ಕರ್ನಾಟಕದಿಂದ ಪ.ಬಂಗಾಳದವರೆಗೆ; ಸತ್ತವರೆಲ್ಲರೂ ಬಿಜೆಪಿ ಪಾಲಿಗೆ ‘ಹುತಾತ್ಮ’ರು!
ಸುದ್ದಿ ಸಾಗರ

ಕರ್ನಾಟಕದಿಂದ ಪ.ಬಂಗಾಳದವರೆಗೆ; ಸತ್ತವರೆಲ್ಲರೂ ಬಿಜೆಪಿ ಪಾಲಿಗೆ ‘ಹುತಾತ್ಮ’ರು!

“ನನ್ನ ಮಗ ಮತ್ತು ಗಂಡ ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ. ಅಪಘಾತವೊಂದು ನಡೆದ ನಂತರದ ಸಂಘರ್ಷದಲ್ಲಿ ಅವರು ಸಾವನ್ನಪ್ಪಿದ್ದಾರೆ. ಇದು ರಾಜಕೀಯ ಕೊಲೆಯಲ್ಲ” - ಫುಲ್‌ಬೋರಿ ದೇವಿ.

2018ರ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ‘ಹಿಂದೂ ಕಾರ್ಯಕರ್ತರ ಹತ್ಯೆ’ ಎಂಬ ಪದ ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಇದರಿಂದ ರಾಜಕೀಯವಾಗಿ ಯಾರು ಲಾಭ ಪಡೆದುಕೊಂಡರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದೇ ಮಾದರಿಯನ್ನು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮುಂದುವರಿಸಲು ಹೊರಟಂತೆ ಕಾಣಿಸುತ್ತಿದೆ. ಅದಕ್ಕೆ ಈ ಕೆಳಗಿನ ಘಟನೆಗಳೇ ಸಾಕ್ಷಿ.

ಬೆಂಗಳೂರಿನಲ್ಲಿ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ನಲಪಾಡ್‌ ಹ್ಯಾರಿಸ್ ವಿಧ್ವತ್‌ ಮೇಲೆ ಹಲ್ಲೆ ನಡೆಸಿದ ದಿನಗಳವು. ಈ ಸಂದರ್ಭದಲ್ಲಿ ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೈಕಂಬದಲ್ಲಿ ಭಾಷಣಕ್ಕೆ ನಿಂತಿದ್ದರು. ಶಾಸಕರೊಬ್ಬರ ಪುತ್ರ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಯೇ ಬಿಟ್ಟರು. ನಂತರ ತಮ್ಮ ಮಾತನ್ನು ಅವರು ಸರಿ ಪಡಿಸಿಕೊಂಡರು ಎಂಬುದು ಬೇರೆ ಮಾತು. ಇದೊಂದೇ ಅಲ್ಲ. ಈ ರೀತಿ ಹಲವು ಘಟನೆಗಳು ನಡೆದವು.

ಉತ್ತರ ಕನ್ನಡದ ಹೊನ್ನಾವರದಲ್ಲಿ ಸಾವಿಗೀಡಾದ ಪರೇಶ್ ಮೇಸ್ತನನ್ನು ತಮ್ಮ ಕಾರ್ಯಕರ್ತ ಎಂದು ಬಿಜೆಪಿ ಪ್ರತಿಪಾದಿಸಿದರೆ, ಆತನ ತಂದೆ ಇದನ್ನು ನಿರಾಕರಿಸಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಮಂಗಳೂರಿನ ಕುತ್ತಾರಿನ ಕಾರ್ತಿಕ್ ರಾಜ್ ಸತ್ತಾಗ ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುವ ಮಾತನಾಡಿದ್ದರು ಸಂಸದ ನಳಿನ್‌ ಕುಮಾರ್ ಕಟೀಲ್. ನಂತರ ಆತನ ತಂಗಿಯೇ ಪ್ರಕರಣದಲ್ಲಿ ಬಂಧಿತಳಾಗಿದ್ದಳು (ಮುಂದೆ ಸೂಕ್ತ ಸಾಕ್ಷ್ಯಗಳಿಲ್ಲದೆ ತಂಗಿಯನ್ನು ಕೋರ್ಟ್‌ ಖುಲಾಸೆಗೊಳಿಸಿತ್ತು).

ಇಷ್ಟೆಲ್ಲಾ ಗೊತ್ತಿದ್ದು ಇವರ ಹೆಸರನ್ನು ಚುನಾವಣೆಯಲ್ಲಿ ಬಿಜೆಪಿ ಪರಿಣಾಮಕಾರಿಯಾಗಿಯೇ ಬಳಸಿಕೊಂಡಿತು. ಕರ್ನಾಟಕದಲ್ಲಿ ಚುನಾವಣೆಗೆ ಮೊದಲು ನಡೆಯುತ್ತಿದ್ದ ಈ ಸೋಕಾಲ್ಡ್‌ ಹಿಂದೂ ಕಾರ್ಯಕರ್ತರ ಕೊಲೆಗಳು ಚುನಾವಣೆ ಮುಗಿಯುತ್ತಿದ್ದಂತೆ ನಿಂತು ಹೋಗಿರುವುದನ್ನೂ ಇಲ್ಲಿ ಗಮನಿಸಬಹುದು. ಇದೀಗ 2019ರ ಲೋಕಸಭೆ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಹೆಣಗಳು ಬೀಳಲು ಆರಂಭವಾಗಿದೆ. ಕರ್ನಾಟಕದಂತೆ ಅಲ್ಲೂ ಅವನು ‘ನಮ್ಮ ಕಾರ್ಯಕರ್ತ’ ಎಂದು ಘೋಷಿಸುವ ಪರಿಪಾಠವನ್ನು ಬಿಜೆಪಿ ಆರಂಭಿಸಿದೆ. ಅದರಲ್ಲಿ ಮೊದಲ ಪ್ರಕರಣದ ಸುಳ್ಳನ್ನು ಬಿಚ್ಚಿಟ್ಟಿದೆ ‘ದಿ ಕ್ವಿಂಟ್’.

ವೈಯಕ್ತಿಕ ಸಂಘರ್ಷ ಬಿಜೆಪಿಗೆ ‘ರಾಜಕೀಯ ಹತ್ಯೆ’

ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಕೊಲೆಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಜುಲೈ 11ರಂದು ಟ್ಟೀಟ್ ಮಾಡಿತ್ತು. “27 ವರ್ಷದ ದೀಪಕ್‌ ಮಹತೋ ಮತ್ತು ಅವರ ತಂದೆ 52 ವರ್ಷದ ಲಾಲ್‌ಮೋಹನ್ ಮಹತೋರನ್ನು ಟಿಎಂಸಿ ಗೂಂಡಾಗಳು ಕೊಲೆ ಮಾಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 27 ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದು ಇದರಲ್ಲಿ 5 ಜನ ಪುರುಲಿಯಾದವರಾಗಿದ್ದಾರೆ. ಟಿಎಂಸಿ ರಕ್ತದಾಹಿ ದುಷ್ಟ ಶಕ್ತಿಯಾಗಿದ್ದು ಪುರುಲಿಯಾ ಮತ್ತು ಪಶ್ಚಿಮ ಬಂಗಾಳವನ್ನು ನರಕವಾಗಿಸಿದೆ,” ಎಂದು ಬಿಜೆಪಿ ತನ್ನ ಟ್ಟೀಟ್‌ನಲ್ಲಿ ಹೇಳಿತ್ತು.

ಆದರೆ, ‘ದಿ ಕ್ವಿಂಟ್‌’ಗೆ ಪ್ರತಿಕ್ರಿಯೆ ನೀಡಿರುವ ಫುಲ್‌ಬೋರಿ ದೇವಿ, “ನನ್ನ ಮಗ ಮತ್ತು ಗಂಡ ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ. ಅಪಘಾತವೊಂದು ನಡೆದ ನಂತರದ ಸಂಘರ್ಷದಲ್ಲಿ ಅವರು ಸಾವನ್ನಪ್ಪಿದ್ದಾರೆ. ಇದು ರಾಜಕೀಯ ಕೊಲೆಯಲ್ಲ,” ಎಂದಿದ್ದಾರೆ. ಈ ಮೂಲಕ ಬಿಜೆಪಿಯ ವಾದವನ್ನು ಅವರು ತಳ್ಳಿ ಹಾಕಿದ್ದಾರೆ.

ಜುಲೈ 11ರಂದು ಪುರಿಲಿಯಾದ ತುರುಹುಲು ಎಂಬಲ್ಲಿ ಅವರಿಬ್ಬರನ್ನು ಕೊಲೆ ಮಾಡಲಾಗಿತ್ತು. ಇದಾಗಿ ಸ್ವಲ್ಪ ಹೊತ್ತಿಗೆ ಅವರಿಬ್ಬರು ಬಿಜೆಪಿಯ ‘ಒಬಿಸಿ ಘಟಕ’ದ ಕಾರ್ಯಕರ್ತರು ಎಂಬ ಸುದ್ದಿ ಹರಡಲು ಆರಂಭಿಸಿತ್ತು. ಇದರ ಹಿಂದೆ ಬಿಜೆಪಿಯ ಐಟಿ ಘಟಕ ಕೆಲಸ ಮಾಡಿತ್ತು. ಅಷ್ಟೇ ಅಲ್ಲ, ‘ಅವರಿಬ್ಬರು ತಮ್ಮ ಪಂಚಾಯತ್‌ನಲ್ಲಿ ಹಂಚಿಕೆಯಾಗುತ್ತಿದ್ದ ಮನಿಕೇಟ್‌ ಅಕ್ಕಿಯಲ್ಲಿ ಟಿಎಂಸಿ ನಡೆಸುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುತ್ತಿದ್ದರು’ ಎಂಬುದಾಗಿ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್ ಟ್ಟೀಟ್ ಮಾಡಿದ್ದರು.

ಆದರೆ ಈ ವಾದವನ್ನು ತಳ್ಳಿ ಹಾಕುತ್ತಾರೆ ಅವರ ಕುಟುಂಬಸ್ಥರು. ತಂದೆ ಮಗ ಇಬ್ಬರೂ ಸಣ್ಣ ಸಾರಿಗೆ ಉದ್ಯಮ ನಡೆಸುತ್ತಿದ್ದರು. ಜುಲೈ 11ರಂದು ಅವರು ಸ್ಥಳೀಯ ಕಾರ್ಯಕ್ರಮವೊಂದಕ್ಕೆ ಕುರ್ಚಿ, ಪೆಂಡಾಲ್‌ಗಳನ್ನು ತಮ್ಮ ವಾಹನದಲ್ಲಿ ಪೇರಿಸಿಕೊಂಡು ಪುರುಲಿಯಾದಿಂದ ವಾಪಸ್‌ ಬರುತ್ತಿದ್ದರು. ಈ ಸಂದರ್ಭದಲ್ಲಿ ಅವರ ಸಣ್ಣ ಟೆಂಪೋ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿಯಾದ ವಾಹನದಲ್ಲಿದ್ದ ನಾಲ್ವರು ಈ ಸಂದರ್ಭ ಬಂದು ತಂದೆ ಮಗನ ಮೇಲೆ ದಾಳಿ ನಡೆಸಿ ಅವರನ್ನು ಕೊಲೆ ಮಾಡಿದ್ದರು ಎನ್ನುತ್ತಾರೆ ಕುಟುಂಬದವರು.

ಸಾಯುವ ಮೊದಲು ತಂದೆ ಮಗ ಇಳಿಸಿ ಹೋಗಿದ್ದ ಪೆಂಡಾಲ್, ಕುರ್ಚಿ
ಸಾಯುವ ಮೊದಲು ತಂದೆ ಮಗ ಇಳಿಸಿ ಹೋಗಿದ್ದ ಪೆಂಡಾಲ್, ಕುರ್ಚಿ
ಚಿತ್ರ ಕೃಪೆ: ದಿ ಕ್ವಿಂಟ್

ದೀಪಕ್ ಮತ್ತು ಲಾಲ್‌ಮೋಹನ್ ತೀರಾ ಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದು ಇಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿದ್ದಾರೆ. ಇದೇ ಕಾರಣಕ್ಕೋ ಏನೋ ಕುಟುಂಬದವರ ಹತ್ಯೆ ನಡೆದರೂ ಪೊಲೀಸರಿಗೆ ದೂರು ನೀಡಿಲ್ಲ. “ಏನು ನಡೆಯಿತು ಅದು ನಡೆದಾಗಿದೆ. ಜನರು ಇದನ್ನು ರಾಜಕೀಯ ಹತ್ಯೆ ಎಂದು ಕರೆದರೆ ನಾವೇನೂ ಮಾಡಲಾಗುವುದಿಲ್ಲ. ನಾವು ಇದರಲ್ಲಿ ಪಾಲ್ಗೊಳ್ಳುವುದಿಲ್ಲ,” ಎನ್ನುತ್ತಾರೆ ದೀಪಕ್‌ ಸಹೋದರ.

ಲೆಕ್ಕ ತಪ್ಪಿದ ಬಿಜೆಪಿ

ಇತ್ತೀಚೆಗೆ ಇದೇ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿತ್ತು. ಈ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪುರುಲಿಯಾದಲ್ಲಿ 5 ಕೊಲೆಗಳ ನಡೆದಿವೆ ಎನ್ನುತ್ತಿದೆ ಬಿಜೆಪಿ. ಒಂದೊಮ್ಮೆ ಈ ಅಂಕಿ ಅಂಶಗಳನ್ನೇ ನಂಬುವುದಾದರೆ, ಇವರಲ್ಲಿ ಇಬ್ಬರು ರಾಜಕೀಯ ಕಾರಣಗಳಿಗೆ ಸತ್ತಿಲ್ಲ ಎಂಬುದನ್ನು ಅವರ ಕುಟುಂಬಸ್ಥರೇ ಹೇಳಿದ್ದಾರೆ.

“ಅವರಿಬ್ಬರು ಬಿಜೆಪಿಗೆ ಮತ ಹಾಕಿದ್ದಾರೆ ನಿಜ. ಆದರೆ ಅವರು ಅದಕ್ಕಿಂತ ಹೆಚ್ಚಿನದೇನನ್ನೂ ಮಾಡಿರಲಿಲ್ಲ. ಗ್ರಾಮದಲ್ಲಿರುವ ಎಲ್ಲರೂ ಮತಹಾಕುತ್ತಾರೆ, ಎಲ್ಲವೂ ರಾಜಕೀಯವೇ. ಆದರೆ ಕೊಲೆ ಮಾಡುವಷ್ಟು ರಾಜಕೀಯದಲ್ಲಿ ಅವರು ಪಾಲ್ಗೊಂಡಿರಲಿಲ್ಲ. ಇದರಲ್ಲಿ ಟಿಎಂಸಿಯ ಪಾತ್ರ ಏನೂ ಇಲ್ಲ,” ಎನ್ನುವುದು ದೀಪಕ್‌ ಮಹತೋ ಸಹೋದರಿಯ ಅಭಿಪ್ರಾಯ.

ಅವರ ಕುಟುಂಬಸ್ಥರೇ ಹೀಗೆ ಹೇಳಿದ ಮೇಲೆ ಬಿಜೆಪಿಯ ಪ್ರತಿಕ್ರಿಯೆ ಏನಿರಬಹುದು ಎಂಬುದು ಕುತೂಹಲ ಹುಟ್ಟಿಸಿದೆ.

ಆಗಸ್ಟ್‌ 15ರಿಂದ ‘ಬಿಜೆಪಿ ಹಟಾವೋ, ದೇಶ ಬಚಾವೋ’ ಆಂದೋಲನ ಆರಂಭಿಸಲಿದ್ದೇವೆ.
- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ