ಫೇಸ್‌ಬುಕ್‌ನಲ್ಲಿ ಎಚ್‌ಡಿಕೆಗೆ ಅಪಮಾನ; ‘ಕುಡ್ಲ ಟ್ರೋಲ್ಸ್‌’ ಪೇಜ್‌ ಅಡ್ಮಿನ್‌ ಬಂಧನ
ಸುದ್ದಿ ಸಾಗರ

ಫೇಸ್‌ಬುಕ್‌ನಲ್ಲಿ ಎಚ್‌ಡಿಕೆಗೆ ಅಪಮಾನ; ‘ಕುಡ್ಲ ಟ್ರೋಲ್ಸ್‌’ ಪೇಜ್‌ ಅಡ್ಮಿನ್‌ ಬಂಧನ

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅಪಮಾನಿಸುವಂಥ ಪೋಸ್ಟ್‌ ಹಾಕಿದ್ದ ಆರೋಪದ ಮೇಲೆ ಮಂಗಳೂರಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅಪಮಾನಿಸುವ ಪೋಸ್ಟ್‌ ಹಾಕಿದ್ದ ಅರೋಪದ ಮೇಲೆ ‘ಕುಡ್ಲ ಟ್ರೋಲ್ಸ್‌’ ಫೇಸ್‌ಬುಕ್‌ ಪೇಜ್‌ನ ಅಡ್ಮಿನ್‌ ಮಂಗಳೂರಿನ ಪ್ರಶಾಂತ್‌ ಪೂಜಾರಿ (24) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕುಡ್ಲ ಟ್ರೋಲ್ಸ್‌’ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಶಾಂತ್‌ ಪೂಜಾರಿ ಕುಮಾರಸ್ವಾಮಿ ಅವರನ್ನು ಅಪಮಾನಿಸುವ ಪೋಸ್ಟ್ ಹಾಕಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿ ಪೊಲೀಸರು ಪ್ರಶಾಂತ್‌ ಪೂಜಾರಿಯನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್‌ 153, 504 ಹಾಗೂ ಐಟಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

“ಪ್ರಶಾಂತ್‌ ಪೂಜಾರಿ ಫೇಸ್‌ಬುಕ್‌ ಪೇಜ್‌ನಲ್ಲಿ ಹಾಕಿದ್ದ ಪೋಸ್ಟ್‌ ಮುಖ್ಯಮಂತ್ರಿಯವರನ್ನು ಅಪಮಾನಿಸುವಂತಿತ್ತು. ಈ ವಿಚಾರ ನಮ್ಮ ಗಮನಕ್ಕೆ ಬಂದ ಬಳಿಕ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ. ಆ ಪೋಸ್ಟ್‌ ಅನ್ನು ಪೇಜ್‌ನಿಂದ ತೆಗೆದು ಹಾಕಲಾಗಿದೆ” ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬಜೆಟ್‌ ಬಳಿಕ ಕುಮಾರಸ್ವಾಮಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ ಮಾಡಲಾಗುತ್ತಿದೆ. ಆದರೆ, ‘ಕುಡ್ಲ ಟ್ರೋಲ್ಸ್‌’ ಫೇಸ್‌ಬುಕ್‌ ಪೇಜ್‌ನಲ್ಲಿ ಹಾಕಿದ್ದ ಪೋಸ್ಟ್‌ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿಯವರನ್ನು ಸಾಮಾಜಿಕ ಜಾಲತಾಣದಲ್ಲಿ ಅಪಮಾನಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಬಂಧನಕ್ಕೊಳಗಾಗುತ್ತಿರುವುದು ಇದೇ ಮೊದಲೇನಲ್ಲ. 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಪಮಾನಿಸುವ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದ ಆರೋಪದ ಮೇಲೆ ವಿಜಯಪುರ ಜಿಲ್ಲೆಯ ಅಮರೇಶ್‌ ವಾಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.