samachara
www.samachara.com
ಮುಕ್ತ ಹಾಗೂ ಉಚಿತ ಅಂತರ್ಜಾಲ ಸೇವೆ; ನೆಟ್‌ ನ್ಯೂಟ್ರಾಲಿಟಿಗೆ ತೆರೆದುಕೊಂಡ ಭಾರತ
ಸುದ್ದಿ ಸಾಗರ

ಮುಕ್ತ ಹಾಗೂ ಉಚಿತ ಅಂತರ್ಜಾಲ ಸೇವೆ; ನೆಟ್‌ ನ್ಯೂಟ್ರಾಲಿಟಿಗೆ ತೆರೆದುಕೊಂಡ ಭಾರತ

ಟ್ರಾಯ್‌ ಶಿಫಾರಸುಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆ ಅಂಗೀಕರಿಸುವ ಮೂಲಕ ಭಾರತ ಮುಕ್ತ ಹಾಗೂ ಉಚಿತ ಇಂಟರ್‌ನೆಟ್‌ ಸೇವೆಯ ನೆಟ್‌ ನ್ಯೂಟ್ರಾಲಿಟಿಗೆ ತೆರೆದುಕೊಂಡಿದೆ.

ಮುಕ್ತ ಹಾಗೂ ಉಚಿತ ಇಂಟರ್‌ನೆಟ್‌ನ ಮೂಲ ವಾದದ ನೆಟ್‌ ನ್ಯೂಟ್ರಾಲಿಟಿಗೆ ಕೊನೆಗೂ ಭಾರತ ತೆರೆದುಕೊಂಡಿದೆ. ಈ ಸಂಬಂಧ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿದ್ದ ಶಿಫಾರಸುಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆ ಅಂಗೀಕರಿಸಿದೆ.

2017ರ ನವೆಂಬರ್‌ ತಿಂಗಳಲ್ಲಿ ಟ್ರಾಯ್‌ ಸಲ್ಲಿಸಿದ್ದ ಶಿಫಾರಸುಗಳನ್ನು ಕೇಂದ್ರ ದೂರಸಂಪರ್ಕ ಸಚಿವಾಲಯ ಬುಧವಾರ ಅಂಗೀಕರಿಸಿದೆ. ಇದರಿಂದ ನೆಟ್‌ ನ್ಯೂಟ್ರಾಲಿಟಿ ತತ್ವಗಳ ಪರವಾಗಿರುವ ದೇಶಗಳ ಪೈಕಿ ಭಾರತ ಕೂಡಾ ಒಂದಾಗಲಿದೆ.

ಇಂಟರ್‌ನೆಟ್‌ ಸೇವೆಯಲ್ಲಿ ಯಾವುದೇ ರೀತಿಯ ತಾರತಮ್ಯ ಎಸಗಬಾರದು, ಉಚಿತ ಇಂಟರ್‌ನೆಟ್‌ ಸೇವೆ ಕೊಡುವ ಕಂಪೆನಿಗಳು ಹಾಗೂ ಸೇವಾದಾರ ಸಂಸ್ಥೆಗಳು ಯಾವುದೇ ಸೇವೆಗಳ ಮೇಲೆ ನಿಯಂತ್ರಣ ಹೇರಬಾರದು ಎಂದು ಟ್ರಾಯ್‌ ಶಿಫಾರಸು ಮಾಡಿತ್ತು.

ಇಂಟರ್‌ನೆಟ್‌ ಸೇವೆಯಲ್ಲಿ ಕೆಲವನ್ನು ಬ್ಲಾಕ್‌ ಮಾಡುವುದು, ಕೆಲವನ್ನು ಮಾತ್ರ ಆದ್ಯತೆಯಾಗಿಸುವುದು, ಇಂಟರ್‌ನೆಟ್‌ ವೇಗವನ್ನು ತಗ್ಗಿಸುವುದು, ಸೇವೆ ನೀಡುವ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನೆಟ್‌ ನ್ಯೂಟ್ರಾಲಿಟಿ ತತ್ವ ವಿರೋಧಿಸುತ್ತದೆ. ಇಂತಹ ಹಸ್ತಕ್ಷೇಪದಿಂದ ಮುಕ್ತ ಇಂಟರ್‌ನೆಟ್‌ ಸೇವೆಯಿಂದ ಜನಸಾಮಾನ್ಯರು ವಂಚಿತರಾಗಬೇಕಾಗುತ್ತದೆ ಎಂದು ಟ್ರಾಯ್‌ ಹೇಳಿತ್ತು.