samachara
www.samachara.com
ಮಾದಕ ವ್ಯಸನ ಪಿಡುಗಿಗೆ ಕಡಿವಾಣ; ಏನಿದು ಪಂಜಾಬ್‌ನ ಹೊಸ ನಿಯಮ?
ಸುದ್ದಿ ಸಾಗರ

ಮಾದಕ ವ್ಯಸನ ಪಿಡುಗಿಗೆ ಕಡಿವಾಣ; ಏನಿದು ಪಂಜಾಬ್‌ನ ಹೊಸ ನಿಯಮ?

ಮಾದಕ ದ್ರವ್ಯ ವ್ಯಸನ ಹಾಗೂ ಮಾದಕ ದ್ರವ್ಯ ಕಳ್ಳಸಾಗಣೆ ಪಂಜಾಬ್‌ ಸರಕಾರಕ್ಕೆ ತಲೆ ನೋವಾಗಿದೆ. ಈ ಪಿಡುಗಿಗೆ ಕಡಿವಾಣ ಹಾಕಲು ಹೊಸ ನಿಯಮವನ್ನು ಪಂಜಾಬ್‌ ಸರಕಾರ ಜಾರಿಗೆ ತರುತ್ತಿದೆ.

Team Samachara

ಮಾದಕ ದ್ರವ್ಯ ಸಂಬಂಧಿ ಸಾವುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಎಲ್ಲಾ ಉದ್ಯೋಗಿಗಳಿಗೆ ಮಾದಕ ದ್ರವ್ಯ ಪರೀಕ್ಷೆ ನಡೆಸಲು ಪಂಜಾಬ್ ಸರಕಾರ ಮುಂದಾಗಿದೆ.

ಕಳೆದ 30 ದಿನಗಳಲ್ಲಿ ಪಂಜಾಬ್‌ನಲ್ಲಿ 30 ಮಾದಕ ದ್ರವ್ಯ ಸಂಬಂಧಿ ಸಾವುಗಳು ಸಂಭವಿಸಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರಕಾರ ಎಲ್ಲಾ ಸರಕಾರಿ ಉದ್ಯೋಗಿಗಳಿಗೆ ಮಾದಕ ದ್ರವ್ಯ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಿದೆ.

ಮಾದಕ ದ್ರವ್ಯ ವ್ಯಸನ ಹಾಗೂ ಮಾದಕ ದ್ರವ್ಯ ಕಳ್ಳಸಾಗಣೆ ಪಂಜಾಬ್‌ ಸರಕಾರಕ್ಕೆ ತಲೆ ನೋವಾಗಿದೆ. ಈ ಪಿಡುಗಿಗೆ ಕಡಿವಾಣ ಹಾಕಲು ಈ ಹೊಸ ನಿಮಯವನ್ನು ಪಂಜಾಬ್‌ ಸರಕಾರ ಜಾರಿಗೆ ತರುತ್ತಿದೆ.

ಮಾದಕ ದ್ರವ್ಯ ಮುಕ್ತ ಪರೀಕ್ಷೆಯನ್ನು ಸರಕಾರ ಉಚಿತವಾಗಿ ನಡೆಸಲಿದೆ. ಹೊಸದಾಗಿ ನೇಮಕವಾಗುವವರಿಗೂ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತಿಳಿಸಿದ್ದಾರೆ.

ಕಳೆದ ವರ್ಷ ಒಂದರಲ್ಲೇ ಪಂಜಾಬ್‌ನಲ್ಲಿ 18,977 ಮಂದಿ ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗಿದೆ. 3,900 ಮಂದಿ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದಾರೆ ಮತ್ತು 5,610 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.

“ಔಷಧ ರೂಪದಲ್ಲಿ ಮಾದಕ ದ್ರವ್ಯ ತೆಗೆದುಕೊಳ್ಳುತ್ತಿರುವವರನ್ನೂ ಗಮನದಲ್ಲಿರಿಸಿಕೊಂಡು ಈ ಹೊಸ ನಿಯಮವನ್ನು ಜಾರಿಗೊಳಿಸುತ್ತೇವೆ. ವೈದ್ಯರ ಸಲಹೆಯಂತೆ ಔಷಧ ರೂಪದಲ್ಲಿ ಮಾದಕ ದ್ರವ್ಯ ತೆಗೆದುಕೊಳ್ಳುತ್ತಿರುವವರಿಗೆ ತೊಂದರೆಯಾಗದಂತೆ ಈ ಪರೀಕ್ಷೆ ನಡೆಯಲಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಮ್ಮ ಸಮಾಜದಿಂದ ಮಾದಕ ದ್ರವ್ಯ ಪಿಡುಗನ್ನು ದೂರವಾಗಿಸಲು ಈ ನಿಯಮ ಜಾರಿಗೆ ತರಲಾಗಿದೆ” ಎಂದು ಪಂಜಾಬ್‌ ಆರೋಗ್ಯ ಸಚಿವ ಬ್ರಹ್ಮ ಮೊಹಿಂದ್ರ ತಿಳಿಸಿದ್ದಾರೆ.

“ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿಯಿಂದ ಹಿಡಿದು ಎಲ್ಲಾ ಶ್ರೇಣಿಯ ಸರಕಾರಿ ಉದ್ಯೋಗಿಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ನಡೆಸುವ ಕಿಟ್‌ನ ಬೆಲೆ ಕನಿಷ್ಠ 500 ರೂಪಾಯಿ. ರಾಜ್ಯದ ಎಲ್ಲಾ ಸರಕಾರಿ ಉದ್ಯೋಗಿಗಳ ಪರೀಕ್ಷೆಗಾಗಿ ಸುಮಾರು 25 ಕೋಟಿ ರೂಪಾಯಿ ಖರ್ಚಾಗಲಿದೆ” ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಪಂಜಾಬ್‌ ಸರಕಾರಿ ನೌಕರರ ಒಕ್ಕೂಟ ಈ ನಿಯಮದಡಿಯಲ್ಲಿ ಶಾಸಕರು, ಸಂಸದರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದಿದ್ದಾರೆ. ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ತಾವು ಕೂಡಾ ಈ ಪರೀಕ್ಷೆಗೆ ಒಳಪಡುವುದಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಶಾಸಕರು, ಸಂಸದರ ಪರೀಕ್ಷೆಯ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ.