ಚಿತ್ರದುರ್ಗದ ಕಾರ್ಮಿಕರಿಬ್ಬರನ್ನು ಬಲಿ ಪಡೆದ ಶಿವಮೊಗ್ಗದ ಮ್ಯಾನ್‌ಹೋಲ್‌
ಸುದ್ದಿ ಸಾಗರ

ಚಿತ್ರದುರ್ಗದ ಕಾರ್ಮಿಕರಿಬ್ಬರನ್ನು ಬಲಿ ಪಡೆದ ಶಿವಮೊಗ್ಗದ ಮ್ಯಾನ್‌ಹೋಲ್‌

ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ‘ಬಂಡಿಕೂಟ್‌’ ಎಂಬ ಅತ್ಯಾಧುನಿಕ ರೋಬೋಟಿಕ್‌ ಯಂತ್ರವನ್ನು ಕೇರಳದಲ್ಲಿ ತಯಾರಿಸಲಾಗಿದ್ದು, ಅದನ್ನು ಅಲ್ಲಿ ಬಳಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಯಾವಾಗ?

ಮ್ಯಾನ್‌ಹೋಲ್‌ಗಳಿಗೆ ಕಾರ್ಮಿಕರನ್ನು ಇಳಿಸಬಾರದು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆ ಮತ್ತು ಹೊಸ ತಂತ್ರಜ್ಞಾನ ಬಳಕೆ ಬಗೆಗಿನ ನಿರಾಸಕ್ತಿ ಮತ್ತಿಬ್ಬರು ಕಾರ್ಮಿಕರ ಜೀವವನ್ನು ಬಲಿ ಪಡೆದಿದೆ. ಈ ಬಾರಿ ಘಟನೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆದಿದ್ದು, ಅಮಾಯಕರಾದ ಅಂಜಿನಿ ಮತ್ತು ವೆಂಕಟೇಶ್‌ ಎಂಬ ಚಿತ್ರದುರ್ಗ ಮೂಲದ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಆಂಡ್‌ ಡಿವಿ) ಕಡೆಯಿಂದ ಸುಮಾರು 115 ಕೋಟಿ ರೂಪಾಯಿ ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮುಗಿಯುವ ಹಂತ ತಲುಪಿದ್ದು ಈ ಹಿನ್ನೆಲೆಯಲ್ಲಿ ಸರಬರಾಜು ಸರಿಯಾಗಿದೆಯೇ ಎಂಬುದನ್ನು ಒಂದು ಭಾಗದಿಂದ ಪರಿಶೀಲನೆ ನಡೆಸುತ್ತಾ ಬರುತ್ತಿದ್ದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಇದೇ ರೀತಿ ಪರೀಕ್ಷೆ ಮಾಡಲು ಎನ್‌ಟಿ ರೋಡ್‌ ಸಮೀಪದ ನಾಗರಹಳ್ಳಿ ಹೋಂಡಾ ಗ್ಯಾಸ್‌ ಬಳಿ ಒಬ್ಬರು ಕಾರ್ಮಿಕರು ಸುಮಾರು 10 ಅಡಿ ಆಳದ ಮ್ಯಾನ್‌ಹೋಲ್‌ ಒಳಕ್ಕೆ ಇಳಿದಿದ್ದಾರೆ. ಈ ಸಂದರ್ಭ ಮ್ಯಾನ್‌ಹೋಲ್‌ನಲ್ಲಿದ್ದ ವಿಷಕಾರಿ ಮಿಥೇನ್‌ ಡೈ ಆಕ್ಸೈಡ್‌ ಸೇವನೆಯಿಂದ ಅವರು ತಕ್ಷಣ ಅಸ್ವಸ್ಥರಾಗಿದ್ದಾರೆ. ಅವರ ರಕ್ಷಣೆಗೆ ಇನ್ನೊಬ್ಬರು ಕಾರ್ಮಿಕರು ಇಳಿದಿದ್ದು, ಅವರೂ ಕೂಡ ವಿಷಕಾರಿ ಗಾಳಿ ಸೇವಿಸಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಿವಮೊಗ್ಗ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರು ಪೌರ ಕಾರ್ಮಿಕರಲ್ಲ ಎಂದವರು ಮಾಹಿತಿ ನೀಡಿದ್ದಾರೆ. ಕಾಮಗಾರಿಯ ಗುತ್ತಿಗೆಯನ್ನು ಆಂಧ್ರ ಪ್ರದೇಶ ಮೂಲದ ಪ್ರಸಾದ್‌ ಎನ್ನುವವರಿಗೆ ನೀಡಲಾಗಿದ್ದು, 17 ವರ್ಷದ ಅಂಜನಿ ಮತ್ತು 35 ವರ್ಷದ ವೆಂಕಟೇಶ್ ಅವರ ಅಡಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇಂದು ಅವರು ಯಾವುದೇ ರಕ್ಷಣಾ ಸಲಕರಣೆಗಳಿಲ್ಲದೆ ಮ್ಯಾನ್‌ಹೋಲ್‌ ಒಳಕ್ಕೆ ಇಳಿದಿದ್ದರು. ಇದೀಗ ಹೀಗೆ ಇಳಿದು ಬಾರದ ಇಹಲೋಕಕ್ಕೆ ಪಯಣಿಸಿದ್ದಾರೆ. ಸಾವನ್ನಪ್ಪಿದ ಕಾರ್ಮಿಕರ ಮಹಜರು ಮುಗಿದಿದ್ದು ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಈ ರೀತಿ ಯಾವುದೇ ರಕ್ಷಣಾ ಸಲಕರಣೆಗಳಿಲ್ಲದೆ ಮ್ಯಾನ್‌ಹೋಲ್‌ನೊಳಕ್ಕೆ ಕಾರ್ಮಿಕರನ್ನು ಇಳಿಸಲೇಬಾರದು ಎಂಬ ನಿಯಮವಿದೆ. ಆದರೆ ಇಂದಿಗೂ ಎಷ್ಟೋ ಪಾಲಿಕೆಗಳಲ್ಲಿ ಬಡ ಕಾರ್ಮಿಕರೆಡೆಗಿನ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳು ಮ್ಯಾನ್‌ಹೋಲ್‌ಗಳಿಗೆ ಬಲಿಯಾಗುತ್ತಲೇ ಇವೆ.

ಈ ಅಮಾನವೀಯ ಕ್ರಮಕ್ಕೆ ಅಂತ್ಯ ಹಾಡಲು ತಂತ್ರಜ್ಞಾನದ ಹುಡುಕಾಟ ನಡೆಯುತ್ತಲೇ ಇದೆ. ಈಗಾಗಲೇ ಇದಕ್ಕೆ ‘ಬಂಡಿಕೂಟ್‌’ ಎಂಬ ಅತ್ಯಾಧುನಿಕ ರೋಬೋಟಿಕ್‌ ಯಂತ್ರವನ್ನು ಕೇರಳದಲ್ಲಿ ತಯಾರಿಸಲಾಗಿದ್ದು, ಅದನ್ನು ಅಲ್ಲಿ ಬಳಕೆ ಮಾಡಲಾಗುತ್ತಿದೆ. ಇದೇ ಯಂತ್ರವನ್ನು ಇತ್ತೀಚೆಗೆ ತಮಿಳುನಾಡಿನ ಕುಂಭಕೋಣಂ ಪಟ್ಟಣದವರು ತರಿಸಿಕೊಂಡಿದ್ದಾರೆ. ಈ ಮೂಲಕ ಸಫಾಯಿ ಕರ್ಮಚಾರಿ ಎಂಬ ಆಧುನಿಕ ಸಮಾಜದ ಅತ್ಯಂತ ಅಮಾನವೀಯ ಕೆಲಸಕ್ಕೆ ಮುಕ್ತಿ ಹಾಡಲು ಹೊರಟಿದ್ದಾರೆ. ಈ ಮನಸ್ಸು ನಮ್ಮಲ್ಲಿರುವವರಿಗೆ ಯಾವತ್ತು ಬರುತ್ತದೋ ಗೊತ್ತಿಲ್ಲ.