ಫಾಲ್ಕನ್‌ ಟೈರ್ಸ್‌ ಕಾರ್ಖಾನೆಯ ಕಾರ್ಮಿಕರೊಂದಿಗೆ ಸಭೆ ನಡೆಸಿದ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌
ಸುದ್ದಿ ಸಾಗರ

ಫಾಲ್ಕನ್‌ ಟೈರ್ಸ್‌ ಫಾಲೋಅಪ್‌: ಕಾರ್ಖಾನೆ ಪುನರಾರಂಭಕ್ಕೆ ಕೈಗಾರಿಕಾ ಸಚಿವರ ಭರವಸೆ

ಫಾಲ್ಕನ್‌ ಟೈರ್ಸ್‌ ಕಾರ್ಖಾನೆಯ ಪುನರಾರಂಭಕ್ಕೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದಾಗಿ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಭರವಸೆ ನೀಡಿದ್ದಾರೆ.

ನಷ್ಟದ ಕಾರಣದಿಂದ ಮುಚ್ಚಿರುವ ಮೈಸೂರಿನ ಫಾಲ್ಕನ್‌ ಟೈರ್ಸ್‌ ಕಾರ್ಖಾನೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಕಾರ್ಮಿಕರಿಗೆ ಭರವಸೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಫಾಲ್ಕನ್‌ ಟೈರ್ಸ್‌ ಕಾರ್ಖಾನೆಯ ಕಾರ್ಮಿಕರು ಹಾಗೂ ಸ್ಥಳೀಯ ಶಾಸಕರೊಂದಿಗೆ ನಡೆದ ಸಭೆಯಲ್ಲಿ ಜಾರ್ಜ್‌ ಕಾರ್ಖಾನೆಯನ್ನು ಪ್ರೊಮೋಟರ್‌ಗಳಿಗೆ ವಹಿಸುವ ಬಗ್ಗೆ ಮಾತನಾಡಿದ್ದಾರೆ.

ಹೊಸ ಕೈಗಾರಿಕೆಗಳ ಜತೆಗೆ ನಷ್ಟದಲ್ಲಿರುವ ಕಾರ್ಖಾನೆಗಳನ್ನು ಪುನರಾರಂಭಿಸುವ ಬಗ್ಗೆ ಮಾತನಾಡಿರುವ ಜಾರ್ಜ್, ಇದಕ್ಕಾಗಿ ಸರಕಾರದ ಮಟ್ಟದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

“ಕಾರ್ಖಾನೆ ಮುಚ್ಚಿದಾಗಿನಿಂದ ಈವರೆಗೆ ಕಾರ್ಮಿಕರ ಕುಟುಂಬಗಳ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಕುಟುಂಬಗಳು ಅತಂತ್ರವಾಗಿವೆ” ಎಂದು ಕಾರ್ಖಾನೆಯ ಕಾರ್ಮಿಕರು ಜಾರ್ಜ್‌ ಅವರಿಗೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

“ಕಾರ್ಖಾನೆ ಪುನರಾರಂಭವಾಗುವವರೆಗೂ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಪ್ರತಿ ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ರೂಪಾಯಿಯನ್ನು ಸರಕಾರವೇ ನೀಡಬೇಕು ಎಂಬ ಬಗ್ಗೆ ಜಾರ್ಜ್‌ ಅವರಿಗೆ ಮನವಿ ಮಾಡಿದ್ದೇವೆ. ಈ ಸಮಸ್ಯೆಗೆ ಏನು ಪರಿಹಾರವಿದೆಯೋ ಅದನ್ನು ಮಾಡುವ ಭರವಸೆ ನೀಡಿದ್ದಾರೆ” ಎಂದು ಫಾಲ್ಕನ್‌ ಟೈರ್ಸ್‌ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಣ್ಣ ಗೌಡ ತಿಳಿಸಿದ್ದಾರೆ.

“ಎಷ್ಟು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಬಗ್ಗೆ ಸಚಿವರು ಯಾವುದೇ ಕಾಲಮಿತಿ ತಿಳಿಸಲಿಲ್ಲ. ಆದಷ್ಟು ಬೇಗ ಕಾರ್ಖಾನೆ ಪುನರಾರಂಭಕ್ಕೆ ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸರಕಾರ ಈ ಬಗ್ಗೆ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಆವರಣದಲ್ಲಿ ಧರಣಿ ಮಾಡುವ ಬಗ್ಗೆ ಚಿಂತಿಸುತ್ತಿದ್ದೇವೆ” ಎಂದು ಶಿವಣ್ಣ ಗೌಡ ಹೇಳಿದ್ದಾರೆ.

ಫಾಲ್ಕನ್‌ ಕಾರ್ಖಾನೆ ಮುಚ್ಚಿರುವುದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಹಲವರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ. ಈ ಸಮಸ್ಯೆಯನ್ನು ಸರಕಾರ ಬಗೆಹರಿಸದಿದ್ದರೆ ನಮಗೆ ದಯಾಮರಣಕ್ಕೆ ಅನುಮತಿ ಕೊಡಿಸಲಿ.
- ಮಂಜುರಾಜೇ ಅರಸ್‌, ಫಾಲ್ಕನ್‌ ಟೈರ್ಸ್‌ ಕಾರ್ಖಾನೆಯ ನೊಂದ ಕಾರ್ಮಿಕ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಫಾಲ್ಕನ್‌ ಟೈರ್ಸ್‌ ಕಾರ್ಖಾನೆಯ ಪುನರಾರಂಭದ ತೊಡಕಿನ ಬಗ್ಗೆ ‘ಸಮಾಚಾರ’ ಸಮಗ್ರ ವರದಿ ಮಾಡಿತ್ತು. ಕಾರ್ಖಾನೆಯ ಕಾರ್ಮಿಕರ ಸಂಕಷ್ಟದ ಬಗ್ಗೆ ವರದಿ ಸರಕಾರದ ಗಮನ ಸೆಳೆದಿತ್ತು. ಆ ವರದಿ ಇಲ್ಲಿದೆ: