ಮರಾಠರಿಂದ ಮಹಾರಾಷ್ಟ್ರ ಬಂದ್; ‘ಒಬಿಸಿ’ ಮೀಸಲಾತಿಯ 2 ದಶಕಗಳ ಹೋರಾಟ
ಸುದ್ದಿ ಸಾಗರ

ಮರಾಠರಿಂದ ಮಹಾರಾಷ್ಟ್ರ ಬಂದ್; ‘ಒಬಿಸಿ’ ಮೀಸಲಾತಿಯ 2 ದಶಕಗಳ ಹೋರಾಟ

ಒಬಿಸಿ ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಮರಾಠರು ಬೀದಿಗಿಳಿದಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು ಮಂಗಳವಾರ  ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಮರಾಠ ಮೀಸಲಾತಿ ಹೋರಾಟಗಾರರ ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನಾಕಾರರು ಮಂಗಳವಾರ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದ್ದಾರೆ.

ಔರಂಗಾಬಾದ್‌ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಔರಂಗಾಬಾದ್‌ನಲ್ಲಿ ಸೋಮವಾರ ಒಬ್ಬ ಪ್ರತಿಭಟನಾಕಾರ ಮೀಸಲಾತಿ ಹೋರಾಟ ಬೆಂಬಲಿಸಿ ಗೋದಾವರಿ ನದಿಗೆ ಹಾರಿ ಪ್ರಾಣಬಿಟ್ಟಿದ್ದಾನೆ. ಈ ಸಾವಿನ ಬಳಿಕ ಮರಾಠ ಮೀಸಲಾತಿ ಹೋರಾಟದ ಬಿಸಿ ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ.

ಮರಾಠ ಮೀಸಲಾತಿ ಹೋರಾಟಗಾರರು ಪಂಡರಾಪುರದಲ್ಲಿ ಗಲಭೆ ಸೃಷ್ಟಿಸಲಿದ್ದಾರೆ ಎಂಬ ಕಾರಣಕ್ಕೆ ಆಶಾಢ ಏಕಾದಶಿ ಪೂಜೆಗೆ ಪಂಡರಾಪುರದ ವಿಠಲ ದೇವಾಲಯಕ್ಕೆ ಹೋಗುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ರದ್ದುಗೊಳಿಸಿದ್ದರು.

ಪ್ರತಿಭಟನಾಕಾರರು ಗಲಭೆ ಸೃಷ್ಟಿಸುತ್ತಾರೆ ಎಂಬ ಆರೋಪದ ಬಗ್ಗೆ ದೇವೇಂದ್ರ ಫಡ್ನವಿಸ್‌ ಮರಾಠ ಸಮುದಾಯದ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಸೋಮವಾರ ಮಹಾರಾಷ್ಟ್ರದ ಹಲವೆಡೆ ‘ಮರಾಠ ಕ್ರಾಂತಿ ಮೋರ್ಚಾ’ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ಔರಂಗಾಬಾದ್‌ನಲ್ಲಿ ಸೋಮವಾರ ನಡೆಯುತ್ತಿದ್ದ ಪ್ರತಿಭಟನೆ ವೇಳೆ 27 ವರ್ಷದ ಕಾಕಾಸಾಹೇಬ್‌ ಶಿಂಧೆ ಎಂಬಾತ ಗೋದಾವರಿ ನದಿಯ ಸೇತುವೆಯಿಂದ ನದಿಗೆ ಜಿಗಿದು ಪ್ರಾಣ ಬಿಟ್ಟಿದ್ದಾನೆ. ಶಿಂಧೆ ಸಾವಿನ ಬಳಿಕ ಪ್ರತಿಭಟನೆ ಸ್ವರೂಪ ತೀವ್ರಗೊಂಡಿದೆ. ಮುಂದಿನ ದಿನಗಳಲ್ಲಿ ಮುಂಬೈನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಮರಾಠ ಸಮುದಾಯ ಮುಂದಾಗಿದೆ.

“ಮರಾಠ ಸಮುದಾಯದ ಪ್ರತಿಭಟನಾಕಾರರು ಗಲಭೆ ಸೃಷ್ಟಿಸಬಹುದೆಂಬ ಕಾರಣಕ್ಕೆ ಆಶಾಢ ಏಕಾದಶಿ ಅಂಗವಾಗಿ ಸೋಮವಾರ ನಿಗದಿಯಾಗಿದ್ದ ಪಂಡರಾಪುರ ಪ್ರವಾಸವನ್ನು ರದ್ದುಗೊಳಿಸಿದ್ದೇನೆ” ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಭಾನುವಾರ ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಸೋಮವಾರ ಔರಂಗಾಬಾದ್‌ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.

ಮರಾಠ ಮೀಸಲಾತಿಗಾಗಿ ಒತ್ತಾಯಿಸಿ ಕಳೆದ ವರ್ಷ ಮರಾಠ ಕ್ರಾಂತಿ ಮೋರ್ಚಾ ಮುಂಬೈನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ಮರಾಠ ಸಮುದಾಯದ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

“ಮರಾಠರು ಗಲಭೆ ಸೃಷ್ಟಿಸುತ್ತಾರೆಂಬ ಕಾರಣಕ್ಕೆ ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾಗಿ ಹೇಳಿರುವ ದೇವೇಂದ್ರ ಫಡ್ನವಿಸ್‌ ತಮ್ಮ ಈ ಹೇಳಿಕೆಯ ಬಗ್ಗೆ ಮರಾಠರ ಕ್ಷಮೆ ಕೇಳಬೇಕು. ಮರಾಠ ಮೀಸಲಾತಿ ಬಗ್ಗೆ ಫಡ್ನವಿಸ್‌ ಉದಾಸೀನ ಧೋರಣೆ ತೋರುತ್ತಿದ್ದಾರೆ. ಮೀಸಲಾತಿ ಜಾರಿ ಬಗ್ಗೆ ಆದಷ್ಟು ಬೇಗ ಅವರು ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಏನಿದು ಮರಾಠ ಮೀಸಲಾತಿ?

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಇತರೆ ಹಿಂದುಳಿದ ವರ್ಗದಡಿ (ಒಬಿಸಿ) ಮೀಸಲಾತಿ ನೀಡಬೇಕೆಂಬ ಬೇಡಿಕೆ ದಶಕಗಳಿಂದ ಇದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 30ರಷ್ಟಿರುವ ಮರಾಠ ಸಮುದಾಯ ತಮಗೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಹಲವು ದಿನಗಳಿಂದ ಮಹಾರಾಷ್ಟ್ರದ ಹಲವೆಡೆ ಪ್ರತಿಭಟನೆ ನಡೆಸುತ್ತಾ ಬಂದಿದೆ.

ಮರಾಠರು ಮೂಲದಲ್ಲಿ ಕುಣಬಿ ಸಮುದಾಯಕ್ಕೆ ಸೇರಿದವರಾಗಿದ್ದು ಸಮಾಜ ಅವರನ್ನು ಹಿಂದುಳಿದವರಂತೆಯೇ ನಡೆಸಿಕೊಂಡಿದೆ. ಶಿಕ್ಷಣ, ಸರಕಾರಿ ಉದ್ಯೋಗದಲ್ಲಿ ಮರಾಠರ ಪ್ರಾತಿನಿಧ್ಯ ಕಡಿಮೆ ಇದೆ. ಹೀಗಾಗಿ ತಮಗೆ ಒಬಿಸಿ ಮೀಸಲಾತಿ ನೀಡಬೇಕು ಎಂಬುದು ಈ ಸಮುದಾಯದ ಎರಡು ದಶಕಗಳ ಬೇಡಿಕೆ.

ಒಬಿಸಿ ಮೀಸಲಾತಿಗಾಗಿ ಒತ್ತಾಯಿಸಿ ಮರಾಠ ಸಮುದಾಯ ಈ ಹಿಂದೆ ಹಲವು ಬಾರಿ ಮೌನ ಪ್ರತಿಭಟನೆಗಳನ್ನೂ ನಡೆಸಿದೆ. ಸಮುದಾಯದ ಒತ್ತಾಯಕ್ಕೆ ಮಣಿದು ರಾಜ್ಯ ಸರಕಾರ ನಿವೃತ್ತ ನ್ಯಾಯಮೂರ್ತಿ ಎಂ.ಜಿ. ಗಾಯಕ್‌ವಾಡ್‌ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಿದೆ.

ಮಹಾರಾಷ್ಟ್ರದಲ್ಲಿ ಸದ್ಯ ಶಿಕ್ಷಣ ಹಾಗೂ ಸರಕಾರಿ ಉದ್ಯೋಗದಲ್ಲಿ ಒಬಿಸಿ ಸಮುದಾಯಕ್ಕೆ 27% ಮೀಸಲಾತಿ ಇದೆ. ಮರಾಠ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡಿದರೆ ಈಗಿರುವ ಮೀಸಲಾತಿ ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಮಹಾರಾಷ್ಟ್ರದ ಹಲವು ಒಬಿಸಿ ಸಮುದಾಯಗಳು ಗಾಯಕ್‌ವಾಡ್‌ ಸಮಿತಿಗೆ ಮನವಿ ಸಲ್ಲಿಸಿದ್ದಾರೆ.

“ಮರಾಠ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಸುಮಾರು 1 ಲಕ್ಷ ಮನವಿಗಳು ಬಂದಿವೆ. ಮೀಸಲಾತಿ ನೀಡುವುದು ಬೇಡ ಎಂದು ಒಂದೇ ಒಂದು ಅರ್ಜಿಯೂ ಬಂದಿಲ್ಲ. ಈಗ ಒಬಿಸಿ ಪಟ್ಟಿಯಲ್ಲಿರುವ ಉಳಿದ ಯಾವ ಸಮುದಾಯಗಳೂ ಕೂಡಾ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ವಿರೋಧಿಸಿಲ್ಲ” ಎಂದು ಕೆಲ ತಿಂಗಳ ಹಿಂದೆ ಗಾಯಕ್‌ವಾಡ್‌ ಹೇಳಿದ್ದರು.