samachara
www.samachara.com
ದಾಂಡೇಲಿಯ ಅಜಿತ್ ನಾಯ್ಕ್‌ ಕೊಲೆ ಪ್ರಕರಣ: ಭೂವಿವಾದ ಮುಂದಿಟ್ಟು ತನಿಖೆಗೆ ಅಂತ್ಯ ಹಾಡ್ತಿದ್ದಾರಾ ಪೊಲೀಸರು? 
ಸುದ್ದಿ ಸಾಗರ

ದಾಂಡೇಲಿಯ ಅಜಿತ್ ನಾಯ್ಕ್‌ ಕೊಲೆ ಪ್ರಕರಣ: ಭೂವಿವಾದ ಮುಂದಿಟ್ಟು ತನಿಖೆಗೆ ಅಂತ್ಯ ಹಾಡ್ತಿದ್ದಾರಾ ಪೊಲೀಸರು? 

ಅಜಿತ್ ನಾಯ್ಕ್‌ ಹಿನ್ನೆಲೆ, ಅವರ ಹೋರಾಟ ದಿನಗಳನ್ನು ಬಲ್ಲ ದಾಂಡೇಲಿಯ ಜನ, ಕೊಲೆಯ ಹಿಂದೆ ಪ್ರಭಾವಿಗಳ ಕೈವಾಡವನ್ನೂ ಶಂಕಿಸುತ್ತಿದ್ದಾರೆ.

ಜುಲೈ ತಿಂಗಳ ಕೊನೆಯಲ್ಲಿ ದಾಂಡೇಲಿಯಲ್ಲಿ ನಡೆದ ಇದೊಂದು ಕೊಲೆ ಪ್ರಕರಣ ಶಾಂತ ಪರಿಸರದಲ್ಲಿ ತರಂಗಗಳನ್ನು ಎಬ್ಬಿಸಿದೆ. ಜು. 27ರಂದು ನಡೆದ ವಕೀಲ, ಸಾಮಾಜಿಕ ಹೋರಾಟಗಾರ ಅಜಿತ್ ನಾಯ್ಕ್‌ ಕೊಲೆ ಪ್ರಕರಣದಲ್ಲಿ ಸತತ ಒತ್ತಡಗಳ ನಂತರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಸುಳಿವೂ ಸಿಕ್ಕಿದೆ. ಅದರ ಬೆನ್ನಲ್ಲೇ ಕೆಲವು ಆರೋಪಿಗಳ ರಕ್ಷಣೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಭೂವಿವಾದದ ಹಿನ್ನೆಲೆಯಲ್ಲಿ ಅಜಿತ್ ನಾಯ್ಕ್‌ ಕೊಲೆಯಾಗಿದ್ದಾರೆ ಎಂದು ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಗಳಿವೆ. ಈವರೆಗೆ ಹೊರಬಂದಿರುವ ತನಿಖಾ ಮಾಹಿತಿ ಈ ನಿಟ್ಟಿನಲ್ಲಿ ಬೆಟ್ಟುಮಾಡಿ ತೋರಿಸುತ್ತಿದೆ. ಆದರೆ, ಅಜಿತ್ ನಾಯ್ಕ್‌ ಹಿನ್ನೆಲೆ, ಅವರ ಹೋರಾಟ ದಿನಗಳನ್ನು ಬಲ್ಲ ದಾಂಡೇಲಿಯ ಜನ, ಕೊಲೆಯ ಹಿಂದೆ ಪ್ರಭಾವಿಗಳ ಕೈವಾಡವನ್ನೂ ಶಂಕಿಸುತ್ತಿದ್ದಾರೆ.

ಯಾರು ಈ ಅಜಿತ್ ನಾಯ್ಕ್?

‘ದಾಂಡೇಲಿ ತಾಲೂಕು ರಚನೆ ಸಮಿತಿ’ಯ ಹೋರಾಟವೊಂದರಲ್ಲಿ ಅಜಿತ್ ನಾಯ್ಕ್‌. 
‘ದಾಂಡೇಲಿ ತಾಲೂಕು ರಚನೆ ಸಮಿತಿ’ಯ ಹೋರಾಟವೊಂದರಲ್ಲಿ ಅಜಿತ್ ನಾಯ್ಕ್‌. 

57 ವರ್ಷದ ಅಜಿತ್‌ ನಾಯ್ಕ್‌ ದಾಂಡೇಲಿಯ ಜನಪ್ರಿಯ ನ್ಯಾಯವಾದಿ. ಹಾಲಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆಯವರ ಸಹೋದ್ಯೋಗಿ. ನಂತರದ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿ ನಿರ್ದೇಶಕ, ನಗರ ಸಭೆ ಅಧ್ಯಕ್ಷರೂ ಆಗಿದ್ದರು.

ಸಾಮಾಜಿಕ ನ್ಯಾಯದ ಪರ ಹೋರಾಡುವ ಹಿನ್ನೆಲೆ ಅಜಿತ್‌ ನಾಯ್ಕ್‌ ಅವರಿಗಿತ್ತು. ‘ದಾಂಡೇಲಿ ತಾಲೂಕು ರಚನೆ ಸಮಿತಿ’ ಮೂಲಕ ಹೋರಾಡಿ ಯಶಸ್ಸು ಗಳಿಸಿದರು. ದಾಂಡೇಲಿಯ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಹೋರಾಟಗಳನ್ನು ಸಂಘಟಿಸಿದರು. ಇದರಾಚೆಗೆ ದಾಂಡೇಲಿಗರ ನೆಚ್ಚಿನ ನ್ಯಾಯವಾದಿಯಾಗಿದ್ದರು.

ದಾಂಡೇಲಿಯ ಬಡ ಕಾರ್ಮಿಕರ ಪರ ಹೋರಾಟಗಳನ್ನು ನಡೆಸಿ ನ್ಯಾಯ ಕೊಡಿಸಿದ್ದರು. ವಿವಿಧ ಯೋಜನೆಗಳಿಗೆ ದಾಂಡೇಲಿಯ ಸಂಪನ್ಮೂಲ ದುರ್ಬಳಕೆಯಾಗುವ ಸಮಯ ಬಂದಾಗ ‘ದಾಂಡೇಲಿ ಬಚಾವೊ’ ಆಂದೋಲನ ಹುಟ್ಟುಹಾಕಿದ್ದರು. ದಾಂಡೇಲಿ ಮತ್ತು ಬೆಂಗಳೂರಿನಲ್ಲಿ ನಿರಂತರ 65 ದಿನಗಳ ಕಾಲ ಧರಣಿ ನಡೆಸಿ ತಾಲೂಕಿಗೆ ‘ಜೈನ್ ವರದಿ’ ಮೂಲಕ ವಿಶೇಷ ಪ್ಯಾಕೇಜ್‌ಗಳನ್ನು ತಂದಿದ್ದರು. ಎಷ್ಟೋ ಸಂದರ್ಭದಲ್ಲಿ ಬಡ ಕಕ್ಷಿದಾರರಿಗೆ ತಾವೇ ಊಟ ಹಾಕಿ, ಬಸ್ ಟಿಕೆಟ್‍ಗೆ ಹಣ ನೀಡಿ ಕಳುಹಿಸಿದ ಉದಾಹರಣೆಗಳೂ ಇಲ್ಲಿನ ಜನರ ಕಣ್ಣ ಮುಂದಿದೆ.

ಹೀಗಿದ್ದ, ಅಜಿತ್‌ ನಾಯಕ್‌ ಕೊಲೆಯಾಗಲು ಕಾರಣ ಏನು ಎಂದು ಹುಡುಕುತ್ತಾ ಹೊರಟರೆ, ಮತ್ತದೇ ಅವರ ಸೇವಾ ಮನೋಭಾವದತ್ತ ಬೆಟ್ಟು ಮಾಡುತ್ತವೆ.

ಬೆಳೆದು ನಿಂತ ಭೂ ಮಾಫಿಯಾ:

ಇತ್ತೀಚೆಗೆ ದಾಂಡೇಲಿ ಸುತ್ತ ಮುತ್ತ ಪ್ರವಾಸೋದ್ಯಮ ಬೆಳೆದು ನಿಂತಿದೆ. ಪರಿಣಾಮ ಇಲ್ಲಿನ ಜೋಯ್ಡಾದ ಮೌಳಂಗಿಯಲ್ಲೂ ಇಕೋಪಾರ್ಕ್, ರೆಸಾರ್ಟ್‌ ನಿರ್ಮಾಣದಂತಹ ಚಟುವಟಿಕೆಗಳು ಆರಂಭವಾದಾಗ ಸ್ಥಳೀಯ ಭೂ ಮೌಲ್ಯ ಗಗನಮುಖಿಯಾಯಿತು. ಇಲ್ಲಿಗೆ ಭೂ ಮಾಫಿಯಾ ಕಾಲಿಟ್ಟಿತು. ಈ ದುರುಳರು ಇಲ್ಲಿನ ದಲಿತರ ಭೂಮಿ ಕಬಳಿಸಲು ತರಹೇವಾರಿ ಯೋಜನೆಗಳು ಸಿದ್ಧ ಮಾಡಿದರು.

ಈ ಭಾಗದ ದಲಿತ ಕುಟುಂಬಗಳನ್ನು ಉದ್ಧರಿಸುವ ನೆಪದಲ್ಲಿ ದಲಿತ ಸಂಘಟನೆ ನೇತಾರನೊಬ್ಬ ಹುಟ್ಟಿಕೊಂಡ. ಈತ ಸ್ಥಳೀಯ ಕೆಲ ಸಂಘಟನೆಗಳ ಮುಖಂಡರು, ಭೂ ಮಾಫಿಯಾ ಕುಳಗಳು ಮತ್ತು ಒಂದಷ್ಟು ನ್ಯಾಯವಾದಿಗಳನ್ನು ಗುಡ್ಡೆ ಹಾಕಿದ. ಹೀಗೆ ರೆಡಿಯಾದ ದುಷ್ಟರ ಕೂಟ ಇಲ್ಲಿನ ಬಡ ದಲಿತರನ್ನು ಬೆದರಿಸಿ ಅವರ ಪಾರಂಪಾರಿಕ ಜಮೀನಿಗೆ ಕೈ ಇಟ್ಟಿತು. ಇವರ ಜಮೀನುಗಳನ್ನು ಕಡಿಮೆ ಬೆಲೆಗೆ ಖರೀದಿಸುವುದು, ನಂತರ ಶ್ರೀಮಂತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸರಳ ಸೂತ್ರವನ್ನು ಇವರು ಜಾರಿಗೆ ತಂದರು.

ಈ ದಂಧೆಯ ಮಧ್ಯೆ, “ಇವರಿಗೆ ‘ಹಳಿಯಾಳದ ಹಿರಿಯ ಸಹಕಾರಿ ನೇತಾರ’ರೂ ಸಂಪರ್ಕಕ್ಕೆ ಬಂದರು. ಇವರು ಮೌಳಂಗಿಯಲ್ಲಿ ರೆಸಾರ್ಟ್‌ ನಿರ್ಮಿಸುತ್ತಿದ್ದು, ಅವರಿಗೂ ಖರೀದಿಯ ಸಮಯದಲ್ಲಿನ ‘ಸಮಸ್ಯೆ’ಗಳನ್ನು ಇದೇ ತಂಡ ಮುಂದೆ ನಿಂತು ಪರಿಹರಿಸಿತು. ಈ ಮೂಲಕ ರಾಜಕೀಯ ಹಾಗೂ ಶ್ರೀಮಂತ ಜನರ ಕೃಪಾಕಟಾಕ್ಷ ಪಡೆದುಕೊಂಡಿತು,” ಎನ್ನುತ್ತಾರೆ ದಾಂಡೇಲಿ ಸುತ್ತ ಮುತ್ತಲಿನ ಪ್ರವಾಸೋದ್ಯಮ ಮತ್ತು ಭೂಮಾಫಿಯವನ್ನು ಬಲ್ಲವರು.

ಅಜಿತ್‌ ನಾಯ್ಕ್‌ - ಭೂಮಾಫಿಯಾ ಮುಖಾಮುಖಿ:

ಹೀಗಿರುವಾಗ ಅದೊಂದು ದಿನ ಅಜಿತ್‌ ನಾಯ್ಕ್‌ ಮತ್ತು ಭೂ ಮಾಫಿಯಾ ತಂಡ ಜೋಯ್ಡಾದ ಮೌಳಂಗಿ ಗ್ರಾಮದ ರೆವಿನ್ಯೂ ಸರ್ವೆ ನಂಬರ್ 4ಬಿಯ 1 ಎಕರೆ 20 ಗುಂಟೆ ಜಮೀನಿನಲ್ಲಿ ಮುಖಾಮುಖಿಯಾಯಿತು. ಈ ಜಮೀನು ಸದ್ಯ ಚಿಕ್ಕೋಡಿ ನಿವಾಸಿಯಾಗಿರುವ ರಾಮಕುಮಾರ್‌ ಮಾಳಗೆ ಅವರಿಗೆ ಸೇರಿದ್ದಾಗಿತ್ತು. ರಾಮಕುಮಾರ್‌ ಅವರ ಜಮೀನು ಇಲ್ಲಿನ ಕಾಳಿ ನದಿಗೆ ಹೊಂದಿಕೊಂಡಿತ್ತು. ಪ್ರವಾಸೋದ್ಯಮದ ನಾಡಲ್ಲಿ ಇಂಥಹ ಜಮೀನಿಗೆ ಚಿನ್ನದ ಬೆಲೆ ಇದೆ. ಈ ಜಮೀನಿನ ಮೇಲೆ ಭೂಮಾಫಿಯಾ ದಂಧೆಕೋರರ ಕಣ್ಣು ಬಿತ್ತು. ನೇರವಾಗಿ ರಾಮಕುಮಾರ್‌ ಬಳಿ ಹೋಗಿ ಜಮೀನನ್ನು ತಮಗೆ ಮಾರುವಂತೆ ಒತ್ತಾಯಿಸಿದರು; ಒಪ್ಪದಿದ್ದಾಗ ಬೆದರಿಕೆ ಹಾಕಿದರು.

ಈ ಬೆದರಿಕೆಗಳಿಗೆ ಜಗ್ಗದ ರಾಮಕುಮಾರ್ ಮಾಳಗೆ ನೇರ ದಾಂಡೇಲಿಗೆ ಬಂದು ತಮ್ಮ ಕುಟುಂಬದ ವಕೀಲರಾದ ಅಜಿತ್ ನಾಯ್ಕ ಅವರಿಗೆ ವಿಷಯ ತಿಳಿಸಿದರು. ಅವರು ನೇರ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ಕಕ್ಷಿದಾರನ ಪರವಾಗಿ ದೂರೊಂದನ್ನು ದಾಖಲಿಸಿದರು. ದೂರಿನ ಅನ್ವಯ ಪೊಲೀಸರು ಕ್ರಮವನ್ನೂ ಜರುಗಿಸಿದ್ದರು.

ರಾಮಕುಮಾರ್‌ ಮಾಳಗೆ. 
ರಾಮಕುಮಾರ್‌ ಮಾಳಗೆ. 

ಮೊದಲೇ ಭೂಮಾಫಿಯಾದ ಕಣ್ಣು ಬಿದ್ದಿದೆ. ಪ್ರತಿಬಾರಿ ಚಿಕ್ಕೋಡಿಯಿಂದ ಬಂದು ಹೋಗುವುದು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ರಾಮಕುಮಾರ ಮಾಳಗೆ ತಮ್ಮ ಜಮೀನಿನ ಉಸ್ತುವಾರಿ ಮತ್ತು ದೇಖರೇಕಿ ಮಾಡಲು ಸ್ಥಳೀಯ ವಸಂತ ಕಲ್ಲಪ್ಪಾ ಕಲಕುಂದ್ರಿಗೆ ‘ಜನರಲ್ ಪವರ್ ಆಫ್ ಅಟಾರ್ನಿ’ ನೀಡಿದ್ದರು. ಜಿಪಿಎ. ಪಡೆದ ಕಲಕುಂದ್ರಿ ಸದರಿ ಜಮೀನಿನಲ್ಲಿ ಮಾಲಿಕರ ಪರವಾಗಿ ಸಣ್ಣ ಗುಡಿಸಲನ್ನು ಕಟ್ಟಲು ಮುಂದಾಗಿದ್ದರು. ಅಲ್ಲಿಂದ ಆರಂಭವಾಯಿತು ಅಸಲಿ ಸಂಘರ್ಷ.

ಗುಡಿಸಲು ನಿರ್ಮಿಸುತ್ತಿದ್ದಲ್ಲಿಗೆ ದುಷ್ಟರ ಕೂಟದೊಂದಿಗೆ ತೆರಳಿದ ದಲಿತ ಸಂಘಟನೆ ನೇತಾರ ನೇರ ಹಲ್ಲೆಗೆ ಮುಂದಾದ. ಈ ಸಂದರ್ಭ ಪುನಃ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಯಿತು. ದೂರಿನ ಮೇರೆಗೆ ಮಾರಕಾಸ್ತ್ರಗಳ ಸಮೇತ ಆರೋಪಿಗಳನ್ನು ಬಂಧಿಸಿದ ಪೊಲೀಸರು ಧಾರವಾಡದ ಜೈಲಿಗೆ ಅಟ್ಟಿದರು. ಈ ಆರೋಪಿಗಳು ವಾರದ ನಂತರ ಜಾಮೀನು ಪಡೆದು ವಾಪಸಾದರು. ಹಾಗೆ ವಾಪಸ್ ಬಂದವರೇ ಅಜಿತ್ ನಾಯ್ಕ್‌ಗೆ ಬೆದರಿಕೆ ಕರೆ ಮಾಡಿದ್ದರು ಎನ್ನಲಾಗಿದೆ. ಅಲ್ಲಿಂದ ಮುಖಾಮುಖಿ ಸಂಘರ್ಷದ ಇನ್ನೊಂದು ಅಧ್ಯಾಯ ಆರಂಭವಾಯಿತು.

ಧಾರವಾಡ ಜೈಲಿನಲ್ಲಿಯೇ ಹತ್ಯೆಗೆ ಸುಪಾರಿ?

ಜೈಲಿನಿಂದ ಹೊರ ಬಂದವರು ಬೆದರಿಕೆ ಕರೆ ಮಾಡಿದ ಸಮಯದಲ್ಲೇ ತಮ್ಮ ಕೊಲೆಗೆ ಸಿದ್ದತೆ ಮಾಡಿಕೊಂಡಿರುವ ವಿಚಾರ ಅಜಿತ್‌ ನಾಯಕ್‌ ಗಮನಕ್ಕೆ ಬಂತ್ತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಕೀಲರೊಬ್ಬರ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಖೈದಿಯೊಬ್ಬ ಧಾರವಾಡದ ಜೈಲಿನಿಂದಲೇ ಅಜಿತ್‌ ನಾಯ್ಕ್‌ಗೆ ಫೋನಾಯಿಸಿದ್ದ. ಅವತ್ತು ಆತ ‘ಭೂ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಕೊಲೆ ಮಾಡಲು ದಾಂಡೇಲಿಯಿಂದ ಧಾರವಾಡ ಜೈಲಿಗೆ ಬಂದಿದ್ದ ದಲಿತ ನೇತಾರನೊಬ್ಬ ತನಗೆ ಸುಪಾರಿ ನೀಡಿದ್ದಾನೆ’ ಎಂಬ ಮಾಹಿತಿ ನೀಡಿದ್ದ. ಮೊದಲೇ ಕ್ರಿಮಿನಲ್‌ ಹಿನ್ನೆಲೆಯ ಆತ ಅಜಿತ್‌ ನಾಯ್ಕ್‌ ಕೈಯಿಂದ ಹಣ ಪೀಕಲು ಯೋಜನೆ ರೂಪಿಸಿ ಕರೆ ಮಾಡಿದ್ದ. ಆತ ಪದೇ ಪದೇ ಫೋನ್‌ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದನಂತೆ. ಅಜಿತ್‌ ನಾಯ್ಕ್‌ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇದರಲ್ಲಿ ಈ ಎಲ್ಲಾ ಕರೆಗಳ ಧ್ವನಿಮುದ್ರಿಕೆಗಳೂ ಇವೆ ಎನ್ನಲಾಗಿದೆ.

ತಮ್ಮ ಹತ್ಯೆಯ ಸುಳಿವು ಸಿಕ್ಕಿಯೂ ಹತ್ಯೆಗೆ ಸುಪಾರಿ ನೀಡಿದ ದಲಿತ ಮುಖಂಡನ ವಿರುದ್ಧ ಅಜಿತ್‌ ನಾಯ್ಕ್‌ ದೂರು ದಾಖಲಿಸಲಿಲ್ಲವೇಕೆ? ದೂರು ಸಲ್ಲಿಸುವಂತೆ ಆಪ್ತರು ನೀಡಿದ ಸಲಹೆಯನ್ನೂ ಯಾಕೆ ನಿರ್ಲಕ್ಷಿಸಿದರು ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಪ್ರಮುಖ ಆರೋಪಿ ಬಂಧನ:

ಮುಸುಗುಧಾರಿ, ಪ್ರಮುಖ ಆರೋಪಿ ಕಾಂಬ್ಳಿಯ ಸಮ್ಮಿಖದಲ್ಲಿ ಪಂಚನಾಮೆ ನಡೆಸುತ್ತಿರುವ ದಾಂಡೇಲಿ ಪೊಲೀಸರು.  
ಮುಸುಗುಧಾರಿ, ಪ್ರಮುಖ ಆರೋಪಿ ಕಾಂಬ್ಳಿಯ ಸಮ್ಮಿಖದಲ್ಲಿ ಪಂಚನಾಮೆ ನಡೆಸುತ್ತಿರುವ ದಾಂಡೇಲಿ ಪೊಲೀಸರು.  

ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರವೇ ಪ್ರಮುಖ ಆರೋಪಿ ಪಾಂಡುರಂಗ ಕಾಂಬ್ಳಿ ಯಾನೆ ದೀಪಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದ ಪೋಲಿಸ್ ಇಲಾಖೆ ಬುಧವಾರದಂದು ಮುಸುಕುಧಾರಿಯಾಗಿ ಕಾಂಬ್ಳಿಯನ್ನು ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದೆ. ಜತೆಗೆ ಕೊಲೆಗೆ ಬಳಸಿದ್ದ ದ್ವಿಚಕ್ರ ವಾಹನ, ಆಯುಧಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

ವಿಚಾರಣೆ ವೇಳೆ ಪ್ರಮುಖ ಆರೋಪಿ ಪಾಡುರಂಗ ಕಾಂಬ್ಳಿ ನೀಡಿದ ಮಾಹಿತಿ ಮತ್ತು ತನಿಖೆಯ ಆಧಾರದ ಮೇಲೆ ಪೊಲೀಸರು ಇತರ ಆರೋಪಿಗಳ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಇನ್ನೂ ಮೂವರ ಹೆಸರುಗಳು ತನಿಖೆಯ ಸುತ್ತ ಎಡತಾಕುತ್ತಿವೆ.

ಮೊದಲ ಆರೋಪಿ ಪಾಂಡುರಂಗ ಕಾಂಬ್ಳಿ ಯಾನೆ ದೀಪಕ್ ವೃತ್ತಿಯಲ್ಲಿ ಡ್ರೈವರನಾಗಿದ್ದಾನೆ. ಯಾವುದೇ ಸಮಯಕ್ಕೆ ಯಾರು ಕರೆದರೂ ಚಾಲಕನಾಗಿ ಹೋಗಲು ಸಿದ್ಧವಾಗಿದ್ದ ಈತ ಓರ್ವ ವೃತ್ತಿಪರ ಚಾಲಕನಾಗಿದ್ದ. ನಂತರದ ದಿನಗಳಲ್ಲಿ ಈ ಭೂ ಮಾಫಿಯಾ ತಂಡ ಸೇರಿಕೊಂಡು ತನ್ನ ಹಳೆ ವೃತ್ತಿಗೆ ತಿಲಾಂಜಲಿ ನೀಡಿದ್ದ.

ಎರಡನೇ ಆರೋಪಿಯಾಗುವ ಸಾಧ್ಯತೆ ಇರುವ ಆರ್. ಸಿ. ಸುದರ್ಶನ ಯಾನೆ ಸುದರ್ಶನ ನಾಯರ್ ಕೇರಳ ಮೂಲದ ಪಿ. ಡಬ್ಲು. ಡಿ ಕಾಂಟ್ರಾಕ್ಟರ್ ಚಂದ್ರಸೇನನ್ ಎಂಬವರ ಮಗ. ದಾಂಡೇಲಿ ಪೋಲಿಸ್ ಸ್ಟೇಷನ್‌ನಲ್ಲಿ ಈತ ‘ರೌಡಿ ಶೀಟರ್’. ಅತ್ಯಾಚಾರ ಹಾಗೂ ಧಮ್ಕಿ ಕೇಸುಗಳನ್ನು ಎದುರಿಸುತ್ತಿರುವ ಈತ ಕೆಲವು ಪೊಲೀಸರಿಗೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಬೇಕಾದವನು ಎಂದು ಜನರು ಈತನನ್ನು ಗುರುತಿಸುತ್ತಾರೆ.

ಕೊಲೆ ಸಂಚಿನಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುವ ಮತ್ತೊಬ್ಬ ವಿನಾಯಕ ಕರ್ನಿಂಗ. ನಿಪ್ಪಾಣಿ ಮೂಲದ ಸದ್ಯ ಶಿರಸಿ ತಾಲೂಕಿನ ಹುಲೇಕಲ್ ನಿವಾಸಿಯಾದ ಈತ ನಿವೃತ್ತ ಪೋಲಿಸ್ ಅಧಿಕಾರಿಯೋರ್ವರ ಪುತ್ರ. ಹೆಸರಿಗೆ ದಲಿತ ಸಂಘಟನೆಯೊಂದರ ರಾಜ್ಯ ಪದಾಧಿಕಾರಿ. ಗೋವಾದಲ್ಲಿ ಒಂದು ಮರ್ಡರ್ ಕೇಸಿಗೆ ಸಂಬಂಧಿಸಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಹಲವಾರು ವರ್ಷಗಳಿಂದ ಜುಜುಬಿ ಹಣಕ್ಕೆ ದಲಿತರ ಜಮೀನನ್ನು ಖರೀದಿಸಿ ಶ್ರೀಮಂತರಿಗೆ ಹೆಚ್ಚಿನ ಬೆಲೆಗೆ ಮಾರುವ ಕಸುಬು ಮಾಡಿಕೊಂಡು ಬಂದಿದ್ದಾನೆ. ಸದ್ಯ ಯಲ್ಲಾಪುರದಲ್ಲಿ ವಾಸವಾಗಿದ್ದಾನೆ.

ನಾಲ್ಕನೆಯಾತ ವಿಕ್ರಮ್. ಮೈಸೂರು ಮೂಲದ ಈತ ಚೋರರ ಗ್ಯಾಂಗ್‌ನ ಮತ್ತೋರ್ವ ಪ್ರಮುಖ ಸದಸ್ಯನಾಗಿದ್ದು ಅವನ ಕುರಿತು ಹೆಚ್ಚಿನ ಮಾಹಿತಿಗಳು ಪೊಲೀಸ್ ದಾಖಲೆಗಳಲ್ಲಿಲ್ಲ.

ದಾಂಡೇಲಿಯಂಥ ಮಲೆನಾಡಿನ ಕಾಡು ಪ್ರದೇಶಗಳಲ್ಲಿ ಇಂಥಹ ಇತಿಹಾಸ ಉಳ್ಳು ದುಷ್ಟ ಕುಟವೊಂದು ಸೇರಿಕೊಂಡರೆ ಏನಾಗುತ್ತದೆಯೋ ಅದೆಲ್ಲವೂ ಈಗ ಇಲ್ಲಿ ನಡೆದಾಗಿದೆ. ಪರಿಣಾಮ ನೂರಾರು ದಲಿತರು ಜಮೀನು ಕಳೆದುಕೊಂಡರೆ ಅಜಿತ್‌ ನಾಯ್ಕ್‌ ರೀತಿಯ ವಕೀಲರ ಪ್ರಾಣ ಪಕ್ಷಿಯೂ ಹಾರಿ ಹೋಗಿದೆ. ಅಜಿತ್ ನಾಯ್ಕ್‌ ಹಿನ್ನೆಲೆ ಗೊತ್ತಿರುವವರು, ಅವರ ಕೊಲೆಯ ಹಿಂದೆ, ಮೇಲ್ನೋಟಕ್ಕೆ ಕಾಣಿಸುತ್ತಿರುವ ಈ ಆರೋಪಿಗಳ ಬೆನ್ನಿಗೇ ಪ್ರಭಾವಿಗಳು ಇರುವ ಸಾಧ್ಯತೆ ಕಾಣಿಸುತ್ತಿದೆ.

ಸಹಜವಾಗಿಯೇ ಅಪರಾಧ ಚಟುವಟಿಕೆಗಳು ಮೇರೆ ಮೀರಿದಾಗ ಜನಸಾಮನ್ಯರು ನೆಮ್ಮದಿ ಕಳೆದುಕೊಳ್ಳುತ್ತಾರೆ. ಸದ್ಯ ಅದೇ ಸ್ಥಿತಿಗೆ ದಾಂಡೇಲಿ ಜನರು ಬಂದು ತಲುಪಿದ್ದಾರೆ. ಇದರ ಪರಿಣಾಮ ಎಂಬಂತೆ ಅಜಿತ್‌ ನಾಯ್ಕ್‌ ಕೊಲೆ ಬೆನ್ನಿಗೆ ‘ತಪ್ಪಿತಸ್ತರೆಲ್ಲರನ್ನೂ ಬಂಧಿಸಿ ತಕ್ಷಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲೆಯ ಎಲ್ಲಾ ತಾಲೂಕುಗಳ ವಕೀಲರ ಸಂಘ ಮತ್ತು ಇತರ ಸಂಘಟನೆಗಳ ಒಕ್ಕೊರಲಿನ ಕೂಗೆಬ್ಬಿಸಿವೆ. ಬೀದಿಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ. “ನ್ಯಾಯವಾದಿ ಅಜಿತ್ ನಾಯ್ಕ ಹತ್ಯೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಕಾರವಾರ ಜಿಲ್ಲಾ ನ್ಯಾಯವಾದಿಗಳ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.

“ಏನೇನೋ ರೂಮರ್ ಹಬ್ಬಿಸಿ ತನಿಖೆ ದಾರಿ ತಪ್ಪಿಸಲು ಪ್ರಯತ್ನ ನಡೆದಿದೆ. ಅದಕ್ಕೆ ಅವಕಾಶವೀಯದಂತೆ ನ್ಯಾಯಯುತ ತನಿಖೆಯಾಗಿ ತಪ್ಪಿತಸ್ತರಿಗೆ ಯೋಗ್ಯ ಶಿಕ್ಷೆಯಾಗಬೇಕು”
- ಜಯಚಂದ್ರ, ದಾಂಡೇಲಿ, ಹಿರಿಯ ಪತ್ರಕರ್ತ

ಒಂದೆಡೆ ಪರಿಸ್ಥಿತಿ ಹೀಗಿದ್ದರೆ ಇನ್ನೊಂದು ಕಡೆ ಸುದರ್ಶನ ನಾಯ್ಕ್‌ರಂತವರನ್ನು ಈ ಕೇಸಿನಿಂದ ಕೈಬಿಡಲು ಕೆಲ ರಾಜಕೀಯ ಮತ್ತು ಮಾಫಿಯಾ ಶಕ್ತಿಗಳು ವ್ಯವಸ್ಥಿತ ಪ್ರಯತ್ನವನ್ನೂ ಜಾರಿಯಲ್ಲಿಟ್ಟಿವೆ ಎಂಬ ಗುಮಾನಿ ಸುತ್ತಮುತ್ತೆಲ್ಲಾ ಹರಡಿದೆ. ಹಿರಿಯ ರಾಜಕೀಯ ಮುತ್ಸದ್ದಿ ಎಂದು ಬಿಂಬಿತವಾಗಿರುವ ಹಾಲಿ ಕಂದಾಯ ಸಚಿವ ಮತ್ತು ಉಸ್ತುವಾರಿ ಸಚಿವ ದೇಶಪಾಂಡೆ ಕಾಲ ಬುಡದಲ್ಲೇ ಇಷ್ಟೆಲ್ಲಾ ನಡೆದರೂ ಸುಮ್ಮನೆ ಕುಳಿತಿದ್ದಾರೆ ಎಂದು ಜನರಿಗೆ ಅನ್ನಿಸುತ್ತಿದೆ. ಹಳಿಯಾಳದಲ್ಲಿ ದೇಶಪಾಂಡೆ ಗೆಲುವಿಗೆ ಅಜಿತ್ ನಾಯ್ಕ್‌ ನೆರವು ಅಗತ್ಯವಾಗಿತ್ತು. ಆದರೆ ಅವರ ಸಾವಿನ ವಿಚಾರದಲ್ಲಿ ಸಚಿವರ ನಿಗೂಢ ಮೌನವೇ ಪ್ರಶ್ನೆಗಳಿಗೆ ಕಾರಣವಾಗಿದೆ.