samachara
www.samachara.com
ಸ್ಥಳೀಯ ಸಂಸ್ಥೆ ಮೈತ್ರಿ; ‘ಕಮಲ’ ಬಲ ಹೆಚ್ಚಿರುವಲ್ಲಿ ‘ತೆನೆ’ ಹೊರಲು ‘ಕೈ’ ಹೈಕಮಾಂಡ್‌ ಸಮ್ಮತಿ
ಸುದ್ದಿ ಸಾಗರ

ಸ್ಥಳೀಯ ಸಂಸ್ಥೆ ಮೈತ್ರಿ; ‘ಕಮಲ’ ಬಲ ಹೆಚ್ಚಿರುವಲ್ಲಿ ‘ತೆನೆ’ ಹೊರಲು ‘ಕೈ’ ಹೈಕಮಾಂಡ್‌ ಸಮ್ಮತಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಬಂದಿದೆ. ಅಗತ್ಯವಿರುವ ಕಡೆಗಳಲ್ಲಿ ಜೆಡಿಎಸ್‌ ಜತೆಗೆ ಮೈತ್ರಿಗೆ ಕಾಂಗ್ರೆಸ್ ಒಪ್ಪಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಬೇಕೇ ಎಂಬ ಬಗ್ಗೆ ಗೊಂದಲದಲ್ಲಿದ್ದ ಕಾಂಗ್ರೆಸ್‌ ಈಗ ಒಂದು ನಿಲುವಿಗೆ ಬಂದಿದೆ. ಬಿಜೆಪಿ ಪ್ರಬಲವಾಗಿರುವ ಕಡೆಗಳಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೈ ಹೈಕಮಾಂಡ್‌ ಸಮ್ಮತಿ ಸೂಚಿಸಿದೆ.

ಸ್ಥಳೀಯ ಮಟ್ಟದಲ್ಲಿ ಪಕ್ಷದ ಬಲಾಬಲ ನೋಡಿಕೊಂಡು ಮೈತ್ರಿ ಮಾಡಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಸ್ಥಳೀಯ ಮುಖಂಡರು ಒಂದು ನಿರ್ಧಾರಕ್ಕೆ ಬರಲಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಮುಖಂಡರ ವಿವೇಚನೆಯ ಮೇರೆಗೆ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ರಾಜ್ಯ ನಾಯಕರು ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ರಾಹುಲ್‌ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

Also read: ಸ್ಥಳೀಯ ಸಂಸ್ಥೆಗಳ ಹಣಾಹಣಿ: ಚುನಾವಣಾ ಪೂರ್ವ ಮೈತ್ರಿಯಿಂದ ನಿಜಕ್ಕೂ ಲಾಭ ಯಾರಿಗೆ?

ಯಾವ ಪ್ರದೇಶಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಾತಾವರಣ ಇದೆಯೋ ಅಂತಹ ಕಡೆಗಳಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು, ಟಿಕೆಟ್‌ ಹಂಚಿಕೆಯ ಗೊಂದಲವಿಲ್ಲದಂತೆ ಚುನಾವಣೆ ಎದುರಿಸುವಂತೆ ರಾಹುಲ್‌ ಹೇಳಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಯ ಬಗ್ಗೆ ಜೆಡಿಎಸ್‌ – ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲಿ ಇನ್ನೂ ಏಕನಿರ್ಧಾರ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಸೂಚನೆಯ ಬಳಿಕ ಕಾಂಗ್ರೆಸ್‌ ಜೆಡಿಎಸ್‌ ಜತೆಗೆ ಈ ವಿಷಯವಾಗಿ ಚರ್ಚೆ ನಡೆಸಲಿದೆ.

ಆದರೆ, ಯಾವ ಪ್ರದೇಶಗಳಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬ ವಿಚಾರ ಸ್ಥಳೀಯ ರಾಜಕಾರಣದಲ್ಲಿ ಅಸಮಾಧಾನ ಸೃಷ್ಟಿಸದೆ ಇರದು. ಸ್ಥಳೀಯ ಮಟ್ಟದ ಕಾರ್ಯಕರ್ತರೆಲ್ಲಾ ಈಗ ‘ಮುಖಂಡ’ರಾಗಿರುವಾಗ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಎಲ್ಲಾ ಪಕ್ಷಗಳಲ್ಲೂ ಹೆಚ್ಚಾಗಿದೆ. ಹೀಗಾಗಿ ಮೈತ್ರಿ ಮಾತುಕತೆಯ ಬೆನ್ನಲ್ಲೇ ಬಂಡಾಯದ ಬಿಸಿ ಏಳದೆ ಇರದು.