‘ಅತಿಥಿ ಸತ್ಕಾರ’ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಹಾಡಹಗಲೇ ಕಾರು ಪುಡಿಗೈದಿದ್ದರೂ ಇವರ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಧಾರ್ಮಿಕ ಯಾತ್ರೆ ಹೊರಟವರು ಟ್ರಕ್‌ಗಳ ಮೇಲೆ ದಾಳಿ ಮಾಡಿದಾಗ, ಸೈಕಲ್‌ ಸವಾರನ ಮೇಲೆ ಹಲ್ಲೆಗೆ ಯತ್ನಿಸಿದಾಗ, ಅಷ್ಟೇಕೆ ಪೊಲೀಸ್‌ ವ್ಯಾನನ್ನೇ ಜಖಂಗೊಳಿಸಿದರೂ ಕನ್ವರಿಯಾಗಳಿಗೆ ಏನೂ ಆಗಿಲ್ಲ.

ಹೀಗೆ ಬೀದಿ ಕಾಳಗಗಳೆಲ್ಲಾ ನಡೆಯುವಾಗ ಹಾಕಿ ಸ್ಟಿಕ್‌ ಮೊದಲಾದ ಅಸ್ತ್ರಗಳು ಇವರ ಬಳಿ ಪತ್ತೆಯಾಗಿವೆ. ಹೀಗಿದ್ದೂ ಇವರ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ ಉತ್ತರ ಪ್ರದೇಶ ಮತ್ತು ಇಲ್ಲಿನ ನೆರೆ ಹೊರೆಯ ರಾಜ್ಯದ ಪೊಲೀಸರು. ಬದಲಿಗೆ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಕಾರಿನ ಮೇಲೆ ದಾಳಿ ಮಾಡಿದಾಗ ಹತ್ತಿರ ಬರದ ಆರಕ್ಷಕರು, ‘ಇದರಿಂದ ಗುಂಪನ್ನು ಉದ್ರೇಕಿಸಿದಂತಾಗುತ್ತದೆ’ ಎಂಬ ಸಬೂಬು ನೀಡಿದ್ದರು. ಉತ್ತರ ಪ್ರದೇಶ ಪೊಲೀಸರ ವಾಹನವನ್ನೇ ಜಖಂಗೊಳಿಸಿದಾಗ ‘ಇದು ಎರಡು ಗುಂಪಿನ ಹಲ್ಲೆ’ ಎಂದಿದ್ದರು; ಮತ್ತು ಹಾಗೆ ಹೇಳಿದರು ಹೆಲಿಕಾಪ್ಟರ್‌ನಲ್ಲಿ ಹೋಗಿ ಹೂವು ಹಾಕಿದ್ದರು ಎಡಿಜಿಪಿ ಪ್ರಶಾಂತ್‌ ಕುಮಾರ್‌!

ಇವೆಲ್ಲಾ ಘಟನೆಗಳ ಬೆನ್ನಿಗೆ ಅಲಹಾಬಾದ್‌ ಹೆದ್ದಾರಿಯ ಒಂದು ಭಾಗವನ್ನೇ ಈ ಸೋ ಕಾಲ್ಡ್‌ ಧಾರ್ಮಿಕ ಯಾತ್ರಿಕರು ಬಂದ್‌ ಮಾಡಿದ್ದರು. ಇದು ಸುಪ್ರೀಂ ಕೋರ್ಟ್‌ನಲ್ಲಿಯೂ ಚರ್ಚೆಗೆ ಗ್ರಾಸವಾಗಿತ್ತು. ಸ್ವತಃ ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್‌, ಕನ್ವರಿಯಾಗಳ ಹಿಂಸಾಚಾರ ತಡೆಗಟ್ಟುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು ಎಂದು ಕೋರಿಕೊಂಡಿದ್ದರು.

ಈ ಸಂಬಂಧ ಶುಕ್ರವಾರ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಹಿಂಸೆ ನಡೆಸುವ ಯಾರೇ ಆಗಿರಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ 153ಎ ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಖಡಕ್‌ ಸೂಚನೆ ನೀಡಿದ್ದಾರೆ. ಗಲಭೆ ನಡೆಸುವವರು ಯಾವುದೇ ಧರ್ಮದವರಾದರೂ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಆದರೆ ಪೊಲೀಸರೆ ಹೂವಿನ ಹಾರ ಹಿಡಿದು ನಿಂತಿರುವಾಗ, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿಗೈಯುತ್ತಿರುವಾಗ ಕ್ರಮ ಕೈಗೊಳ್ಳುವವರು ಯಾರು ಎಂಬ ಪ್ರಶ್ನೆ ಉದ್ಧವಿಸಿದೆ.