ಸಾಲಮನ್ನಾ ಆದೇಶ: ಸಿ.ಎಂ. ಮಾತು ಕೇಳುತ್ತಿಲ್ಲವೇ ರಾಜ್ಯದ ಅಧಿಕಾರಿ ವರ್ಗ?
ಸುದ್ದಿ ಸಾಗರ

ಸಾಲಮನ್ನಾ ಆದೇಶ: ಸಿ.ಎಂ. ಮಾತು ಕೇಳುತ್ತಿಲ್ಲವೇ ರಾಜ್ಯದ ಅಧಿಕಾರಿ ವರ್ಗ?

ಬಜೆಟ್‌ ಮುಗಿದು ತಿಂಗಳಾದರೂ ರೈತರ ಸಾಲಮನ್ನಾದ ಸರಕಾರಿ ಆದೇಶ ಹೊರಬಿದ್ದಿಲ್ಲ. ಈ ಬಗ್ಗೆ ಸಿ.ಎಂ. ಕುಮಾರಸ್ವಾಮಿ ತಮ್ಮ ‘ಅಸಹಾಯಕತೆ’ಯನ್ನು ಹೊರಹಾಕಿದ್ದಾರೆ. ಅಧಿಕಾರಿಗಳು ಸಿಎಂ ಮಾತು ಕೇಳ್ತಾ ಇಲ್ವಾ ಎಂಬ ಅನುಮಾನಕ್ಕೆ ಇದು ಕಾರಣವಾಗಿದೆ. 

ಬಜೆಟ್‌ನಲ್ಲಿ ರೈತರ ಸಾಲಮನ್ನಾ ಘೋಷಣೆಯಾಗಿ ತಿಂಗಳು ಕಳೆದರೂ ಇನ್ನೂ ಸರಕಾರಿ ಆದೇಶ ಹೊರಬಿದ್ದಿಲ್ಲ. ಆದೇಶದ ವಿಚಾರವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ಮಾತನಾಡಿದ್ದಾರೆ. ಸಾಲಮನ್ನಾ ವಿಚಾರವಾಗಿ ಇತ್ತೀಚೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಒಂದು ವಾರದೊಳಗೆ ಸರಕಾರಿ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.

ಸಾಲಮನ್ನಾ ಆದೇಶ ಮುಂದಿನ ಒಂದು ವಾರದಲ್ಲಿ ಹೊರ ಬೀಳಬಹುದು ಅಥವಾ ಬೀಳದೇ ಇರಬಹುದು. ಆದರೆ, ಮುಖ್ಯಮಂತ್ರಿ ಹುದ್ದೆಯಲ್ಲಿರುವ ಕುಮಾರಸ್ವಾಮಿ ಸಾಲಮನ್ನಾ ಘೋಷಣೆ ಮಾಡಿ ತಿಂಗಳು ಉರುಳಿದರೂ ಇನ್ನೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗದುಕೊಳ್ಳಬೇಕು ಎಂಬ ಮಾತನ್ನಾಡುತ್ತಿರುವುದು ‘ಸರಕಾರದೊಳಗೆ ಎಲ್ಲವೂ ಸರಿಯಾಗಿಲ್ಲ’ ಎಂಬ ಸಂದೇಶವನ್ನು ಮುಖ್ಯಮಂತ್ರಿಗಳೇ ಹೊರಹಾಕಿದಂತಿದೆ.

ಸರಕಾರದ ಹಂತದಲ್ಲಿ ಜನಪ್ರಿಯ ಯೋಜನೆಯೊಂದರ ಸರಕಾರಿ ಆದೇಶ ಹೊರ ಬೀಳಲು ಒಂದು ತಿಂಗಳಷ್ಟು ವಿಳಂಬವಾಗುತ್ತದೆ ಹಾಗೂ ಅದಕ್ಕೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ಮಾತನ್ನು ಮುಖ್ಯಮಂತ್ರಿಗಳೇ ಆಡುತ್ತಾರೆ ಎಂಬುದು ಸರಕಾರದ ದಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಸಾಲಮನ್ನಾ ಘೋಷಣೆಯಾದ ಬಳಿಕ ಪ್ರತಿ ಬಾರಿಯೂ ಕುಮಾರಸ್ವಾಮಿ ಆದಷ್ಟು ಬೇಗ ಆದೇಶ ಜಾರಿ ಮಾಡುವುದಾಗಿ ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಆದೇಶವಂತೂ ಇನ್ನೂ ಬಂದಿಲ್ಲ.

ಜೆಡಿಎಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಕ್ಕಮಟ್ಟಿಗೆ ಈಡೇರಿಸಲು ಬಜೆಟ್‌ನಲ್ಲಿ 34,000 ಕೋಟಿ ರೂಪಾಯಿ ಸಾಲಮನ್ನಾ ಘೋಷಣೆ ಮಾಡಿದ್ದರು ಕುಮಾರಸ್ವಾಮಿ. ಈಗ ಆ ಘೋಷಣೆಯ ಸರಕಾರಿ ಆದೇಶದ ಬಗ್ಗೆ ಅಧಿಕಾರಿಗಳ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಈ ಹಿಂದೆ ತಾನು ಸಂದರ್ಭದ ಶಿಶು, ಕಾಂಗ್ರೆಸ್‌ನ ಹಂಗಿನಲ್ಲಿದ್ದೇನೆ, ಆಡಳಿತದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಎಂದು ಕಣ್ಣೀರು ಹಾಕಿದ್ದ ಕುಮಾರಸ್ವಾಮಿ, ಈಗ ತಮ್ಮೆದುರು ಅಧಿಕಾರಿಗಳನ್ನು ಗುರಾಣಿಗಳಾಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವಂತಿದೆ.

Also read: ಎಚ್‌ಡಿಕೆ ಸಾಲಮನ್ನಾ ಕಸರತ್ತು; ರಾಜೀನಾಮೆ ಜತೆಗೆ ಮುಲಾಜಿನ ಮಾತಾಡಿದ ಸಿಎಂ!

ಸಾಲಮನ್ನಾ ವಿಚಾರದಲ್ಲಿ ಸರಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಇತರೆ ಯೋಜನೆಗಳಿಗೆ ವಿನಿಯೋಗಿಸಬೇಕಾದ ಹಣವನ್ನು ಕಡಿತಗೊಳಿಸಲಾಗಿದೆ. ಈ ಹಿಂದಿನ ಸರಕಾರ ಘೋಷಿಸಿದ್ದ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಆರ್ಥಿಕ ಹೊರೆಯನ್ನು ಸರಿದೂಗಿಸಲು ಸರಕಾರದ ಮೇಲ್ಮಟ್ಟದಲ್ಲೇ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಮಾತನ್ನೂ ಕುಮಾರಸ್ವಾಮಿ ಅವರೇ ಹೇಳಿದ್ದಾರೆ.

ಇನ್ನು ರೈತರ ಸಾಲಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ಕೆಲವು ಇಲಾಖೆಗಳ ಕೆಳಮಟ್ಟದ ಅಧಿಕಾರಿಗಳ ದಿನಭತ್ಯೆಯನ್ನೇ ನಿಲ್ಲಿಸಲಾಗಿದೆ. ಪರಿಷ್ಕೃತ ವೇತನದ ಹಿಂಬಾಕಿಯನ್ನು ಪಿಂಚಣಿಗೆ ಸೇರಿಸುವ ಆದೇಶ ನೀಡಲಾಗಿದೆ. ಇಷ್ಟೆಲ್ಲಾ ಆದರೂ ಸಂಪನ್ಮೂಲ ಕ್ರೋಢೀಕರಣ ಹಾಗೂ ಸಾಲಮನ್ನಾ ಆದೇಶ ಹೊರಡಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಮೂಡುವುದು ಸಹಜ.

ಇಷ್ಟು ದಿನ ಕಾಂಗ್ರೆಸ್‌ನ ಅಸಹಕಾರವನ್ನು ಮುಂದು ಮಾಡುತ್ತಿದ್ದ ಕುಮಾರಸ್ವಾಮಿ ಈಗ ಅಧಿಕಾರಿಗಳ ಅಸಹಕಾರದ ಮಾತನ್ನಾಡುತ್ತಿರುವಂತೆ ಕಾಣುತ್ತಿದೆ. ಸರಕಾರದ ಹಂತದಲ್ಲಿ ಸದ್ಯಕ್ಕೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಘೋಷಿಸಿದ ಜನಪ್ರಿಯ ಯೋಜನೆಯೊಂದರ ಆದೇಶ ಹೊರಡಿಸಲೇ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದರೆ ಉಳಿದ ಯೋಜನೆಗಳು ಹಾಗೂ ಅವುಗಳ ಆದೇಶದ ಕಥೆಯೇನು?

ಕುಮಾರಸ್ವಾಮಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನಾ ರಾಜ್ಯದಲ್ಲಿ ಮೂರು ದಿನಗಳ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅಧಿಕಾರ ಇರುವುದರೊಳಗೆ ರೈತರ ಸಾಲಮನ್ನಾ ಘೋಷಣೆ ಮಾಡಿ ಅದರ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮಾಡಿದ್ದರು. ಆದರೆ, ಸಾಲ ಬಾಕಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದರೊಳಗೆ ಅವರ ಅಧಿಕಾರ ಮುಗಿದಿತ್ತು.

ಯಡಿಯೂರಪ್ಪ ಅನಿಶ್ಚಿತ ಮುಖ್ಯಮಂತ್ರಿಯಾಗಿದ್ದು ಅಧಿಕಾರಿಗಳ ಸಹಕಾರ ಸಿಗಲಿಲ್ಲ ಎಂದರೆ ಆ ಮಾತನ್ನು ಒಪ್ಪಬಹುದು. ಆದರೆ ಕಾಂಗ್ರೆಸ್‌ ಬೆಂಬಲದಿಂದ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಸರಕಾರಿ ಆದೇಶದ ವಿಚಾರ ಬಂದಾಗಲೆಲ್ಲಾ ಜಾರಿಕೊಳ್ಳುತ್ತಿರುವುದು ಹೊಣೆಗೇಡಿತನದ ಪ್ರದರ್ಶನದಂತೆ ಕಾಣುತ್ತಿದೆ. ರಾಜ್ಯದ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ಕುಮಾರಸ್ವಾಮಿ ತಮ್ಮನ್ನು ‘ಅಸಹಾಯಕ, ಅಮಾಯಕ’ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ರಾಜಕೀಯ ನಾಟಕವಲ್ಲದೆ ಬೇರೇನೂ ಅಲ್ಲ.

ಸಾಲಮನ್ನಾ ಆದೇಶ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಸಹಾಯಕತೆಯನ್ನು ಪ್ರದರ್ಶಿಸುವುದು ಸರಿಯಲ್ಲ. ಇದು ಸರಕಾರದ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ. ಸರಕಾರ ನಡೆಸಲು ಅಸಹಾಯಕತೆಯಲ್ಲ, ದಕ್ಷತೆ ಮುಖ್ಯ.
- ಕುರುಬೂರು ಶಾಂತಕುಮಾರ್‌, ಅಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಈ ರಾಜಕೀಯ ನಾಟಕಗಳನ್ನು ಪೂರ್ತಿಯಾಗಿ ನಂಬುವಷ್ಟು ಹಾಗೂ ರಾಜಕಾರಣಿಗಳ ಮಾತಿಗೆ ಪೂರ್ತಿ ಮರುಳಾಗುವಷ್ಟು ಈಗ ಜನ ಅಮಾಯಕರಾಗಿಲ್ಲ ಎಂಬುದನ್ನು ಕುಮಾರಸ್ವಾಮಿ ತಿಳಿದುಕೊಳ್ಳಬೇಕಿದೆ. ಎಲ್ಲಾ ಸಂದರ್ಭದಲ್ಲೂ ರಾಜಕಾರಣಿಗಳು ಜನರ ಸಹಾನುಭೂತಿ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಕುಮಾರಸ್ವಾಮಿ ಮರೆತಿರುವಂತಿದೆ. ಇದರ ಫಲವೇ ತಮ್ಮ ಜವಾಬ್ದಾರಿಗಳನ್ನು ಕುಮಾರಸ್ವಾಮಿ ಒಮ್ಮೆ ಕಾಂಗ್ರೆಸ್‌ ಮೇಲೂ, ಮತ್ತೊಮ್ಮೆ ಅಧಿಕಾರಿಗಳ ಮೇಲೂ ಹೇರಲು ಪ್ರಯತ್ನಿಸುತ್ತಿರುವುದು.

ರೈತರ ಸಾಲಮನ್ನಾ ವಿಚಾರದಲ್ಲಿ ‘ಬದ್ಧತೆ’ ತೋರಿದ ಮುಖ್ಯಮಂತ್ರಿ ಅದರ ಸರಕಾರಿ ಆದೇಶ ಹೊರಡಿಸಲು ಈ ವಾರ, ಮುಂದಿನ ವಾರ ಎಂದು ಹೇಳುತ್ತಿರುವುದನ್ನು ನೋಡಿದರೆ ಅಧಿಕಾರಿಗಳು ನಿಜಕ್ಕೂ ಮುಖ್ಯಮಂತ್ರಿಗಳ ಮಾತನ್ನು ಕೇಳುತ್ತಿಲ್ಲವೇ ಎಂಬ ಅನುಮಾನವೂ ಮೂಡುತ್ತದೆ. ಮುಖ್ಯಮಂತ್ರಿಗಳ ಮಾತನ್ನೇ ಕೇಳದ ಕಾರ್ಯಾಂಗದೊಂದಿಗೆ ಈ ಶಾಸಕಾಂಗ ಎಂತಹ ಕಾರ್ಯಸಾಧನೆಯನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಯೂ ಅದರ ಹಿಂದೆಯೇ ಏಳುತ್ತದೆ.

“ರೈತರ ಸಾಲಮನ್ನಾ ಘೋಷಣೆ ತಕ್ಕಮಟ್ಟಿಗೆ ರೈತರಿಗೆ ಆಶಾವಾದವಾಗಿ ಕಂಡಿತ್ತು. ಆದರೆ, ಅದರ ಸರಕಾರಿ ಆದೇಶ ವಿಳಂಬವಾಗುತ್ತಿರುವುದು ದಕ್ಷ ಸರಕಾರದ ಲಕ್ಷಣವಲ್ಲ. ಮುಖ್ಯಮಂತ್ರಿ ಹುದ್ದೆಯಲ್ಲಿರುವ ಕುಮಾರಸ್ವಾಮಿ ಆದೇಶ ವಿಳಂಬಕ್ಕೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಮಾತನ್ನು ಹೇಳುವುದು ಸರಿಯಲ್ಲ. ಉನ್ನತ ಹುದ್ದೆಯಲ್ಲಿರುವವರು ಈ ರೀತಿಯ ಅಸಹಾಯಕತೆಯನ್ನು ಪ್ರದರ್ಶಿಸುವುದು ಉತ್ತಮ ಆಡಳಿತದ ಲಕ್ಷಣವಲ್ಲ” ಎನ್ನುತ್ತಾರೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌.

“ಮುಖ್ಯಮಂತ್ರಿಯವರೇ ಘೋಷಿಸಿದ ಜನಪ್ರಿಯ ಯೋಜನೆಯನ್ನೇ ಜಾರಿಗೆ ತರಲು ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ ಎಂದರೆ ಉಳಿದ ಯೋಜನೆಗಳು ಹಾಗೂ ಆಡಳಿತ ನಡೆಯುವುದು ಹೇಗೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ನಿಜ. ಆದರೆ, ವಿಳಂಬ ನೀತಿ ಅನುಸರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ವಿಚಾರವನ್ನು ಮುಂದಿಟ್ಟುಕೊಂಡು ಹೀಗೆ ಅಸಹಾಯಕತೆ ಪ್ರದರ್ಶಿಸುತ್ತಾ ಹೋದರೆ ಆಡಳಿತ ನಿರ್ವಹಿಸುವುದು ಕಷ್ಟ” ಎಂಬುದು ಅವರ ಮಾತು.

ನಿವೃತ್ತಿಯಾಗುವವರೆಗೂ ಅಧಿಕಾರದಲ್ಲಿರುವ ‘ಉದ್ಯೋಗ ಭದ್ರತೆ’ಯ ಅಮಲಿನಲ್ಲಿರುವ ಬಹುತೇಕ ಅಧಿಕಾರಿಗಳು ಐದು ವರ್ಷ ಅಧಿಕಾರದಲ್ಲಿರುವ ರಾಜಕಾರಣಿಗಳ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಹೀಗಾಗಿಯೇ ಹಲವು ಬಾರಿ ಜನಪ್ರತಿನಿಧಿಗಳಿಗೆ ಕೆಲಸ ಮಾಡುವ ಮನಸ್ಸಿದ್ದರೂ ಅಧಿಕಾರಿಗಳ ಸೂಕ್ತ ಸ್ಪಂದನೆ ಇಲ್ಲದೆ ಹಲವು ಯೋಜನೆಗಳು ಹಳ್ಳ ಹಿಡಿಯುತ್ತವೆ.

ಕಾರ್ಯಾಂಗ ಎಂಬ ಅಧಿಕಾರಿ ವರ್ಗ ಶಾಸಕಾಂಗಕ್ಕೆ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಸರಕಾರದ ಯೋಜನೆಗಳು ಸೂಕ್ತವಾಗಿ ಜಾರಿಯಾಗಲು ಸಾಧ್ಯ. ಇಲ್ಲವಾದರೆ ಜನಪ್ರಿಯ ಯೋಜನೆಗಳು ಸಕಾಲದಲ್ಲಿ ಜನರನ್ನು ತಲುಪುವುದು ಕಷ್ಟ. ಕುಮಾರಸ್ವಾಮಿ ಅಸಹಾಯಕತೆಯ ಪ್ರದರ್ಶನ ಇಂತಹ ಕೆಟ್ಟ ಪರಿಸ್ಥಿತಿಯ ಒಂದು ಉದಾಹರಣೆಯಷ್ಟೇ.

ಈ ನಡುವೆ ಶನಿವಾರ ಸಿಎಂ ಕುಮಾರಸ್ವಾಮಿ ರೈತರ ಜತೆ ನಾಟಿ ಮಾಡಿದ ಖುಷಿಯಲ್ಲಿದ್ದಾರೆ. ಆದರೆ, ಅವರೇ ಘೋಷಿಸಿ ಸಾಲ ಮನ್ನಾಕ್ಕಾಗಿ ರಾಜ್ಯ ರೈತ ಸಮುದಾಯ ಎದುರು ನೋಡುತ್ತಿದೆ. ಮೇಲ್ನೋಟದ ಕಾರ್ಯಕ್ರಮಗಳಿಗಿಂತ ಆಡಳಿತಾತ್ಮಕ ದಿಟ್ಟ ಹೆಜ್ಜೆಗಳು ಹೆಚ್ಚು ಪರಿಣಾಮಕಾರಿ ಎಂಬುದನ್ನು ಅವರು ಮನಗಾಣಬೇಕಾದ ಅವಶ್ಯಕತೆ ಇದೆ.