ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು; ಯುಪಿಎ, ಎನ್‌ಡಿಎ ಪೈಕಿ ಯಾರು ಬೆಸ್ಟ್‌?
ಸುದ್ದಿ ಸಾಗರ

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು; ಯುಪಿಎ, ಎನ್‌ಡಿಎ ಪೈಕಿ ಯಾರು ಬೆಸ್ಟ್‌?

ದಾಖಲೆಗಳ ಪ್ರಕಾರ 2005 ರಿಂದ 2013ರ ಅವಧಿಯಲ್ಲಿ ದೇಶದಿಂದ 82,728 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಈ ಅವಧಿಯಲ್ಲಿ ಯುಪಿಎ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕರಡು ಪಟ್ಟಿ ವಿಚಾರ ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‌ ಶಾ, ‘ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಡೆಯನ್ನು ಸ್ಪಷ್ಟಪಡಿಸಬೇಕು,’ ಎಂದಿದ್ದರು. ಇದಕ್ಕೆ ದಾಖಲೆ ಸಮೇತ ಕಾಂಗ್ರೆಸ್ ಪ್ರತ್ಯುತ್ತರ ನೀಡಿದ್ದು, ಬಿಜೆಪಿಯ ತೋರಿಕೆಯ ನಡೆಯನ್ನು ಪ್ರಶ್ನಿಸಿದೆ.

ಒಂದು ಕಡೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಕ್ರಮ ಬಾಂಗ್ಲಾದೇಶಿಯರನ್ನು ಅಸ್ಸಾಂನಿಂದ ಒದ್ದೋಡಿಸುವ ‘ಪೋಸ್‌’ ನೀಡುತ್ತಿದ್ದರೆ, ‘ಎನ್‌ಡಿಎ ಸರಕಾರಕ್ಕಿಂತ ಯುಪಿಎ ಸರಕಾರದ ಅವಧಿಯಲ್ಲಿ ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿಯರನ್ನು ಭಾರತದಿಂದ ಗಡಿಪಾರು ಮಾಡಲಾಗಿತ್ತು’ ಎಂದು ಕಾಂಗ್ರೆಸ್‌ ದಾಖಲೆ ಬಿಡುಗಡೆ ಮಾಡಿದೆ. ಶನಿವಾರ ಕಾಂಗ್ರೆಸ್ ವಕ್ತಾರ ರಣದೀಪ್‌ ಸುರ್ಜೇವಾಲಾ ದಾಖಲೆ ಬಿಡುಗಡೆ ಮಾಡಿದ್ದು, 2008, 2016 ಮತ್ತು 2018 ಹೀಗೆ ಬೇರೆ ಬೇರೆ ಸಮಯದಲ್ಲಿ ರಾಜ್ಯಸಭೆಗೆ ಸರಕಾರವೇ ನೀಡಿರುವ ಪ್ರತಿಕ್ರಿಯೆಗಳು ಇದು ಎಂದಿದ್ದಾರೆ.

ಅವರು ನೀಡಿದ ದಾಖಲೆಗಳ ಪ್ರಕಾರ 2005 ರಿಂದ 2013ರ ಅವಧಿಯಲ್ಲಿ ದೇಶದಿಂದ 82,728 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಈ ಅವಧಿಯಲ್ಲಿ ಯುಪಿಎ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು ಮತ್ತು ಮನ್‌ಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದರು. ಇದೇ ಸಂಖ್ಯೆ 2014ರಿಂದ ಕುಸಿತ ಕಂಡಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 1,822 ಅಕ್ರಮ ವಲಸಿಗರನ್ನಷ್ಟೇ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಲಾಗಿದೆ ಎಂದು ಅವರು ದೂರಿದ್ದಾರೆ.

2008ರಲ್ಲಿ 2007ರ ವರೆಗಿನ ದಾಖಲೆಗಳನ್ನು ಆಗಿನ ಗೃಹ ಖಾತೆ ರಾಜ್ಯ ಸಚಿವೆ ರಾಧಿಕಾ ಸೆಲ್ವಿ ನೀಡಿದ್ದರು. ಇನ್ನು 2016 ಮತ್ತು 2018ರಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿರುವ ಸಂಖ್ಯೆಯನ್ನು ಹಾಲಿ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ರಾಜ್ಯಸಭೆಯಲ್ಲಿ ನೀಡಿದ್ದರು. ಈ ದಾಖಲೆಗಳ ಪ್ರಕಾರ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ನರೇಂದ್ರ ಮೋದಿ ಸರಕಾರ ತವರಿಗೆ ವಾಪಸ್‌ ಕಳುಹಿಸದೇ ಹೊಣೆಗೇಡಿತನ ಮೆರೆದಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಆದರೆ, ಇದೀಗ ಎನ್ಆರ್‌ಸಿ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಸರಕಾರ ಅಸ್ಸಾಂನಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾದೇಶಿಯರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಬಿಂಬಿಸಿಕೊಳ್ಳುತ್ತಿದೆ. ಜತೆಗೆ ಬಿಜೆಪಿಯ ಇತರ ನಾಯಕರು ಬೇರೆ ಬೇರೆ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನೂ ತವರಿಗೆ ಅಟ್ಟಬೇಕಾಗಿದೆ ಎಂಬ ವೀರಾವೇಶದ ಮಾತುಗಳನ್ನು ಆಡುತ್ತಿದ್ದಾರೆ.

ಇದರ ನಡುವೆ ಕೇಂದ್ರ ಸರಕಾರದ ತೀರ್ಮಾನ ಕೇವಲ ಬಾಯಿಮಾತಿನಲ್ಲೇ ಉಳಿದಿರುವುದು ಕಾಣಿಸುತ್ತದೆ. ಆಳದಲ್ಲಿ ಬಾಂಗ್ಲಾದೇಶಿ ಅಕ್ರಮ ನಿವಾಸಿಗಳನ್ನು ವಾಪಸ್‌ ಕಳುಹಿಸಲು ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದು ದಾಖಲೆಗಳಿಂದ ತಿಳಿದು ಬರುತ್ತಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ಕಾಂಗ್ರೆಸ್‌ ವಕ್ತಾರ ಬ್ರಿಜೇಶ್‌ ಕಾಳಪ್ಪ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದು, “ಕ್ರಿಯಾಶೀಲರಲ್ಲದ ಮನ್‌ಮೋಹನ್‌ ಸಿಂಗ್‌ ಆಡಳಿತಾವಧಿಯ 2005ರಿಂದ 2013ರ ಅವಧಿಯಲ್ಲಿ 82,728 ಬಾಂಗ್ಲಾದೇಶಿಯರನ್ನು ಗಡಿಪಾರು ಮಾಡಲಾಗಿದೆ. 56 ಇಂಚಿನವರ ಅಧಿಕಾರವಧಿಯಲ್ಲಿ ಕೇವಲ 1822 ಬಾಂಗ್ಲಾದೇಶಿಯರನ್ನಷ್ಟೇ ಗಡಿಪಾರು ಮಾಡಲಾಗಿದೆ,” ಎಂದು ಛೇಡಿಸಿದ್ದಾರೆ.

ಜತೆಗೆ “ಮೋದಿ ಬಾಂಗ್ಲಾದೇಶಿ ನಿರಾಶ್ರಿತರ ವಿಚಾರವನ್ನು ಪ್ರಸ್ತಾಪಿಸಿರುವುದು ಸಮಸ್ಯೆಯನ್ನು ಪರಿಹರಿಸಲಿಕ್ಕೋ ಅಥವಾ ಇನ್ನೊಂದು ಚುನಾವಣೆ ಗೆಲ್ಲಲೋ ಎಂಬುದನ್ನು ನಿರ್ಧರಿಸಿ,” ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.