samachara
www.samachara.com
 ಮರಾಠ ಮೀಸಲಾತಿ; ಪೋಷಕರ ಪ್ರತಿರೋಧಕ್ಕೆ ಸಮುದಾಯದ ಮಕ್ಕಳು ಶಾಲೆಯಿಂದ ಹೊರಗೆ
ಸುದ್ದಿ ಸಾಗರ

ಮರಾಠ ಮೀಸಲಾತಿ; ಪೋಷಕರ ಪ್ರತಿರೋಧಕ್ಕೆ ಸಮುದಾಯದ ಮಕ್ಕಳು ಶಾಲೆಯಿಂದ ಹೊರಗೆ

ಮರಾಠ್‌ವಾಡ ಪ್ರಾಂತ್ಯದಲ್ಲಿ ಮರಾಠ ಸಮುದಾಯ ಸರಕಾರದ ವಿರುದ್ಧ ತೋರುತ್ತಿರುವ ಪ್ರತಿರೋಧಕ್ಕೆ ಈಗ ಮಕ್ಕಳ ವಿದ್ಯಾಭ್ಯಾಸ ಬಲಿಯಾಗುತ್ತಿದೆ.

Team Samachara

ಮರಾಠ ಮೀಸಲಾತಿ ಹೋರಾಟದ ಮುಂದುವರಿಕೆಯಾಗಿ ಮಹಾರಾಷ್ಟ್ರದ ಮರಾಠ್‌ವಾಡ ಪ್ರಾಂತ್ಯದ ಹಲವೆಡೆ ಮರಾಠ ಸಮುದಾಯದ ಜನ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ ಸರಕಾರದ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರ ಮರಾಠ ಮೀಸಲಾತಿ ಜಾರಿಗೆ ತರುವವರೆಗೂ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸದಿರಲು ಮರಾಠ ಸಮುದಾಯದ ಪೋಷಕರು ನಿರ್ಧರಿಸಿದ್ದಾರೆ. ಇದರಿಂದ ಮರಾಠ್‌ವಾಡ ಪ್ರಾಂತ್ಯದ ಹಲವು ಶಾಲೆಗಳಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳಷ್ಟೇ ಶಾಲೆಗಳಲ್ಲಿ ಕಂಡುಬರುತ್ತಿದ್ದಾರೆ.

ಮರಾಠ್‌ವಾಡ ಪ್ರಾಂತ್ಯದ ಪರ್ಭನಿ ಜಿಲ್ಲೆಯ ಪತ್ರಿ ತಾಲ್ಲೂಕಿನ ತಕಲ್‌ಗಾಂವ್‌ ಗ್ರಾಮದ ಜಿಲ್ಲಾ ಪಂಚಾಯತ್‌ ಪ್ರಾಥಮಿಕ ಶಾಲೆಯ 37 ವಿದ್ಯಾರ್ಥಿಗಳ ಪೈಕಿ ಐವರಷ್ಟೇ ಶಾಲೆಗೆ ಬರುತ್ತಿದ್ದಾರೆ. ಮರಾಠ ಸಮುದಾಯಕ್ಕೆ ಸೇರಿದ ಮಕ್ಕಳು ಹಲವು ದಿನಗಳಿಂದ ಶಾಲೆ ಕಡೆ ಮುಖ ಮಾಡಿಲ್ಲ.

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಸಮುದಾಯದ ಜನರು ಹೋರಾಟ ಆರಂಭಿಸಿ 19 ದಿನಗಳು ಉರುಳಿವೆ. ಮಹಾರಾಷ್ಟ್ರ, ಮುಂಬೈ ಬಂದ್‌ ಕೂಡಾ ನಡೆದಿದೆ. ಆದರೆ, ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಬಗ್ಗೆ ಸರಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

Also read: ಮರಾಠರಿಂದ ಮಹಾರಾಷ್ಟ್ರ ಬಂದ್; ‘ಒಬಿಸಿ’ ಮೀಸಲಾತಿಯ 2 ದಶಕಗಳ ಹೋರಾಟ

ಪತ್ರಿ ತಾಲ್ಲೂಕಿನ 15 ಸಾವಿರ ವಿದ್ಯಾರ್ಥಿಗಳ ಪೈಕಿ 9 ಸಾವಿರ ವಿದ್ಯಾರ್ಥಿಗಳು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಿಲ್ಲಾ ಪಂಚಾಯತ್‌ನ 105 ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣವನ್ನು ಸರಕಾರ ನೀಡುತ್ತಿದೆ. ಆದರೆ, “ಮೀಸಲಾತಿ ಜಾರಿಯಾಗುವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದಿರಲು ಸಮುದಾಯದ ಪೋಷಕರು ನಿರ್ಧರಿಸಿದ್ದಾರೆ” ಎಂದು ತಕಲ್‌ಗಾಂವ್‌ ಗ್ರಾಮದ ಸರಪಂಚ್‌ ವೈಜನಾಥ್‌ ಮಹಿಪಾಲ್‌ ಹೇಳಿದ್ದಾರೆ.

ಅಧಿಕಾರಿಗಳು ಹಾಗೂ ಸ್ಥಳೀಯರ ಪ್ರಕಾರ ಪತ್ರಿಯ ಶೇಕಡ 80ರಷ್ಟು ಮರಾಠರು ರೈತಾಪಿ ಜನರು. “ಸಮುದಾಯದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕನಿಷ್ಠ 10 ಸಾವಿರ ರೂಪಾಯಿಯಿಂದ 4 ಲಕ್ಷ ರೂಪಾಯಿವರೆಗೂ ವ್ಯಯಿಸುತ್ತಾರೆ. ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಲ್ಲಿ ತಮ್ಮ ಮಕ್ಕಳು ವ್ಯಾಸಂಗ ಮಾಡಲು ಹೆಚ್ಚು ಹಣ ಖರ್ಚು ಮಾಡುತ್ತಾರೆ. ಆದರೆ, ಅವರ ಮಕ್ಕಳು ಓದು ಮುಗಿಸಿದ ನಂತರ ನಿರುದ್ಯೋಗ ಸಮಸ್ಯೆ ಕಾಡುತ್ತದೆ. ಇತ್ತ ವ್ಯವಸಾಯವನ್ನೂ ಮಾಡಲಾಗದೆ, ಅತ್ತ ಸೂಕ್ತ ಕೆಲಸವೂ ಸಿಗದೆ ಅವರು ಅತಂತ್ರರಾಗಿದ್ದಾರೆ” ಎನ್ನುತ್ತಾರೆ ಸ್ಥಳೀಯ ಅಧಿಕಾರಿಯೊಬ್ಬರು.

Also read: ದಲಿತ VS ಮರಾಠ: ಜಾತಿ ಸಂಘರ್ಷಕ್ಕೆ ಮುನ್ನುಡಿ ಬರೆದ ಮಹಾರಾಷ್ಟ್ರ ಬಹುಸಂಖ್ಯಾತರ ಹತಾಶೆಯ ಹೋರಾಟ!

“ಹೆಚ್ಚು ಹಣ ಖರ್ಚು ಮಾಡಿ ಮಕ್ಕಳನ್ನು ಓದಿಸಿದರೂ ಮೀಸಲಾತಿ ಇಲ್ಲದ ಕಾರಣಕ್ಕೆ ಅವರಿಗೆ ಕೆಲಸಗಳು ಸಿಗುತ್ತಿಲ್ಲ. ಮರಾಠ ಸಮುದಾಯದ ಯುವಜನರಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸಮುದಾಯ ಮೀಸಲಾತಿಗೆ ಪಟ್ಟು ಹಿಡಿದಿದೆ” ಎಂಬುದು ಸಮುದಾಯದ ಹಿರಿಯರೊಬ್ಬರ ಮಾತು.

“ಪ್ರತಿಭಟನೆಯ ರೂಪದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸದೇ ಇರುವುದು ಸರಿಯಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಈ ಬಗ್ಗೆ ಪೋಷಕರಿಗೆ ಮನವರಿಕೆ ಮಾಡುತ್ತಿದ್ದೇವೆ” ಎನ್ನುತ್ತಾರೆ ಅಧಿಕಾರಿಯೊಬ್ಬರು.

ಮೀಸಲಾತಿ ಹೋರಾಟದ ವಿಚಾರವನ್ನು ಸಮುದಾಯದ ಹಲವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದರ ಫಲವಾಗಿ ಮಕ್ಕಳು ಶಾಲೆಗಳಿಂದ ದೂರ ಉಳಿಯುವಂತಾಗಿದೆ. ಮೀಸಲಾತಿ ವಿಚಾರಕ್ಕೆ ಒತ್ತು ನೀಡುತ್ತಿರುವ ಜನ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಿದಂತಿಲ್ಲ.

ಅಧಿಕಾರಿಗಳ ಮನವಿಗೆ ಅಲ್ಲೊಬ್ಬರು ಇಲ್ಲೊಬ್ಬರು ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮನಸ್ಸು ಮಾಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯ ಪೋಷಕರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಇದರ ಪರಿಣಾಮ ಮರಾಠ್‌ವಾಡ ಪ್ರಾಂತ್ಯದ ಹಲವು ಶಾಲೆಗಳು ಖಾಲಿ ಖಾಲಿಯಾಗಿವೆ.

ಚಿತ್ರ, ಮಾಹಿತಿ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌