ಅವಿಶ್ವಾಸ ಮತವೂ ಬಿತ್ತು, ರೂಪಾಯಿಯೂ ಬಿತ್ತು; ಸೂಲಿಬೆಲೆ, ನಳಿನ್ ಈಗೇನಂತಾರೆ?
ಸುದ್ದಿ ಸಾಗರ

ಅವಿಶ್ವಾಸ ಮತವೂ ಬಿತ್ತು, ರೂಪಾಯಿಯೂ ಬಿತ್ತು; ಸೂಲಿಬೆಲೆ, ನಳಿನ್ ಈಗೇನಂತಾರೆ?

ಎರಡು ವರ್ಷದ ಹಿಂದೆ, ‘ಮುಂದಿನ ಎರಡು ವರ್ಷಗಳಲ್ಲಿ 1 ರೂಪಾಯಿ ಮೌಲ್ಯ15 ಡಾಲರ್‌ ಆಗುತ್ತದೆ’ ಎಂದಿದ್ದರು ಸಂಸದ ನಳಿನ್‌ ಕುಮಾರ್ ಕಟೀಲ್. ಇವತ್ತಿನ ರೂಪಾಯಿ ಮೌಲ್ಯ ಒಂದು ಡಾಲರ್‌ಗೆ 69.13 ರೂ!

ಇದೆಲ್ಲಾ ಎರಡು ವರ್ಷದ ಹಿಂದಿನ ಕಥೆ. ಅನಾಣ್ಯೀಕರಣ ಘೋಷಣೆಯಾಗಿ ಕೆಲವು ತಿಂಗಳು ಕಳೆದಿತ್ತಷ್ಟೇ. ಕೇರಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದಕ್ಷಿಣ ಕನ್ನಡದ ಸಂಸದ, ಬಿಜೆಪಿಯ ನಳಿನ್ ಕುಮಾರ್‌ ಕಟೀಲ್‌ ಅಲ್ಲಿಗೆ ತೆರಳಿದ್ದರು. ಆ ಕಾರ್ಯಕ್ರಮದಲ್ಲಿ ಮಲಯಾಳಿಗಳ ಮುಂದೆ ಭಾಷಣಕ್ಕೆ ನಿಂತ ನಳಿನ್‌ ತಮ್ಮ ಎಂದಿನ ದಾಟಿಯಲ್ಲಿ ಅನಾಣ್ಯೀಕರಣವನ್ನು ಹಾಡಿ ಹೊಗಳಿದರು. ‘ಮುಂದಿನ ಎರಡು ವರ್ಷಗಳಲ್ಲಿ 1 ಡಾಲರ್‌ಗೆ 15 ರೂಪಾಯಿ ಆಗಲಿದೆ’ ಎಂದರು. ನಂತರ ತಮ್ಮ ಮಾತನ್ನು ಪುನಃ ತಿದ್ದಿ, ‘1 ರೂಪಾಯಿಗೆ 15 ಡಾಲರ್‌ ಆಗುತ್ತದೆ’ ಎಂದರು. ಅವತ್ತು ಅಲ್ಲಿದ್ದವರು ಅದನ್ನು ಕೇಳಿ ಚಪ್ಪಾಳೆಯನ್ನೇನೋ ತಟ್ಟಿದರು.

ಇದೆಲ್ಲಾ ಕಳೆದು ಇವತ್ತಿಗೆ ಎರಡು ವರ್ಷ ಸಮೀಪಿಸುತ್ತಾ ಬಂದಿದೆ. ಅವರು ಹೇಳಿದ ಅವಧಿ ಮುಗಿಯುತ್ತಾ ಬಂದಿದೆ. ಇನ್ನೇನು ಮೂರು ತಿಂಗಳು ಕಳೆದರೆ ನವೆಂಬರ್ 8 ಬರುತ್ತದೆ. ಇದೇ ಹೊತ್ತಲ್ಲಿ ಕಂಡು ಕೇಳರಿಯದ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿತವಾಗಿದೆ. ರೂಪಾಯಿಗೆ 15 ಡಾಲರ್ ಮಾತನ್ನು ಪಕ್ಕಕ್ಕಿಡಿ; ಸದ್ಯದಲ್ಲೇ ಡಾಲರ್‌ಗೆ ರೂಪಾಯಿ ಮೌಲ್ಯ 70ರ ಗಡಿಯನ್ನೂ ದಾಟಿ ಸಾಗುವ ಸೂಚನೆಗಳು ಕಾಣಿಸುತ್ತಿವೆ.

ಜೂನ್ 28ರಂದು ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ, ಡಾಲರ್‌ಗೆ 69.10 ರೂ.ಗೆ ಬಂದು ನಿಂತಿತ್ತು. ಶುಕ್ರವಾರದ ವಹಿವಾಟಿನ ಆ ದಾಖಲೆಯನ್ನೂ ಮುರಿದಿರುವ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಡಾಲರ್ ಒಂದಕ್ಕೆ 69.13 ರೂಪಾಯಿಗೆ ದೇಶದ ಕರೆನ್ಸಿ ದರ ಇಳಿಕೆಯಾಗಿದೆ. ರೂಪಾಯಿ ಮೌಲ್ಯ ಕುಸಿತ ತಡೆಗಟ್ಟಲು ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಏನೇ ತಿಪ್ಪರಲಾಗ ಹಾಕಿದರೂ ಸ್ಪರ್ಧೆಗೆ ಬಿದ್ದಂತೆ ರೂಪಾಯಿ ಮೌಲ್ಯ ಮಾತ್ರ ಇಳಿಯುತ್ತಲೇ ಇದೆ.

ಬಿದ್ದ ರೂಪಾಯಿ, ಬದಲಾದ ಹೇಳಿಕೆ

ಹಾಗೆ ನೋಡಿದರೆ ರೂಪಾಯಿ ಫೀನಿಕ್ಸ್‌ನಂತೆ ಎದ್ದು ನಿಲ್ಲುತ್ತದೆ ಎಂಬರ್ಥದ ‘ಜೋಕ್‌’ಗಳನ್ನು ನಳಿನ್ ಕುಮಾರ್ ಕಟೀಲ್ ಮಾತ್ರವೇ ಹೇಳಿರಲಿಲ್ಲ. ಕರ್ನಾಟಕದಲ್ಲಿ ಸುತ್ತಾಡುವ ‘ಭಾಷಣ’ಕಾರ ಚಕ್ರವರ್ತಿ ಸೂಲಿಬೆಲೆಯೂ ಇಂಥಹದ್ದೇ ಸುಳ್ಳು ಲೇಪಿತ ಮಾತುಗಳನ್ನು ಹೇಳಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯೂ 2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಈ ಹಿಂದಿನ ಕಾಂಗ್ರೆಸ್ ಸರಕಾರವನ್ನು ‘ರೂಪಾಯಿ ಅಪಮೌಲ್ಯ’ ವಿಚಾರ ಇಟ್ಟುಕೊಂಟು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ನಾವು ಅಧಿಕಾರಕ್ಕೆ ಬಂದರೆ ರೂಪಾಯಿ ಅಪಮೌಲ್ಯವನ್ನು ತಡೆಗಟ್ಟುತ್ತೇವೆ. ಡಾಲರ್‌ ಎದುರು ರೂಪಾಯಿಯನ್ನು ಬಲಪಡಿಸುತ್ತೇವೆ ಎಂದು ಹೇಳುತ್ತಲೇ ಅಧಿಕಾರಕ್ಕೇ ಬಂದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರಿ ನಾಲ್ಕು ವರ್ಷಗಳು ಕಳೆದಿವೆ. ನಾಲ್ಕು ವರ್ಷದ ಅಂತ್ಯಕ್ಕೆ ಜನರು, ವಿರೋಧ ಪಕ್ಷಗಳು, ಒಂದಷ್ಟು ಸ್ವಪಕ್ಷೀಯರಲ್ಲೂ ಭ್ರಮನಿರಸನದ ಛಾಯೆ ಆವರಿಸಿಕೊಂಡಿದೆ. ಇವೆಲ್ಲದರ ಒಟ್ಟು ಪರಿಣಾಮವೇ ಮೋದಿ ನೇತೃತ್ವದ ಸರಕಾರದ ವಿರುದ್ಧ ಶುಕ್ರವಾರ ಮಂಡನೆಯಾದ ‘ಅವಿಶ್ವಾಸ ನಿರ್ಣಯ’. ಆದರೆ ಅಗತ್ಯ ಸಂಖ್ಯಾ ಬಲವಿಲ್ಲದೇ ಅವಿಶ್ವಾಸ ನಿರ್ಣಯ ಬಿದ್ದು ಹೋಗಿದೆ. ಸರಕಾರ ಮತ್ತೆ ಮುಂದುವರಿದಿದೆ.

ಅವಿಶ್ವಾಸ ನಿರ್ಣಯದ ಜತೆ ಜತೆಗೇ 2014ರ ಚುನಾವಣೆಗೂ ಮೊದಲೇ ಮೋದಿ ಹೇಳಿದ್ದ ಮಾತುಗಳೂ ಬಿದ್ದು ಹೋಗಿವೆ. ಕೆಲವು ದಿನಗಳ ಹಿಂದೆ ಮಾತನಾಡಿದ್ದ ಅವರದ್ದೇ ಸಂಪುಟದ ಸಚಿವ ಪಿಯೂಷ್ ಗೋಯಲ್, “ದೀರ್ಘ ಕಾಲದಿಂದ ರೂಪಾಯಿ ಸ್ಥಿರವಾಗಿದೆ. ನಮ್ಮ ವಿಕೆಟ್‌ ಭದ್ರವಾಗಿದೆ ರೂಪಾಯಿ ಸ್ಥಿರವಾಗಿಟ್ಟಿದ್ದೇ ನಮ್ಮ ಸಾಧನೆ” ಎಂದು ಚುನಾವಣೆಗೂ ಮೊದಲೇ ನೀಡಿದ್ದ ಭರವಸೆಗಳನ್ನು ತಿರುಚಿದ್ದರು.

ಕೊನೆಗೊಮ್ಮೆ ಅವರ ಬದಲಾದ ಮಾತೂ ಉಳಿಯುತ್ತಿಲ್ಲ. ರೂಪಾಯಿ ಮತ್ತಷ್ಟು ಮೌಲ್ಯ ಕಳೆದುಕೊಳ್ಳುತ್ತಲೇ ಸಾಗಿದೆ. ಮೋದಿ ಮೌನಕ್ಕೆ ಜಾರಿದ್ದಾರೆ. ಅವರ ಅಂಧ ಅನುಯಾಯಿಗಳಾಗಿ ಕರ್ನಾಟಕ ಸುತ್ತಿ ಜನರ ತಲೆಯಲ್ಲಿ ಹುಳ ಬಿಟ್ಟ ಸೂಲಿಬೆಲೆ ಮತ್ತು ನಳಿನ್ ಈಗ ಏನನ್ನುತ್ತಾರೆ?