samachara
www.samachara.com
ಲೋಕಲ್‌ ಪಾಲಿಟಿಕ್ಸ್‌; ಚುನಾವಣೆ ಯಾವುದೇ ಆದರೂ ಕುಣಿಯುವುದು ‘ಕುರುಡು ಕಾಂಚಾಣ’!
ಸುದ್ದಿ ಸಾಗರ

ಲೋಕಲ್‌ ಪಾಲಿಟಿಕ್ಸ್‌; ಚುನಾವಣೆ ಯಾವುದೇ ಆದರೂ ಕುಣಿಯುವುದು ‘ಕುರುಡು ಕಾಂಚಾಣ’!

ಇತ್ತೀಚಿನ ಚುನಾವಣೆಗಳಲ್ಲಿ ಹಣದ ಪ್ರಭಾವ ಮಿತಿ ಮೀರುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ‘ಹಣದ ರಾಜಕಾರಣ’ ಗರಿಗೆದರಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ನಗರಸಭೆ, ಪಟ್ಟಣ ಸಭೆಗಳ ವಾರ್ಡ್‌ ಮಟ್ಟದಲ್ಲಿ ರಾಜಕೀಯ ಗರಿಗೆದರಿದೆ. ಸ್ಥಳೀಯ ಮಟ್ಟದ ನಾಯಕರು ಮೈಕೊಡವಿಕೊಂಡು ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಹಲವು ಸ್ಥಳೀಯ ಮುಖಂಡರು ಈಗ ಚುನಾವಣೆಗಾಗಿ ಹಣ ಹೊಂದಿಸುವುದರಲ್ಲಿ ಬಿಸಿಯಾಗಿದ್ದಾರೆ!

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಗೆಲುವಿಗಾಗಿ ಜಾತಿ, ಪಕ್ಷ, ಜನ ಬಲದ ಜತೆಗೆ ಹಣ ಬಲವೂ ದೊಡ್ಡ ಪ್ರಮಾಣದಲ್ಲೇ ಬೇಕಾಗಿದೆ. ದುಡ್ಡಿಲ್ಲದೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಮತ ಹಾಕಲು ಮತದಾರ ನಿರೀಕ್ಷಿಸುತ್ತಿರುವ ಹಣ ವಿಧಾನಸಭಾ ಚುನಾವಣೆಯಾದರೂ ಒಂದೇ, ಸ್ಥಳೀಯ ಸಂಸ್ಥೆ ಚುನಾವಣೆಯಾದರೂ ಒಂದೇ. ಈ ಚುನಾವಣೆಯಲ್ಲೂ ಹಣವೇ ನಿರ್ಣಾಯಕ ಎಂಬಂತಾಗಿದೆ.

ಸ್ಥಳೀಯ ಚುನಾವಣೆ ಎದುರಿಸುವುದು ಹೆಚ್ಚೂ ಕಡಿಮೆ ವಿಧಾನಸಭಾ ಚುನಾವಣೆ ಎದುರಿಸಿದಷ್ಟೇ ಕಷ್ಟ ಎನ್ನುತ್ತಾರೆ ಈಗಾಗಲೇ ಹಲವು ಬಾರಿ ನಗರಸಭಾ ಚುನಾವಣೆಗಳಲ್ಲಿ ಗೆದ್ದಿರುವ ಜನ ಪ್ರತಿನಿಧಿಗಳು. ಜಾತಿ ಬಲ, ಯುವಕರ ಬಲ, ಪಕ್ಷದ ಬಲದ ಜತೆಗೆ ಹಣ ಬಲವೂ ಬೇಕು. ಇಲ್ಲವಾದರೆ ಮತದಾರ ನಮ್ಮತ್ತ ತಿರುಗಿಯೂ ನೋಡುವುದಿಲ್ಲ ಎನ್ನುತ್ತಾರೆ ಚಾಮರಾಜನಗರ ನಗರಸಭೆಯ ಸದಸ್ಯರೊಬ್ಬರು.

ನಗರ ಸಭಾ ಸದಸ್ಯರಾಗಿ ಹತ್ತು ವರ್ಷಗಳ ಅನುಭವವಿರುವ ಅವರು ಸ್ಥಳೀಯ ಸಂಸ್ಥೆಗಳ ಚುನಾವಣಾ ವ್ಯವಸ್ಥೆಯ ಬಗ್ಗೆ ‘ಸಮಾಚಾರ’ದೊಂದಿಗೆ ಮಾತನಾಡಿದರು. ಈಗಿನ ಸಂದರ್ಭದಲ್ಲಿ ದುಡ್ಡಿಲ್ಲದೇ ಇದ್ದರೆ ರಾಷ್ಟ್ರ ರಾಜಕಾರಣವೂ ಒಂದೇ ಸ್ಥಳೀಯ ರಾಜಕಾರಣವೂ ಒಂದೇ ಎಂಬ ಹತಾಶೆ ಅವರ ಮಾತಿನಲ್ಲಿ ಕಾಣುತ್ತಿತ್ತು.

“ಉಪ ಚುನಾವಣೆಗಳು ಬಂದ ಬಳಿಕ ಜನರಿಗೆ ತಮ್ಮ ಮತದ ‘ಮೌಲ್ಯ’ ಗೊತ್ತಾಗಿದೆ. ವಿಧಾನಸಭಾ ಚುನಾವಣೆ ವೇಳೆ ಪ್ರತಿ ಓಟಿಗೆ ಸಾವಿರದವರೆಗೆ ಹಣ ಪಡೆದಿರುವ ಜನ ಈಗ ಕನಿಷ್ಠ 500 ರೂಪಾಯಿ ಪಡೆಯದೆ ಓಟ್‌ ಹಾಕುವುದಿಲ್ಲ. ಕನಿಷ್ಠ 10-12 ಲಕ್ಷ ಇದ್ದರೆ ಮಾತ್ರ ಈಗ ಒಂದು ವಾರ್ಡ್‌ನಿಂದ ಗೆಲ್ಲಲು ಸಾಧ್ಯ” ಎನ್ನುತ್ತಾರೆ ಅವರು.

“ಹಿಂದೆಲ್ಲಾ ಸದಸ್ಯರು ಕೆಲಸ ಮಾಡುವ ಭರವಸೆ ಮೇಲೆ ಜನ ಮತ ನೀಡುತ್ತಿದ್ದರು. ನಂತರ ತಮ್ಮ ಜಾತಿಯವನು ಎಂದು ಮತ ನೀಡುತ್ತಿದ್ದರು. ಆದರೆ, ಇತ್ತೀಚೆಗೆ ಹಣವೇ ನಿರ್ಣಾಯಕವಾಗಿದೆ. ಹಣ ಬಿಚ್ಚದೆ ಸ್ಥಳೀಯ ಚುನಾವಣೆಯಲ್ಲೂ ಗೆಲ್ಲುವುದು ಕಷ್ಟ. ಈಗೆಲ್ಲಾ ನೂರು ಇನ್ನೂರಕ್ಕೆ ಏನೂ ನಡೆಯದು. ಪ್ರತಿ ಓಟಿಗೆ ಕನಿಷ್ಠ 500 ಕೊಡಲು ಸಿದ್ಧರಿರುವವರು ಮಾತ್ರ ಈಗ ಸ್ಥಳೀಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇಟ್ಟುಕೊಳ್ಳಬಹುದು” ಎಂಬುದು ಅವರ ಮಾತು.

“ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಯುವಕ, ಕೆಲಸ ಮಾಡುತ್ತಾನೆ ಎಂದು ಜನ ನನ್ನನ್ನು ಆರಿಸಿ ಕಳಿಸಿದ್ದರು. ಹತ್ತು ವರ್ಷಗಳ ಹಿಂದೆ ನಾನು ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿ ಚುನಾವಣೆ ಗೆದ್ದಿದ್ದೆ. ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಜಾತಿ ಕೆಲಸ ಮಾಡಿತ್ತು. ಅದರ ಜತೆಗೆ ಹಣದ ಪ್ರಭಾವವೂ ಆಗಿನಿಂದಲೇ ಶುರುವಾಗಿತ್ತು. ಕಳೆದ ಬಾರಿ ಚುನಾವಣೆಗೆ ಸುಮಾರು 8 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬಂತು” ಎಂದವರು ಹೇಳಿದರು.

“ಪ್ರತಿ ವಾರ್ಡ್‌ನಲ್ಲಿ ಸುಮಾರು 2 ಸಾವಿರ ಮತದಾರರಿರುತ್ತಾರೆ. ಪ್ರತಿ ಓಟ್‌ಗೆ 500 ರೂಪಾಯಿ ಎಂದರೂ 10 ಲಕ್ಷ ರೂಪಾಯಿ ಇಲ್ಲೇ ಖರ್ಚಾಗುತ್ತದೆ. ಇನ್ನು ಪ್ರಚಾರಕ್ಕಾಗಿ, ಕಾರ್ಯಕರ್ತರಿಗಾಗಿ, ಓಡಾಟಕ್ಕಾಗಿ ಕನಿಷ್ಠ 2 ಲಕ್ಷ ಬೇಕಾಗುತ್ತದೆ. ಏನಿಲ್ಲವೆಂದರೂ 12 ಲಕ್ಷ ರೂಪಾಯಿ ನಮ್ಮ ಬಳಿ ಇಲ್ಲದಿದ್ದರೆ ಈಗಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇಟ್ಟುಕೊಳ್ಳಬಾರದು” ಎಂಬ ಲೆಕ್ಕಾಚಾರ ಮುಂದಿಡುತ್ತಾರೆ ಅವರು.

ಮಾಡಿದ ಕೆಲಸ ನೋಡಿ ಜನ ಓಟ್‌ ಹಾಕುವ ಕಾಲ ಇದಲ್ಲ. ಈಗೇನಿದ್ದರೂ ಹಣಕ್ಕೇ ಪ್ರಾಧ್ಯಾನ್ಯತೆ. ಹೆಚ್ಚು ಹಣವಿದ್ದವರು ಇಲ್ಲಿ ಗೆಲ್ಲುತ್ತಾರೆ. ಇದೇನು ಈಗ ಗುಟ್ಟಾಗಿ ಉಳಿದಿಲ್ಲ.
- ಆರ್‌.ಪಿ. ನಂಜುಂಡಸ್ವಾಮಿ, ನಗರಸಭಾ ಸದಸ್ಯ, ಚಾಮರಾಜನಗರ

ಇದು ಒಂದು ನಗರಸಭೆಯ ಕಥೆ ಮಾತ್ರವಲ್ಲ. ರಾಜ್ಯದ ಬಹುತೇಕ ಕಡೆಗಳಲ್ಲಿ ಈ ಪರಿಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವವರು ಕನಿಷ್ಠ 2-3 ಲಕ್ಷ ರೂಪಾಯಿಯಿಂದ ಗರಿಷ್ಠ 10-15 ಲಕ್ಷ ಖರ್ಚು ಮಾಡಲು ಸಿದ್ಧರಿದ್ದಾರೆ. ಇಷ್ಟು ಹಣ ಇಲ್ಲದವರು ಚುನಾವಣಾ ಸ್ಪರ್ಧೆಯ ಹತ್ತಿರಕ್ಕೇ ಸುಳಿಯುವುದಿಲ್ಲ.

ಜಾತಿ, ಪಕ್ಷದ ಪ್ರಭಾವದ ಜತೆಗೆ ‘ಉದಾರ’ವಾಗಿ ಹಣವನ್ನೂ ಖರ್ಚು ಮಾಡಬೇಕೆಂಬುದನ್ನು ಹಲವು ಸ್ಥಳೀಯ ಮುಖಂಡರು ಒಪ್ಪುತ್ತಾರೆ. ದೊಡ್ಡ ಚುನಾವಣೆಗಳಲ್ಲಿ ಜನ ಹೆಚ್ಚು ದುಡ್ಡು ಪಡೆದು ಓಟ್‌ ಹಾಕಿ ಅಭ್ಯಾಸವಾಗಿದ್ದಾರೆ. ಈಗ ಕಡಿಮೆ ದುಡ್ಡಿಗೆ ಓಟ್‌ ನೀಡುವುದು ಕಷ್ಟ ಎನ್ನುತ್ತಾರೆ ಮಂಡ್ಯದ ನಗರಸಭಾ ಸದಸ್ಯರೊಬ್ಬರು.

“ಒಳ್ಳೆಯ ರಾಜಕಾರಣಕ್ಕೆ ಈಗ ಬೆಲೆ ಇಲ್ಲ. ಚುನಾವಣೆ ಎಂಬುದು ಪಕ್ಷಗಳಿಗೂ, ಮುಖಂಡರಿಗೂ ತೀವ್ರ ಪ್ರತಿಷ್ಠೆಯಾಗಿರುವಾಗ ಹಣವನ್ನು ನೀರಿನಂತೆ ಖರ್ಚು ಮಾಡುವವರು ಹೆಚ್ಚಾಗಿದ್ದಾರೆ. ಪಕ್ಷಗಳ ಟಿಕೆಟ್‌ ಪಡೆಯುವುದರಿಂದ ಹಿಡಿದು ಮನೆ ಮನೆಗೆ ದುಡ್ಡು ಹಂಚುವವರೆಗೆ ಹಣದ ಹೊಳೆ ಹರಿಸುವುದು ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ನಾವು ಮಾಡಿರುವ ಕೆಲಸ ನೋಡಿ ಮತ ನೀಡಿ ಎಂದು ಓಟ್‌ ಕೇಳುವವರಿಗೆ ಬೆಲೆಯೇ ಇಲ್ಲದಂತಾಗಿದೆ” ಎಂಬುದು ಅವರ ಬೇಸರದ ಮಾತು.

“ರಾಜಕೀಯ ವ್ಯವಸ್ಥೆಯೇ ಜನರನ್ನು ಭ್ರಷ್ಟರನ್ನಾಗಿ ಮಾಡಿದೆ. ಹೀಗಿರುವಾಗ ಮೌಲ್ಯದ ರಾಜಕಾರಣಕ್ಕೆ ಬೆಲೆ ಇಲ್ಲ. ಹಣ ಇದ್ದರೆ ಸಾಕು ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದು ಗೊತ್ತಾಗಿರುವಾಗ ಕೋಟಿ ಕುಳಗಳೇ ಚುನಾವಣೆಗೆ ನಿಲ್ಲುತ್ತಾರೆ. ಹಣ ಹಾಕಿ ಹಣ ತೆಗೆಯಲು ರಾಜಕಾರಣ ಈಗ ಹೂಡಿಕೆಯ ಕ್ಷೇತ್ರದಂತಾಗಿದೆ. ಒಮ್ಮೆ ಅಯ್ಕೆಯಾದ ಜನಪ್ರತಿನಿಧಿ ಒಂದೇ ಅವಧಿಯಲ್ಲಿ ಎಷ್ಟು ಹಣ ಮಾಡಲು ಸಾಧ್ಯವೋ ಅಷ್ಟನ್ನು ಮಾಡಿಕೊಳ್ಳುತ್ತಾನೆ. ಗಳಿಸಿದ ಹಣದ ಅರ್ಧದಷ್ಟನ್ನು ಮತ್ತೆ ಚುನಾವಣೆಗೆ ಸುರಿಯುತ್ತಾನೆ. ಈ ಚಕ್ರ ಹೀಗೇ ಸುತ್ತುತ್ತಿರುತ್ತದೆ” ಎನ್ನುತ್ತಾರೆ ಅವರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ವ್ಯವಸ್ಥೆಗೆ ತನ್ನದೇ ಆದ ಘನತೆ ಇದೆ. ಆದರೆ, ದಿನದಿಂದ ದಿನಕ್ಕೆ ಈ ಘನತೆ ಕುಂದುತ್ತಿದೆ. ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವುದು ಹಾಗೂ ಹೆಚ್ಚು ಹಣ ಕೊಟ್ಟವರಿಗೆ ಮತ ನೀಡುವುದನ್ನು ಜನಸಾಮಾನ್ಯರು ಅಭ್ಯಾಸ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯೇನೂ ಅಲ್ಲ. ತಮ್ಮ ಜನಪ್ರತಿನಿಧಿಯ ಆಯ್ಕೆ ಪ್ರಕ್ರಿಯೆಯಲ್ಲೇ ಭ್ರಷ್ಟಗೊಳ್ಳುತ್ತಿರುವ ಜನ ಇನ್ನು ಭ್ರಷ್ಟಾಚಾರದ ವಿರುದ್ಧ ದನಿ ಎತ್ತಬೇಕು ಎಂಬ ಆದರ್ಶ ಬರೀ ಹಗಲುಗನಸಿನಂಥದ್ದು.