samachara
www.samachara.com
ಫೋರ್ಟಿಸ್‌ ಮೇಲೆ 4 ಸಾವಿರ ಕೋಟಿ ಹೂಡಿದ ಐಎಚ್‌ಎಚ್; ಸುಧಾರಣೆ ಕಾಣದ ‘ಆರೋಗ್ಯ’
ಸುದ್ದಿ ಸಾಗರ

ಫೋರ್ಟಿಸ್‌ ಮೇಲೆ 4 ಸಾವಿರ ಕೋಟಿ ಹೂಡಿದ ಐಎಚ್‌ಎಚ್; ಸುಧಾರಣೆ ಕಾಣದ ‘ಆರೋಗ್ಯ’

ಒಂದು ಕಡೆ ರಾತೋರಾತ್ರಿ 23 ಮಕ್ಕಳನ್ನು ಬಲಿ ತೆಗೆದುಕೊಂಡ ಗೋರಖಪುರ ಆಸ್ಪತ್ರೆ, ಇನ್ನೊಂದು ಕಡೆ ಡೆಂಗ್ಯೂ ಚಿಕಿತ್ಸೆಗೆ 18 ಲಕ್ಷ ಬಿಲ್ ನೀಡಿದ ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆ ಇವೆರಡರ ಮಧ್ಯದಲ್ಲಿ ದೇಶದ ಬಡ ಜನರು ನಿಂತಿದ್ದಾರೆ.

ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರ ಉದ್ಯಮದ ಸ್ವರೂಪ ಪಡೆದು ಬಹಳ ವರ್ಷಗಳೇ ಕಳೆದಿವೆ. ಇದೀಗ ಅದರ ಮುಂದುವರಿದ ಭಾಗ ಎಂಬಂತೆ ಸಾವಿರಾರು ಕೋಟಿ ಹೂಡಿಕೆ, ಮಾರಾಟ ಮುಂತಾದ ಪೂರ್ಣ ಪ್ರಮಾಣದ ಉದ್ಯಮದ ಪ್ರಕ್ರಿಯೆಗಳು ಚಾಲ್ತಿಗೆ ಬಂದಿವೆ.

ದೇಶದ ಕಾರ್ಪೊರೇಟ್ ಸರಣಿ ಆಸ್ಪತ್ರೆಗಳ ಕಂಪನಿ ಫೋರ್ಟಿಸ್‌ ಹೆಲ್ತ್‌ಕೇರ್ ಲಿಮಿಟೆಡ್‌ನಲ್ಲಿ ಮಲೇಷ್ಯಾ-ಸಿಂಗಾಪುರ ಮೂಲದ ಐಎಚ್ಎಚ್ ಹೆಲ್ತ್‌ಕೇರ್ ಬರೋಬ್ಬರಿ 4,000 ಕೋಟಿಯಿಂದ 7,400 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದೆ. ಈ ಮೂಲಕ ಪೂರ್ಣ ಕಂಪನಿಯನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ.

ದೇಶದ ಎರಡನೇ ಅತೀ ದೊಡ್ಡ ಆಸ್ಪತ್ರೆಗಳ ಸಂಸ್ಥೆ ಪೋರ್ಟಿಸ್‌ನ ಪ್ರತಿ ಷೇರಿಗೆ 170 ರೂಪಾಯಿ ನೀಡಿ ಐಎಚ್ಎಚ್ ಹೆಲ್ತ್‌ಕೇರ್ ಖರೀದಿ ಮಾಡಲಿದೆ. ಈ ಹಿಂದೆ ಮಣಿಪಾಲ್ ಹಾಸ್ಪಿಟಲ್ಸ್ ಸಂಸ್ಥೆ ಮತ್ತು ಅಮೆರಿಕಾದ ಹೂಡಿಕೆ ಸಂಸ್ಥೆ ಟಿಪಿಜಿ ಒಟ್ಟಾಗಿ ಫೋರ್ಟಿಸ್ ಶೇರುಗಳ ಖರೀದಿಗೆ ಮುಂದೆ ಬಂದಿದ್ದವು. ಇಬ್ಬರೂ ಜೊತೆಯಾಗಿ ಪ್ರತೀ ಷೇರಿಗೆ 160 ರೂಪಾಯಿ ನೀಡುವುದಾಗಿ ಹೇಳಿದ್ದವು. ಆದರೆ ಈ ಆಫರ್ ತಿರಸ್ಕರಿಸಿ ಐಎಚ್‌ಎಚ್ ಆಫರನ್ನು ಫೋರ್ಟಿಸ್ ಒಪ್ಪಿಕೊಂಡಿದೆ.

ಐಎಚ್ಎಚ್ ಜಗತ್ತಿನಲ್ಲೇ ಎರಡನೇ ಅತೀ ದೊಡ್ಡ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಯಾಗಿದೆ. ಇದು 9 ದೇಶಗಳಲ್ಲಿ 49 ಆಸ್ಪತ್ರೆಗಳನ್ನು ಹೊಂದಿದ್ದು, ಇದೀಗ ಭಾರತಕ್ಕೂ ಕಾಲಿಟ್ಟಿದೆ. ದೇಶದಲ್ಲಿ ಮತ್ತು ವಿದೇಶಗಳಲ್ಲಿ 34 ಆಸ್ಪತ್ರೆಗಳನ್ನು ಹೊಂದಿರುವ ಫೋರ್ಟಿಸ್ ಕಂಪನಿಯ ಮೂಲಕ ತನ್ನ ಜಾಲವನ್ನು ಅದು ಮತ್ತಷ್ಟು ವಿಸ್ತರಿಸಿಕೊಂಡಿದೆ. ಒಟ್ಟಾರೆ 4,600 ಬೆಡ್‌ಗಳ ಸಾಮರ್ಥ್ಯದ ಆಸ್ಪತ್ರೆಗಳು ಫೋರ್ಟಿಸ್ ಬಳಿ ಇದ್ದು, 2,600 ವೈದ್ಯರು ಮತ್ತು 13,200 ಸಹಾಯಕ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಒಟ್ಟು ಕನಿಷ್ಠ 31.1 ರಿಂದ ಗರಿಷ್ಠ 57.1 ಫೋರ್ಟಿಸ್‌ನ ಈಕ್ವಿಟಿ ಶೇರುಗಳನ್ನು ಐಎಚ್ಎಚ್ ಖರೀದಿಸಲಿದೆ. ಮುಖ್ಯವಾಗಿ ಶೇಕಡಾ 26 ಶೇರುದಾರರು ಹಣ ಪಡೆದುಕೊಂಡು ತಮ್ಮ ಪಾಲಿನ ಶೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದು ಇವರಿಗೆ ಹಣದ ರೂಪದಲ್ಲೇ ಕಂಪನಿ ಪಾವತಿ ಮಾಡಲಿದೆ. ಇದೊಂದೇ ಕಾರಣಕ್ಕೆ ಕನಿಷ್ಠ 3,300 ಕೋಟಿ ರೂಪಾಯಿಯನ್ನು ಸಿಂಗಾಪುರ ಮತ್ತು ಮಲೇಷ್ಯಾ ಮೂಲದ ಕಂಪನಿ ಹೂಡಿಕೆ ಮಾಡಬೇಕಿದೆ. ಐಎಚ್ಎಚ್ ಹೂಡಿಕೆಯ ನಂತರ ಫೋರ್ಟಿಸ್ ಕಂಪನಿಯ ಮೌಲ್ಯ 8,880 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ.

ಆರೋಗ್ಯ ಕ್ಷೇತ್ರದ ನಾಗಾಲೋಟ

ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೀಗೆ 4 ಸಾವಿರ, 7 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯ ಮಾತು ಕೇಳಿ ಬರುತ್ತಿರುವುದು ಸಹಜವಾಗಿಯೇ ಬೆರಗು ಮುಡಿಸಿದೆ. ಇದೇ ವೇಳೆ ಒಂದು ಕಾಲದಲ್ಲಿ ಸೇವಾ ಕ್ಷೇತ್ರವಾಗಿದ್ದ ಆರೋಗ್ಯ ಉದ್ಯಮವಾಗಿ ಬೆಳೆದು ನಿಂತಿರುವ ಎತ್ತರವನ್ನೂ ತೆರೆದಿಡುತ್ತಿದೆ. ಇದಕ್ಕೆ ಪರೋಕ್ಷವಾಗಿ ಸರಕಾರವೇ ಕಾರಣವಾಗಿದೆ. ದೇಶದಲ್ಲಿ ಸರಕಾರಗಳು ಸಾರ್ವಜನಿಕ ಆರೋಗ್ಯದ ಮೇಲೆ ವರ್ಷದಿಂದ ವರ್ಷಕ್ಕೆ ಕನಿಷ್ಠ ಪ್ರಮಾಣದ ಖರ್ಚುಗಳನ್ನು ಮಾಡುತ್ತಾ ಬಂದಿರುವ ಪರಿಣಾಮ ಖಾಸಗಿ ಆರೋಗ್ಯ ಕ್ಷೇತ್ರ ನಾಗಾಲೋಟದಿಂದ ಬೆಳೆಯುತ್ತಿದೆ.

ತಲಾ 10,000 ಜನರಿಗೆ ಇರುವ ಬೆಡ್‌ಗಳ ಸಂಖ್ಯೆ. ಭಾರತ ಕೊನೆಯ ಸ್ಥಾನದಲ್ಲಿದೆ.
ತಲಾ 10,000 ಜನರಿಗೆ ಇರುವ ಬೆಡ್‌ಗಳ ಸಂಖ್ಯೆ. ಭಾರತ ಕೊನೆಯ ಸ್ಥಾನದಲ್ಲಿದೆ.

2012ರಿಂದ 2017ರ ನಡುವಿನ 5 ವರ್ಷಗಳಲ್ಲಿ ದೇಶದ ಪ್ರಮುಖ 5 ಆರೋಗ್ಯ ಸಂಸ್ಥೆಗಳ ಲಾಭ ಶೇಕಡಾ 80 ರಷ್ಟು ಏರಿಕೆಯಾಗಿದೆ. ಪರಿಣಾಮ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲಾಭ ಕಾಣುತ್ತಿರುವ ಉದ್ಯಮದ ಮೇಲೆ 2007 ರಿಂದ 2017 ರವರೆಗಿನ 10 ವರ್ಷಗಳ ಅವಧಿಯಲ್ಲಿ 3.4 ಬಿಲಿಯನ್ ಡಾಲರ್ ಹೂಡಿಕೆಯಾಗಿದೆ. 2000ನೇ ಇಸವಿಯ ನಂತರವಂತೂ ಆರೋಗ್ಯ ಕ್ಷೇತ್ರ ಶೇಕಡಾ 100 ವಿದೇಶಿ ಬಂಡವಾಳ ಹೂಡಿಕೆಗೆ ತೆರೆದುಕೊಂಡ ನಂತರ ಉದ್ಯಮ, ಲಾಭದ ಮಾತುಗಳು ಮತ್ತಷ್ಟು ಪ್ರಬಲವಾಗಿ ಕೇಳಿ ಬರುತ್ತಿವೆ.

ಪೂರಕ ವಾತಾವರಣ

ಉದ್ಯಮಿಗಳಿಗೆ ಪೂರಕವಾಗಿ ದೇಶದಲ್ಲಿ ಪ್ರತಿ 10,000 ಸಾವಿರ ಜನರಿಗೆ ಕೇವಲ 7 ಬೆಡ್‌ಗಳಿವೆ. ಜಗತ್ತಿನಲ್ಲೇ ಇದು ಕನಿಷ್ಠ ಅನುಪಾತ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಇದರಿಂದ ಇಲ್ಲಿ ಮತ್ತಷ್ಟು ಆಸ್ಪತ್ರೆಗಳ ನಿರ್ಮಾಣ ಅಗತ್ಯವಿದೆ. ಅದನ್ನು ಖಾಸಗಿಯವರು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಕಡಿಮೆ ಬೆಲೆಯ ಆಸ್ಪತ್ರೆಗಳ ಬಾಗಿಲು ತಟ್ಟುತ್ತಿದ್ದ ಮಧ್ಯಮ ವರ್ಗದ ಜನರು ಇವತ್ತು ಹೆಲ್ತ್ ಕಾರ್ಡ್, ಇನ್ಶೂರೆನ್ಸ್ ಮೊದಲಾದ ದಾರಿಯಲ್ಲಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳ ಮೆಟ್ಟಿಲು ಹತ್ತುತ್ತಿದ್ದಾರೆ.

ಇನ್ಶೂರೆನ್ಸ್ ಕಂಪನಿಗಳ ದಂಧೆ ಒಂದು ಕಡೆಯಾದರೆ, ಇದಕ್ಕೆ ಪೂರಕವಾಗಿ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಮೊಗೆಯುತ್ತಿವೆ. ಪರಿಣಾಮ ಉದ್ಯಮ ಏರುಗತಿಯಲ್ಲಿದೆ; ಸಾರ್ವಜನಿಕರ ಆರೋಗ್ಯ ವ್ಯವಸ್ಥೆ ಮಾತ್ರ ಕುಸಿಯುತ್ತಿದೆ.

ಒಂದು ಕಡೆ ರಾತೋರಾತ್ರಿ 23 ಜನರನ್ನು ಬಲಿ ತೆಗೆದುಕೊಂಡ ಗೋರಖಪುರ ಆಸ್ಪತ್ರೆ, ಇನ್ನೊಂದು ಕಡೆ ಡೆಂಗ್ಯೂ ಚಿಕಿತ್ಸೆಗೆ 18 ಲಕ್ಷ ಬಿಲ್ ನೀಡಿದ ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆ ಇವೆರಡರ ಮಧ್ಯದಲ್ಲಿ ದೇಶದ ಬಡ ಜನರು ನಿಂತಿದ್ದಾರೆ. ದಾರಿ ತೋರಬೇಕಲಾಗಿದ್ದ ಸರಕಾರಗಳು ಕುರುಡಾಗಿವೆ; ಅಥವಾ ಹಾಗೆ ನಟಿಸುತ್ತಿವೆ.