ಕೇಸರಿಮಯ ಉತ್ತರ ಪ್ರದೇಶ; ಕಚೇರಿ, ಪ್ರತಿಮೆ ಬಳಿಕ ಮುಘಲ್‌ಸರಾಯ್‌ ರೈಲು ನಿಲ್ದಾಣದ ಸರದಿ!
ಸುದ್ದಿ ಸಾಗರ

ಕೇಸರಿಮಯ ಉತ್ತರ ಪ್ರದೇಶ; ಕಚೇರಿ, ಪ್ರತಿಮೆ ಬಳಿಕ ಮುಘಲ್‌ಸರಾಯ್‌ ರೈಲು ನಿಲ್ದಾಣದ ಸರದಿ!

ಉತ್ತರ ಪ್ರದೇಶದಲ್ಲಿ ಕಚೇರಿ, ಭವನ, ಅಂಬೇಡ್ಕರ್‌ ಪ್ರತಿಮೆ, ಟೋಲ್‌ ಪ್ಲಾಸಾ ಬಳಿಕ ಈಗ ರೈಲು ನಿಲ್ದಾಣವೂ ಕೇಸರೀಕರಣಗೊಳ್ಳುತ್ತಿದೆ.

ಮುಖ್ಯಮಂತ್ರಿ ಸಚಿವಾಲಯ, ಹಜ್‌ ಭವನ, ಟೋಲ್‌ ಪ್ಲಾಸಾ, ಅಂಬೇಡ್ಕರ್‌ ಪ್ರತಿಮೆ, ರೈಲು ನಿಲ್ದಾಣ – ಹೀಗೆ ಎಲ್ಲ ಕಡೆಯೂ ಕೇಸರಿ ಬಣ್ಣ ಬಳಿಯುವುದು ಉತ್ತರ ಪ್ರದೇಶದಲ್ಲಿ ಅಭ್ಯಾಸವಾಗಿ ಹೋಗಿದೆ! ಈ ಹಿಂದೆ ಮುಖ್ಯಮಂತ್ರಿ ಸಚಿವಾಲಯ ಹಾಗೂ ಹಜ್‌ ಭವನಕ್ಕೆ ಕೇಸರಿ ಬಣ್ಣ ಬಳಿಸಿದ್ದ ಉತ್ತರ ಪ್ರದೇಶ ಸರಕಾರ ಈಗ ಮುಘಲ್‌ಸರಾಯ್ ರೈಲು ನಿಲ್ದಾಣಕ್ಕೆ ಕೇಸರಿ ಬಣ್ಣ ಬಳಿಸಿದೆ.

ಅಂದಹಾಗೆ ಉತ್ತರ ಪ್ರದೇಶದ ಮುಘಲ್‌ಸರಾಯ್‌ ರೈಲು ನಿಲ್ದಾಣದ ಹೆಸರನ್ನು ಜೂನ್‌ ತಿಂಗಳಲ್ಲಿ ಆರ್‌ಎಸ್‌ಎಸ್‌ನ ದೀನ್‌ದಯಾಳ್‌ ಉಪಾಧ್ಯಾಯ ನಗರ ರೈಲು ನಿಲ್ದಾಣ ಎಂದು ಬದಲಿಸಲಾಗಿದೆ. 1968ರ ಫೆಬ್ರುವರಿ 11ರಂದು ದೀನ್‌ದಯಾಳ್‌ ಉಪಾಧ್ಯಾಯ ಇದೇ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು ಎನ್ನಲಾಗಿದೆ.

ಉತ್ತರ ಪ್ರದೇಶ ಸರಕಾರದ ಮನವಿಯ ಮೇರೆಗೆ ರೈಲ್ವೆ ಇಲಾಖೆಯು ಈ ನಿಲ್ದಾಣದ ಹೆಸರನ್ನು ಬದಲಿಸಿದೆ. ಈ ರೈಲು ನಿಲ್ದಾಣದ ಹೊಸ ಹೆಸರಿನ ನಾಮಫಲಕಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇದೇ ಭಾನುವಾರ (ಆಗಸ್ಟ್‌ 5) ಉದ್ಘಾಟಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡಾ ಭಾಗವಹಿಸಲಿದ್ದಾರೆ.

ರೈಲು ನಿಲ್ದಾಣದ ಆವರಣದ ಗೋಡೆಗಳು ಈವರೆಗೆ ಬಿಳಿ ಬಣ್ಣದಲ್ಲಿದ್ದವು. ಹೊಸದಾಗಿ ಕೇಸರಿ ಬಣ್ಣವನ್ನು ಬಳಿಯುವಂತೆ ಅಧಿಕಾರಿಗಳು ತಿಳಿಸಿದ್ದರು ಎಂದು ಗುತ್ತಿಗೆದಾರ ಎಚ್‌.ಆರ್‌. ಸಿಂಗ್‌ ಹೇಳಿದ್ದಾರೆ.

“ಭಾನುವಾರದ ಕಾರ್ಯಕ್ರಮಕ್ಕಾಗಿ ರೈಲು ನಿಲ್ದಾಣದಕ್ಕೆ ಬಣ್ಣ ಬಳಿಸಲಾಗುತ್ತಿದೆ. ಯಾವುದೇ ಶುಭ ಸಮಾರಂಭಗಳಿಗೆ ಮುಂಚೆ ಮನೆಗೆ ಬಣ್ಣ ಬಳಿಯುವಂತೆ ರೈಲು ನಿಲ್ದಾಣಕ್ಕೂ ಬಣ್ಣ ಬಳಿಯಲಾಗುತ್ತಿದೆ. ಇದರಲ್ಲಿ ವಿಶೇಷವೇನೂ ಇಲ್ಲ” ಎಂದು ಮುಘಲ್‌ ಸರಾಯ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪಂಕಜ್‌ ಸಕ್ಸೇನಾ ತಿಳಿಸಿದ್ದಾರೆ.

ಬುಧವಾರ (ಆಗಸ್ಟ್‌ 1) ಬಣ್ಣ ಬಳಿಯುವ ಕೆಲಸ ಆರಂಭವಾಗಿದ್ದು, ಶನಿವಾರದೊಳಗೆ (ಆಗಸ್ಟ್‌ 4) ಬಣ್ಣ ಬಳಿಯುವ ಕೆಲಸ ಮುಗಿಯಲಿದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ.

ಕೇಸರಿಮಯ ಮುಖ್ಯಮಂತ್ರಿ ಸಚಿವಾಲಯ
ಕೇಸರಿಮಯ ಮುಖ್ಯಮಂತ್ರಿ ಸಚಿವಾಲಯ
ಹಜ್‌ ಭವನಕ್ಕೆ ಬಳಿದಿದ್ದ ಕೇಸರಿ ಬಣ್ಣ
ಹಜ್‌ ಭವನಕ್ಕೆ ಬಳಿದಿದ್ದ ಕೇಸರಿ ಬಣ್ಣ

ಉತ್ತರ ಪ್ರದೇಶದ ಲಖನೌನಲ್ಲಿರುವ ಮುಖ್ಯಮಂತ್ರಿ ಸಚಿವಾಲಯಕ್ಕೆ ಹಾಗೂ ಹಜ್‌ ಭವನದ ಕಟ್ಟಡಕ್ಕೆ ಕೇಸರಿ ಬಣ್ಣ ಬಳಿಯಲಾಗಿತ್ತು. ಹಜ್‌ ಭವನದ ಗೋಡೆಗಳಿಗೆ ಕೇಸರಿ ಬಣ್ಣ ಬಳಿದಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಮತ್ತೆ ಬಿಳಿ ಬಣ್ಣ ಬಳಿಸಲಾಗಿತ್ತು.

ಅಂಬೇಡ್ಕರ್‌ ಪ್ರತಿಮೆಗೂ ಕೇಸರಿ ಬಣ್ಣ
ಅಂಬೇಡ್ಕರ್‌ ಪ್ರತಿಮೆಗೂ ಕೇಸರಿ ಬಣ್ಣ
ಟೋಲ್‌ ಪ್ಲಾಸಾ ಬಣ್ಣವೂ ಕೇಸರಿ
ಟೋಲ್‌ ಪ್ಲಾಸಾ ಬಣ್ಣವೂ ಕೇಸರಿ

ಬದಾಯು ಜಿಲ್ಲೆಯಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಬಳಿಕ ಬಿಎಸ್‌ಪಿ ಕಾರ್ಯಕರ್ತರು ಅಂಬೇಡ್ಕರ್‌ ಪ್ರತಿಮೆಗೆ ನೀಲಿ ಬಣ್ಣ ಬಳಿದಿದ್ದರು. ಮುಜಾಫರ್‌ ನಗರ- ಸಹರಾನ್‌ಪುರ ಹೆದ್ದಾರಿಯ ಟೋಲ್‌ ಪ್ಲಾಸಾಕ್ಕೆ ಕಳೆದ ತಿಂಗಳು ಕೇಸರಿ ಬಣ್ಣ ಬಳಿಯಲಾಗಿತ್ತು.

ಸರಕಾರಿ ಕಟ್ಟಡಗಳು, ಪ್ರತಿಮೆಯನ್ನು ಕೇಸರಿಗೊಳಿಸಿದ ಮನಸ್ಸುಗಳು ಈಗ ರೈಲು ನಿಲ್ದಾಣವನ್ನೂ ಕೇಸರಿಮಯವಾಗಿಸಲು ಹೊರಟಿವೆ. ‘ಮುಘಲ್‌’ ಹೆಸರನ್ನು ಬದಲಿಸಿಕೊಂಡಿರುವ ಉತ್ತರ ಪ್ರದೇಶದ ಈ ರೈಲು ನಿಲ್ದಾಣ ಈಗ ತನ್ನ ಬಣ್ಣವನ್ನೂ ಬದಲಿಸಿಕೊಳ್ಳುತ್ತಿದೆ.