samachara
www.samachara.com
‘ರೇಪಿಸ್ತಾನ್ ಟ್ವೀಟ್‌, ಸರಕಾರಿ ನೋಟಿಸ್’: ಕಾಶ್ಮೀರದ ಐಎಎಸ್‌ ಅಧಿಕಾರಿ ವಿರುದ್ಧ ಇಲಾಖಾ ತನಿಖೆ
ಸುದ್ದಿ ಸಾಗರ

‘ರೇಪಿಸ್ತಾನ್ ಟ್ವೀಟ್‌, ಸರಕಾರಿ ನೋಟಿಸ್’: ಕಾಶ್ಮೀರದ ಐಎಎಸ್‌ ಅಧಿಕಾರಿ ವಿರುದ್ಧ ಇಲಾಖಾ ತನಿಖೆ

ಜಮ್ಮು- ಕಾಶ್ಮೀರದ 2010ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ಶಾ ಫೈಸಲ್‌ ವೈಯಕ್ತಿಕ ಟ್ವೀಟ್ ಕಾರಣಕ್ಕೆ ಇಲಾಖಾ ತನಿಖೆ ಎದುರಿಸಬೇಕಾಗಿದೆ. ಇಷ್ಟಕ್ಕೂ ವಿವಾದಕ್ಕೆ ಕಾರಣವೇನು?

ಜಮ್ಮು ಮತ್ತು ಕಾಶ್ಮೀರದ 2010ನೇ ಬ್ಯಾಚ್‌ನ ಐಎಎಸ್‌ ಟಾಪರ್‌ ಶಾ ಫೈಸಲ್‌ ಅತ್ಯಾಚಾರಿಗಳ ಬಗ್ಗೆ ಮಾಡಿರುವ ಟ್ವೀಟ್‌ ಸಂಬಂಧ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಶಿಫಾರಸಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಸರಕಾರ ಫೈಸಲ್‌ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.

“ಸೇವೆಯಲ್ಲಿ ಪ್ರಾಮಾಣಿಕತೆ ಕಾಯ್ದುಕೊಳ್ಳಲು ನೀವು ವಿಫಲರಾಗಿದ್ದೀರಿ ಮತ್ತು ಸರಕಾರಿ ಕೆಲಸದಿಂದ ಬಿಡುಗಡೆಯ ಸಂಬಂಧ ಸರಕಾರಿ ಸಿಬ್ಬಂದಿ ಪಾಲಿಸಬೇಕಾದ ಶಿಸ್ತನ್ನು ನೀವು ಪಾಲಿಸಿಲ್ಲ” ಎಂದು ರಾಜ್ಯ ಆಡಳಿತ ಇಲಾಖೆ ಫೈಸಲ್‌ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.

ಏಪ್ರಿಲ್‌ 23ರಂದು ಫೈಸಲ್‌, ‘ಪುರುಷ ಪ್ರಧಾನ ವ್ಯವಸ್ಥೆ+ ಜನಸಂಖ್ಯೆ+ ಅನಕ್ಷರತೆ+ ಮದ್ಯವ್ಯವಸ+ ಪೋರ್ನ್+ ತಂತ್ರಜ್ಞಾನ+ ಅರಾಜಕತೆ= ರೇಪಿಸ್ತಾನ್‌’ ಎಂದು ಟ್ವೀಟ್‌ ಮಾಡಿದ್ದರು. ಆದರೆ, ಈ ಟ್ವೀಟ್‌ ಹೇಗೆ ಸರಕಾರದ ಸೇವಾ ನಿಮಯಗಳ ಉಲ್ಲಂಘನೆಯಾಗುತ್ತದೆ ಎಂಬುದನ್ನು ನೋಟಿಸ್‌ನಲ್ಲಿ ಸ್ಪಷ್ಟಪಡಿಸಿಲ್ಲ.

ಫೈಸಲ್‌ ಅವರ ಟ್ವೀಟ್‌ಗೆ @p7eiades ಯೂಸರ್‌ ನೇಮ್‌ನಿಂದ ವಿಕಿಪೀಡಿಯಾದಲ್ಲಿರುವ ‘ಪೋರ್ನೊಗ್ರಫಿ ಪರಿಣಾಮಗಳು’ (effects of pornography) ಎಂಬ ವಿಷಯ ಪುಟವನ್ನು ಪ್ರತಿಕ್ರಿಯೆಯಾಗಿ ಟ್ವೀಟ್‌ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಫೈಸಲ್‌ ‘ಸಿದ್ಧಾಂತ ಮತ್ತು ವಾಸ್ತವದ ವ್ಯತ್ಯಾಸ’ ಎಂಬ ಬರಹದೊಂದಿಗೆ, ಗುಜರಾತ್‌ನಲ್ಲಿ ಪೋರ್ನ್‌ ವ್ಯಸನಿಯೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ಮಾಡಿದ್ದ ಎನ್ನಲಾದ ಸುದ್ದಿಯ ಲಿಂಕ್‌ ಅನ್ನು ಟ್ವೀಟ್‌ ಮಾಡಿದ್ದರು.

ಈ ವಿಚಾರಕ್ಕೆ ಸರಕಾರದಿಂದ ಬಂದಿರುವ ನೋಟಿಸ್‌ ಅನ್ನು ಮಂಗಳವಾರ ಟ್ವೀಟ್ ಮಾಡಿರುವ ಫೈಸಲ್‌, “ದಕ್ಷಿಣ ಏಷ್ಯಾದಲ್ಲಿನ ಅತ್ಯಾಚಾರ ಸಂಸ್ಕೃತಿಯನ್ನು ವಿರೋಧಿಸಿ ನಾನು ಮಾಡಿದ್ದ ಟ್ವೀಟ್‌ಗೆ ಮೇಲಾಧಿಕಾರಿಯಿಂದ ಬಂದಿರುವ ಪ್ರೇಮ ಪತ್ರ ಇದು. ಭಾರತದಲ್ಲಿ ವಸಾಹತುಶಾಹಿ ಮನಸ್ಥಿತಿಯ ಸೇವಾ ನಿಯಮ ಬದಲಾಗಬೇಕೆಂಬ ಉದ್ದೇಶದಿಂದ ಈ ಪತ್ರವನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

“ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಗೌರವಿಸದೇ ಇದ್ದರೆ ಎಲ್ಲವೂ ಸೇವಾ ನಿಯಮದಡಿ ತಪ್ಪಾಗಿಯೇ ಕಾಣುತ್ತದೆ. ಇಲ್ಲವಾದರೆ ಸರಕಾರಿ ವ್ಯವಸ್ಥೆಯೊಳಗೆ ಸರಕಾರಿ ಸಿಬ್ಬಂದಿಯ ಸ್ವತಂತ್ರ ಆಲೋಚನೆಗೆ ಬೆಲೆ ಇಲ್ಲದಂತಾಗುತ್ತದೆ” ಎಂದು ಫೈಸಲ್‌ ಹೇಳಿದ್ದಾರೆ.

ಸರಕಾರ ಸೇವಾ ನಿಯಮದಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿರಿಯ ಅಧಿಕಾರಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಮುಂದಾಗುತ್ತಿರುವುದು ಇದೇ ಮೊದಲೇನಲ್ಲ. ಇದೇ ವರ್ಷದ ಫೆಬ್ರುವರಿಯಲ್ಲಿ ಕೇಂದ್ರ ಗೃಹ ಇಲಾಖೆಯು ಐಪಿಎಸ್‌ ಅಧಿಕಾರಿ ಬಸಂತ್‌ ರಥ್‌ ಮಾಡಿದ್ದ ಟ್ವೀಟ್‌ ಬಗ್ಗೆಯೂ ತಕರಾರು ತೆಗೆದಿತ್ತು.

“ಹೆಲ್ಮೆಟ್‌ ಕಾಂಡೋಮ್‌ ಇದ್ದಂತೆ. ಅದನ್ನು ನೀವು ಸರಿಯಾಗಿ ಧರಿಸಿದರೆ ಮಾತ್ರ ಅದು ನಿಮ್ಮನ್ನು ಹಾಗೂ ನಿಮ್ಮ ಪ್ರೀತಿ ಪಾತ್ರರನ್ನು ಕಾಯಬಲ್ಲದು” ಎಂದು ಬಸಂತ್‌ ರಥ್‌ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ ಸೇವಾ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಸರಕಾರ ಬಸಂತ್‌ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿತ್ತು.

“ಸರಕಾರಿ ಅಧಿಕಾರಿಗಳಿಗೆ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಗೆರೆ ಇದೆ. ಆದರೆ, ನಾವು ಏನನ್ನೋ ಹೇಳಿದಾಗ ಅದನ್ನು ವಿವಾದದ ಕಾರಣಕ್ಕೆ ವೃತ್ತಿಯ ಜತೆಗೆ ತಳುಕು ಹಾಕಲಾಗುತ್ತದೆ. ಸರಕಾರಿ ಅಧಿಕಾರಿಗಳನ್ನು ಸರಕಾರಿ, ಸರಕಾರೇತರ ಎಂದು ಎರಡು ಭಾಗ ಮಾಡುವುದು ಸಾಧ್ಯವಿಲ್ಲ” ಎನ್ನುತ್ತಾರೆ ಫೈಸಲ್‌.

ಉಗ್ರರಿಗೆ ನೆಲೆ ನೀಡಲು ನಿರಾಕರಿಸಿದ ಕಾರಣಕ್ಕೆ ಫೈಸಲ್‌ ಅವರ ತಂದೆ ಉಗ್ರರ ಗುಂಡಿಗೆ ಬಲಿಯಾಗಿದ್ದರು. 2010ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಫೈಸಲ್‌ ಪ್ರಥಮ ಸ್ಥಾನ ಪಡೆದಿದ್ದರು. ಫೈಸಲ್‌ ಸದ್ಯ ಕೆಲಸದ ನಡುವೆಯೇ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

“ಬಹುತೇಕ ಸರಕಾರಿ ಸಿಬ್ಬಂದಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದೇ ಇಲ್ಲದಂತಾಗಿದೆ. ಹೀಗಾದಾಗ ಸರಕಾರಿ ವ್ಯವಸ್ಥೆಯನ್ನು ವಿಮರ್ಶಾ ದೃಷ್ಟಿಯಿಂದ ನೋಡುವುದೇ ಸಾಧ್ಯವಾಗುವುದಿಲ್ಲ. ಸರಕಾರ ತನ್ನ ಸಿಬ್ಬಂದಿಯ ವಿಮರ್ಶೆಯನ್ನು ಆರೋಗ್ಯಕರವಾಗಿ ಸ್ವೀಕರಿಸಿ, ಸುಧಾರಣೆಯ ಕಡೆಗೆ ಗಮನ ಹರಿಸಬೇಕು” ಎನ್ನುತ್ತಾರೆ ಫೈಸಲ್‌.